
ಚಮೋಲಿ (ಆ.21) ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ 10 ಶಾಲೆಗಳನ್ನು ಕನಿಷ್ಠ ನಾಲ್ಕು ದಿನ ಬಂದ್ ಮಾಡುವಂತೆ ಜಿಲ್ಲಾಧಿಕಾರಿ ಆದೇಶ ನೀಡಿದ ಘಟನೆ ಉತ್ತರಖಂಡದ ಚಮೋಲಿ ಜಿಲ್ಲೆಯ ನಾರಾಯಣಬಗಡದಲ್ಲಿ ನಡೆದಿದೆ. ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಅಧಿಕಾರಿಗಳು ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ. 10 ಶಾಲೆಗಳನ್ನು ನಾಲ್ಕು ದಿನಗಳ ಕಾಲ ಬಂದ್ ಮಾಡಲು ಸೂಚಿಸಲು ಮುಖ್ಯ ಕಾರಣ ನಾಯಿ.
ನಾರಾಯಣಬಗಡ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಈಗಾಗಲೇ ಹಲವು ಮಕ್ಕಳ ಮೇಲೆ ದಾಳಿ ಮಾಡಿದೆ. ಹೀಗಾಗಿ ನಾರಾಯಣಬಗಡ ಜಿಲ್ಲೆಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸ್ಥಳೀಯ ಮಟ್ಟದಲ್ಲಿ ಹಲವು ಪ್ರಯತ್ನ ನಡೆಸಲಾಗಿದೆ. ಆದರೆ ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳ ಮೇಲಿನ ದಾಳಿ ಪ್ರಕರಣ ಹೆಚ್ಚಾಗುತ್ತಿದ್ದಂತೆ ದಿಢೀರ್ ಸಭೆ ಸೇರಿದ ಜಿಲ್ಲಾಧಿಕಾರಿ ಇದೀಗ ನಾಲ್ಕು ದಿನಗಳ ಕಾಲ ನಾರಾಯಣಬಗಡದ 10 ಶಾಲೆಗಳು ಬಂದ್ ಮಾಡಲು ಆದೇಶ ನೀಡಿದ್ದಾರೆ.
ನಾಲ್ಕು ದಿನಗಳ ಕಾಲ ವಿದ್ಯಾರ್ಥಿಗಳಿಗೆ ಆನ್‌ಲೈನ್ ಮೂಲಕ ಪಾಠ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಕುರಿತು ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಆಗಸ್ಟ್ 20 ರಿಂದ ಆಗಸ್ಟ್ 23ರ ವರೆಗೆ ಶಾಲೆ ಬಂದ್ ಮಾಡಲು ಸೂಚನೆ ನೀಡಲಾಗಿದೆ. ಆಗಸ್ಟ್ 19 ರಂದು ಪಂಚಾಯತ್ ಪ್ರಮುಖ ಈ ಕುರಿತು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು. ಗ್ರಾಮದಲ್ಲಿರುವ ಬೀದಿ ನಾಯಿಗಳನ್ನು ಹೆಡೆಮುರಿ ಕಟ್ಟಲು ಸೂಚಿಸಿದ್ದರು. ಈ ಕುರಿತು ಹಲವು ಬೀದಿ ನಾಯಿ ದಾಳಿ ಪ್ರಕರಣವನ್ನು ಉಲ್ಲೇಖಿಸಿದ್ದರು. ಈ ಮನವಿ ಪತ್ರ ಜಿಲ್ಲಾಧಿಕಾರಿಗಳಿಗೆ ತಲುಪುತ್ತಿದ್ದಂತೆ ಆದ್ಯತೆ ನೀಡಿದ್ದಾರೆ.
ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸೂಚನೆ ನೀಡಲಾಗಿದೆ. ನಾಲ್ಕು ದಿನ 10 ಶಾಲೆಗಳನ್ನು ಬಂದ್ ಮಾಡಿ ಬೀದಿ ನಾಯಿಗಳ ಕಾರ್ಯಾಚರಣೆ ಮಾಡಲು ಸೂಚನೆ ನೀಡಲಾಗಿದೆ. ನಾಲ್ಕು ದಿನ ಬೀದಿ ನಾಯಿಗಳನ್ನು ಸಂಪೂರ್ಣವಾಗಿ ಹಿಡಿಯಲು ಸೂಚನೆ ನೀಡಿದ್ದಾರೆ. ಹಿಡಿದ ಬೀದಿ ನಾಯಿಗಳನ್ನು ನಾಯಿ ಆರೈಕೆ ಕೇಂದ್ರದಲ್ಲಿರಿಸಲು ಸೂಚನೆ ನೀಡಲಾಗಿದೆ.
ನಾರಾಯಣಬಗಡ ಪ್ರದೇಶದ ವಿದ್ಯಾರ್ಥಿಗಳು, ಪೋಷಕರು ಆತಂಕದಲ್ಲೇ ದಿನದೂಡುತ್ತಿದ್ದರು. ಇದೀಗ ಜಿಲ್ಲಾಧಿಕಾರಿಗಳ ಆದೇಶದಿಂದ ನಿಟ್ಟುಸಿರು ಬಿಟ್ಟಿದ್ದಾರೆ. ಇದೀಗ ನಾಯಿ ಹಿಡಿಯು ಪ್ರಯತ್ನಗಳು ನಡೆಯುತ್ತಿದೆ.