ಮಾಸ್ಕೋ(ಏ.18): ರಷ್ಯಾದ ವಿಶೇಷ ಮಿಲಿಟರಿ ಕಾರ್ಯಾಚರಣಾ ವಲಯ ಮತ್ತು ಕಪ್ಪು ಸಮುದ್ರ ಪ್ರದೇಶದ ಮೇಲಿರುವ ಸ್ಟಾರ್‌ಲಿಂಕ್‌ನ ಎಲ್ಲಾ ಉಪಗ್ರಹ ಸಮೂಹವನ್ನು ನಾಶ ಮಾಡಲು ರಷ್ಯಾ ರಕ್ಷಣಾ ಉಪಾಧ್ಯಕ್ಷ ಡಿಮಿಟ್ರಿ ಮೆಡ್ವೆಡೆವ್ ಆದೇಶಿಸಿದ್ದಾರೆ. ಕಪ್ಪು ಸಮುದ್ರದಲ್ಲಿ ರಷ್ಯಾ ಯುದ್ಧನೌಕೆಯನ್ನು ಮುಳುಗಿಸಲು ಎಲಾನ್ ಮಸ್‌್ಕ ಒಡೆತನದ ಸ್ಟಾರ್‌ಲಿಂಕ್ ನೆಟ್‌ವರ್ಕ್ನ್ನು ಬಳಸಿಕೊಳ್ಳಲಾಗಿದೆ ಎಂಬ ವರದಿ ರಷ್ಯಾವನ್ನು ಕೆರಳಿಸಿದೆ. ಆದ್ದರಿಂದ ರಷ್ಯಾ ಈ ನಿರ್ಣಯವನ್ನು ಕೈಗೊಂಡಿದೆ.
‘ಬಾಹ್ಯಾಕಾಶವನ್ನ ಮಿಲಿಟರೀಕರಣ ಮಾಡುವ ಯಾವುದೇ ಉದ್ದೇಶ ರಷ್ಯಾಗೆ ಇಲ್ಲ. ಹೀಗೆ ಮಾಡಲು ಬೇರೆ ದೇಶಗಳಿಗೂ ಅನುಮತಿಸುವುದಿಲ್ಲ. ಬಾಹ್ಯಾಕಾಶವನ್ನು ಮಿಲಿಟರೀಕರಣಗೊಳಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕಪ್ಪು ಸಮುದ್ರದ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಪ್ಪು ಸಮುದ್ರದ ರಷ್ಯಾ ಪಡೆಯ ನೌಕಾ ಅಧಿಕಾರಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ’ ಎಂದು ಮೆಡ್ವೆಡೆವ್ ಹೇಳಿದ್ದಾರೆ.
ರಷ್ಯಾದ ಶಸ್ತ್ರಾಸ್ತ್ರಗಳನ್ನು ನಾಶ ಮಾಡಲು ಉಕ್ರೇನ್‌ನ ಡ್ರೋನ್‌ಗಳಿಗೆ ಸ್ಟಾರ್‌ಲಿಂಕ್ ಉಪಗ್ರಹಗಳು ನಿರ್ದೇಶನ ನೀಡುತ್ತಿವೆ ಎಂದು ಟೈಮ್ಸ್ ಆಫ್ ಲಂಡನ್ ಈ ಹಿಂದೆ ವರದಿ ಮಾಡಿತ್ತು.
ಕೀವ್, ಖಾರ್ಕೀವ್, ಮರಿಯುಪೋಲ್ ಮೇಲೆ ದಾಳಿ ತೀವ್ರ
ಉಕ್ರೇನ್‌ನ ಬೃಹತ್ ನಗರಗಳ ಮೇಲೆ ರಷ್ಯಾ ತನ್ನ ಕ್ಷಿಪಣಿ ಹಾಗೂ ಶೆಲ್ ದಾಳಿಯನ್ನು ಇನ್ನಷ್ಟುತೀವ್ರಗೊಳಿಸಿದೆ. ರಾಜಧಾನಿ ಕೀವ್, ಎರಡನೇ ದೊಡ್ಡ ನಗರ ಖಾರ್ಕೀವ್ ಹಾಗೂ ಬಂದರು ನಗರಿ ಮರಿಯುಪೋಲ್ ಮೇಲೆ ರಷ್ಯಾದ ದಾಳಿ ತೀವ್ರಗೊಂಡಿದ್ದು, ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಹೇಳಲಾಗಿದೆ.
ಕಪ್ಪು ಸಮುದ್ರದಲ್ಲಿ ತನ್ನ ಯುದ್ಧನೌಕೆಯನ್ನು ಉಕ್ರೇನ್ ಮುಳುಗಿಸಿದ್ದರಿಂದ ರಷ್ಯಾ ಸಿಟ್ಟಿಗೆದ್ದು ಮೂರು ದಿನಗಳಿಂದ ದಾಳಿ ತೀವ್ರಗೊಳಿಸಿದೆ. ಮರಿಯುಪೋಲ್ ನಗರವನ್ನು ಸಂಪೂರ್ಣ ತನ್ನ ವಶಕ್ಕೆ ತೆಗೆದುಕೊಂಡಿದ್ದು, ಕೀವ್ ಹಾಗೂ ಖಾರ್ಕೀವ್ ಮೇಲೆ ಹೆಚ್ಚಿನ ದಾಳಿ ನಡೆಸುತ್ತಿದೆ. ಇದರಿಂದ ಕಂಗಾಲಾಗಿರುವ ಉಕ್ರೇನ್ ಅಧ್ಯಕ್ಷ ವೋಲೋದಿಮಿರ್ ಝೆಲೆನ್‌ಸ್ಕಿ, ಮರಿಯುಪೋಲ್ ಹಾಗೂ ಇತರ ನಗರಗಳನ್ನು ರಕ್ಷಿಸಿಕೊಳ್ಳಲು ಪಾಶ್ಚಾತ್ಯ ದೇಶಗಳು ತಕ್ಷಣ ಇನ್ನಷ್ಟುಶಸ್ತ್ರಾಸ್ತ್ರ ನೀಡಬೇಕು ಎಂದು ಮೊರೆಯಿಟ್ಟಿದ್ದಾರೆ.
ಕೀವ್ ನಗರದ ಹೊರವಲಯದಲ್ಲಿ ರಷ್ಯಾದ ದಾಳಿಗೆ ಬಲಿಯಾದ 900ಕ್ಕೂ ಹೆಚ್ಚು ಉಕ್ರೇನಿಯನ್ನರ ಶವ ಶನಿವಾರವಷ್ಟೇ ಪತ್ತೆಯಾಗಿತ್ತು. ಆ ಆಘಾತದಿಂದ ಚೇತರಿಸಿಕೊಳ್ಳುವುದಕ್ಕೂ ಅವಕಾಶ ನೀಡದೆ ರಷ್ಯಾ ಇನ್ನಷ್ಟುದಾಳಿ ನಡೆಸುತ್ತಿದೆ. ಕೀವ್ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಓಡಿಹೋದವರು ಸದ್ಯಕ್ಕೆ ವಾಪಸ್ ಬರಬೇಡಿ, ರಷ್ಯಾ ಇನ್ನಷ್ಟುದಾಳಿ ನಡೆಸುವ ಸಾಧ್ಯತೆಯಿದೆ ಎಂದು ನಗರದ ಮೇಯರ್ ಹೇಳಿದ್ದಾರೆ.
ಶನಿವಾರ ಉಕ್ರೇನ್‌ನ ಸಶಸ್ತ್ರ ಸೇನಾ ವಾಹನಗಳ ತಯಾರಿಕಾ ಕಾರ್ಖಾನೆ ಹಾಗೂ ಶುಕ್ರವಾರ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ರಷ್ಯಾ ದಾಳಿ ನಡೆಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ