
ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದ 'ಖಾವದ್ಯ ಡೊಂಗರ್' ಬೆಟ್ಟದಲ್ಲಿ ಹೃದಯವಿದ್ರಾವಕ ಹಾಗೂ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದೆ. ಹೊಸ ಐಫೋನ್ (iPhone) ಕೊಡ್ಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ತಂದೆಯೊಂದಿಗೆ ಜಗಳವಾಡಿದ 19 ವರ್ಷದ ಕುನಾಲ್ ಚಂದಗುಡೆ ಎಂಬ ಯುವಕ, ಬೆಟ್ಟದ ತುದಿಗೆ ಹತ್ತಿ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿದ್ದ. ಆತನನ್ನು ರಕ್ಷಿಸಲು ಹೋದ ತಂದೆ ಮತ್ತು ತಾಯಿ ಇಬ್ಬರೂ ಕಣ್ಣೆದುರೇ ಜೀವ ಕಳೆದುಕೊಂಡಿದ್ದು, ಕೆಲವೇ ಕ್ಷಣಗಳಲ್ಲಿ ಇಡೀ ಕುಟುಂಬವೇ ನಾಶವಾಗಿದೆ.
ಘಟನೆಯ ತನಿಖೆಯ ವೇಳೆ ಲಭ್ಯವಾಗಿರುವ ವೀಡಿಯೊದಲ್ಲಿ, ಕುನಾಲ್ ಅವರ ತಾಯಿ ಸಂಗೀತಾ ಚಂದಗುಡೆ ತಮ್ಮ ಮಗನನ್ನು ಉಳಿಸಿಕೊಳ್ಳಲು ಅಂತಿಮ ಕ್ಷಣದವರೆಗೂ ಪಟ್ಟ ಶ್ರಮ ಮನ ಕಲಕುವಂತಿದೆ. ಮಗನ ಮುಂದೆ ಕೈಮುಗಿದು ಬೇಡಿಕೊಳ್ಳುವ ತಾಯಿ, ನಾನು ನಿನ್ನ ಪಾದಗಳಿಗೆ ಬೀಳುತ್ತೇನೆ, ದಯವಿಟ್ಟು ಕೆಳಗೆ ಬಾ... ಹೀಗೆ ಮಾಡಬೇಡ ಮಗನೇ." ಎಂದು ಅಳುತ್ತಾ ಗೋಗರೆಯುತ್ತಾರೆ. ಮಗ ಹಿಂದೆ ಸರಿಯುವಂತೆ ಹೇಳಿದಾಗ ತಾಯಿ ಕೆಲವು ಹೆಜ್ಜೆ ಹಿಂದೆ ಸರಿತಾರಾದರೂ, ಕುನಾಲ್ ಆತನ ಪಟ್ಟು ಸಡಿಲಿಸುವುದಿಲ್ಲ. ಮಗನನ್ನು ರಕ್ಷಿಸಲು ಬೇರೆ ದಾರಿ ಕಾಣದೆ ತಾಯಿ ಆ ಭಾವೋದ್ವೇಗದಲ್ಲಿ ತನ್ನ ತಲೆಯನ್ನು ನೆಲಕ್ಕೆ ಅಪ್ಪಳಿಸಿಕೊಂಡು ಬೇಡಿಕೊಂಡರೂ ಆತ ಮನಸ್ಸನ್ನು ಬದಲಾಯಿಸುವುದಿಲ್ಲ. ಸ್ಥಳದಲ್ಲಿದ್ದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳು ಗಂಟೆಗಳ ಕಾಲ ಆತನ ಮನವೊಲಿಸಲು ತೀವ್ರ ಪ್ರಯತ್ನ ನಡೆಸಿದರು. "ಮತ್ತೆ ಜೀವ ಸಿಗುವುದಿಲ್ಲ, ಹಿಂತಿರುಗಿ ಬಾ" ಎಂದು ಎಷ್ಟೇ ತಿಳಿಹೇಳಿದರೂ ಆತ ಜಿಗಿಯುವ ಬೆದರಿಕೆಯೊಡ್ಡುತ್ತಲೇ ಇದ್ದ.
ಮಗನನ್ನು ಹೇಗಾದರೂ ಮಾಡಿ ಸುರಕ್ಷಿತವಾಗಿ ಹಿಡಿದು ಕೆಳಗೆ ಎಳೆಯಬೇಕೆಂದು ಆತನ ಬಳಿಗೆ ಹೋದ ತಂದೆ ಮುರಳೀಧರ್ ಚಂದಗುಡೆ, ಬೆಟ್ಟದ ತುದಿಯಲ್ಲಿ ಹಠಾತ್ತಾಗಿ ಸಮತೋಲನ ತಪ್ಪಿದರು. ಕಂದಕಕ್ಕೆ ಬೀಳುವಾಗ ಅವರು ಮಗ ಕುನಾಲ್‌ನನ್ನು ರಕ್ಷಿಸಲು ಹಿಡಿಯಲು ಯತ್ನಿಸಿದಾಗ, ಇಬ್ಬರೂ ಆಳವಾದ ಕಂದಕಕ್ಕೆ ಬಿದ್ದರು. ತನ್ನ ಕಣ್ಣೆದುರೇ ಗಂಡ ಮತ್ತು ಮಗ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದನ್ನು ಕಂಡ ತಾಯಿ ಸಂಗೀತಾಗೆ ಆ ಆಘಾತವನ್ನು ತಡೆಯಲಾಗಲಿಲ್ಲ. ತೀವ್ರ ಮಾನಸಿಕ ಆಘಾತಕ್ಕೊಳಗಾದ ಅವರು, ಮರುಕ್ಷಣದಲ್ಲೇ ಅದೇ ಕಂದಕಕ್ಕೆ ಜಿಗಿದರು. ಕೇವಲ ಕೆಲವೇ ಸೆಕೆಂಡುಗಳ ಅಂತರದಲ್ಲಿ ಕುಟುಂಬದ ಮೂವರೂ ದಾರುಣವಾಗಿ ಪ್ರಾಣ ಕಳೆದುಕೊಂಡರು.
ಕೇವಲ ಒಂದು ಹೊಸ ಮೊಬೈಲ್ ಫೋನ್‌ಗಾಗಿ ನಡೆದ ಸಣ್ಣ ವಾಗ್ವಾದ, ಕೊನೆಗೆ ಸುಂದರ ಕುಟುಂಬವೊಂದನ್ನು ಹೀಗೆ ಉಸಿರುಗಟ್ಟಿಸಿ ಕೊನೆಗೊಳಿಸುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಈ ಘಟನೆಯಿಂದ ಇಡೀ ಛತ್ರಪತಿ ಸಂಭಾಜಿನಗರದಲ್ಲಿ ಶೋಕಸಾಗರ ಆವರಿಸಿದೆ. ಯುವ ಪೀಳಿಗೆಯ ಹಠಮಾರಿತನ ಹಾಗೂ ತತ್ಕ್ಷಣದ ಆವೇಶಗಳು ಹೇಗೆ ಇಡೀ ಕುಟುಂಬವನ್ನೇ ಬಲಿಪಡೆಯಬಲ್ಲವು ಎಂಬುದಕ್ಕೆ ಈ ಘಟನೆ ಕಣ್ಣೀರಿನ ಸಾಕ್ಷಿಯಾಗಿದೆ.
(ಹಕ್ಕುತ್ಯಾಗ: ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ ಅಥವಾ ಸ್ವಯಂ-ಹಾನಿ ಮಾಡಿಕೊಳ್ಳುವ ಆಲೋಚನೆಗಳನ್ನು ಹೊಂದಿದ್ದರೆ, ದಯವಿಟ್ಟು ತಕ್ಷಣವೇ ವೈದ್ಯಕೀಯ ಸಹಾಯ ಪಡೆಯಿರಿ. ಅಮೂಲ್ಯವಾದ ಜೀವವನ್ನು ಉಳಿಸಲು ಭಾರತ ಸರ್ಕಾರದ ಜೀವನ್ ಸತಿ ಸಹಾಯವಾಣಿ ಸಂಖ್ಯೆ 18002333330 ಅನ್ನು ಸಂಪರ್ಕಿಸಿ.)