ಭಾರತೀಯ ಯುವತಿ ಮದುವೆಯಾದ ಸ್ಕಾಟ್ಲೆಂಡ್‌ ಸಂಸದ! ಇದು ಪ್ರತಿಭಟನೆಯಲ್ಲಿ ಹುಟ್ಟಿದ ರೋಚಕ ಪ್ರೀತಿ!

Published : Aug 21, 2026, 11:19 AM IST
MP Martin Day Marries Malayali Girl

ಸಾರಾಂಶ

ಸ್ಕಾಟ್ಲೆಂಡ್ ಸಂಸದ ಮಾರ್ಟಿನ್ ಡೇ, ಭಾರತದ ನಿಧಿನ್ ಚಾಂದ್ ಅವರನ್ನು ಗುರುವಾಂಯೂರು ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾಗಿದ್ದಾರೆ. ವಿಸಾ ಹೋರಾಟದ ಸಮಯದಲ್ಲಿ ಶುರುವಾದ ಇವರ ಪ್ರೇಮ, 9 ವರ್ಷಗಳ ನಂತರ ನಿಧಿನ್ ಅವರ ಸಾಂಪ್ರದಾಯಿಕ ವಿವಾಹದ ಕನಸನ್ನು ನನಸು ಮಾಡಿದೆ.

ಪ್ರೀತಿಗೆ ಯಾವುದೇ ಗಡಿಗಳಿಲ್ಲ, ಭಾಷೆ-ಸಂಸ್ಕೃತಿಯ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುವ ಅಪರೂಪದ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಬ್ರಿಟನ್ ಸಂಸತ್ತಿನ ಮಾಜಿ ಸಂಸದ ಹಾಗೂ ಪ್ರಸ್ತುತ ಸ್ಕಾಟ್ಲೆಂಡ್ ಸಂಸದರಾಗಿರುವ ಮಾರ್ಟಿನ್ ಡೇ (Martin Day), ಕೇರಳ ಮೂಲದ ನಿಧಿನ್ ಚಾಂದ್ (Nidhin Chandh) ಎಂಬುವವರನ್ನು ಹಿಂದೂ ಸಂಪ್ರದಾಯದಂತೆ ಐತಿಹಾಸಿಕ ಗುರುವಾಂಯೂರು ಶ್ರೀಕೃಷ್ಣ ದೇವಸ್ಥಾನದಲ್ಲಿ ವಿವಾಹವಾಗಿದ್ದಾರೆ.

ಸ್ಕಾಟಿಷ್ ಸಂಸದ ಕೇರಳದ ಸಾಂಪ್ರದಾಯಿಕ ಉಡುಪಿನಲ್ಲಿ ಮಿಂಚಿದ್ದು, ಇವರ ಮದುವೆಯ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿವೆ.

ವಿಸಾ ಹೋರಾಟದಲ್ಲಿ ಶುರುವಾದ ಪ್ರೇಮಕಥೆ!

ಕೇರಳದ ಪಿರವಂ ಮೂಲದ ನಿಧಿನ್ ಚಾಂದ್, 2008ರಲ್ಲಿ ಉನ್ನತ ವ್ಯಾಸಂಗಕ್ಕಾಗಿ ಬ್ರಿಟನ್‌ಗೆ ತೆರಳಿದ್ದರು. ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಬಳಿಕ ಐಟಿ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿ ಹಾಗೂ ನಂತರ ಪಿಎಚ್‌ಡಿ ಪೂರೈಸಿದರು. ಆ ಸಮಯದಲ್ಲಿ ಬ್ರಿಟನ್‌ನಲ್ಲಿ ವಿಸಾ ನಿಯಮಗಳು ಬಿಗಿಗೊಂಡಾಗ ವಿದೇಶಿ ವಿದ್ಯಾರ್ಥಿಗಳ ಪರವಾಗಿ ನಿಧಿನ್ ಸಂಸದೀಯ ಸಮಿತಿಗಳ ಮುಂದೆ ಸಕ್ರಿಯವಾಗಿ ಧ್ವನಿ ಎತ್ತಿದ್ದರು. ಆ ಹೋರಾಟದ ಸಂದರ್ಭದಲ್ಲಿ (ಫೆಬ್ರವರಿ 2016) ಅವರಿಗೆ ಆಗ ಬ್ರಿಟನ್ ಸಂಸದರಾಗಿದ್ದ ಮಾರ್ಟಿನ್ ಡೇ ಅವರ ಪರಿಚಯವಾಯಿತು. ಇಬ್ಬರ ಸ್ನೇಹ ಕೇವಲ ಎರಡು ತಿಂಗಳಲ್ಲಿ ಪ್ರೀತಿಗೆ ತಿರುಗಿ, ಮಾರ್ಟಿನ್ ತಮ್ಮ ಪ್ರೇಮ ನಿವೇದನೆ ಮಾಡಿದರು.

ತಾಯ್ತನ ಹಾಗೂ ಸವಾಲುಗಳ ನಡುವೆ ಕೈಹಿಡಿದ ನಾಯಕ:

ಆ ಸಂದರ್ಭದಲ್ಲಿ ನಿಧಿನ್ ವಿಚ್ಛೇದಿತರಾಗಿದ್ದು, 12 ವರ್ಷದ ಪುತ್ರನ ತಾಯಿಯಾಗಿದ್ದರು. ಜೊತೆಗೆ ಕೈಯಲ್ಲಿ ಉದ್ಯೋಗ ಮತ್ತು ಸರಿಯಾದ ವಿಸಾ ಇಲ್ಲದ ಕಠಿಣ ಪರಿಸ್ಥಿತಿಯಲ್ಲಿದ್ದರು. ಆದರೆ ಇದ್ಯಾವುದನ್ನೂ ಲೆಕ್ಕಿಸದ ಮಾರ್ಟಿನ್ ಡೇ, ನಿಧಿನ್ ಹಾಗೂ ಅವರ ಪುತ್ರ ವೇದಿಕ್ ಶಂಕರ್ ಅವರನ್ನು ತುಂಬು ಹೃದಯದಿಂದ ಸ್ವೀಕರಿಸಿದರು. ತಮ್ಮ ಪೋಷಕರಿಗೂ ಪರಿಚಯಿಸಿ, ಬ್ರಿಟನ್‌ನಲ್ಲಿ ಜೊತೆಯಾಗಿ ಬದುಕು ಆರಂಭಿಸಿದರು. ಪ್ರಸ್ತುತ 22 ವರ್ಷದ ಮಗ ವೇದಿಕ್ ಎಡಿನ್‌ಬರ್ಗ್‌ನಲ್ಲಿ ಉನ್ನತ ಕಂಪನಿಯಲ್ಲಿ ಸಾಫ್ಟ್‌ವೇರ್ ಹುದ್ದೆಯಲ್ಲಿದ್ದಾರೆ.

9 ವರ್ಷಗಳ ನಂತರ ಈಡೇರಿದ 'ಗುರುವಾಂಯೂರಪ್ಪನ' ಸನ್ನಿಧಿಯ ಕನಸು!

ಈ ಜೋಡಿ 9 ವರ್ಷಗಳ ಹಿಂದೆಯೇ ಬ್ರಿಟನ್‌ನಲ್ಲಿ ಕಾನೂನುಬದ್ಧವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿತ್ತು. ಆದರೆ, ಗುರುವಾಂಯೂರು ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ಮದುವೆಯಾಗಬೇಕೆಂಬುದು ನಿಧಿನ್ ಅವರ ಬಹುದಿನಗಳ ಆಸೆಯಾಗಿತ್ತು. 2018, 2019 ಮತ್ತು 2023ರಲ್ಲಿ ಕೇರಳಕ್ಕೆ ಭೇಟಿ ನೀಡಿದ್ದರೂ ಪ್ರವಾಹ, ಕೋವಿಡ್ ಸಾಂಕ್ರಾಮಿಕ ಹಾಗೂ ಕುಟುಂಬದ ಆರೋಗ್ಯ ಸಮಸ್ಯೆಗಳಿಂದಾಗಿ ದೇವಸ್ಥಾನದಲ್ಲಿ ಮದುವೆ ನೆರವೇರಲು ಸಾಧ್ಯವಾಗಿರಲಿಲ್ಲ.

ಇದೀಗ 4ನೇ ಬಾರಿಗೆ ಕೇರಳಕ್ಕೆ ಆಗಮಿಸಿದ ಮಾರ್ಟಿನ್ ಡೇ, ಗುರುವಾಂಯೂರು ದೇವಸ್ಥಾನದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ನಿಧಿನ್ ಕೊರಳಿಗೆ ಮಾಂಗಲ್ಯಧಾರಣೆ ಮಾಡುವ ಮೂಲಕ ಪತ್ನಿಯ ಬಹುಕಾಲದ ಕನಸನ್ನು ನನಸು ಮಾಡಿದ್ದಾರೆ.

PREV
Read more Articles on
click me!

Recommended Stories

ಪೋಷಕರೇ ಹುಷಾರ್! ಮಕ್ಕಳ ಭವಿಷ್ಯಕ್ಕಾಗಿ ನೀವು ಮಾಡುತ್ತಿರುವ ಈ ಕೆಲಸವೇ ಅವರ ಜೀವನ ಹಾಳು ಮಾಡುತ್ತಿದೆಯಾ?
ವಿದೇಶಿ ವ್ಯಾಮೋಹ ಬಿಡಿ, ಭಾರತದಲ್ಲೇ ಎಲ್ಲವೂ ಇದೆ: ಅಮೆರಿಕನ್ನರಾದ ಭಾರತೀಯ ದಂಪತಿಯ ವೈರಲ್ ಮಾತು