
ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಮೊಬೈಲ್‌ನಲ್ಲಿ ಅಶ್ಲೀಲವಾಗಿ ಕಾಣಿಸಿಕೊಳ್ಳುವ ಮೂಲಕ ರಾಜ್ಯದ ಪೊಲೀಸ್ ಇಲಾಖೆಯ ಶಿಸ್ತು ಮತ್ತು ಘನತೆಗೆ ಧಕ್ಕೆ ತಂದಿರುವ ಘಟನೆ ನಡೆದಿದೆ. ಇದರ ಬೆನ್ನಲ್ಲಿಯೇ ಈ ಮಹಿಳಾ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಪೊಲೀಸ್ ಇಲಾಖೆಯ ಶಿಸ್ತು ಮತ್ತು ಘನತೆಗೆ ಧಕ್ಕೆ ತಂದ ಆರೋಪದ ಮೇಲೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಿಯೋಜಿತರಾಗಿದ್ದ ಮಹಿಳಾ ಸಬ್‌ಇನ್‌ಸ್ಪೆಕ್ಟರ್ (ದರೋಡಾ) ಅನು ಅವರನ್ನು ಪೊಲೀಸ್ ವರಿಷ್ಠಾಧಿಕಾರಿ (SSP) ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದಾರೆ. ಅನು ರಾಣಿ ಅವರು 'ಆ್ಯನಿ' (Anni) ಎಂಬ ಹುಸಿ ಹೆಸರಿನಲ್ಲಿ ಯೂಟ್ಯೂಬ್ (YouTube) ಮತ್ತು ಇನ್‌ಸ್ಟಾಗ್ರಾಮ್ (Instagram) ಖಾತೆಗಳನ್ನು ನಿರ್ವಹಿಸುತ್ತಿದ್ದು, ಅಪೇಕ್ಷಣೀಯವಲ್ಲದ ಹಾಗೂ ಅಶ್ಲೀಲ ವಿಷಯಗಳನ್ನು ಒಳಗೊಂಡ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಕ್ಯೂಆರ್ ಕೋಡ್ (QR Code) ಮೂಲಕ ಹಣ ವಸೂಲಿ! ಆರೋಪಿ ಮಹಿಳಾ ಪೊಲೀಸ್ ಅಧಿಕಾರಿ ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬರುವಾಗ ಮತ್ತು ವೀಡಿಯೊಗಳನ್ನು ಪೋಸ್ಟ್ ಮಾಡುವಾಗ ಸ್ಕ್ರೀನ್ ಮೇಲೆ ಕ್ಯೂಆರ್ ಕೋಡ್ ಪ್ರದರ್ಶಿಸುತ್ತಿದ್ದರು ಎಂದು ತಿಳಿದುಬಂದಿದೆ. ಈ ಕೋಡ್ ಬಳಸಿ ವೀಕ್ಷಕರಿಂದ ಹಣ ವರ್ಗಾವಣೆ ಮಾಡಿಸಿಕೊಳ್ಳಲಾಗುತ್ತಿತ್ತು ಎಂಬ ವಿಚಾರ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ವಿಷಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆದ ನಂತರ, ಬಳಕೆದಾರರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರಾಜ್ಯ ಪೊಲೀಸ್ ಮಹಾನಿರ್ದೇಶಕ (DGP) ರಾಜೀವ್ ಕೃಷ್ಣ ಅವರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದರು. ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮೀರತ್ ಪೊಲೀಸ್ ಉನ್ನತಾಧಿಕಾರಿಗಳು ರಹಸ್ಯ ತನಿಖೆಗೆ ಆದೇಶಿಸಿದರು.
ಸದ್ಯ ಮೀರತ್ ಪೊಲೀಸ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅನು ಅವರ ವಿರುದ್ಧ ಪ್ರಾಥಮಿಕ ಪುರಾವೆಗಳು ಲಭ್ಯವಾದ ಹಿನ್ನೆಲೆಯಲ್ಲಿ ಎಸ್‌ಎಸ್‌ಪಿ ಅವರನ್ನು ಅಮಾನತುಗೊಳಿಸಿದ್ದಾರೆ.
ಮೀರತ್ ಎಸ್‌ಪಿ ಕ್ರೈಮ್ ಅವನೀಶ್ ಕುಮಾರ್ ಮಾತನಾಡಿ, "ಮಹಿಳಾ ದರೋಡಾ ಇಲಾಖೆಯ ಸೋಶಿಯಲ್ ಮೀಡಿಯಾ ನೀತಿಯನ್ನು (Social Media Policy) ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆ. ಪ್ರಾಥಮಿಕ ಸಾಕ್ಷ್ಯಗಳ ಆಧಾರದ ಮೇಲೆ ಅಮಾನತು ಕ್ರಮ ಕೈಗೊಳ್ಳಲಾಗಿದೆ. ವೈರಲ್ ವೀಡಿಯೊಗಳು ಅಸಲಿಯೇ ಅಥವಾ ಎಐ/ಡಿಜಿಟಲ್ ತಂತ್ರಜ್ಞಾನ ಬಳಸಿ ಎಡಿಟ್ ಮಾಡಲಾಗಿದೆಯೇ ಎಂಬುದನ್ನು ತಿಳಿಯಲು ಸೈಬರ್ ಸೆಲ್‌ಗೆ (Cyber Cell) ಜವಾಬ್ದಾರಿ ನೀಡಲಾಗಿದೆ" ಎಂದು ತಿಳಿಸಿದ್ದಾರೆ.
ಪ್ರಕರಣದ ಸಮಗ್ರ ತನಿಖೆಯ ಜವಾಬ್ದಾರಿಯನ್ನು ಸಿಒ (CO) ಸೌಮ್ಯಾ ಸಿಂಗ್ ಅವರಿಗೆ ವಹಿಸಲಾಗಿದ್ದು, ಸೈಬರ್ ಸೆಲ್ ನೀಡುವ ವರದಿ ಆಧಾರದ ಮೇಲೆ ಮುಂದಿನ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.