ಕೇವಲ 154 ರೂಪಾಯಿಗೆ 2BHK ಫ್ಲ್ಯಾಟ್ ಖರೀದಿ! ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದ ಡೀಲ್

Published : Nov 12, 2026, 05:55 PM IST
China 2BHK flat

ಸಾರಾಂಶ

China 2BHK flat : ಸೋಶಿಯಲ್‌ ಮೀಡಿಯಾದಲ್ಲಿ ಅತಿ ಕಡಿಮೆ ಬೆಲೆಗೆ ಮನೆ ಖರೀದಿ ಮಾಡಿದ ಸುದ್ದಿಯೊಂದು ಚರ್ಚೆಯಲ್ಲಿದೆ. ಆತನಿಗೆ ಈ ಮನೆ ಹೇಗೆ ಸಿಕ್ತು, ಅದ್ರ ವಿಶೇಷ ಏನು ಎಂಬ ಮಾಹಿತಿ ಇಲ್ಲಿದೆ.

ಮನೆ ಖರೀದಿ ಈಗ್ಲೂ ಅನೇಕರ ಜೀವನದ ದೊಡ್ಡ ಕನಸು. ಇದಕ್ಕಾಗಿ ಜೀವನಪೂರ್ತಿ ಹಣ ಕೂಡಿಡ್ತಾರೆ. ಬ್ಯಾಂಕ್ಗಳಿಂದ ಸಾಲ ಪಡೆದು ತಮ್ಮ ಆದಾಯದ ಬಹುಪಾಲು ಹಣವನ್ನು ಮನೆ ಖರೀದಿಗೆ ಮೀಸಲಿಡುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ 154 ರೂಪಾಯಿಗೆ ಎರಡು ಬೆಡ್ರೂಮ್ಗಳಿರುವ ಫ್ಲ್ಯಾಟ್ ಖರೀದಿ ಮಾಡಿದ್ದಾನೆ.

ಚೀನಾದ ವ್ಯಕ್ತಿಯೊಬ್ಬರು ಆನ್ಲೈನ್ ಶಾಪಿಂಗ್ ಫೆಸ್ಟಿವಲ್ ಸಂದರ್ಭದಲ್ಲಿ ಕೇವಲ 11 ಯುವಾನ್ಗೆ ಅಂದ್ರೆ ಸುಮಾರು 154 ರೂಪಾಯಿಗೆ ಎರಡು ಬೆಡ್ರೂಮ್ಗಳ ಫ್ಲ್ಯಾಟ್ ಖರೀದಿಸಿದ್ದಾರೆ. ಇದು ಸೋಶಿಯಲ್‌ ಮೀಡಿಯಾದಲ್ಲಿ ಈಗ ಸುದ್ದಿಯಾಗ್ತಿದೆ.

11 ಯುವಾನ್ಗೆ ಫ್ಲ್ಯಾಟ್ ಖರೀದಿಸುವ ಅವಕಾಶ

ಚೀನಾದ ಪ್ರಸಿದ್ಧ 'ಡಬಲ್ 11' ಆನ್ಲೈನ್ ಶಾಪಿಂಗ್ ಫೆಸ್ಟಿವಲ್ ಸಂದರ್ಭದಲ್ಲಿ ಈ ಹರಾಜು ನಡೆದಿದೆ. ಗ್ರಾಹಕರನ್ನು ಆಕರ್ಷಿಸಲು ವಿವಿಧ ಆಫರ್ಗಳನ್ನು ನೀಡುವ ಭಾಗವಾಗಿ ಅಲಿಬಾಬಾ ಆಕ್ಷನ್ ವೇದಿಕೆಯಲ್ಲಿ ಎರಡು ಬೆಡ್ರೂಮ್ಗಳ ಫ್ಲ್ಯಾಟ್ ಹರಾಜಿಗಿಡಲಾಗಿತ್ತು. ಈ ಫ್ಲ್ಯಾಟ್ ಚೀನಾದ ಈಶಾನ್ಯ ಭಾಗದಲ್ಲಿರುವ ಹೈಲಾಂಗ್ಜಿಯಾಂಗ್ ಪ್ರಾಂತ್ಯದಲ್ಲಿದೆ. ಸುಮಾರು 68 ಚದರ ಮೀಟರ್ ವಿಸ್ತೀರ್ಣ ಹೊಂದಿರುವ ಈ ಅಪಾರ್ಟ್ಮೆಂಟ್ ವಸತಿ ಕಟ್ಟಡದ ಏಳನೇ ಮಹಡಿಯಲ್ಲಿದೆ. ಇದರ ಆರಂಭಿಕ ಹರಾಜು ಬೆಲೆ ಕೇವಲ 1 ಯುವಾನ್ ಆಗಿತ್ತು. ಅಚ್ಚರಿಯ ಸಂಗತಿಯೆಂದರೆ, ಗರಿಷ್ಠ ಬಿಡ್ ಮೊತ್ತವನ್ನೂ 11 ಯುವಾನ್ಗೆ ನಿಗದಿಪಡಿಸಲಾಗಿತ್ತು. ಅಂದರೆ, ಮೊದಲು 11 ಯುವಾನ್ ಬಿಡ್ ಮಾಡಿದವರು ಫ್ಲ್ಯಾಟ್ ಖರೀದಿಸುವ ಅವಕಾಶ ಪಡೆಯುತ್ತಿದ್ದರು.

ಹರಾಜಿನಲ್ಲಿ ಭಾಗವಹಿಸಿದ್ರು 1,677 ಜನರು

ಈ ವಿಶೇಷ ಹರಾಜಿನಲ್ಲಿ ಒಟ್ಟು 1,677 ಜನರು ಭಾಗವಹಿಸಿದ್ದರು. ಹರಾಜಿನ ವೇಳೆ ಬರೋಬ್ಬರಿ 1,001 ಬಿಡ್ಗಳು ದಾಖಲಾಗಿದ್ದವು. ಕೊನೆಗೆ ಪೂರ್ವ ಚೀನಾದ ಜಿಯಾಂಗ್ಸು-ಝೆಜಿಯಾಂಗ್ ಪ್ರದೇಶದ ವ್ಯಕ್ತಿಯೊಬ್ಬರು ಮೊದಲು 11 ಯುವಾನ್ ಬಿಡ್ ಮಾಡುವ ಮೂಲಕ ಫ್ಲ್ಯಾಟ್ ತಮ್ಮದಾಗಿಸಿಕೊಂಡರು. ನವೆಂಬರ್ 5ರಂದು ಹರಾಜು ಮುಕ್ತಾಯಗೊಂಡಿದ್ದು, ಅವರಿಗೆ ಸುಮಾರು 154 ರೂಪಾಯಿಗೆ ಫ್ಲ್ಯಾಟ್ ಸಿಕ್ಕಿದೆ.

ಇಷ್ಟು ಕಡಿಮೆ ಬೆಲೆಗೆ ಮನೆ ಸಿಗಲು ವಿಶೇಷ ಪ್ರಚಾರ ಯೋಜನೆಯೂ ಕಾರಣವಾಗಿದೆ. ಹರಾಜು ಸಂಸ್ಥೆಯ ಪ್ರಕಾರ, ಆಸ್ತಿಯ ನೈಜ ಬೆಲೆ ಮತ್ತು ಪ್ರಚಾರದ ಬೆಲೆಯ ನಡುವಿನ ವ್ಯತ್ಯಾಸವನ್ನು ಆನ್ಲೈನ್ ವೇದಿಕೆಯೇ ಸಬ್ಸಿಡಿ ಮೂಲಕ ಭರಿಸಿದೆ.

ಬರೀ 154 ರೂಪಾಯಿಗೆ ಸಿಗೋದಿಲ್ಲ ಮನೆ

ಕೇವಲ 154 ರೂಪಾಯಿ ಕೊಟ್ಟರೆ ಫ್ಲ್ಯಾಟ್ ಸಂಪೂರ್ಣವಾಗಿ ಅವರದಾಗುವುದಿಲ್ಲ. ಖರೀದಿ ಮೊತ್ತ ಮತ್ತು ವಹಿವಾಟಿನ ಶುಲ್ಕದ ಜೊತೆಗೆ ಇನ್ನೂ ಕೆಲವು ವೆಚ್ಚಗಳನ್ನು ಭರಿಸಬೇಕಾಗುತ್ತದೆ. ಫ್ಲ್ಯಾಟ್ನ ಮಾಲೀಕತ್ವವನ್ನು ತಮ್ಮ ಹೆಸರಿಗೆ ವರ್ಗಾಯಿಸಿಕೊಳ್ಳಲು ಖರೀದಿದಾರರು ಸುಮಾರು 2,000 ಯುವಾನ್ ಅಂದರೆ 28,000 ರೂಪಾಯಿ ಮುದ್ರಾಂಕ ಶುಲ್ಕ (ಡೀಡ್ ಟ್ಯಾಕ್ಸ್) ಪಾವತಿಸಬೇಕಾಗುತ್ತದೆ. ಪ್ರಾಪರ್ಟಿ ಆ್ಯಪ್ಗಳ ಪ್ರಕಾರ, ಈ ಫ್ಲ್ಯಾಟ್ನ ಅಂದಾಜು ಮಾರುಕಟ್ಟೆ ಮೌಲ್ಯ ಸುಮಾರು 40,000 ಯುವಾನ್ ಆಗಿದೆ.

ರಜಾ ದಿನ ಕಳೆಯಲು ಫ್ಲ್ಯಾಟ್ ಖರೀದಿ

ಇಲ್ಲಿನ ಮತ್ತೊಂದು ಕುತೂಹಲಕಾರಿ ಸಂಗತಿಯೆಂದರೆ, ಖರೀದಿದಾರರಿಗೆ ಆ ಪ್ರದೇಶದಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶವಿಲ್ಲವಂತೆ. ಆಗಾಗ್ಗೆ ರಜೆ ಕಳೆಯಲು ಈ ಫ್ಲ್ಯಾಟ್ ಬಳಸಿಕೊಳ್ಳುವುದಾಗಿ ತಿಳಿಸಿದ್ದಾರೆ.

PREV
Read more Articles on
click me!

Recommended Stories

ಪರೀಕ್ಷೆಯಲ್ಲಿ ಪಾಸ್ ಆಗಿದ್ದೇ ತಡ, 9ನೇ ಕ್ಲಾಸ್ ಹುಡುಗನಿಗೆ ಅಪ್ಪನಿಂದ ₹1.62 ಕೋಟಿ BMW ಕಾರು ಗಿಫ್ಟ್!
'ನನಗೆ ಅವರೊಬ್ಬರೇ ಆಸರೆ' ಎಂದ ಮಗಳು, ಅಪ್ಪನಿಗೆ ಕೊಟ್ಟ ಉಡುಗೊರೆ ಏನು ಗೊತ್ತಾ? ವಿಡಿಯೋ ವೈರಲ್!