ಸ್ವಾಭಿಮಾನಕ್ಕೆ ಸವಾಲ್: ಹೆಂಡತಿಗಾದ ಅವಮಾನ ತಾಳಲಾರದೆ ತಾನೇ ಬಾವಿ ತೋಡಿದ ಸಾಗರದ ರೈತ!

Published : Aug 05, 2026, 05:22 PM IST
Madhya Pradesh man Ajab Sing

ಸಾರಾಂಶ

ತನ್ನ ಹೆಂಡತಿ ಕುಡಿಯಲು ನೀರು ತರಲು ಬಿಂದಿಗೆ ಹಿಡಿದು ಹೋದಾಗ ಬಾವಿಯ ಮಾಲೀಕ ಭಾರೀ ಅವಮಾನ ಮಾಡಿದ್ದನು. ಹೆಂಡತಿಗೆ ಅವಮಾನ ಮಾಡಿ ಸ್ವಾಭಿಮಾನಕ್ಕೆ ಧಕ್ಕೆಯಾಗಿರುವುದನ್ನು ಸಹಿಸದ ಗಂಡ ಸತತ 7 ವರ್ಷಗಳ ಪರಿಶ್ರಮದಿಂದ ದೊಡ್ಡ ಬಾವಿಯನ್ನು ತೋಡಿದ್ದು, ಇದೀಗ ಗ್ರಾಮದ ಜಲಗಾರನಾಗಿದ್ದಾನೆ.

ಬಿಹಾರದ 'ಮೌಂಟೇನ್ ಮ್ಯಾನ್' (Mountain Man) ದಶರಥ ಮಾಂಝಿ (Dashrath Manjhi) ತಮ್ಮ ಹೆಂಡತಿಯ ಅಗಲಿಕೆಯ ನೋವಿನಲ್ಲಿ ಇಡೀ ಗುಡ್ಡವನ್ನೇ ಕಡಿದು ರಸ್ತೆ ನಿರ್ಮಿಸಿದ್ದು ಇತಿಹಾಸ. ಅದೇ ಹಾದಿಯಲ್ಲಿ ಸಾಗಿರುವ ಮಧ್ಯಪ್ರದೇಶದ (Madhya Pradesh) ಸಾಗರ ಜಿಲ್ಲೆಯ 71 ವರ್ಷದ ಬುಡಕಟ್ಟು ರೈತ (Tribal Farmer) ಅಜಬ್ ಸಿಂಗ್ ಆದಿವಾಸಿ (Ajab Singh Adivasi), ತಮ್ಮ ಪತ್ನಿಯ ಸ್ವಾಭಿಮಾನ ಹಾಗೂ ಗೌರವಕ್ಕಾಗಿ ಬರೋಬ್ಬರಿ 7 ವರ್ಷಗಳ ಕಾಲ ಏಕಾಂಗಿಯಾಗಿ ಶ್ರಮಿಸಿ ಸ್ವಂತ ಬಾವಿಯೊಂದನ್ನು (Well) ತೋಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ.

ಏನಿದು ಘಟನೆ?

ಸಾಗರ ಜಿಲ್ಲೆಯ ನಾರಾಯಾವಳಿ (Narayawali) ವಿಧಾನಸಭಾ ಕ್ಷೇತ್ರದ ಇಮ್ಲಿಯಾ (Imliya) ಗ್ರಾಮದ ನಿವಾಸಿಯಾಗಿರುವ ಅಜಬ್ ಸಿಂಗ್ ಅವರಿಗೆ ಸರ್ಕಾರದಿಂದ 2 ಎಕರೆ ಜಮೀನು ಸಿಕ್ಕಿತ್ತು. ಆದರೆ ಆ ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಅಭಾವ (Water Scarcity) ಇತ್ತು. ಗ್ರಾಮಸ್ಥರು ನೀರಿಗಾಗಿ ಖಾಸಗಿ ಬಾವಿಗಳನ್ನೇ (Private Wells) ಅವಲಂಬಿಸಬೇಕಿತ್ತು. ಒಮ್ಮೆ ಅಜಬ್ ಸಿಂಗ್ ಅವರ ಪತ್ನಿ ಸದರಾಣಿ (Sadarani) ನೀರು ತರಲು ಖಾಸಗಿ ಬಾವಿಯ ಬಳಿ ಹೋದಾಗ, ಬಾವಿಯ ಮಾಲೀಕ ಆಕೆಯನ್ನು ತೀವ್ರವಾಗಿ ನಿಂದಿಸಿ ಅವಮಾನಿಸಿದ್ದನು.

ಇವರಿಂದ ಅವಮಾನಕ್ಕೊಳಗಾಗಿ ಮನೆಗೆ ಬಂದು ಕಣ್ಣೀರಿಟ್ಟ ಹೆಂಡತಿಯ ಸ್ಥಿತಿ ಕಂಡು ಮರುಗಿದ ಅಜಬ್ ಸಿಂಗ್, ಇನ್ಮುಂದೆ ಯಾರ ಹತ್ತಿರವೂ ನೀರಿನ ಭಿಕ್ಷೆ ಬೇಡಬಾರದು, ನಮ್ಮದೇ ಜಮೀನಿನಲ್ಲಿ ಬಾವಿ ತೋಡಬೇಕು ಎಂದು ದೃಢ ನಿರ್ಧಾರ ಮಾಡಿದರು.

ಸರ್ಕಾರದಿಂದ ಸಿಗದ ನೆರವು:

ಬಾವಿ ನಿರ್ಮಾಣ ಮಾಡುವ ಮುನ್ನ ಅಜಬ್ ಸಿಂಗ್ ಗ್ರಾಮ ಪಂಚಾಯತಿ (Gram Panchayat), ಜನಪದ ಪಂಚಾಯತಿ ಹಾಗೂ ಜಿಲ್ಲಾಡಳಿತದ (District Administration) ಬಾಗಿಲು ತಟ್ಟಿದರು. ಸರ್ಕಾರದ ವಿವಿಧ ಯೋಜನೆಗಳಡಿ ಬಾವಿ ನಿರ್ಮಿಸಲು ಸಹಾಯಧನ (Government Schemes/Subsidy) ನೀಡುವಂತೆ ಕೋರಿದರು. ಆದರೆ ಸರ್ಕಾರಿ ಕಚೇರಿಗಳಿಗೆ ನೂರಾರು ಬಾರಿ ಅಲೆದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ತಾವೇ ಸಲಿಕೆ, ಗದ್ದಲಿ, ಬುಟ್ಟಿ ಹಿಡಿದು ಬಾವಿ ತೋಡಲು ಆರಂಭಿಸಿದರು.

7 ವರ್ಷಗಳ ನಿರಂತರ ಹಗಲು-ರಾತ್ರಿ ಶ್ರಮ:

ಈ ಹಾದಿ ಸುಲಭವಾಗಿರಲಿಲ್ಲ. ಪ್ರತಿ ಮುಂಗಾರಿನಲ್ಲಿ (Monsoon) ಅವರು ತೋಡಿದ್ದ ಬಾವಿಯ ಮಣ್ಣು ಕುಸಿದು ಮತ್ತೆ ಹೂಳು ತುಂಬಿಕೊಳ್ಳುತ್ತಿತ್ತು. ಆದರೂ ಧೃತಿಗೆಡದ ಅವರು ತಮ್ಮ ಎಲ್ಲಾ ಉಳಿತಾಯದ ಹಣವನ್ನು (Savings) ಇದಕ್ಕೆ ವ್ಯಯಿಸಿ, ಹಗಲು-ರಾತ್ರಿ ಹಾಗೂ ಹುಣ್ಣಿಮೆ ಬೆಳಕಿನಲ್ಲೂ (Moonlit Nights) ಶ್ರಮಿಸಿದರು. ಕೊನೆಗೆ 7 ವರ್ಷಗಳ ಸುದೀರ್ಘ ಪರಿಶ್ರಮದ ನಂತರ ಬಾವಿ ಪೂರ್ಣಗೊಂಡಿತು.

ಇಡೀ ಊರಿಗೇ ದಾರಿದೀಪ :

ಇಂದು ಬೇಸಿಗೆಯ ಗರಿಷ್ಠ ತಾಪಮಾನದಲ್ಲೂ (Peak Summer) ಈ ಬಾವಿಯಲ್ಲಿ ಜೀವಜಲ ಕಂಗೊಳಿಸುತ್ತದೆ. ಊರಿನ ಇತರ ನೀರಿನ ಮೂಲಗಳು ಬಟ್ಟಬಯಲಾಗಿ ಒಣಗಿಹೋದರೂ, ಅಜಬ್ ಸಿಂಗ್ ಅವರ ಬಾವಿಯಲ್ಲಿ ನೀರು ಬತ್ತುವುದಿಲ್ಲ. ಇಂದು ಈ ಬಾವಿ ಅವರ ಕುಟುಂಬಕ್ಕೆ ಮಾತ್ರವಲ್ಲದೆ ಇಡೀ ಗ್ರಾಮಸ್ಥರ ದಾಹ ತೀರಿಸುವ ಜೀವ ಸಂಜೀವಿನಿಯಾಗಿದೆ.

ಆಡಳಿತ ಮಂಡಳಿ ಬಾವಿಯನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ಪಡೆಯಬಹುದು ಎಂಬ ಭಯದಿಂದ ಅವರು ಮೋಟಾರ್ ಪಂಪ್ (Motor Pump) ಅಳವಡಿಸಲು ಬಿಟ್ಟಿಲ್ಲ. ಬದಲಿಗೆ ನೀರು ಬೇಕಾದ ಯಾರೇ ಆದರೂ ಬಂದು ಬಕೆಟ್ ಮೂಲಕ ನೀರು ಸೇದಿಕೊಂಡು ಹೋಗಲು ಮುಕ್ತ ಅವಕಾಶ ನೀಡಿದ್ದಾರೆ. 'ನಮ್ಮ ಕಷ್ಟದ ಸಮಯದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ, ಆದರೆ ಈಗ ನೀರಿಗೆ ಅಭಾವ ಬಂದಾಗ ಅಧಿಕಾರಿಗಳು ನಮ್ಮ ಬಳಿ ಬರುತ್ತಿದ್ದಾರೆ' ಎಂದು ಅಜಬ್ ಸಿಂಗ್ ಪತ್ನಿ ಬೇಸರ ವ್ಯಕ್ತಪಡಿಸುತ್ತಾರೆ.

PREV
Read more Articles on
click me!

Recommended Stories

Viral News: ಯುವತಿಯ ಬದುಕನ್ನೇ ಬಲಿ ಪಡೆಯಿತಾ ರಾಪಿಡೋ ರೈಡ್‌ ? ₹20 ಲಕ್ಷ ಮೆಡಿಕಲ್ ಬಿಲ್‌ ನೋಡಿ ಕಣ್ಣೀರಿಡುತ್ತಿರುವ ಬೆಂಗಳೂರಿನ ಟೆಕ್ಕಿ!
​ಸಿಂಪಲ್‌ ಆ್ಯಪ್‌, ಬಿಲಿಯನ್‌ ಡಾಲರ್‌ ಬ್ಯುಸಿನೆಸ್‌; ಕೋಟಿ ಕೋಟಿ ಗಳಿಸಿದ 35 ವರ್ಷದ ಭಾರತೀಯ ಯುವಕ