
ದೇಶಾದ್ಯಂತ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಸಂಭ್ರಮದಿಂದ ಆಚರಿಸಲಾಗುತ್ತದೆ. ಆದರೆ ಬಿಹಾರದ ಈ ಪಟ್ಟಣದಲ್ಲಿ ಆಗಸ್ಟ್ 16ಕ್ಕೂ ಸ್ವಾತಂತ್ರ್ಯ ದಿನದಷ್ಟೇ ಮಹತ್ವವಿದೆ. ಪ್ರತಿವರ್ಷ ಆಗಸ್ಟ್ 16ರಂದು ಇಲ್ಲಿ ವಿಶೇಷ ಕಾರ್ಯಕ್ರಮಗಳು ನಡೆಯುತ್ತವೆ. ಇದರ ಹಿಂದೆ ಸ್ವಾತಂತ್ರ್ಯ ಹೋರಾಟದ ರೋಚಕ ಇತಿಹಾಸವಿದೆ.
ಬಿಹಾರದ ಬಕ್ಸರ್ ಜಿಲ್ಲೆಯ ಡುಮ್ರಾವ್ ಪಟ್ಟಣದಲ್ಲಿ ಆಗಸ್ಟ್ 15ರ ಜೊತೆಗೆ ಆಗಸ್ಟ್ 16ರಂದು ಕೂಡ ಸ್ವಾತಂತ್ರ್ಯ ದಿನದ ರೀತಿಯಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಇದಕ್ಕೆ ಕಾರಣ 1942ರ ಆಗಸ್ಟ್ 16ರಂದು ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಸ್ಥಳೀಯ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ.
ಮಹಾತ್ಮ ಗಾಂಧೀಜಿ 1942ರ ಆಗಸ್ಟ್ 8ರಂದು ಮುಂಬೈನಲ್ಲಿ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಬ್ರಿಟಿಷರ ವಿರುದ್ಧ “ಮಾಡು ಇಲ್ಲವೇ ಮಡಿ” ಎಂಬ ಕರೆ ನೀಡಿದ್ದರು. ಈ ಕರೆ ಬಿಹಾರದಲ್ಲೂ ಭಾರೀ ಪರಿಣಾಮ ಬೀರಿತ್ತು. ಸುಮಾರು 5,000 ಜನರ ಮೆರವಣಿಗೆ ಡುಮ್ರಾವ್ ಪೊಲೀಸ್ ಠಾಣೆ ಸೇರಿದಂತೆ ಬ್ರಿಟಿಷರ ನಿಯಂತ್ರಣದಲ್ಲಿದ್ದ ಕಟ್ಟಡಗಳ ಮೇಲೆ ತ್ರಿವರ್ಣ ಧ್ವಜ ಹಾರಿಸಲು ಮುಂದಾಯಿತು.
ಮೆರವಣಿಗೆಯನ್ನು ಯುವ ಹೋರಾಟಗಾರ ಕಪಿಲ್ ಮುನಿ ಮುನ್ನಡೆಸಿದ್ದರು. ಡುಮ್ರಾವ್ ಪೊಲೀಸ್ ಠಾಣೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿದ ಬಳಿಕ ಬ್ರಿಟಿಷ್ ಪೊಲೀಸರು ಗುಂಡಿನ ದಾಳಿ ನಡೆಸಿದರು. ಈ ಘಟನೆಯಲ್ಲಿ ಕಪಿಲ್ ಮುನಿ ಸೇರಿದಂತೆ ನಾಲ್ವರು ಸ್ವಾತಂತ್ರ್ಯ ಹೋರಾಟಗಾರರು ಹುತಾತ್ಮರಾದರು. ಮತ್ತಷ್ಟು ಮಂದಿ ಗಾಯಗೊಂಡಿದ್ದರು.
ಈ ಹುತಾತ್ಮರ ಸ್ಮರಣಾರ್ಥ ಡುಮ್ರಾವ್‌ನಲ್ಲಿ 1943ರಿಂದಲೇ ಆಗಸ್ಟ್ 16ರಂದು ವಿಶೇಷ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಸ್ವಾತಂತ್ರ್ಯ ಬಂದ ಬಳಿಕ ಗುಂಡಿನ ದಾಳಿ ನಡೆದ ಪೊಲೀಸ್ ಠಾಣೆಯನ್ನು ಸ್ಮಾರಕವನ್ನಾಗಿ ಪರಿವರ್ತಿಸಲಾಯಿತು. 2015ರಲ್ಲಿ ಬಿಹಾರ ಸರ್ಕಾರವೂ ಆಗಸ್ಟ್ 16ರ ಈ ಆಚರಣೆಗೆ ಅಧಿಕೃತ ಮಾನ್ಯತೆ ನೀಡಿತು. ನಂತರ ಹುತಾತ್ಮರ ಪ್ರತಿಮೆಗಳನ್ನು ಕೂಡ ಸ್ಮಾರಕದಲ್ಲಿ ಸ್ಥಾಪಿಸಲಾಯಿತು.
ಹೀಗಾಗಿ ಡುಮ್ರಾವ್ ಜನರಿಗೆ ಆಗಸ್ಟ್ 15 ದೇಶದ ಸ್ವಾತಂತ್ರ್ಯದ ಸಂಭ್ರಮವಾದರೆ, ಆಗಸ್ಟ್ 16 ತಮ್ಮ ನೆಲದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸುವ ದಿನ. ಅಂದರೆ, ಭಾರತಕ್ಕೆ ಆಗಸ್ಟ್ 15 ಸ್ವಾತಂತ್ರ್ಯ ದಿನವಾದರೆ, ಡುಮ್ರಾವ್‌ಗೆ ಆಗಸ್ಟ್ 16 ಕೂಡ ಅಷ್ಟೇ ಭಾವನಾತ್ಮಕ ಮತ್ತು ಐತಿಹಾಸಿಕ ದಿನ