ಕಾಡಿನಲ್ಲಿ ಟ್ರಾಫಿಕ್ ಜಾಮ್ ಮಾಡಿದ ಪಡ್ಡೆಹುಲಿ! ಸಫಾರಿ ರಸ್ತೆಗೆ ಗಡದ್ದಾಗಿ ಅಡ್ಡ ಮಲಗಿದ ವ್ಯಾಘ್ರ!

Published : Sep 29, 2026, 05:07 PM IST
Tiger sleep on Safari Road

ಸಾರಾಂಶ

ರಾಷ್ಟ್ರೀಯ ಉದ್ಯಾನವನದಲ್ಲಿ ಸಫಾರಿ ರಸ್ತೆಯ ಮಧ್ಯೆ ಹುಲಿಯೊಂದು ಮಲಗಿದ್ದರಿಂದ 30ಕ್ಕೂ ಹೆಚ್ಚು ಜೀಪ್‌ಗಳು ಸಾಲಾಗಿ ನಿಂತು ಟ್ರಾಫಿಕ್ ಜಾಮ್ ಉಂಟಾಗಿದೆ. ಪ್ರವಾಸಿಗರು ಸೆರೆಹಿಡಿದ ಈ ಅಪರೂಪದ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ನಗರ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್ ಆಗುವುದು ಸಾಮಾನ್ಯ. ಆದರೆ ದಟ್ಟವಾದ ಕಾಡಿನ ಮಧ್ಯೆ, ಅದೂ ಒಂದು ಹುಲಿಯಿಂದ ಟ್ರಾಫಿಕ್ ಜಾಮ್ ಆದರೆ ಹೇಗಿರುತ್ತದೆ? ಹೌದು, ರಾಜಸ್ಥಾನದ ರಣಥಂಬೋರ್ ರಾಷ್ಟ್ರೀಯ ಉದ್ಯಾನವನದಲ್ಲಿ (Ranthambore National Park) ಇಂತಹದ್ದೊಂದು ಅಪರೂಪದ ಹಾಗೂ ತಮಾಷೆಯ ಘಟನೆ ನಡೆದಿದ್ದು, ಇದರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಫಾರಿ ರಸ್ತೆಯಲ್ಲೇ ಮಧ್ಯಾಹ್ನದ ನಿದ್ದೆ!

ಸಫಾರಿಗೆ ಬಂದಿದ್ದ ಪ್ರವಾಸಿಗರ ವಾಹನಗಳ ಬಗ್ಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಹುಲಿಯೊಂದು ತನ್ನ ಮಧ್ಯಾಹ್ನದ ನಿದ್ದೆಗಾಗಿ ಸಫಾರಿ ಟ್ರ್ಯಾಕ್ (ಮಣ್ಣಿನ ರಸ್ತೆ) ಅನ್ನೇ ಆಯ್ಕೆ ಮಾಡಿಕೊಂಡಿತ್ತು. ಕಾಡಿನ ರಸ್ತೆಯ ಮಧ್ಯೆ ಅಡ್ಡಲಾಗಿ ಈ ಬೃಹತ್ ವ್ಯಾಘ್ರ ಆರಾಮಾಗಿ ಒರಗಿದ್ದರಿಂದ, ಸುಮಾರು 30ಕ್ಕೂ ಹೆಚ್ಚು ಸಫಾರಿ ಜೀಪ್‌ಗಳು ಮುಂದಕ್ಕೆ ಹೋಗಲಾಗದೆ ಸಾಲಾಗಿ ನಿಲ್ಲಬೇಕಾಯಿತು. ಈ ಅನಿರೀಕ್ಷಿತ 'ಟ್ರಾಫಿಕ್ ಜಾಮ್' ಪ್ರವಾಸಿಗರಿಗೆ ಅಚ್ಚರಿ ಹಾಗೂ ರೋಮಾಂಚನ ಎರಡನ್ನೂ ನೀಡಿತು.

ವಿಡಿಯೋ ಸೆರೆಹಿಡಿದ ಪ್ರವಾಸಿಗರು

ಎಲೆನಾ (Elena) ಎಂಬ ಪ್ರವಾಸಿಗರೊಬ್ಬರು ಈ ಅದ್ಭುತ ಕ್ಷಣವನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ಪ್ರವಾಸಿಗರು ಮೌನವಾಗಿ ಈ ಅಪರೂಪದ ದೃಶ್ಯವನ್ನು ವೀಕ್ಷಿಸುತ್ತಿರುವುದು ಹಾಗೂ ಸಾಲಾಗಿ ನಿಂತಿರುವ ಸಫಾರಿ ವಾಹನಗಳನ್ನು ಕಾಣಬಹುದು. ಈ ವಿಡಿಯೋಗೆ ಎಲೆನಾ ಅವರು, ‘ಕ್ಲಾಸಿಕ್ ಇಂಡಿಯಾ. ಟ್ರಾಫಿಕ್ ಜಾಮ್. ಆದರೆ ಇದಕ್ಕೆ ಕಾರಣ ಮಾತ್ರ ಒಂದು ಹುಲಿ’ ಎಂದು ತಮಾಷೆಯಾಗಿ ಕ್ಯಾಪ್ಷನ್ ನೀಡಿದ್ದಾರೆ.

ಮನೆಯ ಬೆಕ್ಕಿನಂತೆ ಮೈಮುರಿದ ಹುಲಿ!

ಸುಮಾರು 200 ಕೆಜಿ ತೂಕದ ಈ ಬೃಹತ್ ಹುಲಿಯ ಸುತ್ತಲೂ ವಾಹನಗಳು, ಕ್ಯಾಮೆರಾಗಳು ಇದ್ದರೂ ಅದು ಮಾತ್ರ ಅತ್ಯಂತ ರಿಲ್ಯಾಕ್ಸ್ ಆಗಿತ್ತು. ಸ್ವಲ್ಪ ಹೊತ್ತಿನ ನಂತರ ನಿದ್ದೆಯಿಂದ ಎದ್ದ ಹುಲಿ, ಮನೆಯಲ್ಲಿ ಸಾಕುವ ಬೆಕ್ಕಿನಂತೆಯೇ ಆರಾಮಾಗಿ ಮೈಮುರಿದು, ನಂತರ ನಿಧಾನವಾಗಿ ಕಾಡಿನೊಳಗೆ ನಡೆದುಕೊಂಡು ಹೋಯಿತು ಎಂದು ಎಲೆನಾ ಬರೆದುಕೊಂಡಿದ್ದಾರೆ.

'ಜೀವಮಾನದ ಅದ್ಭುತ ಕ್ಷಣ'

ತಮ್ಮ ರಣಥಂಬೋರ್ ಪ್ರವಾಸದಲ್ಲಿ ನೋಡಿದ ಮೂರನೇ ಹುಲಿ ಇದಾಗಿದೆ ಎಂದು ಎಲೆನಾ ಹೇಳಿಕೊಂಡಿದ್ದಾರೆ. "ಸಫಾರಿಗೆ ಸುಮಾರು 50 ಡಾಲರ್ (ಅಂದಾಜು 4,779 ರೂ.) ಖರ್ಚಾಗುತ್ತದೆ. ಆದರೆ ಕಾಡಿನಲ್ಲಿ ಹುಲಿ ಕಾಣಸಿಗುತ್ತದೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇರುವುದಿಲ್ಲ. ನಾನು ನಾಲ್ಕು ಸಫಾರಿಗಳಲ್ಲಿ ಮೂರು ಹುಲಿಗಳನ್ನು ನೋಡಿದ್ದೇನೆ. ಆದರೆ ರಸ್ತೆ ಮಧ್ಯೆ ಈ ರೀತಿ ಮಲಗಿದ್ದ ಹುಲಿಯನ್ನು ನೋಡಿದ್ದು ಮಾತ್ರ ನನ್ನ ಜೀವಮಾನದ ಮರೆಯಲಾಗದ ಕ್ಷಣ (once in a lifetime moment)" ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಫಿದಾ

ಈ ವಿಡಿಯೋ ಅಪ್‌ಲೋಡ್ ಆದಾಗಿನಿಂದ 6.25 ಲಕ್ಷಕ್ಕೂ ಹೆಚ್ಚು ವೀಕ್ಷಣೆ (Views) ಪಡೆದುಕೊಂಡಿದೆ. ಇಷ್ಟೊಂದು ವಾಹನಗಳು ಸುತ್ತುವರೆದಿದ್ದರೂ ಹುಲಿ ತೋರಿದ 'ರಾಜಗಾಂಭೀರ್ಯ'ವನ್ನು ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ‘ಇದು ನಿಜಕ್ಕೂ ದೊಡ್ಡ ಬೆಕ್ಕು, ಮನೆಯ ಬೆಕ್ಕುಗಳು ಕೂಡ ರಸ್ತೆ ಮಧ್ಯೆ ಹೀಗೆಯೇ ಮಲಗುತ್ತವೆ’ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ. ವನ್ಯಜೀವಿ ಸಫಾರಿಗಳು ಎಷ್ಟು ಅನಿರೀಕ್ಷಿತ ಹಾಗೂ ರೋಮಾಂಚಕಾರಿಯಾಗಿರುತ್ತವೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ.

PREV
Read more Articles on
click me!

Recommended Stories

ತನ್ನದೇ ಸಾವಿನ ಸುದ್ದಿ ನೋಡಿ ಶಾಕ್! ಫೇಕ್ ನ್ಯೂಸ್‌ಗೆ ಪಾಕ್ ಕ್ರಿಕೆಟರ್ ಕೊಟ್ಟ ರಿಯಾಕ್ಷನ್ ವೈರಲ್
ವಿಶ್ವದಾದ್ಯಂತ 'IMAX'ನಲ್ಲಿ ಯಶ್ 'ರಾಮಾಯಣ' ಬಿಡುಗಡೆ.. 'ರಾವಣ' ಪೋಸ್ಟರ್‌ ರಿಲೀಸ್ ಬಳಿಕ ಆಗಿರೋ ಬೆಳವಣಿಗೆ ಏನು?