
ಒಂದು ಸಣ್ಣ ಜಗಳದಿಂದ 16ನೇ ವಯಸ್ಸಿನಲ್ಲಿ ಮನೆ ಬಿಟ್ಟು ಹೊರಟಿದ್ದ ಮಗ ಬರೋಬ್ಬರಿ 23 ವರ್ಷಗಳ ಬಳಿಕ ಮತ್ತೆ ತಾಯಿಯ ಮಡಿಲಿಗೆ ಮರಳಿದ್ದಾನೆ. 2003ರಲ್ಲಿ ಆರಂಭವಾದ ಈ ಕುಟುಂಬದ ಬೇರ್ಪಡುವಿಕೆ ಕೊನೆಗೂ ಜುಲೈ 28ರಂದು ಅಂತ್ಯಗೊಂಡಿದೆ. ಪಂಜಾಬ್ ಮೂಲದ ಎನ್‌ಜಿಒ, ನಿವೃತ್ತ ಹರಿಯಾಣ ವಿಧಾನಸಭಾ ಕಾರ್ಯದರ್ಶಿ, ತಮಿಳು ಪತ್ರಕರ್ತರು ಹಾಗೂ ಪಂಜಾಬ್ ಮತ್ತು ತಮಿಳುನಾಡಿನ ಜಿಲ್ಲಾಡಳಿತಗಳ ಸತತ ಪ್ರಯತ್ನದಿಂದ ಈ ಅಪರೂಪದ ಪುನರ್ಮಿಲನ ಸಾಧ್ಯವಾಗಿದೆ. ತಮಿಳುನಾಡಿನ 68 ವರ್ಷದ ಆರ್. ಸುಂದರಿ ಅವರು ತಮ್ಮ ಹಿರಿಯ ಮಗನನ್ನು ಶಾಶ್ವತವಾಗಿ ಕಳೆದುಕೊಂಡಿದ್ದೇನೆ ಎಂದೇ ಭಾವಿಸಿದ್ದರು. ಆದರೆ, 39 ವರ್ಷದ ಪ್ರಕಾಶ್ ಅವರು ತಮ್ಮದೇ ಆದ ಕಠಿಣ ಜೀವನದ ಅನುಭವಗಳ ಬಳಿಕ ಕೊನೆಗೂ ತಾಯಿಯ ಬಳಿಗೆ ಮರಳಿದ್ದಾರೆ.
ಸುಮಾರು ಮೂರು ದಶಕಗಳ ಹಿಂದೆ ಸುಂದರಿ ಮತ್ತು ಅವರ ದಿವಂಗತ ಪತಿ ರಾಮಮೂರ್ತಿ ಕೆಲಸ ಹುಡುಕಿಕೊಂಡು ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ನೀಲಂಬೂರಿಗೆ ತೆರಳಿದ್ದರು. ದಂಪತಿಗೆ ಪ್ರಕಾಶ್ ಮತ್ತು ಪ್ರಭು ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಪ್ರಕಾಶ್ ಶಾಲೆಯನ್ನು ಅರ್ಧದಲ್ಲೇ ಬಿಟ್ಟಿದ್ದು, ನಾಲ್ಕನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದರು. ಕುಟುಂಬದ ಮೂಲ ನಿವಾಸ ತಮಿಳುನಾಡಿನ ವಿರುದುನಗರ ಜಿಲ್ಲೆಯ ಪೂಮಲೈಪಟ್ಟಿ ಗ್ರಾಮವಾಗಿತ್ತು.
2003ರಲ್ಲಿ ಕುಟುಂಬವು ಪೂಮಲೈಪಟ್ಟಿಯಲ್ಲಿದ್ದ ಸಂದರ್ಭದಲ್ಲಿ ಪ್ರಕಾಶ್‌ಗೆ ಕೇವಲ 16 ವರ್ಷ. ದ್ವಿಚಕ್ರ ವಾಹನದ ವಿಚಾರವಾಗಿ ತಮ್ಮ ಪ್ರಭು ಜೊತೆ ಜಗಳವಾಯಿತು. ಜಗಳದಿಂದ ಬೇಸರಗೊಂಡ ಪ್ರಕಾಶ್ ಮನೆ ಬಿಟ್ಟು ಹೊರಟುಹೋದರು. ಆದರೆ, ಸಾಕಷ್ಟು ಸಮಯ ಕಳೆದರೂ ಅವರು ಮನೆಗೆ ಮರಳಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸರಿಗೆ ನಾಪತ್ತೆ ದೂರು ದಾಖಲಿಸಿದರು. ಆದರೆ, ಪ್ರಕಾಶ್ ಎಲ್ಲಿಗೆ ಹೋದರು ಎಂಬುದರ ಬಗ್ಗೆ ಯಾವುದೇ ಸುಳಿವು ಸಿಗಲಿಲ್ಲ.
ಪ್ರಕಾಶ್ ನಾಪತ್ತೆಯಾದ ಸುಮಾರು ನಾಲ್ಕು ತಿಂಗಳ ಬಳಿಕ, ಪೂಮಲೈಪಟ್ಟಿಯಲ್ಲಿರುವ ನೆರೆಹೊರೆಯ ದಿನಸಿ ಅಂಗಡಿಗೆ ಅವರಿಗೆ ಒಂದು ಫೋನ್ ಕರೆ ಬಂದಿತ್ತು. ಆ ಕರೆ ಮಾಡಿದ್ದು ಪ್ರಕಾಶ್. ತಾನು ಚೆನ್ನೈನಲ್ಲಿದ್ದೇನೆ ಎಂದು ಅವರು ತಿಳಿಸಿದ್ದರು. ಇದರಿಂದ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ಸಿಕ್ಕಿತ್ತು. ಮಗ ಕೊನೆಗೂ ಮನೆಗೆ ವಾಪಸ್ ಬರುತ್ತಾನೆ ಎಂದು ತಾಯಿ ಮತ್ತು ಕುಟುಂಬಸ್ಥರು ಭರವಸೆ ಇಟ್ಟುಕೊಂಡಿದ್ದರು. ಆದರೆ, ಆ ಒಂದು ಫೋನ್ ಕರೆ ಬಳಿಕ ಪ್ರಕಾಶ್ ಮತ್ತೆ ಕುಟುಂಬದ ಸಂಪರ್ಕಕ್ಕೆ ಬರಲಿಲ್ಲ.
ಈ ನಡುವೆ ಕುಟುಂಬದ ಜೀವನದಲ್ಲೂ ಹಲವು ಕಷ್ಟಗಳು ಎದುರಾದವು. ಕುಟುಂಬವು ನೀಲಂಬೂರಿನಲ್ಲಿ ವಾಸವಾಗಿದ್ದಾಗ ಪ್ರಕಾಶ್ ಅವರ ತಂದೆ ರಾಮಮೂರ್ತಿ ಕ್ಯಾನ್ಸರ್‌ನಿಂದ ಮೃತಪಟ್ಟರು. ತಂದೆಯ ಚಿಕಿತ್ಸೆಯ ವೆಚ್ಚಕ್ಕಾಗಿ ಕುಟುಂಬವು ತಮ್ಮ ಊರಿನ ಜಮೀನನ್ನು ಮಾರಾಟ ಮಾಡಬೇಕಾಯಿತು. ಬಳಿಕ ಸುಂದರಿ ತಮ್ಮ ಕಿರಿಯ ಮಗ ಪ್ರಭು ಜೊತೆ ವಾಸಿಸಲು ಆರಂಭಿಸಿದರು. ಕುಟುಂಬದ ಆದಾಯದ ಮೂಲವಾಗಿ ಗುತ್ತಿಗೆಗೆ ಪಡೆದ ಕೃಷಿ ಭೂಮಿಯ ಒಂದು ಭಾಗ ಮಾತ್ರ ಉಳಿದಿತ್ತು ಎಂದು ಅಪ್ನಾ ಫರ್ಜ್ ಸೇವಾ ಸೊಸೈಟಿಯ ಮುಖ್ಯ ಸೇವಾದಾರ ಪಾಲ್ ಸಿಂಗ್ ಖ್ರೌದ್ ತಿಳಿಸಿದ್ದಾರೆ.
ಅವರು ಅಮೃತಸರ ಜಿಲ್ಲೆಯ ಅಜ್ನಾಲಾ ಸಮೀಪದ ಜಸ್ರೌರ್ ಗ್ರಾಮದಲ್ಲಿರುವ ಡೈರಿ ಫಾರ್ಮ್‌ನಲ್ಲಿ ಸುಮಾರು ಎರಡು ದಶಕಗಳ ಕಾಲ ಬಂಧಿತ ಕಾರ್ಮಿಕನಾಗಿ ಜೀವನ ನಡೆಸಿದ್ದರು ಎಂದು ಎನ್‌ಜಿಒ ತಿಳಿಸಿದೆ. ಅವರನ್ನು ಸರಪಳಿಯಿಂದ ಬಂಧಿಸಿ, ಹೊರಗೆ ಹೋಗದಂತೆ ತಡೆದು, ಯಾವುದೇ ವೇತನ ನೀಡದೆ ಕೆಲಸ ಮಾಡಿಸಲಾಗುತ್ತಿತ್ತು ಎನ್ನಲಾಗಿದೆ.
ಜುಲೈ 2022ರಲ್ಲಿ ಪಟಿಯಾಲ ಮೂಲದ ಅಪ್ನಾ ಫರ್ಜ್ ಸೇವಾ ಸೊಸೈಟಿ ಎಂಬ ಎನ್‌ಜಿಒ ಪ್ರಕಾಶ್ ಅವರನ್ನು ರಕ್ಷಿಸಿತು.
ರಕ್ಷಿಸಿದಾಗ ತಮ್ಮ ಹೆಸರನ್ನು ಬಿಟ್ಟರೆ ಬೇರೇನೂ ನೆನಪಿರಲಿಲ್ಲ, ಪ್ರಕಾಶ್ ಅವರನ್ನು ರಕ್ಷಿಸಿದ ಬಳಿಕ ಪಟಿಯಾಲಾದ ಲಚ್ಕಾನಿ ಗ್ರಾಮದಲ್ಲಿರುವ ಎನ್‌ಜಿಒ ಕೇಂದ್ರಕ್ಕೆ ಕರೆತರಲಾಯಿತು. ಅಲ್ಲಿ ಅವರಿಗೆ ವೈದ್ಯಕೀಯ ಚಿಕಿತ್ಸೆ, ಕೌನ್ಸೆಲಿಂಗ್ ಮತ್ತು ಪುನರ್ವಸತಿ ನೆರವು ನೀಡಲಾಯಿತು. ಆದರೆ, ವರ್ಷಗಳ ಕಾಲ ಅನುಭವಿಸಿದ್ದ ಕಠಿಣ ಪರಿಸ್ಥಿತಿಯಿಂದ ಪ್ರಕಾಶ್ ತೀವ್ರ ಆಘಾತಕ್ಕೊಳಗಾಗಿದ್ದರು. ಆರಂಭದಲ್ಲಿ ಅವರಿಗೆ ತಮ್ಮ ಹಿಂದಿನ ಜೀವನದ ಬಗ್ಗೆ ಬಹುತೇಕ ಏನೂ ನೆನಪಿರಲಿಲ್ಲ. ಅವರು ಹೇಳಲು ಸಾಧ್ಯವಾಗಿದ್ದ ಏಕೈಕ ಮಾಹಿತಿ ಎಂದರೆ ತಮ್ಮ ಹೆಸರು 'ಪ್ರಕಾಶ್' ಮತ್ತು ತಾವು ತಮಿಳುನಾಡಿಗೆ ಸೇರಿದವರು ಎಂಬುದು ಮಾತ್ರ.
ತಿಂಗಳುಗಳು ಕಳೆದಂತೆ ಪ್ರಕಾಶ್ ಅವರ ಆರೋಗ್ಯ ಮತ್ತು ಮಾನಸಿಕ ಸ್ಥಿತಿ ಸುಧಾರಿಸತೊಡಗಿತು. 2023ರ ವೇಳೆಗೆ ಅವರ ನೆನಪು ನಿಧಾನವಾಗಿ ತುಣುಕು ತುಣುಕಾಗಿ ಮರಳಲು ಆರಂಭಿಸಿತು. ಅದೇ ಸಂದರ್ಭದಲ್ಲಿ ಪುನರ್ವಸತಿ ಕಾರ್ಯದಲ್ಲಿ ಎನ್‌ಜಿಒಗೆ ಸ್ವಯಂಸೇವಕರಾಗಿ ಸಹಾಯ ಮಾಡುತ್ತಿದ್ದ ನಿವೃತ್ತ ಹರಿಯಾಣ ವಿಧಾನಸಭಾ ಕಾರ್ಯದರ್ಶಿ ಸುಭಾಷ್ ಚಂದರ್ ಅವರು ಪ್ರಕಾಶ್ ಅವರೊಂದಿಗೆ ಅವರ ಹಿಂದಿನ ಜೀವನದ ಬಗ್ಗೆ ಮಾತನಾಡಲು ಆರಂಭಿಸಿದರು. ಅಂತಹ ಒಂದು ಸಂಭಾಷಣೆಯ ವೇಳೆ ಪ್ರಕಾಶ್ ತಮ್ಮ ಸ್ವಂತ ಊರಿನ ಹೆಸರನ್ನು ನೆನಪಿಸಿಕೊಂಡರು.
ಒಂದು ಊರಿನ ಹೆಸರು ಕೊನೆಗೂ ಕುಟುಂಬವನ್ನು ಹುಡುಕಿಕೊಟ್ಟಿತು ಈ ಒಂದು ನಿರ್ಣಾಯಕ ಸುಳಿವು ಸಿಕ್ಕ ಬಳಿಕ ಎನ್‌ಜಿಒ ಸದಸ್ಯರು ಪೂಮಲೈಪಟ್ಟಿ ಗ್ರಾಮದ ಸರಪಂಚರ ಸಂಪರ್ಕ ಸಂಖ್ಯೆಯನ್ನು ಆನ್‌ಲೈನ್‌ನಲ್ಲಿ ಹುಡುಕಲು ಆರಂಭಿಸಿದರು. ಆದರೆ, ಭಾಷೆಯ ಸಮಸ್ಯೆ ಎದುರಾಯಿತು. ಪಂಜಾಬಿ ಮತ್ತು ತಮಿಳು ನಡುವಿನ ಭಾಷಾ ಅಡೆತಡೆಯನ್ನು ನಿವಾರಿಸಲು ಸರಪಂಚರು ಎನ್‌ಜಿಒ ಸದಸ್ಯರನ್ನು ತಮಿಳು ಪತ್ರಕರ್ತ ಮುತ್ತಯ್ಯ ಅವರೊಂದಿಗೆ ಸಂಪರ್ಕಿಸಿದರು. ಮುತ್ತಯ್ಯ ಅವರು ಭಾಷಾಂತರಕಾರರಾಗಿ ನೆರವಾದರು. ಬಳಿಕ ಅವರು ಕೊಯಮತ್ತೂರಿನ ನೀಲಂಬೂರಿಗೆ ತೆರಳಿ ಪ್ರಕಾಶ್ ಅವರ ತಾಯಿ ಸುಂದರಿ ಅವರನ್ನು ಪತ್ತೆಹಚ್ಚಲು ಸಹಾಯ ಮಾಡಿದರು.
ಕೊನೆಗೂ ಕುಟುಂಬ ಮತ್ತು ಎನ್‌ಜಿಒ ನಡುವೆ ವೀಡಿಯೊ ಕಾಲ್ ಏರ್ಪಡಿಸಲಾಯಿತು. ವರ್ಷಗಳ ಕಾಲ ಮಗ ಕಾಣೆಯಾಗಿದ್ದಾನೆ, ಬಹುಶಃ ಶಾಶ್ವತವಾಗಿ ಕಳೆದುಹೋಗಿದ್ದಾನೆ ಎಂದು ಭಾವಿಸಿದ್ದ ತಾಯಿ ಸುಂದರಿ, ವೀಡಿಯೊ ಕಾಲ್‌ನಲ್ಲಿ ತಮ್ಮ ಮಗ ಪ್ರಕಾಶ್ ಅವರನ್ನು ತಕ್ಷಣವೇ ಗುರುತಿಸಿದರು. 23 ವರ್ಷಗಳ ಬಳಿಕ ಮಗ ಜೀವಂತವಾಗಿದ್ದಾನೆ ಎಂಬ ಸತ್ಯ ತಾಯಿಗೆ ನಂಬಲಾರದ ಸಂತೋಷವನ್ನು ನೀಡಿತು.
ಪ್ರಕಾಶ್ ಅವರ ಕಿರಿಯ ಸಹೋದರ ಪ್ರಭು ಜುಲೈ 5ರಂದು ಎನ್‌ಜಿಒ ಕೇಂದ್ರಕ್ಕೆ ಭೇಟಿ ನೀಡಿ ತಮ್ಮ ಅಣ್ಣನನ್ನು ಭೇಟಿಯಾಗಿದ್ದರು. ಇದಾದ ಕೆಲವೇ ದಿನಗಳ ಬಳಿಕ, ಜುಲೈ 13ರಂದು ತಾಯಿ ಸುಂದರಿ ಕೊಯಮತ್ತೂರು ಜಿಲ್ಲಾಧಿಕಾರಿಯನ್ನು ಸಾರ್ವಜನಿಕ ಕುಂದುಕೊರತೆಗಳ ಸಭೆಯಲ್ಲಿ ಸಂಪರ್ಕಿಸಿದರು. ತಮ್ಮ ಮಗನನ್ನು ಮನೆಗೆ ಕರೆತರಲು ಅಧಿಕೃತ ನೆರವು ನೀಡುವಂತೆ ಮನವಿ ಮಾಡಿದರು. ಕೊಯಮತ್ತೂರು ಮತ್ತು ಪಟಿಯಾಲ ಜಿಲ್ಲಾಡಳಿತಗಳು ಈ ಪ್ರಕರಣದಲ್ಲಿ ಕೈಜೋಡಿಸಿದವು. ಶಾಲಾ ದಾಖಲೆಗಳು ಸೇರಿದಂತೆ ವಿವಿಧ ದಾಖಲೆಗಳನ್ನು ಪರಿಶೀಲಿಸಿ ಪ್ರಕಾಶ್ ಅವರ ಗುರುತನ್ನು ದೃಢಪಡಿಸಲಾಯಿತು. ಚಂಡೀಗಢ ತಮಿಳು ಸಂಗಮ್ ಕೂಡ ಈ ಪುನರ್ಮಿಲನಕ್ಕೆ ಅಗತ್ಯ ಸಹಕಾರ ನೀಡಿತು.