
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಒಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. ತಂದೆ ಮತ್ತು ಮಗನ ಭಾವನಾತ್ಮಕ ವಿಡಿಯೋ ಅದಾಗಿದೆ. ಮಗ ಗೆಳತಿಯ ಜೊತೆ ಹೋಟೆಲ್‌ಗೆ ಹೋಗಿದ್ದ. ಡೆಲಿವರಿ ಬಾಯ್ ಆಗಿದ್ದ ಅಪ್ಪ, ಅದೇ ಹೋಟೆಲ್‌ಗೆ ಹೋಗುತ್ತಾರೆ. ಆಗ ತಂದೆ ಮತ್ತು ಮಗನ ನಡುವೆ ಒಂದು ಹೆಮ್ಮೆಯ ಸಂಗತಿ ನಡೆಯುತ್ತಿದೆ. ಅದು ಎಲ್ಲರ ಮನ ಗೆದ್ದಿದೆ.
ವೈರಲ್ ಆಗಿರೋ ವಿಡಿಯೋದಲ್ಲಿ.. ಹೋಟೆಲ್‌ಗೆ ಪ್ರೇಮಿಗಳು ಬಂದಿರುತ್ತಾರೆ. ಇಬ್ಬರೂ ಎದುರು ಬದುರು ಕೂತು ತಮ್ಮಿಷ್ಟದನ್ನು ಸವಿಯುತ್ತಿರುತ್ತಾರೆ. ಅಲ್ಲಿಗೆ ಯುವಕನ ಅಪ್ಪ ಬರುತ್ತಾರೆ. ಡೆಲಿವರಿ ಬಾಯ್ ಆಗಿದ್ದ ಆತ, ತನ್ನ ಮಗ ತಾನು ಫುಡ್ ತೆಗೆದುಕೊಂಡು ಹೋಗುತ್ತಿರುವ ಹೋಟೆಲ್‌ಗೆ ಬಂದಿದ್ದಾನೆ ಎಂದು ತಿಳಿಯದೇ ಎಂಟ್ರಿ ಆಗುತ್ತಾರೆ. ಮಗ ತನ್ನ ಗೆಳತಿಯ ಜೊತೆ ಇರೋದನ್ನು ಕಂಡಿದ್ದಾರೆ. ಇತ್ತ ಮಗನೂ ಅಪ್ಪ ಬಂದಿರೋದನ್ನು ನೋಡುತ್ತಾನೆ.
ಸ್ವಲ್ಪ ನರ್ವಸ್ ಆದ ಮಗ, ಅಪ್ಪನ ಬಳಿ ಬರಲು ಮುಂದಾಗುತ್ತಾನೆ. ಆದರೆ ಅಪ್ಪ, ಬೇಡ. ಅಲ್ಲೇ ಕೂತು ತಿನ್ನಿ ಎಂಬ ಸಂದೇಶವನ್ನು ಕೈ ಸನ್ನೆ ಮೂಲಕ ನೀಡುತ್ತಾರೆ. ಇದ್ಯಾವುದೂ ಪ್ರಿಯತಮೆಗೆ ಗೊತ್ತಾಗುವುದಿಲ್ಲ. ಆದರೆ ಮಗ ಅಪ್ಪನ ಮಾತು ಕೇಳಲಿಲ್ಲ. ನೇರವಾಗಿ ತಂದೆಯ ಬಳಿ ಬರುತ್ತಾನೆ. ಅಪ್ಪನ ಕೈಹಿಡಿದು ಗೆಳತಿಯ ಬಳಿ ಕರೆದುಕೊಂಡು ಹೋಗ್ತಾನೆ. ನಂತರ ಪರಿಚಯ ಮಾಡಿಕೊಡುತ್ತಾನೆ. ಭಾವನಾತ್ಮಕವಾಗಿರುವ ವಿಡಿಯೋ ಅದಾಗಿದ್ದು, ನೆಟ್ಟಿಗರ ಹೃದಯವನ್ನು ಗೆಲ್ಲುತ್ತಿದೆ. ಈ ವಿಡಿಯೋವನ್ನು ವೆಲ್ತ್ ಎಂಬ ಇನ್‌ಸ್ಟಾಗ್ರಾಮ್ ಶೇರ್ ಮಾಡಿದ್ದು, ವೃತ್ತಿಯ ಆಧಾರದ ಮೇಲೆ ಯಾರನ್ನೂ ದೂರ ಇಡಬಾರದು ಎಂಬ ಸಂದೇಶವನ್ನು ನೀಡಿದೆ.
ಈ ಪ್ರಪಂಚ ಜನರನ್ನು ಅವರ ಕೆಲಸ ಅಥವಾ ಹುದ್ದೆಯನ್ನು ನೋಡಿ ಅಳೆಯಲು ಇಷ್ಟಪಡುತ್ತದೆ. ಡ್ರೈವರ್, ಸ್ವಚ್ಛತಾ ಕಾರ್ಮಿಕರು, ಅಡುಗೆಯವರು, ಡೆಲಿವರಿ ಮಾಡುವವರು.. ಜನ ದಿನವೂ ಇವರನ್ನು ಕಣ್ಣೆತ್ತಿಯೂ ನೋಡದೆ ದಾಟಿ ಹೋಗುತ್ತಾರೆ. ಅವರು ಮಾಡುವ ಕೆಲಸವೇ ಅವರ ಇಡೀ ಅಸ್ತಿತ್ವ ಎಂಬಂತೆ ನಡೆದುಕೊಳ್ಳುತ್ತಾರೆ.
ಆದರೆ ಪ್ರತಿಯೊಂದು ಸಮವಸ್ತ್ರದ (ಯೂನಿಫಾರ್ಮ್) ಹಿಂದೆಯೂ ಒಬ್ಬ ಮನುಷ್ಯನಿದ್ದಾನೆ. ಯಾರದ್ದೋ ತಂದೆ, ಯಾರದ್ದೋ ತಾಯಿ, ಇನ್ಯಾರದ್ದೋ ಅಣ್ಣ ಅಥವಾ ತಂಗಿ. ತಾವು ಪ್ರೀತಿಸುವ ಕುಟುಂಬಕ್ಕೆ ಯಾವ ಕೊರತೆಯೂ ಬರಬಾರದು ಎಂದು, ಸೂರ್ಯ ಹುಟ್ಟುವ ಮೊದಲೇ ಎದ್ದು, ಎಷ್ಟೇ ಸುಸ್ತಾದರೂ ಲೆಕ್ಕಿಸದೆ ಪ್ರತಿದಿನ ಶ್ರಮಿಸುವ ವ್ಯಕ್ತಿಯೊಬ್ಬನಿದ್ದಾನೆ.
ಯಾವುದೇ ದೊಡ್ಡ ಹುದ್ದೆಯೂ ತಂದುಕೊಡಲಾಗದಷ್ಟು ಘನತೆ ಮತ್ತು ಗೌರವ ಈ ದುಡಿಮೆಯಲ್ಲಿದೆ. ಮಾಡುವ ಕೆಲಸ ಮನುಷ್ಯನ ಯೋಗ್ಯತೆಯನ್ನು ನಿರ್ಧರಿಸುವುದಿಲ್ಲ; ಬದಲಿಗೆ, ಆ ಕೆಲಸವನ್ನು ಆತ ಮಾಡುವ ಪ್ರಾಮಾಣಿಕ ಮನಸ್ಸು ನಿರ್ಧರಿಸುತ್ತದೆ.
ನೀವು ಪ್ರೀತಿಸುವವರ ಹೊಟ್ಟೆ ತುಂಬಿಸುವ ಯಾವುದೇ ಕೆಲಸಕ್ಕೂ ಎಂದಿಗೂ ನಾಚಿಕೆಪಡಬೇಡಿ, ಏಕೆಂದರೆ ನಿಮಗಾಗಿ ಅದನ್ನು ಬೇರೆ ಯಾರೂ ಬಂದು ಮಾಡುವುದಿಲ್ಲ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಬರೆಯಲಾಗಿದೆ.