ತಾಲಿಬಾನ್‌ ಕ್ರೌರ್ಯ: ಮಹಿಳೆಯರಿಗೆ ಛಡಿ, ವರದಿಗೆ ತೆರಳಿದ್ದ ಪತ್ರಕರ್ತರಿಗೂ ಥಳಿತ!

By Suvarna NewsFirst Published Sep 10, 2021, 9:13 AM IST
Highlights

* ಪ್ರತಿಭಟನೆ ನಡೆಸಿದ ಮಹಿಳೆಯರಿಗೆ ಚಾಟಿ ಏಟು

* ಮಹಿಳೆಯರಿಗೆ ಛಡಿ: ತಾಲಿಬಾನ್‌ ಕ್ರೌರ್ಯ

* ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೂ ಥಳಿತ

* ತಾಲಿಬಾನ್‌ ಏಟಿಗೆ ಪತ್ರಕರ್ತರ ಮೈಮೇಲೆ ಬಾಸುಂಡೆ.

ಕಾಬೂಲ್‌(ಸೆ.10): ಅಷ್ಘಾನಿಸ್ತಾನದಲ್ಲಿ ಅಧಿಕಾರ ಹಿಡಿಯುತ್ತಲೇ ತಾಲಿಬಾನಿಗಳು ಕ್ರೌರ್ಯ ಮೆರೆಯಲು ಆರಂಭಿಸಿದ್ದಾರೆ. ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿರುವ ಮಹಿಳೆಯರಿಗೆ ಚಾಟಿ ಏಟು ನೀಡಿದ್ದಾರೆ. ಅಲ್ಲದೇ ಪ್ರತಿಭಟನೆಯನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರಿಗೂ ಬಾಸುಂಡೆ ಬರುವಂತೆ ಹೊಡೆದು ಹಲ್ಲೆ ನಡೆಸಿದ್ದಾರೆ.

ಅಷ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರದ ವಿರುದ್ಧ ಮಹಿಳೆಯರು ಕಳೆದ ಕೆಲವು ದಿನಗಳಿಂದ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿರುವ ತಾಲಿಬಾನ್‌ ಮಹಿಳೆಯರಿಗೆ ಚಾವಟಿಯಿಂದ ಹೊಡೆದು ಹಲ್ಲೆ ನಡೆಸಿದೆ ಎಂದು ವರದಿಗಳು ತಿಳಿಸಿವೆ. ಇದು ತಾಲಿಬಾನಿಗಳ ಹಿಂದಿನ ಸರ್ಕಾರದಲ್ಲಿ ಮಹಿಳೆಯರಿಗೆ ನೀಡುತ್ತಿದ್ದ ಚಿತ್ರಹಿಂಸೆ, ಚಾಟಿ ಏಟಿನ ಶಿಕ್ಷೆಯನ್ನು ಮತ್ತೊಮ್ಮೆ ನೆನಪಿಸಿದೆ.

ಪತ್ರ​ಕ​ರ್ತ​ರಿಗೆ ಬಾಸುಂಡೆ:

ಅಲ್ಲದೇ ಪತ್ರಿಕಾ ಸ್ವಾಂತಂತ್ರ್ಯವನ್ನು ಕೂಡ ತಾಲಿಬಾನ್‌ ಹತ್ತಿಕ್ಕುತ್ತಿದ್ದು, ಮಹಿಳೆಯರ ಪ್ರತಿಭಟನೆ ವರದಿಗೆಂದು ತೆರಳಿದ್ದ ಇಬ್ಬರು ಛಾಯಾಗ್ರಾಹಕರ ಮೇಲೆಯೂ ಹಲ್ಲೆ ನಡೆಸಿದೆ.

ಸ್ಥಳೀಯ ಎಟಿಲಾಟ್‌ ರೋಜ್‌ ಪತ್ರಿಕೆಯ ಇಬ್ಬರು ಛಾಯಾಗ್ರಾಹಕ ಪತ್ರಕರ್ತರಾದ ಮೆಹಮತುಲ್ಲಾಹ್‌ ನಕ್ದಿ ಮತ್ತು ತಾಖಿ ದರ್ಯಾಬಿ ಅವರನ್ನು ವಶಕ್ಕೆ ಪಡೆದಿರುವ ತಾಲಿಬಾನಿಗಳು, ಮೈ ಮೇಲೆ ಬಾಸುಂಡೆ ಬರುವಂತೆ ಥಳಿಸಿದ್ದಾರೆ. ಹಲ್ಲೆಯ ಫೋಟೋಗಳನ್ನು ಅಮೆರಿಕದ ಪತ್ರಕರ್ತರೊಬ್ಬರು ಟ್ವೀಟ್‌ ಮಾಡಿದ್ದು, ವ್ಯಾಪಕ ಟೀಕೆಗೆ ಗುರಿಯಾಗಿದೆ.

ತಾಲಿಬಾನಿಗಳ ಕ್ರೌರ್ಯವನ್ನು ಬಿಚ್ಚಿಟ್ಟಿರುವ ನಕ್ದಿ, ‘ತಾಲಿಬಾನ್‌ ಉಗ್ರನೊಬ್ಬ ನನ್ನ ತಲೆಯ ಮೇಲೆ ಕಾಲು ಹಾಕಿ ನೆಲಕ್ಕೆ ಒತ್ತಿದ. ಆ ಸಮಯದಲ್ಲಿ ತಾಲಿಬಾನಿಗಳು ನನ್ನನ್ನು ಕೊಂದುಬಿಡುತ್ತಾರೆ’ ಎಂದು ಭಾವಿಸಿದ್ದೆ ಎಂದು ಹೇಳಿ​ದ್ದಾ​ರೆ.

ಇದೇ ವೇಳೆ ತನ್ನ ಐವರು ಪತ್ರಕರ್ತರನ್ನು ಕೂಡ ತಾಲಿಬಾನ್‌ ಬಂಧಿಸಿದೆ ಎಂದು ಟೊಲೋ ನ್ಯೂಸ್‌ ವರದಿ ವರದಿ ಮಾಡಿದೆ.

click me!