
ಆಗ್ರಾದ ತಾಜ್ ನಗರದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಮನೆಯೊಂದರಲ್ಲಿ ರೆಫ್ರಿಜರೇಟರ್ ಒಳಗೆ ಮಂಜುಗಡ್ಡೆಯಿಂದ ಶಿವಲಿಂಗದಂತಹ ಆಕಾರ ರೂಪುಗೊಂಡಿತ್ತು. ಕುಟುಂಬ ಸದಸ್ಯರು ನೆರೆ ಮನೆಯವರಿಗೆ ಇದನ್ನು ತಿಳಿಸಿದಾಗ, ಅಲ್ಲೆನೋ ಪವಾಡವೇ ನಡೆದಿದೆ ಎನ್ನುವಂತೆ ಜನಸಮೂಹ ಜಮಾಯಿಸಿತು. ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿದ್ದು, ದೂರದೂರದಿಂದ ಜನರು ಅದನ್ನು ನೋಡಲು ಬರಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಜನರು ರೆಫ್ರಿಜರೇಟರ್‌ಗೆ ಪೂಜೆ ಸಲ್ಲಿಸಲು ಮತ್ತು ನೀರನ್ನು ಅರ್ಪಿಸಲು ಪ್ರಾರಂಭಿಸಿದರು. ಅನೇಕ ಭಕ್ತರು, ಇದು ಶಿವನ ಪವಾಡ ಎಂದು ನಂಬಿ, "ಹರ ಹರ ಮಹಾದೇವ" ಎಂದು ನಾಮ ಜಪಿಸಿದ ಘಟನೆಯೂ ನಡೆದಿದೆ.
ಆಗ್ರಾದ ಖೇರಿಯಾ ಮಾಡ್ ನಾಗ್ಲಾ ಭುಜ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆಯೊಂದರಲ್ಲಿ ರೆಫ್ರಿಜರೇಟರ್ ಒಳಗಿನ ಮಂಜುಗಡ್ಡೆಯಿಂದ ಶಿವಲಿಂಗದಂತಹ ಆಕೃತಿ ರೂಪುಗೊಂಡಿತು. ಆರಂಭದಲ್ಲಿ, ಕುಟುಂಬದ ಸದಸ್ಯರನ್ನು ಅದನ್ನೇ ಶಿವಲಿಂಗ ಎಂದು ಪೂಜಿಸಲು ಪ್ರಾರಂಭಿಸಿತು. ಘಟನೆಯ ಬಗ್ಗೆ ಸುದ್ದಿ ಹರಡುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಜನ ಪೂಜೆ ಮಾಡಲು ಪ್ರಾರಂಭಿಸಿದರು. ಕೆಲವೇ ಕ್ಷಣಗಳಲ್ಲಿ, ಜನ ಸಾಗರ ಹರಿದು ಬಂದು, "ಹರ ಹರ ಮಹಾದೇವ್!" ಎಂಬ ಘೋಷಣೆ ಎಲ್ಲೆಡೆ ಪ್ರತಿಧ್ವನಿಸಿದೆ. ಈ ಘಟನೆಯ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.
ದೇಶದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಅಮರನಾಥದಲ್ಲಿ ನೈಸರ್ಗಿಕವಾಗಿ ರೂಪುಗೊಂಡಿರುವ ಮಂಜಿನ ಶಿವಲಿಂಗ ಇದೆ. ಅಲ್ಲಿನ ಶಿವಲಿಂಗವನ್ನು ಬರ್ಫಾನಿ ಬಾಬಾ ಎಂದೇ ಕರೆಯುತ್ತಾರೆ. ಅದೇ ಶಿವನಲಿಂಗ ಇಲ್ಲಿ ರೆಫ್ರಿಜರೇಟರ್ ನಲ್ಲಿ ಬಂದು ನೆಲೆಯಾಗಿದ್ದಾನೆ ಎಂದು ಜನರು ನಂಬಿದ್ದು, ಅದಕ್ಕಾಗಿ ದರ್ಶನ ಪಡೆದು ಪೂಜೆ ಸಲ್ಲಿಸಲು ಜನ ಸಾಗರೋಪಾದಿಯಲ್ಲಿ ಆಗಮಿಸುತ್ತಿದ್ದಾರೆ.
ಅಮರನಾಥದಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಮಂಜುಗಡ್ಡೆಯ ಶಿವಲಿಂಗದ ಗಾತ್ರ ಕುಗ್ಗಿದೆ. ಅಲ್ಲಿ ತಾಪಮಾನ ಹೆಚ್ಚಾಗಿದ್ದು, ಇದರಿಮ್ದಾಗಿ ಮಂಜುಗಡ್ಡೆ ಕರಗುತ್ತಿದ್ದು, ಶಿವಲಿಂಗದ ಮೇಲೆ ಪರಿಣಾಮ ಬೀರಿದ್ದು. 57 ದಿನಗಳ ತೀರ್ಥಯಾತ್ರೆ ಪೂರ್ಣಗೊಳ್ಳುವ ಮೊದಲೇ ಶೇ. 90 ಕ್ಕೂ ಹೆಚ್ಚು ಮಂಜುಗಡ್ಡೆಯ ಶಿವಲಿಂಗ ಕರಗಿದೆ ಎಂದು ವರದಿಯಾಗಿದೆ.