ಮಾಜಿ ಪ್ರೇಯಸಿ ರೇ*ಪ್ ಮಾಡಿ ಕೊಲ್ಲಲು ಚಾಟ್‌ಜಿಪಿಟಿ ಬಳಿ ಐಡಿಯಾ ಕೇಳಿದ ಬಾಯ್‌ಫ್ರೆಂಡ್! ಆಮೇಲೆ ಆಗಿದ್ದೇನು?

Published : Aug 18, 2026, 10:29 AM IST
OpenAI ChatGPT

ಸಾರಾಂಶ

ಮಾಜಿ ಪ್ರೇಯಸಿಯ ಮೇಲೆ ಅ*ತ್ಯಾ*ಚಾ*ರ ಮತ್ತು ಕೊಲೆ ಮಾಡಲು ಚಾಟ್‌ಜಿಪಿಟಿಯಲ್ಲಿ ಐಡಿಯಾ ಕೇಳಿದ ಫ್ಲೋರಿಡಾದ ಯುವಕನನ್ನು OpenAI ಕಂಪನಿಯೇ ಪೊಲೀಸರಿಗೆ ಹಿಡಿದುಕೊಟ್ಟಿದೆ. ಈ ಸಂಭಾಷಣೆಯ ಅಪಾಯವನ್ನು ಅರಿತ ಕಂಪನಿ ಎಫ್‌ಬಿಐಗೆ ಮಾಹಿತಿ ನೀಡಿದ್ದರಿಂದ, ಆರೋಪಿಯನ್ನು ಬಂಧಿಸಿ ಎಂಟು ವರ್ಷಗಳ ಪ್ರೊಬೇಷನ್ ಶಿಕ್ಷೆ ವಿಧಿಸಲಾಗಿದೆ.

ಬೆಂಗಳೂರು: ಮಾಜಿ ಪ್ರೇಯಸಿಯ ಮೇಲೆ ಅತ್ಯಾ*ಚಾರ ಮಾಡಿ, ಕೊಲೆ ಮಾಡುವ ಪ್ಲಾನ್ ಬಗ್ಗೆ ಚಾಟ್‌ಜಿಪಿಟಿ ಜೊತೆ ಐಡಿಯಾ ಕೇಳಿದ್ದ ಯುವಕನೊಬ್ಬ ಈಗ ಕಾನೂನಿನ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಚಾಟ್‌ಬಾಟ್ ಸಂಭಾಷಣೆಯಿಂದ ನಿಜವಾಗಿಯೂ ಅಪಾಯವಿದೆ ಎಂದು ಪತ್ತೆ ಹಚ್ಚಿದ OpenAI ಕಂಪನಿ, ತಕ್ಷಣ ಫೆಡರಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ ಎಂದು ಕೋರ್ಟ್ ದಾಖಲೆಗಳಿಂದ ಬಹಿರಂಗವಾಗಿದೆ. ಫ್ಲೋರಿಡಾದ 25 ವರ್ಷದ ಡ್ಯಾರನ್ ಶೌ ಎಂಬಾತನೇ ಈ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿ. ಈತ ತನ್ನ ಮಾಜಿ ಪ್ರೇಯಸಿಯನ್ನು ಅ*ತ್ಯಾ*ಚಾ*ರ ಮಾಡಿ ಕೊಲ್ಲುವ ಪ್ಲಾನ್‌ಗಳ ಬಗ್ಗೆ ಚಾಟ್‌ಜಿಪಿಟಿಯಲ್ಲಿ ವಿವರವಾಗಿ ಚರ್ಚಿಸಿದ್ದ. ಈ ಸಂಭಾಷಣೆಗಳನ್ನು ಪತ್ತೆ ಹಚ್ಚಿದ OpenAI, ಕೂಡಲೇ ಎಫ್‌ಬಿಐಗೆ ಮಾಹಿತಿ ರವಾನಿಸಿತ್ತು.

ಬ್ರೇಕಪ್ ಆದ್ಮೇಲೆ ಚಾಟ್‌ಜಿಪಿಟಿ ಮೊರೆ ಹೋದ

ಆರು ತಿಂಗಳ ಪ್ರೀತಿಗೆ ಬ್ರೇಕ್ ಬಿದ್ದ ನಂತರ, ಮಾರ್ಚ್ ತಿಂಗಳಲ್ಲಿ ಶೌ ಚಾಟ್‌ಜಿಪಿಟಿ ಬಳಸಲು ಶುರುಮಾಡಿದ್ದ ಅಂತ ತನಿಖಾಧಿಕಾರಿಗಳು ಹೇಳಿದ್ದಾರೆ. ಮೊದಮೊದಲು ಬ್ರೇಕಪ್ ಬಗ್ಗೆ, ಮಾಜಿ ಪ್ರೇಯಸಿಯ ಇಷ್ಟಗಳು, ಅವಳು ಹೋಗುತ್ತಿದ್ದ ಜಾಗಗಳು, ತನ್ನ ಅಸೂಯೆ, ಮತ್ತೆ ಒಂದಾಗುವ ಆಸೆ... ಹೀಗೆಲ್ಲಾ ಚರ್ಚೆ ಮಾಡಿದ್ದ. ಆದರೆ, ನಂತರದ ದಿನಗಳಲ್ಲಿ ಈ ಸಂಭಾಷಣೆಯ ಸ್ವರೂಪವೇ ಬದಲಾಗಿದೆ. ಅ*ತ್ಯಾ*ಚಾ*ರ, ಕೊಲೆ ಮತ್ತು ಆ*ತ್ಮ*ಹ*ತ್ಯೆಯಂತಹ ಪ್ಲಾನ್‌ಗಳ ಬಗ್ಗೆ ಶೌ ಚರ್ಚೆ ಮಾಡಲು ಶುರುಮಾಡಿದ್ದ ಅಂತ ತನಿಖಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

'ಈ ತಿಂಗಳ ಕೊನೆಯಲ್ಲಿ ಕೊಲ್ಲುತ್ತೇನೆ'

ಕೋರ್ಟ್ ದಾಖಲೆಗಳ ಪ್ರಕಾರ, 'ಈ ತಿಂಗಳ ಕೊನೆಯಲ್ಲಿ ನನ್ನ ಮಾಜಿ ಪ್ರೇಯಸಿಯನ್ನು ಕೊಲ್ಲುತ್ತೇನೆ' ಎಂದು ಶೌ ಮೆಸೇಜ್ ಮಾಡಿದ್ದನಂತೆ. 'ಅವಳು ನನಗೆ ಸಿಗದಿದ್ದರೆ, ಬೇರೆ ಯಾರಿಗೂ ಸಿಗಬಾರದು' ಎಂಬರ್ಥದ ಮೆಸೇಜ್ ಕೂಡ ಕಳುಹಿಸಿದ್ದ. ಅಷ್ಟೇ ಅಲ್ಲ, ಒಂದು ಜಿಮ್ ಬಳಿ ಹೂವುಗಳನ್ನು ಹಿಡಿದು ಅವಳಿಗಾಗಿ ಕಾಯುತ್ತೇನೆ, ಒಂದು ವೇಳೆ ಅವಳು ನಿರಾಕರಿಸಿದರೆ ಕೊಲೆ ಮಾಡುವುದಾಗಿಯೂ ಚಾಟ್‌ಜಿಪಿಟಿಗೆ ಹೇಳಿಕೊಂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಗನ್ ಬಳಸಿ ದಾಳಿ ಮಾಡುವ ಪ್ಲಾನ್

ಬಂದೂಕಿನ ತುದಿಯಲ್ಲಿ ಮಾಜಿ ಪ್ರೇಯಸಿಯನ್ನು ಮನೆಗೆ ಕರೆದೊಯ್ದು, ಲೈಂಗಿಕ ದೌರ್ಜನ್ಯ ಎಸಗಿ, ಜೈಲಿನಲ್ಲಿಡುವ ಬಗ್ಗೆಯೂ ಈತ ಚಾಟ್‌ಬಾಟ್ ಜೊತೆ ಮಾತನಾಡಿದ್ದಾನೆ ಎಂಬ ಆರೋಪವಿದೆ. ತನ್ನ ಬಳಿ AR-15 ಮಾದರಿಯ ರೈಫಲ್, ಗ್ಲಾಕ್ ಹ್ಯಾಂಡ್‌ಗನ್ ಮತ್ತು 12-ಗೇಜ್ ಶಾಟ್‌ಗನ್ ಸೇರಿದಂತೆ ಹಲವು ಗನ್‌ಗಳಿವೆ ಅಂತನೂ ಶೌ ಹೇಳಿಕೊಂಡಿದ್ದಾಗಿ ಕೋರ್ಟ್ ದಾಖಲೆಗಳು ಹೇಳುತ್ತವೆ. ಗನ್‌ಗಳು, ಕಟ್ಟಿಹಾಕುವ ಉಪಕರಣಗಳು ಮತ್ತು ಲ್ಯಾಟೆಕ್ಸ್ ಕೈಗವಸುಗಳ ಫೋಟೋಗಳನ್ನು ಮಾಜಿ ಪ್ರೇಯಸಿಗೆ ಕಳುಹಿಸಿದ್ದಾಗಿಯೂ ಆತ ಹೇಳಿಕೊಂಡಿದ್ದ ಎಂದು ವರದಿಯಾಗಿದೆ.

OpenAI ಇಂದ ಎಫ್‌ಬಿಐಗೆ ಮಾಹಿತಿ

ಚಾಟ್‌ನಲ್ಲಿದ್ದ ಮೆಸೇಜ್‌ಗಳನ್ನು ಪರಿಶೀಲಿಸಿದ OpenAI, ನಿಜವಾಗಿಯೂ ಹಿಂಸಾಚಾರ ನಡೆಯುವ ಸಾಧ್ಯತೆ ಇದೆ ಎಂದು ಪತ್ತೆ ಹಚ್ಚಿ, ಫೆಡರಲ್ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಇದರ ನಂತರ, ತನಿಖಾಧಿಕಾರಿಗಳು ಶೌನ ಸುಮಾರು ಎರಡು ತಿಂಗಳ ಚಾಟ್ ಹಿಸ್ಟರಿಯನ್ನು ಪಡೆದುಕೊಂಡರು. ಮೇ ತಿಂಗಳಲ್ಲಿ ಶೌನನ್ನು ಬಂಧಿಸಲಾಯಿತು. ಗಂಭೀರವಾಗಿ ಹಿಂಬಾಲಿಸುವುದು, ಕೊಲ್ಲುವುದಾಗಿ ಲಿಖಿತ ಬೆದರಿಕೆ ಹಾಕುವುದು ಮತ್ತು ಮೊಬೈಲ್ ಫೋನ್ ಅನ್ನು ಕಾನೂನುಬಾಹಿರವಾಗಿ ಬಳಸುವುದು ಮುಂತಾದ ಆರೋಪಗಳನ್ನು ಅವನ ಮೇಲೆ ಹೊರಿಸಲಾಗಿದೆ.

ಎಂಟು ವರ್ಷಗಳ ಪ್ರೊಬೇಷನ್ ಶಿಕ್ಷೆ

ಆಗಸ್ಟ್ 13 ರಂದು ಶೌ ಮೂರೂ ಆರೋಪಗಳನ್ನು ಒಪ್ಪಿಕೊಂಡಿದ್ದಾನೆ. ಜೈಲು ಶಿಕ್ಷೆ ಮತ್ತು ಗಂಭೀರ ಅಪರಾಧಿ ಎಂಬ ರೆಕಾರ್ಡ್ ತಪ್ಪಿಸಿಕೊಳ್ಳುವ ಒಪ್ಪಂದದ ಭಾಗವಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ನಂತರ, ಸರ್ಕ್ಯೂಟ್ ಜಡ್ಜ್ ಸ್ಕಾಟ್ ಸುಸ್ಕೋವರ್ ಅವರು ಶೌಗೆ ಎಂಟು ವರ್ಷಗಳ 'ಪ್ರೊಬೇಷನ್' ಶಿಕ್ಷೆ ವಿಧಿಸಿದರು. ಅಂದರೆ, ಈ ಅವಧಿಯಲ್ಲಿ ಆತ ಯಾವುದೇ ತಪ್ಪು ಮಾಡದೆ, ಕೆಲವು ಕಠಿಣ ನಿಯಮಗಳನ್ನು ಪಾಲಿಸಬೇಕು. ಮೊದಲ ಎರಡು ವರ್ಷ ಕಾಲಿಗೆ ಮಾನಿಟರಿಂಗ್ ಡಿವೈಸ್ ಹಾಕಬೇಕು, ಹಿಂಸಾತ್ಮಕ ನಡವಳಿಕೆ ತಡೆಯುವ ಕೌನ್ಸೆಲಿಂಗ್‌ಗೆ ಹೋಗಬೇಕು. ಡ್ರಗ್ಸ್, ಗನ್ ಮತ್ತು ಮಾಜಿ ಪ್ರೇಯಸಿಯಿಂದ ದೂರ ಇರಬೇಕು.

ಕ್ರಿಮಿನಲ್ ತನಿಖೆಗಳಲ್ಲಿ AI ಪಾತ್ರ

ಜನರು ಸೂಕ್ಷ್ಮ ಮತ್ತು ಅಪಾಯಕಾರಿ ವಿಷಯಗಳನ್ನು ಚರ್ಚಿಸಲು AI ಚಾಟ್‌ಬಾಟ್‌ಗಳನ್ನು ಬಳಸುತ್ತಿರುವುದರ ಬಗ್ಗೆ ಈ ಘಟನೆ ಮತ್ತೆ ಆತಂಕ ಮೂಡಿಸಿದೆ. ಇತ್ತೀಚೆಗೆ ಹಲವು ಕ್ರಿಮಿನಲ್ ತನಿಖೆಗಳಲ್ಲಿ AI ಟೂಲ್‌ಗಳ ಬಳಕೆ ಬೆಳಕಿಗೆ ಬಂದಿದೆ. ಅಮೆರಿಕದ ಫ್ಲೋರಿಡಾ ಸ್ಟೇಟ್ ಯೂನಿವರ್ಸಿಟಿಯ ಶೂಟೌಟ್ ತನಿಖೆಯಲ್ಲೂ ಚಾಟ್‌ಜಿಪಿಟಿ ಬಳಕೆಯ ಬಗ್ಗೆ ಪ್ರಶ್ನೆಗಳು ಎದ್ದಿದ್ದವು. ದಾಳಿಕೋರ ಚಾಟ್‌ಬಾಟ್ ಬಳಸಿದ್ದಾಗಿ ಅಧಿಕಾರಿಗಳು ಹೇಳಿದ್ದರು.

ನಮ್ಮ ಬೆಂಗಳೂರಿನಲ್ಲೂ ಇಂಥದ್ದೇ ಒಂದು ಘಟನೆ ವರದಿಯಾಗಿತ್ತು. ಮೂರು ಕೊಲೆ ಪ್ರಕರಣಗಳ ಆರೋಪಿಯೊಬ್ಬ, ಕೊಲೆಗೆ ಪ್ಲಾನ್ ಮಾಡುವಾಗ ತಿಂಗಳುಗಟ್ಟಲೆ ಗೂಗಲ್ ಜೆಮಿನಿಯನ್ನು ಬಳಸಿದ್ದಾಗಿ ಪೊಲೀಸರು ಹೇಳಿದ್ದರು. ತನಿಖೆಯ ಭಾಗವಾಗಿ AI ಚಾಟ್ ಹಿಸ್ಟರಿಯನ್ನು ಪಡೆಯಲು ತನಿಖಾಧಿಕಾರಿಗಳು ಪ್ರಯತ್ನಿಸಿದ್ದರು. ಅಪಾಯಕಾರಿ ಸಂಭಾಷಣೆಗಳನ್ನು ನಿಭಾಯಿಸುವಲ್ಲಿ ಈ ಹಿಂದೆ AI ಕಂಪನಿಗಳು ಟೀಕೆಗೆ ಗುರಿಯಾಗಿದ್ದವು. ಆದರೆ, ಶೌ ಪ್ರಕರಣದಲ್ಲಿ ತಕ್ಷಣವೇ ಮೆಸೇಜ್‌ಗಳನ್ನು ಪತ್ತೆ ಹಚ್ಚಿ ಅಧಿಕಾರಿಗಳಿಗೆ ಮಾಹಿತಿ ನೀಡುವ ಮೂಲಕ, ಕಂಪನಿಗಳು ಹೆಚ್ಚು ಜವಾಬ್ದಾರಿಯುತ ಸುರಕ್ಷತಾ ಕ್ರಮಗಳತ್ತ ಸಾಗುತ್ತಿವೆ ಎಂಬ ಚರ್ಚೆಯೂ ಶುರುವಾಗಿದೆ.

PREV
Read more Articles on
click me!

Recommended Stories

ವರ್ಷಗಳ ಆಸೆ, ಮಗನ ಪರಿಶ್ರಮ; ಅಪ್ಪ-ಅಮ್ಮನ ಮೊದಲ ವಿಮಾನ ಪ್ರಯಾಣದ ಕ್ಷಣ ವೈರಲ್
ರೀಲ್ಸ್‌ಗಾಗಿ ಬೆಂಗಳೂರಿನ ಕಬ್ಬನ್‌ ಪಾರ್ಕ್‌ನಲ್ಲಿ ಜಡೆ ಹಿಡಿದು ಜಗಳವಾಡಿದ ಯುವತಿಯರು, ವಿಡಿಯೋ ವೈರಲ್‌!