
ಬೆಂಗಳೂರು (ಮೇ.19): ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ 'ರಾಯಲ್ ಎನ್‌ಫೀಲ್ಡ್ ಬುಲೆಟ್ 350' (Royal Enfield Bullet 350) ಅತ್ಯಂತ ಜನಪ್ರಿಯ ಮತ್ತು ಗತ್ತು-ಗಾಂಭೀರ್ಯದ ಬೈಕ್ ಎಂದೇ ಫೇಮಸ್. ರಾಯಲ್ ಎನ್‌ಫೀಲ್ಡ್ ಸಂಸ್ಥೆಯ ಅತ್ಯಂತ ಯಶಸ್ವಿ ಮಾದರಿಯಾಗಿರುವ ಬುಲೆಟ್ 350 ದೇಶದಲ್ಲಿ ಸುದೀರ್ಘ ಹಾಗೂ ಹೆಮ್ಮೆಯ ಇತಿಹಾಸವನ್ನು ಹೊಂದಿದೆ. ಕಳೆದ ಹಲವು ದಶಕಗಳಲ್ಲಿ ಈ ಬೈಕ್ ಹತ್ತು ಹಲವು ತಾಂತ್ರಿಕ ಬದಲಾವಣೆಗಳಿಗೆ ಒಳಪಟ್ಟಿದ್ದರೂ, ಇದರ ಮೂಲ ವಿನ್ಯಾಸ, ಸೈಲೆನ್ಸರ್ ಘರ್ಜನೆ ಮತ್ತು ರಾಜಗಾಂಭೀರ್ಯದ ರೈಡಿಂಗ್ ಎಕ್ಸ್‌ಪೀರಿಯನ್ಸ್ ಮಾತ್ರ ಇಂದಿಗೂ ಹಾಗೇ ಉಳಿದುಕೊಂಡಿದೆ.
ಆದರೆ, ಇಂದು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಈ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಒಂದು ಕಾಲದಲ್ಲಿ ಕೇವಲ 18,700 ರೂಪಾಯಿಗೆ ಮಾರಾಟವಾಗ್ತಿತ್ತು. ಇಂದು ಒಂದು ಬ್ರ್ಯಾಂಡೆಡ್ ಶೂ ಬೆಲೆಯೇ 20 ಸಾವಿರಕ್ಕಿಂತ ಮೇಲಿದೆ. ಅದಕ್ಕಿಂತ ಕಡಿಮೆ ಬೆಲೆಯಲ್ಲಿ ರಾಯಲ್ ಎನ್‌ಫೀಲ್ಡ್ ಸಿಗುತ್ತಿದ್ದುದನ್ನು ಕಂಡು ಬೈಕ್ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಆರಂಭಿಕ ಬೆಲೆಯು 1.5 ಲಕ್ಷ ರೂಪಾಯಿಗಳಾಗಿದ್ದರೆ (ಎಕ್ಸ್ ಶೋರೂಮ್), ಹಳೆಯ ಕಾಲದ ಬೆಲೆಯ ಕೇಳಿ ವಾಹನ ಪ್ರಿಯರು ಬೆರಗಾಗಿದ್ದಾರೆ.
ಟ್ವಿಟರ್, ಇನ್‌ಸ್ಟಾಗ್ರಾಮ್ ಸೇರಿದಂತೆ ವಿಭಿನ್ನ ಸಾಮಾಜಿಕ ಜಾಲತಾಣಗಳಲ್ಲಿ ರಾಯಲ್ ಎನ್‌ಫೀಲ್ಡ್ ಬುಲೆಟ್ 350 ಬೈಕ್‌ನ ಹಳೆಯ ಕಾಲದ ಅಧಿಕೃತ ಬಿಲ್ ಫೋಟೋ ಭಾರಿ ವೈರಲ್ ಆಗುತ್ತಿದ್ದು, ಬೈಕ್ ಪ್ರೇಮಿಗಳನ್ನು ಅಚ್ಚರಿಗೆ ನೂಕಿದೆ. ವೈರಲ್ ಆಗಿರುವ ಈ ಬಿಲ್ ಇಂದಿಗೆ ಸುಮಾರು 40 ವರ್ಷಗಳಷ್ಟು ಹಳೆಯದಾದ 1986ರ ಅವಧಿಯದ್ದಾಗಿದೆ.
ಜಾರ್ಖಂಡ್ ಮೂಲದ 'ಸಂದೀಪ್ ಆಟೋ ಕಂಪನಿ' (Sandeep Auto Company) ಎಂಬ ಡೀಲರ್‌ಶಿಪ್ ಸಂಸ್ಥೆಯು ಈ ಬಿಲ್ ಅನ್ನು ವಿತರಿಸಿದೆ. ಇದರಲ್ಲಿ 'ಬುಲೆಟ್ 350 ಸ್ಟ್ಯಾಂಡರ್ಡ್' (Bullet 350 Standard) ಮಾದರಿಯ ಬೈಕ್‌ನ ಆನ್ ರೋಡ್ ಒಟ್ಟು ಬೆಲೆಯನ್ನು ಕೇವಲ 18,700 ರೂಪಾಯಿ ಎಂದು ನಮೂದಿಸಲಾಗಿದೆ.
1986ರ ಆ ದಿನಗಳಲ್ಲಿ ಈ ಬೈಕನ್ನು 'ರಾಯಲ್ ಎನ್‌ಫೀಲ್ಡ್' ಬದಲಿಗೆ ಕೇವಲ 'ಎನ್‌ಫೀಲ್ಡ್ ಬುಲೆಟ್' (Enfield Bullet) ಎಂದೇ ಕರೆಯಲಾಗುತ್ತಿತ್ತು. ಅಂದಿನ ಕಾಲಕ್ಕೆ ಇದು ಅತ್ಯಂತ ಗಟ್ಟಿಮುಟ್ಟಾದ ಮತ್ತು ನಂಬಿಕಸ್ಥ ಮೋಟಾರ್ ಸೈಕಲ್ ಆಗಿದ್ದರಿಂದ, ಭಾರತೀಯ ಸೇನೆಯು (Indian Army) ಗಡಿ ನಿಯಂತ್ರಣ ರೇಖೆಗಳು ಹಾಗೂ ದುರ್ಗಮ ಪ್ರದೇಶಗಳಲ್ಲಿ ಗಸ್ತು ತಿರುಗಲು (Patrolling) ಇದೇ ಬುಲೆಟ್ ಬೈಕ್‌ಗಳನ್ನು ವ್ಯಾಪಕವಾಗಿ ಬಳಸುತ್ತಿತ್ತು.
ಬುಲೆಟ್ ಬೈಕ್ ಎನ್ನುವುದು ಈ ಸಂಸ್ಥೆಯ ಆರಂಭಿಕ ಹಾಗೂ ಅತ್ಯಂತ ಯಶಸ್ವಿ ಮಾದರಿಗಳಲ್ಲಿ ಒಂದಾಗಿದ್ದು, ಇಂದಿಗೂ ಗ್ರಾಹಕರು ಈ ಕಂಪನಿಯನ್ನು ಗುರುತಿಸುವುದೇ 'ಬುಲೆಟ್' ಎಂಬ ಬ್ರ್ಯಾಂಡ್ ಹೆಸರಿನಿಂದ. ಸದ್ಯ ಮಾರುಕಟ್ಟೆಯಲ್ಲಿ ಬುಲೆಟ್ ಬೈಕ್ ವಿವಿಧ ಸಿಸಿಯ ಬೈಕ್‌ಗಳು ಲಭ್ಯವಿದೆ. ಪ್ರಸ್ತುತ ರಾಯಲ್ ಎನ್‌ಫೀಲ್ಡ್ ಬ್ರ್ಯಾಂಡ್‌ನ ಸಂಪೂರ್ಣ ಮಾಲೀಕತ್ವವನ್ನು ಭಾರತದ ಪ್ರಸಿದ್ಧ ವಾಹನ ತಯಾರಿಕಾ ಸಂಸ್ಥೆಯಾದ 'ಐಷರ್ ಮೋಟಾರ್ಸ್' (Eicher Motors) ಹೊಂದಿದೆ.
ರಾಯಲ್ ಎನ್‌ಫೀಲ್ಡ್ ಮೂಲತಃ ಬ್ರಿಟನ್ (ಇಂಗ್ಲೆಂಡ್) ಮೂಲದ ಬ್ರ್ಯಾಂಡ್. ಆದರೆ, 1955 ರಲ್ಲಿ ಬ್ರಿಟನ್‌ನ 'ಎನ್‌ಫೀಲ್ಡ್ ಸೈಕಲ್ ಕಂಪನಿ'ಯು ಭಾರತದ 'ಮದ್ರಾಸ್ ಮೋಟಾರ್ಸ್' ಸಂಸ್ಥೆಯೊಂದಿಗೆ ವಿಲೀನಗೊಂಡು 'ಎನ್‌ಫೀಲ್ಡ್ ಆಫ್ ಇಂಡಿಯಾ' (Enfield of India) ಆಗಿ ರೂಪಾಂತರಗೊಂಡಿತು. ಇದರ ಪ್ರಧಾನ ಕಚೇರಿಯನ್ನು ತಮಿಳುನಾಡಿನ ಚೆನ್ನೈನಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ ಇಂದಿನವರೆಗೂ 350cc ಸಾಮರ್ಥ್ಯದ ರಾಯಲ್ ಎನ್‌ಫೀಲ್ಡ್ ಬುಲೆಟ್ ಮೋಟಾರ್ ಸೈಕಲ್‌ಗಳನ್ನು ಭಾರತದ ಚೆನ್ನೈನಲ್ಲೇ ಸಂಪೂರ್ಣವಾಗಿ ಉತ್ಪಾದಿಸಲಾಗುತ್ತಿದೆ.