
ಭಾರತೀಯ ರೈಲ್ವೆ ಪ್ರಯಾಣಿಕರು ಪ್ರತಿದಿನ ಹತ್ತಾರು ಸವಾಲುಗಳನ್ನು ಎದುರಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ರೈಲುಗಳಲ್ಲಿ ತೃತೀಯಲಿಂಗಿಗಳು (Transgenders) ಹಣಕ್ಕಾಗಿ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ಪುಷ್ಟಿ ನೀಡುವಂತೆ ಸಾಮಾಜಿಕ ಜಾಲತಾಣವಾದ 'ಎಕ್ಸ್'ನಲ್ಲಿ (ಟ್ವಿಟರ್) ಸ್ನೇಹಾ ಎಂಬುವವರು ಹಂಚಿಕೊಂಡ ವಿಡಿಯೋ ಮತ್ತು ಪೋಸ್ಟ್ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಸ್ನೇಹಾ (@HinduismTherapy) ಅವರು ಹಂಚಿಕೊಂಡಿರುವ ಮಾಹಿತಿಯ ಪ್ರಕಾರ, ರೈಲಿನಲ್ಲಿ ಪ್ರಯಾಣಿಕರ ಬಳಿ ಹಣಕ್ಕಾಗಿ ಅಸಭ್ಯವಾಗಿ ವರ್ತಿಸುತ್ತಿದ್ದ ತೃತೀಯಲಿಂಗಿಯೊಬ್ಬರಿಗೆ ಅಲ್ಲಿನ ಸಾರ್ವಜನಿಕರು ಸರಿಯಾದ ಪಾಠ ಕಲಿಸಿದ್ದಾರೆ. "ಹಣ ಕೇಳುವ ನೆಪದಲ್ಲಿ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದ ವ್ಯಕ್ತಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ," ಎಂದು ಅವರು ಬರೆದುಕೊಂಡಿದ್ದಾರೆ. ಈ ಪೋಸ್ಟ್ ಬೆನ್ನಲ್ಲೇ ರೈಲ್ವೆ ಪ್ರಯಾಣಿಕರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಅನೇಕರು ತಮಗಾದ ಕಿರುಕುಳವನ್ನು ವಿವರಿಸಿದ್ದಾರೆ. ‘ಈ ಜನರು ತಂಡವಾಗಿ ಬಂದು ಅಸಭ್ಯವಾಗಿ ವರ್ತಿಸುತ್ತಾರೆ. ಸಭ್ಯ ನಾಗರಿಕರಿಗೆ ಕಿರುಕುಳ ನೀಡುತ್ತಾರೆ. ನಾವು ಹೇಳಿದಂತೆ ಕೇಳದಿದ್ದರೆ ಅಥವಾ ಹಣ ನೀಡದಿದ್ದರೆ ವಿದ್ಯಾರ್ಥಿಗಳು ಮತ್ತು ಯುವಕರನ್ನು ಬಿಡದೆ ಹೀಯಾಳಿಸುತ್ತಾರೆ’ ಎಂದು ಒಬ್ಬರು ಕಿಡಿಕಾರಿದ್ದಾರೆ.
ಇನ್ನೊಬ್ಬ ಬಳಕೆದಾರರು, ‘ರೈಲ್ವೆ ಇಲಾಖೆ (@RailMinIndia) ತಕ್ಷಣ ಇವರ ಮೇಲೆ ಕ್ರಮ ಕೈಗೊಳ್ಳಬೇಕು. ರೈಲು ಮತ್ತು ಬಸ್‌ಗಳಲ್ಲಿ ಇವರ ಕಾಟ ಮಿತಿಮೀರಿದೆ. ಕಷ್ಟಪಟ್ಟು ದುಡಿಯುವ ಶಕ್ತಿ ಇದ್ದರೂ, ಭಿಕ್ಷಾಟನೆಯ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುವುದು ಸರಿಯಲ್ಲ,’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಅನೇಕ ವರ್ಷಗಳಿಂದ ಸಮಾಜದಲ್ಲಿ 'ತೃತೀಯಲಿಂಗಿಗಳ ಹರಕೆ ಅಥವಾ ಶಾಪ ತಟ್ಟುತ್ತದೆ' ಎಂಬ ಭಯ ಮತ್ತು ಮೂಢನಂಬಿಕೆ ಇತ್ತು. ಆದರೆ ಈಗ ಜನರು ಜಾಗೃತರಾಗುತ್ತಿದ್ದಾರೆ. "ಅವರ ಕೈಕಾಲುಗಳು ಚೆನ್ನಾಗಿವೆ, ಕೆಲಸ ಮಾಡಿ ಬದುಕಬಹುದು. ಅದನ್ನು ಬಿಟ್ಟು ಈ ರೀತಿ ದೌರ್ಜನ್ಯ ಮಾಡುವುದು ಸರಿಯಲ್ಲ. ಇವರ ಆಶೀರ್ವಾದದ ಬಗ್ಗೆ ಇರುವ ಮೂಢನಂಬಿಕೆಗಳನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಇಂತಹ ಕಿರುಕುಳವನ್ನು ವಿರೋಧಿಸಬೇಕು," ಎಂಬ ಕಮೆಂಟ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ.
ರೈಲುಗಳಲ್ಲಿ ಇಂತಹ ಅಕ್ರಮ ಭಿಕ್ಷಾಟನೆ ಮತ್ತು ಕಿರುಕುಳವನ್ನು ತಡೆಯಲು ರೈಲ್ವೆ ಸುರಕ್ಷಾ ಪಡೆ (RPF) ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒಕ್ಕೊರಲ ಆಗ್ರಹವಾಗಿದೆ. ಸಭ್ಯವಾಗಿ ಬದುಕುವ ತೃತೀಯಲಿಂಗಿಗಳಿಗೆ ಗೌರವ ನೀಡಬೇಕು, ಆದರೆ ಕಿರುಕುಳ ನೀಡುವವರಿಗೆ ಕಾನೂನಿನ ಪಾಠ ಕಲಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.