
ನವದೆಹಲಿ: ಸಾಮಾನ್ಯವಾಗಿ ರೈಲು ಪ್ರಯಾಣದ ಸಮಯದಲ್ಲಿ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುವ ಅನೇಕ ವ್ಯಾಪಾರಿಗಳನ್ನ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ಟ್ರೈನ್ ವೆಂಡರ್ ತನ್ನ ಅಸಾಧಾರಣ ಪ್ರತಿಭೆಯಿಂದ ಇಡೀ ದೇಶದ ಗಮನ ಸೆಳೆದಿದ್ದಾನೆ. ಟ್ರೇನ್‌ನಲ್ಲಿ ಟೂತ್‌ಬ್ರಷ್, ಪೇಸ್ಟ್ ಮತ್ತು ಸಾಬೂನು ಮಾರುವ ಈ ಸಾಮಾನ್ಯ ವ್ಯಾಪಾರಿ, ಇಂಗ್ಲಿಷ್ ಸೇರಿ ಬರೋಬ್ಬರಿ 18 ರಿಂದ 19 ಭಾಷೆಗಳನ್ನು ನಿರರ್ಗಳವಾಗಿ ಮಾತನಾಡುವ ಮೂಲಕ ಎಲ್ಲರ ಬೆರಗುಗೊಳಿಸಿದ್ದಾನೆ.
ಸಾಮಾಜಿಕ ಜಾಲತಾಣವಾದ ಎಕ್ಸ್ (X) ನಲ್ಲಿ ಲಕ್ಷಯ್ ಮೆಹ್ತಾ (Lakshay Mehta) ಎಂಬುವವರು ಹಂಚಿಕೊಂಡಿರುವ ವಿಡಿಯೋದಲ್ಲಿ ಅಪರೂಪದ ದೃಶ್ಯ ಸೆರೆಯಾಗಿದೆ. ರಾಜಸ್ಥಾನ ಮೂಲದ ಈ ಯುವಕ ರೈಲಿನ ಬೋಗಿಯಲ್ಲಿ ದಿನಬಳಕೆಯ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ. ಈ ವೇಳೆ ಪ್ರಯಾಣಿಕರೊಬ್ಬರು ಈತನ ಹಿನ್ನೆಲೆಯ ಬಗ್ಗೆ ವಿಚಾರಿಸಿದಾಗ ತನಗೆ ಕೇವಲ ಒಂದು ಅಥವಾ ಎರಡು ಅಲ್ಲ, ಬದಲಿಗೆ ಸುಮಾರು 18 ರಿಂದ 19 ಭಾಷೆಗಳು ಬರುತ್ತವೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾನೆ. ನಂತರ ಆತ ಮಾತನಾಡಿದ ಇಂಗ್ಲಿಷ್ ಭಾಷೆಯ ಧಾಟಿ ಮತ್ತು ಅದ್ಭುತ ಆತ್ಮವಿಶ್ವಾಸಕ್ಕೆ ಪ್ರಯಾಣಿಕರು ಬೆರಗಾಗಿದ್ದಾರೆ.
ಅಭೂತಪೂರ್ವ ಪ್ರತಿಭೆ ಹೊಂದಿರುವ ಈ ಯುವಕ ತನಗೆ ಇಷ್ಟೊಂದು ಭಾಷೆಗಳು ಹೇಗೆ ಬಂದವು ಎಂಬುದನ್ನೂ ವಿವರಿಸಿದ್ದಾನೆ. ತಾನು ಯಾವುದೇ ದೊಡ್ಡ ಶಾಲೆಗೆ ಹೋಗಿಲ್ಲ ಅಥವಾ ಯಾವುದೇ ವಿಶೇಷ ಕೋಚಿಂಗ್ ಅಥವಾ ತರಬೇತಿ ತರಗತಿಗಳನ್ನು ಪಡೆದಿಲ್ಲ ಎಂದು ಆತ ಹೇಳಿದ್ದಾನೆ. ಕೇವಲ ವಿವಿಧ ರಾಜ್ಯಗಳ ಪ್ರಯಾಣಿಕರ ಸಂಪರ್ಕಕ್ಕೆ ಬರುವ ಮೂಲಕ ಮತ್ತು ನಿರಂತರವಾದ ಕಲಿಯುವ ಹಂಬಲದಿಂದಲೇ ಸ್ವಯಂಪ್ರೇರಿತನಾಗಿ ಇಷ್ಟೊಂದು ಭಾಷೆಗಳನ್ನು ಕರಗತ ಮಾಡಿಕೊಂಡಿರುವುದಾಗಿ ಆತ ತಿಳಿಸಿದ್ದಾನೆ. ಭಾರತದ ವೈವಿಧ್ಯಮಯ ಪ್ರಾದೇಶಿಕ ಭಾಷೆಗಳ ನಡುವಿರುವ ಸಾಮ್ಯತೆ ಮತ್ತು ಆಸಕ್ತಿದಾಯಕ ಸಂಗತಿಗಳನ್ನು ಸಹ ಆತ ಪ್ರಯಾಣಿಕರಿಗೆ ಅದ್ಭುತವಾಗಿ ವಿವರಿಸಿದ್ದಾನೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ನೆಟಿಜನ್‌ಗಳು ಯುವಕನ ಜ್ಞಾನ ಮತ್ತು ಕಠಿಣ ಪರಿಶ್ರಮವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಕಲಿಯಲು ಯಾವುದೇ ಪದವಿ ಅಥವಾ ದೊಡ್ಡ ವಿಶ್ವವಿದ್ಯಾಲಯದ ಅಗತ್ಯವಿಲ್ಲ, ಕೇವಲ ಕಲಿಯುವ ತೀವ್ರ ಹಂಬಲವೊಂದಿದ್ದರೆ ಸಾಕು ಎಂಬುದಕ್ಕೆ ಈ ಯುವಕನೇ ಸೂಕ್ತ ಉದಾಹರಣೆ ಎಂದು ಅನೇಕರು ಕಾಮೆಂಟ್ ಮಾಡುತ್ತಿದ್ದಾರೆ. ಮತ್ತೆ ಕೆಲವರು ಇದುವೇ ನಮ್ಮ ದೇಶದ ಅಸಲಿ ಪ್ರತಿಭೆ ಎಂದು ಹೊಗಳಿದ್ದಾರೆ.
A man selling toothbrushes, toothpaste and soap on a train knows 18–19 languages! 😲
He says he loves learning new languages. pic.twitter.com/OUWMMb2I90— Lakshay Mehta (@lakshaymehta08) August 21, 2026