Afghanistan Mosque Blast: ಶುಕ್ರವಾರ ಅಫ್ಘಾನಿಸ್ತಾನದ ಹೆರಾತ್‌ನಲ್ಲಿರುವ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ
ಅಫ್ಘಾನಿಸ್ತಾನ (ಸೆ. 02): ಶುಕ್ರವಾರ ಅಫ್ಘಾನಿಸ್ತಾನದ ಹೆರಾತ್‌ನಲ್ಲಿರುವ ಮಸೀದಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಉನ್ನತ ಮಟ್ಟದ ತಾಲಿಬಾನ್ ಪರ ಧರ್ಮ ಗುರುಗಳು ಮತ್ತು ಹಲವಾರು ನಾಗರಿಕರು ಸಾವನ್ನಪ್ಪಿದ್ದಾರೆ. "ಮುಜೀಬ್ ರಹಮಾನ್ ಅನ್ಸಾರಿ, ಅವರ ಕೆಲವು ಸಿಬ್ಬಂದಿ ಮತ್ತು ನಾಗರಿಕರು ಮಸೀದಿಯ ಕಡೆಗೆ ಹೋಗುತ್ತಿದ್ದಾಗ ಕೊಲ್ಲಲ್ಪಟ್ಟರು" ಎಂದು ಹೆರಾತ್‌ನ ಪೊಲೀಸ್ ವಕ್ತಾರ ಮಹಮೂದ್ ರಸೋಲಿ ಹೇಳಿದ್ದಾರೆ. ಕೊಲ್ಲಲ್ಪಟ್ಟವರ ಬಗ್ಗೆ ಅಧಿಕೃತ ಸಂಖ್ಯೆ ನೀಡದಿದ್ದರೂ, ಅಲ್ ಜಜೀರಾ ಮೀಡಿಯಾ ನೆಟ್‌ವರ್ಕ್, ಹೆಸರಿಸದ ಮೂಲಗಳನ್ನು ಉಲ್ಲೇಖಿಸಿ, 14 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.
ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ಸಮಯದಲ್ಲಿ ಪಶ್ಚಿಮ ನಗರದ ಹೆರಾತ್‌ನಲ್ಲಿರುವ ಗುಜರ್ಗಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ. ಈ ಸಮಯದಲ್ಲಿ ಮುಸ್ಲಿಂ ಪ್ರಾರ್ಥನಾ ಸ್ಥಳಗಳು ವಿಶೇಷವಾಗಿ ಜನಸಂದಣಿಯಿಂದ ಕೂಡಿರುತ್ತವೆ.
undefined
ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ ಮತ್ತು 21 ಮಂದಿ ಗಾಯಗೊಂಡಿದ್ದಾರೆ ಎಂದು ಅಫ್ಘಾನಿಸ್ತಾನದ ವೈದ್ಯರೊಬ್ಬರನ್ನು ಉಲ್ಲೇಖಿಸಿ ಎಪಿ ವರದಿ ಮಾಡಿದೆ. ಹೆರಾತ್‌ನ ಆಂಬ್ಯುಲೆನ್ಸ್ ಕೇಂದ್ರದ ಅಧಿಕಾರಿ ಮೊಹಮ್ಮದ್ ದೌದ್ ಮೊಹಮ್ಮದಿ, ಶುಕ್ರವಾರ ಆಂಬ್ಯುಲೆನ್ಸ್‌ಗಳು 18 ಮಂದಿ ಮೃತರನ್ನು ಮತ್ತು 21 ಗಾಯಾಳುಗಳನ್ನು ನಗರದ ಆಸ್ಪತ್ರೆಗಳಿಗೆ ಸಾಗಿಸಿವೆ ಎಂದು ತಿಳಿಸಿದ್ದಾರೆ.
ಮುಜಿಬ್ ರೆಹಮಾನ್ ಅನ್ಸಾರಿ ಸಾವು: ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಅವರು ಟ್ವೀಟ್‌ನಲ್ಲಿ ಅನ್ಸಾರಿ ಸಾವಿನ ಬಗ್ಗೆ ಸಂತಾಪ ವ್ಯಕ್ತಪಡಿಸಿದ್ದಾರೆ ಮತ್ತು ದಾಳಿಕೋರರನ್ನು ಶಿಕ್ಷಿಸಲಾಗುವುದು ಎಂದು ಹೇಳಿದ್ದಾರೆ. ಜೂನ್ ಅಂತ್ಯದಲ್ಲಿ ಸಾವಿರಾರು ವಿದ್ವಾಂಸರು ಮತ್ತು ಹಿರಿಯರ ದೊಡ್ಡ ಸಭೆಯಲ್ಲಿ ತಾಲಿಬಾನ್‌ನ ರಕ್ಷಣೆ ಬಗ್ಗೆ ಮುಜಿಬ್ ರೆಹಮಾನ್ ಅನ್ಸಾರಿ ಮಾತನಾಡಿದ್ದರು. ಅಲ್ಲದೇ ಅವರ ಆಡಳಿತದ ವಿರೋಧಿಗಳನ್ನು ಖಂಡಿಸಿದ್ದರು.
ಆಫ್ಘಾನ್ ಲೀಗ್ ಪಂದ್ಯದ ನಡುವೆ ಆತ್ಮಾಹುತಿ ಬಾಂಬ್ ದಾಳಿ, ಕ್ರಿಕೆಟಿಗರು ಬಂಕರ್‌ಗೆ ಶಿಫ್ಟ್!
ಒಂದು ವರ್ಷದ ಹಿಂದೆ ಅಧಿಕಾರ ವಹಿಸಿಕೊಂಡ ನಂತರ ದೇಶದಲ್ಲಿ ಭದ್ರತೆ ಸುಧಾರಿಸಿದೆ ಎಂದು ತಾಲಿಬಾನ್ ಹೇಳಿದೆ. ಆದರೆ ಇತ್ತೀಚಿನ ತಿಂಗಳುಗಳಲ್ಲಿ ದೇಶದಲ್ಲಿ ಹಲವಾರು ಸ್ಫೋಟಗಳು ನಡೆದಿವೆ, ಅವುಗಳಲ್ಲಿ ಕೆಲವು ಪ್ರಾರ್ಥನೆಯ ಸಮಯದಲ್ಲಿ ಕಾರ್ಯನಿರತ ಮಸೀದಿಗಳನ್ನು ಗುರಿಯಾಗಿಸಿಕೊಂಡಿವೆ. ಅಲ್ಲದೇ ವಿಶ್ವಸಂಸ್ಥೆಯು ಅಫ್ಘಾನಿಸ್ತಾನದಲ್ಲಿ ಹೆಚ್ಚುತ್ತಿರುವ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಇನ್ನು ದೇಶದಲ್ಲಿ ನಡೆದ ಕೆಲವು ಸ್ಫೋಟಗಳ ಹೊಣೆಗಾರಿಕೆಯನ್ನು ಇಸ್ಲಾಮಿಕ್ ದೇಶದ ಸ್ಥಳೀಯ ಶಾಖೆಗಳೇ ಒಪ್ಪಿಕೊಂಡಿವೆ. ಶುಕ್ರವಾರದ ಸ್ಫೋಟದ ಹೊಣೆಗಾರಿಕೆಯನ್ನು ಸದ್ಯ ಯಾವುದೇ ಶಾಖೆಗಳು ಅಥವಾ ಸಂಘಟನೆ ಹೊತ್ತುಕೊಂಡಿಲ್ಲ.