
ವಯಸ್ಸು ಅನ್ನೋದು ಬರೀ ಒಂದು ನಂಬರ್ ಅಷ್ಟೇ ಅನ್ನೋ ಮಾತು ಸುಳ್ಳಲ್ಲ. ಉತ್ತರ ಪ್ರದೇಶದ 64 ವರ್ಷದ ವ್ಯಕ್ತಿಯೊಬ್ಬರು ಸಾಬೀತು ಮಾಡಿದ್ದಾರೆ. ಕೆಲಸದ ಒತ್ತಡ, ನಿರಂತರ ಪ್ರಯಾಣದ ನಡುವೆಯೂ ಕಷ್ಟಪಟ್ಟು ಓದಿ ಎಂ.ಟೆಕ್ ಪದವಿ ಪಡೆದಿದ್ದಾರೆ. ತಮ್ಮ ಕ್ಲಾಸ್‌ನಲ್ಲಿದ್ದ ಯುವ ವಿದ್ಯಾರ್ಥಿಗಳಿಗಿಂತ ಇವರ ವಯಸ್ಸು ಸುಮಾರು ಎರಡು ಪಟ್ಟು ಹೆಚ್ಚು. ಆದರೂ, ಆ ಸಹಪಾಠಿಗಳ ನಡುವೆ ಇವರು ಟಾಪ್ 10 ರಾಂಕ್‌ಗಳಲ್ಲಿ ಒಂದನ್ನು ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.
ತಂದೆಯ ಸಾಧನೆಗೆ ಅವರ ಮಗ ಶಶಾಂಕ್ ಶ್ರೀವಾಸ್ತವ ಅವರು 'X' (ಹಿಂದಿನ ಟ್ವಿಟರ್) ನಲ್ಲಿ ಹಂಚಿಕೊಂಡಿದ್ದಾರೆ. ರಿಟೈರ್ಮೆಂಟ್ ಆದ್ಮೇಲೆ ಸುಮ್ಮನೆ ಕೂರದೇ, ಓದಿನ ಮೇಲಿನ ಅದಮ್ಯ ಆಸಕ್ತಿಯಿಂದ ಹೊಸ ಎತ್ತರಕ್ಕೆ ಏರಿದ ಇವರ ಕಥೆ ಅನೇಕರಿಗೆ ಸ್ಫೂರ್ತಿಯಾಗಿದೆ.
2022ರಲ್ಲಿ ನಿವೃತ್ತರಾದ ನಂತರ, ಅವರು ಉತ್ತರ ಪ್ರದೇಶದ ಮುನ್ಸಿಪಲ್ ಕಾರ್ಪೊರೇಷನ್‌ಗಳ ನಿಯಂತ್ರಣ ಮಂಡಳಿಯಲ್ಲಿ ಡೆಪ್ಯೂಟಿ ಸಿಇಒ ಆಗಿ ಕೆಲಸ ಮಾಡುತ್ತಿದ್ದರು. ಈ ಕೆಲಸದಲ್ಲಿ ಪ್ರತಿ ವಾರ ರಸ್ತೆ ಮೂಲಕ ಸುಮಾರು 1,000 ಕಿ.ಮೀ.ಗಿಂತ ಹೆಚ್ಚು ಪ್ರಯಾಣಿಸಿ, ಬೇರೆ ಬೇರೆ ಜಿಲ್ಲೆಗಳಿಗೆ ಭೇಟಿ ನೀಡಿ ಅಲ್ಲಿನ ಕೆಲಸಗಳನ್ನು ಪರಿಶೀಲಿಸಬೇಕಿತ್ತು. ಈ ಪ್ರಯಾಣದ ನಡುವೆಯೇ ನೋಟ್ಸ್ ಮಾಡಿಕೊಂಡು, ಓದಿ ಈ ಸಾಧನೆ ಮಾಡಿದ್ದಾರೆ. ಎಂ.ಟೆಕ್ ಮುಗಿಸಿದ ನಂತರ, ಈ 64ರ ಹರೆಯದ ಉತ್ಸಾಹಿ ಈಗ ಐಐಎಂ ಲಖನೌದಲ್ಲಿ ಎಕ್ಸಿಕ್ಯೂಟಿವ್ ಎಜುಕೇಶನ್ ಪ್ರೋಗ್ರಾಂ ಮಾಡಲು ಸಿದ್ಧರಾಗಿದ್ದಾರೆ.
My dad completed his MTech last month. At 64. Top 10 in a class where the average student is half his age.
And this is not a retired man with free time on his hands.
After retiring in 2022, he joined back as Deputy CEO of the regulatory body overseeing municipal corporations in…— Shashank Srivastava (@ThatSalariedGuy) ಆಗಸ್ಟ್ 19, 2026 ರಂದು ಪೋಸ್ಟ್ ಮಾಡಲಾಗಿದೆ
ಶಶಾಂಕ್ ಹಂಚಿಕೊಂಡ ಈ ಪೋಸ್ಟ್‌ಗೆ ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. 'ವಯಸ್ಸು ಬರೀ ಸಂಖ್ಯೆ ಅಂತ ಇವರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ', 'ತುಂಬಾ ಸ್ಪೂರ್ತಿದಾಯಕ ಸಾಧನೆ' ಎಂಬಂತಹ ಕಾಮೆಂಟ್‌ಗಳು ಬಂದಿವೆ. 50ನೇ ವಯಸ್ಸಿನಲ್ಲಿ ಬಿ.ಎಸ್ಸಿ ಓದುತ್ತಿರುವ, ಸಮಯದ ಅಭಾವದಿಂದ ಕಷ್ಟಪಡುತ್ತಿರುವ ಇನ್ನೊಬ್ಬರು, 'ಈ ಪೋಸ್ಟ್ ನನಗೆ ದೊಡ್ಡ ಪ್ರೇರಣೆ ನೀಡಿದೆ' ಎಂದು ಬರೆದುಕೊಂಡಿದ್ದಾರೆ.