ಸಾಹಿತ್ಯಕ್ಕಾಗಿ ಮೊದಲ ನೊಬೆಲ್ ಪ್ರಶಸ್ತಿ ಪಡೆದ ಸೆಲ್ಮಾ ಲಾಗರ್ ಲೋಫ್‌; ಕೇವಲ ಲೇಖಕಿ ಮಾತ್ರ ಆಗಿರಲಿಲ್ಲ

By Kannadaprabha News  |  First Published Jun 26, 2022, 11:05 AM IST

ತನ್ನ 33ನೇ ವರ್ಷದಲ್ಲಿ ಅಂದರೆ 1891ರಲ್ಲಿ ಬರೆದ ಅವರ ಪ್ರಮುಖ ಕಾದಂಬರಿ 'ಗೊಸ್ಟಾ ಬರ್ಲಿಂಗ್ ಸಾಗಾ' ಚಲನಚಿತ್ರವಾಗಿ, ನಾಟಕವಾಗಿಯೂ ಜನಪ್ರಿಯಗೊಂಡಿದೆ. ಈ ಕೃತಿಗೆ 1909ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಘೋಷಿಸಲಾಯಿತು.


ಡಾ. ಪದ್ಮಿನಿ ನಾಗರಾಜ್‌

ಅವರ ಪ್ರಕಟಿತ ಕೃತಿಗಳೆಲ್ಲಾ ಅನೇಕ ಭಾಷೆಗಳಲ್ಲಿ ಚಲನಚಿತ್ರಗಳಾಗಿ ಯಶಸ್ವಿಯಾಗಿವೆ. ನಾಟಕಗಳನ್ನು ಇಂದಿಗೂ ಅನೇಕ ರಂಗ ಸಮುದಾಯಗಳು ಪ್ರದರ್ಶಿಸುತ್ತವೆ. ಮೂಕಿ ಸಿನಿಮಾದ ಕಾಲದಲ್ಲಿಯೇ ಅವರ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರಶಸ್ತಿ ಪಡೆದವು. ಅವರು ಸ್ವೀಡಿಷ್‌ ನೊಬೆಲ್‌ ಅಕಾಡೆಮಿಯ ಮೊದಲ ಮಹಿಳಾ ಸದಸ್ಯೆಯಾಗಿ ಆಯ್ಕೆಯಾದರು. ಸೋವಿಯತ್‌ ರಷ್ಯಾ ಇವರ ಚಿತ್ರದ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿತು. ಸ್ವೀಡಿಷ್‌ ಬ್ಯಾಂಕ್‌ ತನ್ನ ನೋಟೊಂದರಲ್ಲಿ ಅವರ ಚಿತ್ರವನ್ನು ಛಾಪಿಸಿತು. ನೋಟೊಂದರಲ್ಲಿ ಚಿತ್ರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾದರು. ಅನೇಕ ವಿಶ್ವವಿದ್ಯಾಲಯಗಳು ಇವರಿಗೆ ಗೌರವ ಡಾಕ್ಟರೇಟ್‌ ನೀಡಿದವು.

Tap to resize

Latest Videos

undefined

ಕೇವಲ ಸಾಹಿತ್ಯಿಕವಾಗಿ ಮಾತ್ರವಲ್ಲದೆ ಮಾನವೀಯತೆಯ ಮಹಾನ್‌ ಚೇತನವಾಗಿದ್ದ ಆಕೆ ಎರಡನೆಯ ಮಹಾಯುದ್ಧದ ಪ್ರಾರಂಭದಲ್ಲಿ ಸೋವಿಯತ್‌ ಒಕ್ಕೂಟದ ವಿರುದ್ಧ ಹೋರಾಡಲು ಫಿನ್ಲೆಂಡ್‌ ಸರ್ಕಾರಕ್ಕೆ ಸಹಾಯ ಮಾಡಲು ಹಣವನ್ನು ಸಂಗ್ರಹಿಸಲು ನೊಬೆಲ್‌ ಅಕಾಡೆಮಿಯಿಂದ ತನ್ನ ನೊಬೆಲ್‌ ಪ್ರಶಸ್ತಿ ಪದಕ ಮತ್ತು ಚಿನ್ನದ ಪದಕವನ್ನು ಫಿನ್ಲೆಂಡ್‌ ಸರ್ಕಾರಕ್ಕೆ ಕಳುಹಿಸಿದರು. ಈ ಹೃದಯಸ್ಪರ್ಶಿ ಘಟನೆಯಿಂದ ಆಕೆ ದೇಶದಾದ್ಯಂತ ಜನಮಾನಸದಲ್ಲಿ ಸ್ಥಿರವಾಗಿ ನಿಂತರು. ನಂತರದಲ್ಲಿ ಫಿನ್ಲೆಂಡ್‌ ಸರ್ಕಾರವು ಬೇರೆ ವಿಧಾನಗಳಿಂದ ಹಣವನ್ನು ಸಂಗ್ರಹಿಸಿ ಅವರ ಪದಕವನ್ನು ಹಿಂದಿರುಗಿಸಿತು.

70ನೇ ವರ್ಷದ ಸಂಭ್ರಮ: ನಮ್ಮ ಮಲ್ಲೇಪುರಂ

ಒಬ್ಬ ಬರಹಗಾರ್ತಿ ಇಂದಿಗೂ ಜನರ ಮನಸ್ಸಿನಲ್ಲಿ ನಿಂತಿರಲು ಕಾರಣ ಅವರ ಕೃತಿಗಳಷ್ಟೇ ಕಾರಣ ಅಲ್ಲ, ಆಕೆಯ ನಡತೆಯೂ ಕಾರಣವಾಗಿದೆ. ಸ್ವೀಡನ್ನಷ್ಟೇ ಅಲ್ಲದೆ ಬೇರೆ ಬೇರೆ ದೇಶಗಳೂ ಕೂಡ ಈ ಮಹಾನ್‌ ಲೇಖಕಿಯನ್ನು ಇಂದಿಗೂ ನೆನಸಿಕೊಳ್ಳುತ್ತವೆ. ಸ್ವೀಡನ್ನಿನ ಅನೇಕ ಊರುಗಳಲ್ಲಿನ ರಸ್ತೆ, ಸರ್ಕಲ್‌ಗಳಿಗೂ ಈಕೆಯ ಹೆಸರಿದೆ. ಅದಲ್ಲದೆ ಇವರ ಹೆಸರಿನಲ್ಲಿ ಅನೇಕ ಹೋಟೆಲ್‌ಗಳು, ಪಾರ್ಕುಗಳು, ಕಾರಂಜಿಗಳನ್ನು ಹೆಸರಿಸಿ ಕಾಪಾಡಲಾಗುತ್ತಿದೆ. ಗೋಥನಬರ್ಗನಲ್ಲಿನ ಒಂದು ಏರಿಯಾಕ್ಕೆ ‘ಸೆಲ್ಮಾ ಸಿಟಿ’ಯೆಂದು ಹೆಸರಿಡಲಾಗಿದೆ. ಅಲ್ಲಿಯೇ ಕಲ್ಚರಲ್‌ ಸೆಂಟರ್‌ ಕೂಡ ಇದೆ. ಸೆಲ್ಮಾ ಲಾಗರ್‌ಲೋಫ್‌ ಹೆಸರಿನ ಮಾರುಕಟ್ಟೆಸ್ಥಳಕ್ಕೆ ನಾನು ಭೇಟಿ ನೀಡಿದಾಗ ಕುತೂಹಲದಿಂದ ಮಗಳನ್ನು ಅವರು ಯಾರು ಎಂದು ಪ್ರಶ್ನಿಸಿದೆ. ಆಕೆ ನೋಬೆಲ್‌ ಪ್ರಶಸ್ತಿ ಪಡೆದ ರೈಟರ್‌ ಎಂದಳು. ಅಲ್ಲಿಂದ ನನ್ನ ಆಸಕ್ತಿ ಪ್ರಾರಂಭವಾಯಿತು. ಗೂಗಲ್‌ನಲ್ಲಿ ಹುಡುಕಾಟ ನಡೆಸುವುದು ಒಂದು ಕಡೆಯಾದರೆ, ಅನೇಕ ರಸ್ತೆ, ಮ್ಯೂಸಿಯಂಗಳನ್ನೂ ಸಂದರ್ಶಿಸಿ ಸೆಲ್ಮಾರನ್ನು ಪರಿಚಯಿಸಿಕೊಂಡೆ.

ನಾನು ಸ್ಟಾಕ್‌ಹೋಮಿನಲ್ಲಿರುವ ‘ನೋಬೆಲ್‌ ಮ್ಯೂಸಿಯಂ’ ನೋಡಲು ಹೋದಾಗ ಮೊದಲು ನೋಡಿದ್ದೇ ಸೆಲ್ಮಾರ ಫೋಟೋವನ್ನು. ಇಲ್ಲಿಯ ಮ್ಯೂಸಿಯಂನಲ್ಲಿ ಪ್ರತಿಯೊಬ್ಬ ನೋಬೆಲ್‌ ಪಾರಿತೋಷಕ ಪಡೆದ ಪ್ರಸಿದ್ಧರ ಚಿತ್ರಗಳನ್ನು ನೋಡಬಹುದು. ನೋಬೆಲ್‌ ಪ್ರಶಸ್ತಿ ಪುರಸ್ಕೃತರು ತಮ್ಮ ಯಾವುದಾದರು ಒಂದು ವಸ್ತುವನ್ನು ಸಂಗ್ರಹಾಲಯಕ್ಕೆ ನೀಡಬೇಕು. ಕೋಫಿ ಅನ್ನನ್‌ ತಮ್ಮ ಚಿನ್ನದ ಬ್ರೆಸೆಲೆಟ್‌ ನೀಡಿದ್ದರೆ, ಅಮತ್ರ್ಯ ಸೇನ್‌ ತಮ್ಮ ಬೈಸಿಕಲ್‌ ನೀಡಿದ್ದಾರೆ. ಹಾಗೆಯೇ ಸೆಲ್ಮಾ ತಮ್ಮ ಒಂದು ಜೊತೆ ಶೂಗಳನ್ನು ನೀಡಿದ್ದಾರೆ. ಇವುಗಳನ್ನು ಅವರು ಯಾವಾಗಲೂ ಧರಿಸುತ್ತಿರಲಿಲ್ಲ. ಸ್ಟಾಕ್‌ಹೋಮಿನಲ್ಲಿ ಶಿಕ್ಷಕಿಯಾಗಿದ್ದ ಸಮಯದಲ್ಲಿಯೇ ಅವರು ಮೊದಲ ಕಾದಂಬರಿ ಬರೆಯುತ್ತಿದ್ದ ಸಂದರ್ಭದಲ್ಲಿ ಧರಿಸುತ್ತಿದ್ದರು. ಈ ಎರಡೂ ಶೂಗಳ ಎತ್ತರ ಬೇರೆ ಬೇರೆಯಾಗಿವೆ! ಅವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಆಗಿದ್ದ ಸೊಂಟದ ಸರ್ಜರಿಯಿಂದಾಗಿ ಕುಂಟುತ್ತಿದ್ದರು. ಈ ಶೂಗಳು ಅವರು ಕುಂಟುವುದನ್ನು ಕೊಂಚ ಮರೆಮಾಡುತ್ತಿದ್ದವು. ಅವರ ಕೃತಿಗಳು ಕೂಡ ಇಲ್ಲಿನ ಪುಸ್ತಕಾಲಯದಲ್ಲಿ ಮಾರಾಟಕಿದ್ದವು. ನಾನು ಇಂಗ್ಲೀಷಿಗೆ ಭಾಷಾಂತರವಾಗಿರುವ ಪುಸ್ತಕಗಳು ಸಿಗುತ್ತವೆಯೆನೋ ಎಂದು ವಿಚಾರಿಸಿದೆ. ಅಲ್ಲಿ ಅವರ ಸ್ವೀಡಿಷ್‌ ಭಾಷೆಯ ಮೂಲ ಕೃತಿಗಳಷ್ಟೇ ಇದ್ದವು.

-2-

ಪ್ರಪಂಚದಲ್ಲಿ ಸಾಹಿತ್ಯಕ್ಕಾಗಿ ಮೊದಲ ನೋಬಲ್‌ ಪ್ರಶಸ್ತಿ ಪಡೆದ ಮಹಿಳಾ ಸಾಹಿತಿ ಸೆಲ್ಮಾ ಒಟ್ಟೆಲಿಯಾ ಲೊವಿಸಾ ಲಾಗರ್‌ಲೋಫ್‌ ಅವರು ಶ್ರೀಮಂತ ಕುಟುಂಬದಲ್ಲಿ 1858 ರ ನವೆಂಬರ್‌ 20ರಂದು ಜನಿಸಿದರು. ಇವರ ತಂದೆ ರಾಯಲ್‌ ವರ್ಮಲ್ಯಾಂಡ್‌ ರೆಜಿಮೆಂಟಿನಲ್ಲಿ ಲೆಫ್ಟಿನೆಂಟ್‌ ಆಗಿದ್ದರು. ಎರಿಕ್‌ ಗುಸ್ಟಾಫ್‌ ಲಾಗರ್‌ಲೋಫ್‌ ಮತ್ತು ಲೂಯಿಸ್‌ರ ಆರು ಮಕ್ಕಳಲ್ಲಿ ಐದನೆಯವಳಾಗಿ ಸೆಲ್ಮಾ ಜನಿಸಿದಳು. ಅವಳಿಗೆ ಮೂರೂವರೆ ವಯಸ್ಸಾಗಿದ್ದಾಗ ಸೊಂಟದ ಕೀಲಿನಲ್ಲಿ ಕಾಣಿಸಿಕೊಂಡ ಅನಾರೋಗ್ಯದಿಂದಾಗಿ ಅವಳ ಎರಡೂ ಕಾಲುಗಳು ಊನವಾದವು. ನಂತರ ಅವಳು ಸತತ ಚಿಕಿತ್ಸೆಯಿಂದ ಚೇತರಿಸಿಕೊಂಡಳು.

ಬರ್ತ್ ಡೇ ಅಂದರೆ ಕೇಕು, ಜಿಲೇಬಿ ಅಷ್ಟೇ ಅನ್ನೋ ಖ್ಯಾತ ಲೇಖಕ Ruskin Bond ಲೈಫ್‌ ಬಗ್ಗೆ ಏನು ಹೇಳ್ತಾರೆ ?

ತನ್ನ ಸೊಂಟ ಮುರಿತದಿಂದ ಅನುಭವಿಸುತ್ತಿದ್ದ ನೋವು, ಹಾಗೂ ಇತರ ಮಕ್ಕಳಂತೆ ಸಾಮಾನ್ಯವಾಗಿ ಬದುಕಲು ಆಗದ ಒಂಟಿತನದಿಂದಾಗಿ ಅವಳು ಚಿಕ್ಕ ವಯಸ್ಸಿನಲ್ಲಿಯೇ ಶಾಂತ, ಗಂಭೀರವಾದ ಮಗುವಾಗಿದ್ದಳು. ತನ್ನ ಒಂಟಿತನವನ್ನು ಕಳೆಯಲು ಪುಸ್ತಕಗಳೇ ಅವಳ ಸಂಗಾತಿಗಳಾಗಿದ್ದವು. ಇದೇ ಸಮಯದಲ್ಲಿ ಅವಳು ತನ್ನ ಅಜ್ಜಿಗೆ ಅತೀ ಹತ್ತಿರವಾದಳು. ಅವರು ಅವಳ ನೋವು ಮರೆಸಲು ಮೊಮ್ಮಗಳಿಗೆ ಕಾಲ್ಪನಿಕ ಮತ್ತು ಫ್ಯಾಂಟಸಿ ಕತೆಗಳನ್ನು ಹೇಳುತ್ತಿದ್ದರು. ಆ ಕಾಲ್ಪನಿಕ ಕತೆಗಳನ್ನು ತನ್ನದೇ ಕಲ್ಪನೆಯಲ್ಲಿ ಕಲ್ಪಿಸಿಕೊಂಡು ತನ್ನದೇ ಲೋಕದಲ್ಲಿ ವಿಹರಿಸಲು ಸೆಲ್ಮಾಗೆ ಸಹಕಾರಿಯಾದವು. ಮುಂದೆ ಅವಳು ತಾನು ಬರೆದ ಕತೆ, ಕಾದಂಬರಿಗಳಲ್ಲಿ ಅವುಗಳನ್ನು ಸಶಕ್ತವಾಗಿ ಬಳಸಿಕೊಂಡಳು.

ಸ್ವೀಡನ್ನಿನ ಮಾರ್ಬಕಾದ ವರ್ಮಲ್ಯಾಂಡ್‌ನಲ್ಲಿ ಜನ್ಮತಳೆದ ಸೆಲ್ಮಾ, ತನ್ನ ತಂದೆ ಒಂದು ಕಡೆ ನೆಲೆನಿಲ್ಲದ ಹಾಗೂ ಆ ಕಾಲಕ್ಕೆ ಕಡ್ಡಾಯ ಶಿಕ್ಷಣ ವ್ಯವಸ್ಥೆ ಇನ್ನೂ ಇಲ್ಲದ ಕಾರಣದಿಂದಾಗಿ ಪ್ರಾಥಮಿಕ ಶಿಕ್ಷಣವನ್ನು ಅವಳು ತನ್ನ ಮನೆಯಲ್ಲಿಯೇ ಪಡೆದಳು. ನಂತರ ಇಂಗ್ಲಿ‚ಷ್‌ ಮತ್ತು ಫ್ರೆಂಚ್‌ ಅನ್ನು ಅಧ್ಯಯನ ಮಾಡಿದಳು. ಥಾಮಸ್‌ ಮೇನೆ ರೀಡ್‌ರ ‘ಓಸ್ಸಿಯೋಲಾ’ ಕಾದಂಬರಿಯನ್ನು ಓದಿದ ನಂತರ ತಾನೂ ಹಾಗೆಯೇ ಬರಹಗಾರಳಾಗಬೇಕೆಂದು ನಿರ್ಧರಿಸಿದಳು. ಜೊತೆಗೆ ಪುಟ್ಟಪುಟ್ಟಕವಿತೆಗಳನ್ನು ಬರೆಯಲು ಪ್ರಾರಂಭಿಸಿದಳು. ಆದರೆ ಅವುಗಳನೆಂದೂ ಪ್ರಕಟಿಸಲಿಲ್ಲ.

ಆಕೆಯ 10ನೇ ವಯಸ್ಸಿನಲ್ಲಿ ಆಕೆಯ ತಂದೆ ತೀವ್ರವಾಗಿ ಅಸ್ವಸ್ಥರಾದರು. ಆಗ ಸೆಲ್ಮಾ ಬೈಬಲ್‌ನ ಒಂದೊಂದು ಅಧ್ಯಾಯವನ್ನು ಓದಿದರೆ ದೇವರು ಕೇಳಿಸಿಕೊಳ್ಳುತ್ತಾನೆ ಎಂದು ನಂಬಿ ಅಸ್ವಸ್ಥ ತಂದೆಯ ಬಳಿ ಕುಳಿತು ಶ್ರದ್ಧೆಯಿಂದ ಬೈಬಲ್‌ ಪಠಣ ಮಾಡುತ್ತಿದ್ದಳು. ಚಮತ್ಕಾರವೆಂಬಂತೆ ಅವಳ ತಂದೆ ನಂತರ 17 ವರ್ಷ ಬದುಕಿದ್ದರು. ಆ ಓದುವಿಕೆ ಅವಳ ಮುಂದಿನ ಬರವಣಿಗೆಗೆ ಅನುಕೂಲವಾಯಿತು.

ಪುಸ್ತಕವನ್ನು ಹತ್ತಾರು ವರ್ಷ ಸುಂದರವಾಗಿಡ್ಬೇಕೆಂದ್ರೆ ಈ Tips ಬಳಸಿ

ವಮ್‌ರ್‍ಲ್ಯಾಂಡ್‌ ಸೆಲ್ಮಾ ತಂದೆಗೆ ವಂಶಪಾರ್ಯಪರ‍್ಯವಾಗಿ ಬಂದ ಆಸ್ತಿಯಾಗಿತ್ತು. 1885 ರಲ್ಲಿ ತಂದೆಯ ಮರಣ ನಂತರ ಆಕೆ ಹುಟ್ಟಿಬೆಳೆದ ಆ ಎಸ್ಟೆಟ್‌ನ್ನು ಆಕೆಯ ಅಣ್ಣ ಆರ್ಥಿಕ ಕಾರಣಕ್ಕಾಗಿ ಮಾರಾಟ ಮಾಡುತ್ತಾನೆ. ಇದು ಸೆಲ್ಮಾ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಕೆಲವು ಕಾಲ ಮದ್ಯವ್ಯಸನಿಯಾಗಿದ್ದ ಆಕೆ ನಂತರ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಸ್ಟಾಕ್‌ಹೋಮಿಗೆ ಬರುತ್ತಾಳೆ.

ಸೆಲ್ಮಾ ಮೂರು ವರ್ಷ ಸ್ಟಾಕ್‌ಹೋಮನಲ್ಲಿರುವ ಹೊಗ್ರೆ ಲಾರಾರಿನ್ನೆ ಸೆಮಿನಾರಿಯೆಟ್‌ನಲ್ಲಿ ಅಧ್ಯಯನ ಮಾಡಿದ ನಂತರ ಹತ್ತು ವರ್ಷ ಹಳ್ಳಿಯಲ್ಲಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡಿದಳು. ಮಕ್ಕಳಿಗೆ ಅವಳು ಕತೆ ಹೇಳುತ್ತಿದ್ದ ಹಾಗೂ ಕಲ್ಪನಾ ಶಕ್ತಿಯನ್ನು ವಿಸ್ತರಿಸುವ ರೀತಿಯಿಂದಾಗಿ ಮಕ್ಕಳಿಗೆ ಸೆಲ್ಮಾ ಅಚ್ಚುಮೆಚ್ಚಿನ ಶಿಕ್ಷಕಿಯಾಗಿದ್ದಳು.

ತಾನು ಶಿಕ್ಷಕಿಯಾಗಿ ತರಭೇತಿ ಹೊಂದುತ್ತಿರುವಾಗಲೇ ಅವರ ಕಾಲಘಟ್ಟದ ಸ್ವೀಡಿಷ್‌ ಲೇಖಕ ಆಗಸ್ಟ್‌ ಸ್ಟ್ರಿಂಡ್‌ಬರ್ಗ ಅವರ ನೈಜ ಬರವಣಿಗೆಯ ಬಗ್ಗೆ ಮೆಚ್ಚಿಕೊಂಡ ಹಾಗೂ ವಿಮರ್ಶೆ ಮಾಡಿದ ಸೆಲ್ಮಾ ಮಹಿಳಾ ಚಳುವಳಿಗಳಲ್ಲಿಯೂ ತೊಡಗಿಸಿಕೊಂಡರು. ಅವರು ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವಾಗಲೇ ತಮ್ಮ ಮೊದಲ ಕಾದಂಬರಿ ‘ಗೊಸ್ಟಾಬರ್ಲಿಂಗ್‌್ಸ ಸಾಗಾ’ವನ್ನು ಬರೆಯಲಾರಂಭಿಸಿದರು. ಇದು ಪೂರ್ಣವಾದಾಗ ನಿಯತಕಾಲಿಕದಲ್ಲಿ ಸಾಹಿತ್ಯ ಸ್ಪರ್ಧೆಯಲ್ಲಿ ಬಹುಮಾನ ಪಡೆಯಿತು. ಅವರ ಆ ಕೃತಿ ಡ್ಯಾನಿಶ್‌ ಭಾಷೆಗೆ ಅನುವಾದಗೊಂಡಿತು. ವಿಮರ್ಶಕ ಜಾರ್ಜ ಬ್ರಾಂಡೆಸ್‌ ಅವರು ಕೃತಿಯ ಬಗ್ಗೆ ಸಕಾರಾತ್ಮಕವಾಗಿ ವಿಮರ್ಶೆ ನೀಡಿದರು.

 Kamala Harris Untold Story: ಕಮಲಾ ಹ್ಯಾರಿಸ್ ಅಸಾಧಾರಣ ಸಾಧನೆ ಚಿತ್ರಣ!

 

ಇವರು ಶಿಕ್ಷಕಿಯಾಗಿ ತಮ್ಮ ಕೃತಿ ಪ್ರಕಟಿಸಲು ಕಷ್ಟಪಡುತ್ತಿದ್ದದ್ದನ್ನು ಗಮನಿಸಿದ ರಾಜಮನೆತನ ಮತ್ತು ಸ್ವೀಡಿಷ್‌ ಅಕಾಡೆಮಿ ಗಣನೀಯ ಆರ್ಥಿಕ ಸಹಾಯ ಮಾಡಿತು. ಈ ಕಾರಣದಿಂದ ಸೆಲ್ಮಾ 1900 ನಲ್ಲಿ ಜೆರುಸಲೆಮಿಗೆ ಭೇಟಿ ಕೊಡಲು ಸಾಧ್ಯವಾಯಿತು. ಅಲ್ಲಿಂದ ಬಂದು ‘ಜೆರುಸಲೇಮ್‌’ ಎಂಬ ಕೃತಿ ರಚಿಸಿದರು. ಇವರ ಕೃತಿ ಒಳ್ಳೆ ವಿಮರ್ಶೆ ಪಡೆಯಿತು. ಸೆಲ್ಮಾ ತಮ್ಮ ಬರವಣಿಗೆಗೆ ಕಾದಂಬರಿ ಹಾಗೂ ಸಣ್ಣಕತೆಗಳನ್ನು ಆಯ್ಕೆ ಮಾಡಿಕೊಂಡರು. 16ಕ್ಕೂ ಹೆಚ್ಚು ಕಾದಂಬರಿಗಳನ್ನು, 9 ಸಣ್ಣಕಥಾ ಸಂಕಲನಗಳನ್ನು, 2 ನಾಟಕ, 3 ಆತ್ಮಚರಿತ್ರೆಗಳು ಹಾಗೂ ವ್ಯಕ್ತಿಚಿತ್ರವನ್ನು ಬರೆದಿದ್ದಾರೆ. ಅವರ ಕೃತಿಗಳಾದ ‘ದ ಎಮಪರರ್‌ ಆಫ್‌ ಪೋರ್ಚಗಿಲ್‌’, ‘ದ ವಂಡಫುಲ್‌ ಅಡ್ವೆಂಚರ್‌ ಆಫ್‌ ನೀಲ್ಸ್‌’, ‘ಇಸ್ಟರ್‌ ಸ್ಟೋರಿಸ್‌’, ‘ಕ್ರೈಸ್ಟ್‌ ಲೆಜೆಂಡರ್‌’, ಮುಂತಾದ ಕೆಲವನ್ನು ಹೆಸರಿಸಬಹುದು. ಕೆಲವು ಕಾಲ ಕ್ರಿಶ್ಚಿಯನ್‌ ಬೋಧಕಳಾಗಿಯೂ ಕೆಲಸ ಮಾಡಿದರು. ಇಟಲಿಗೆ ಭೇಟಿ ನೀಡಿ ‘ದಿ ಮಿರಾಕಲ್ಸ್‌ ಆಫ್‌ ದಿ ಆಂಟಿಕ್ರೈಸ್ಟ್‌’ ಕೃತಿ ರಚಿಸಿದರು. ಈ ಕೃತಿಯು ಕ್ರಿಶ್ಚಿಯನ್‌ ಮತ್ತು ಸಮಾಜವಾದಿ ನೆಲೆಯ ನೈತಿಕ ವ್ಯವಸ್ಥೆಗಳನ್ನು ಪರಿಶೋಧಿಸುತ್ತದೆ.

ಸೆಲ್ಮಾಳನ್ನು ರಾಷ್ಟ್ರೀಯ ಶಿಕ್ಷಕರ ಸಂಘವು ಮಕ್ಕಳಿಗಾಗಿ ಭೌಗೋಳಿಕ ಪುಸ್ತಕವೊಂದನ್ನು ಬರೆದುಕೊಡಲು ಕೇಳಿಕೊಂಡಿತು. ಆಗ ಆಕೆ ‘ನಿಲ್ಸ್‌ ಹೊಲ್ಗರ್ಸನ್‌ ಅಂಡರ್ಬರಾ ರೆಸಾ ಜೆನೊಮ್‌ ಸ್ವೆರಿಜ್‌ (ದಿ ವಂಡರ್‌ಫುಲ್‌ ಅಡ್ವೆಂಚರ್‌ ಆಫ್‌ ನೀಲ್ಸ್‌) ಅನ್ನು ಮಕ್ಕಳಿಗಾಗಿ ಬರೆಯುತ್ತಾರೆ. ಇದು ಸ್ವೀಡನ್ನಿನ ದಕ್ಷಿಣ ಭಾಗದ ಹುಡುಗನೊಬ್ಬ ಹೆಬ್ಬರಳಿನ ಗಾತ್ರಕ್ಕೆ ಕುಗ್ಗಿ, ದೇಶದಾದ್ಯಂತ ಹೆಬ್ಬಾತುಗಳ ಬೆನ್ನಿನ ಮೇಲೆ ಪ್ರಯಾಣಿಸಿದ ಬಗ್ಗೆ ಬರೆದಿರುವ ಕಾದಂಬರಿ. ಇದರಲ್ಲಿ ಸ್ವೀಡನ್ನಿನ ಪ್ರಾಂತ್ಯಗಳ ಐತಿಹಾಸಿಕ ಮತ್ತು ಭೌಗೋಳಿಕ ಸಂಗತಿಗಳನ್ನು ಹುಡುಗನೊಬ್ಬ ಹುಡುಕುವ ಸಾಹಸದ ಕತೆಗಳನ್ನು ಕಟ್ಟಿಕೊಡಲಾಗಿದೆ. ಅವರ ಹೆಚ್ಚಿನ ಕತೆಗಳು ವರ್ಮಲ್ಯಾಂಡ್‌ ಸುತ್ತಲೇ ಸುತ್ತುತ್ತವೆ. ಅವರ ಈ ಕೃತಿ 30ಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದಗೊಂಡಿದೆ.

ಕೇವಲ ಸಾಹಿತಿಯಾಗಿ ಮಾತ್ರವಲ್ಲದೆ ಸೆಲ್ಮಾ ಮಹಿಳಾ ಹಕ್ಕುಗಳ ಚಳುವಳಿಯಲ್ಲಿಯೂ ಸಕ್ರೀಯವಾಗಿ ಭಾಗವಹಿಸಿ ಯಶಸ್ವಿಯಾದರು. ಸ್ವೀಡನ್‌ ಕೂಡ ಮಹಿಳೆಯರಿಗೆ ಮತದಾನದ ಹಕ್ಕನ್ನು ನಿರಾಕರಿಸಿತ್ತು. ಇದಕ್ಕಾಗಿ ಅನೇಕ ಮಹಿಳೆಯರು ಸತತವಾಗಿ ಚಳುವಳಿಯಲ್ಲಿ ತೊಡಗಿಸಿಕೊಂಡಿದ್ದರು. ಸೆಲ್ಮಾ ಲಾಗರ್‌ಲೋಫ್‌ ಕೂಡ ಸಕ್ರೀಯವಾಗಿ ಭಾಗವಹಿಸಿದರು. 1911 ರಲ್ಲಿ ಸ್ಟಾಕ್‌ಹೋಮನಲ್ಲಿ ನಡೆದ ಅಂತರರಾಷ್ಟ್ರೀಯ ಮತದಾರರ ಕಾಂಗ್ರೇಸ್‌ನ ಉದ್ಘಾಟನೆಯನ್ನು ಸೆಲ್ಮಾ ನೆರವೇರಿಸಿ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಿದರು. 1919ರಲ್ಲಿ ಸ್ವೀಡಿಷ್‌ ಸರ್ಕಾರ ಮಹಿಳೆಯರಿಗೆ ಮತದಾನದ ಹಕ್ಕು ನೀಡಿತು. ಈ ವಿಜಯೋತ್ಸವದಲ್ಲಿಯೂ ಸೆಲ್ಮಾ ಭಾಗಿಯಾಗಿದ್ದರು.

ಸೆಲ್ಮಾ ಸಲಿಂಗಿಯಾಗಿದ್ದರು. 1894 ರಲ್ಲಿ ಅವರು ಸ್ವೀಡಿಷ್‌ ಬರಹಗಾರ್ತಿ ಸೋಫಿ ಎಲ್ಕನ್‌ರನ್ನು ಭೇಟಿ ಮಾಡಿದರು. ಅವರಿಬ್ಬರೂ ತಮ್ಮ ತಮ್ಮ ಬರವಣಿಗೆಯಲ್ಲಿ ಪ್ರಭಾವಕ್ಕೆ ಒಳಗಾದರು. ಹಾಗೆಯೇ ಅನೇಕ ವಿಷಯಗಳಲ್ಲಿ ಅವರಿಬ್ಬರಲ್ಲಿ ವೈರುಧ್ಯವೂ ಇತ್ತು. ಅವರ ನಡುವಿನ ಆತ್ಮೀಯತೆಯ ಪತ್ರಗಳು ಪುಸ್ತಕವಾಗಿಯೂ ಪ್ರಕಟಗೊಂಡಿವೆ. ನಂತರ ಸೆಲ್ಮಾಗೆ ವಾಲ್ಬೋರ್ಗ ಒಲಾಂಡರ್‌ ಅವರೊಂದಿಗೂ ನಿಕಟ ಸಂಪರ್ಕವಿತ್ತು. ಅವರಿಬ್ಬರ ಪತ್ರ ವ್ಯವಹಾರಗಳೂ ‘ಎನ್‌ರಿಕ್ಟಿಗ್‌ ಫರ್ಫತ್ತರ್ಹುಸ್ಟು್ರ’ ಹೆಸರಿನಲ್ಲಿ ಪ್ರಕಟಗೊಂಡಿವೆ. ಕಾಮ ಪ್ರಚೋದಕ ಪತ್ರಗಳನ್ನು ಸೆಲ್ಮಾರೇ ನಾಶಪಡಿಸಿದ್ದಾರೆ. ಏಕೆಂದರೆ ಆ ಕಾಲಕ್ಕೆ ಮಹಿಳೆಯರ ನಡುವಿನ ಸಲಿಂಗಕಾಮ ಸಂಬಂಧಗಳು ಕಾನೂನು ಬಾಹಿರವಾಗಿದ್ದವು. ಅಂತಹ ವಿಷಯಗಳನ್ನು ಅಂದು ಸಾರ್ವಜನಿಕವಾಗಿ ಬಹಿರಂಗಪಡಿಸುವಂತಿರಲಿಲ್ಲ.

ತನ್ನ 33ನೇ ವರ್ಷದಲ್ಲಿ ಅಂದರೆ 1891 ರಲ್ಲಿ ಬರೆದ ಅವರ ಪ್ರಮುಖ ಕಾದಂಬರಿ ‘ಗೊಸ್ಟಾಬರ್ಲಿಂಗ್‌ ಸಾಗಾ’ ಚಲನಚಿತ್ರವಾಗಿ, ನಾಟಕವಾಗಿಯೂ ಜನಪ್ರಿಯಗೊಂಡಿದೆ. ಈ ಕೃತಿಗೆ 1909ರಲ್ಲಿ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಯಿತು. ಅವರ ಬರಹದಲ್ಲಿ ನಿರೂಪಿಸಲಾಗಿರುವ ಉತ್ಕೃಷ್ಟಆದರ್ಶವಾದ, ಎದ್ದು ಕಾಣುವ ಕಲ್ಪನೆ ಮತ್ತು ಆಧ್ಯಾತ್ಮಿಕ ಗ್ರಹಿಕೆಯನ್ನು ಮೆಚ್ಚಿ ಪ್ರಶಸ್ತಿಯನ್ನು ನೀಡಲಾಯಿತು. ಸಾಹಿತ್ಯದ ಈ ಸಾಧನೆಗೆ ಪ್ರಪಂಚದಲ್ಲಿಯೇ ಮೊದಲ ನೊಬೆಲ್‌ ಪುರಸ್ಕಾರ ಪಡೆದ ಪ್ರಥಮ ಮಹಿಳೆ ಸೆಲ್ಮಾ. ಅವರು ಪ್ರಶಸ್ತಿಯಿಂದ ಬಂದ ಮೊತ್ತದಿಂದ ಮಾರ್ಬಕಾ ಎಸ್ಟೇಟ್‌ನ್ನು ಮತ್ತೆ ವಾಪಸ್ಸು ಖರೀದಿಸುತ್ತಾರೆ. ಮೊದಲಿದ್ದ ಹಳೆಯ ಮನೆಯನ್ನು ನವೀಕರಣಗೊಳಿಸಿ ತನ್ನ ಮನೆಯನ್ನು ಸಾರ್ವಜನಿಕರ ವೀಕ್ಷಣೆಗೆ ಬಿಟ್ಟುಕೊಡುವುದಾಗಿ ತನ್ನ ಉಯಲಲ್ಲಿ ಬರೆದು 1940 ರಲ್ಲಿ ನಿಧನಳಾಗುತ್ತಾರೆ. ಇಂದು ಸ್ವೀಡಿಷ್‌ ರಾಷ್ಟ್ರ ತನ್ನ ಹೆಮ್ಮೆಯ ಲೇಖಕಿಯ ಮನೆಯನ್ನು ವೀಕ್ಷಿಸಲು ಸಾರ್ವಜನಿಕರಿಗೆ ಅನುವು ಮಾಡಿಕೊಟ್ಟಿದೆ. ಕೆಲವು ಸ್ವೀಡಿಷ್‌ ಕ್ರೌನ್‌ಗಳನ್ನು ನೀಡಿ ಪ್ರವೇಶ ಪಡೆದು ಒಳಗೆ ಹೋದರೆ ಅಲ್ಲಿ ಲೇಖಕಿಯ ಮನೆ, ಪೀಠೋಪಕರಣಗಳು, ಪುಸ್ತಕಗಳನ್ನು ವೀಕ್ಷಿಸಬಹುದು. ಅಲ್ಲಿನ ಕಾಫಿ ಶಾಪ್‌ನಲ್ಲಿ ಕುಳಿತು ಓದಬಹುದು.

‘ದಿ ಸಾಗಾ ಆಫ್‌ ಗೊಸ್ಟಾಬರ್ಲಿಂಗ್‌’ (ಗೊಸ್ಟಾಬರ್ಲಿಂಗ್‌ ಸಾಗಾ) ರೊಮ್ಯಾಂಟಿಕ್‌ ಕಾದಂಬರಿಯಾಗಿದ್ದು ಗೋಸ್ಟಾಬರ್ಲಿಂಗ್‌, ಲುಥೆರನ್‌ ವಿಕಾರ್‌ ಅವರ ಅನುಚಿತ ಜೀವನ ಶೈಲಿಯ ಕಾರಣದಿಂದ ಶ್ರೀಮಂತ ಮಹಿಳೆಯರನ್ನು ಮನರಂಜಿಸುವ ಕತೆಯಿದೆ. ಕಾದಂಬರಿಯು ಆ ಕಾಲದ ಸಾಹಸ, ಜೀವನಶೈಲಿಯನ್ನು ಪರಿಚಯಿಸುತ್ತದೆ. ಆ ಕಾಲದ ಉತ್ಕೃಷ್ಟವಾದ ಆದರ್ಶ, ಕಲ್ಪನೆಯನ್ನು ಎಣೆದಿರುವ ಸೆಲ್ಮಾ ಅವರ ಈ ಕಾದಂಬರಿ ನೊಬೆಲ್‌ ಪ್ರಶಸ್ತಿಯಷ್ಟೆತಂದದ್ದದಲ್ಲದೆ, ಅವರ ಈ ಚೊಚ್ಚಲ ಕೃತಿ 1924 ರಲ್ಲಿ ಮಾರಿಟ್‌್ಜ ಸ್ಟಿಲ್ಲರ್‌ ನಿರ್ದೇಶನದಲ್ಲಿ ಮೂಕಿ ಚಿತ್ರವಾಗಿಯೂ ಯಶಸ್ವಿಯಾಗಿದೆ.

ಸ್ವೀಡನ್ನಿನ ಏಳು ಜನ ಇದುವರೆಗೂ ಸಾಹಿತ್ಯಕ್ಕಾಗಿ ನೋಬೆಲ್‌ ಪ್ರಶಸ್ತಿಯನ್ನು ಪಡೆದಿದ್ದಾರೆ. ವರ್ನರ್‌ ವಾನ್‌ ಹೈಡೆನ್‌ಸ್ಟಾಮ್‌, ಎರಿಕ್‌ ಆಕ್ಸೆಲ್‌ ಕಾರ್ಫೆಲ್ಡ್‌ ಹೀಗೆ ಏಳು ಜನ ಪುರುಷ ಸಾಹಿತ್ಯ ಪುರಸ್ಕೃತರಲ್ಲಿ ಸೆಲ್ಮಾ ಲಾಗರ್‌ಲೋಫ್‌ ಒಬ್ಬರೇ ಮಹಿಳೆ ಎಂಬುದು ಕೂಡ ಗಮನಾರ್ಹ. ಅಂತಹ ಮಹಿಳೆಯನ್ನು ಈ ದೇಶ ಇಂದಿಗೂ ಜ್ಞಾಪಿಸಿಕೊಳ್ಳುತ್ತಿದೆ ಹಾಗೂ ಗೌರವಿಸುತ್ತಿದೆ.

click me!