
ದೇಶದ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳಲ್ಲಿ ಒಂದಾದ ಐಐಟಿ ಬಾಂಬೆಯಲ್ಲಿ ದಾರುಣ ಘಟನೆಯೊಂದು ನಡೆದಿದೆ. ಪರೀಕ್ಷೆಯಲ್ಲಿ ಕೃತಕ ಬುದ್ಧಿಮತ್ತೆಯ (AI) ಸಾಫ್ಟ್‌ವೇರ್ ಚಾಟ್‌ಜಿಪಿಟಿ (ChatGPT) ಬಳಸಿದ ಆರೋಪಕ್ಕೆ ಒಳಗಾಗಿದ್ದ ಇಂಧನ ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗದ ಎರಡನೇ ವರ್ಷದ ವಿದ್ಯಾರ್ಥಿಯೊಬ್ಬ ಶುಕ್ರವಾರ ಸಂಜೆ ಹಾಸ್ಟೆಲ್ ಕೋಣೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ಘಟನೆಯು ಸಂಸ್ಥೆಯ ಪರೀಕ್ಷಾ ಒತ್ತಡ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕುರಿತು ತೀವ್ರ ಚರ್ಚೆಯನ್ನು ಹುಟ್ಟುಹಾಕಿದ್ದು, ಕ್ಯಾಂಪಸ್‌ನಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಶುಕ್ರವಾರ ನಡೆದ ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿ ತನ್ನ ಮೊಬೈಲ್ ಫೋನ್ ಬಳಸುತ್ತಿರುವುದು ಮೇಲ್ವಿಚಾರಕರ ಗಮನಕ್ಕೆ ಬಂದಿತ್ತು. ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಚಾಟ್‌ಜಿಪಿಟಿಗೆ ಅಪ್‌ಲೋಡ್ ಮಾಡಿ, ಅಲ್ಲಿಂದ ಉತ್ತರಗಳನ್ನು ಹುಡುಕಲು ವಿದ್ಯಾರ್ಥಿ ಯತ್ನಿಸಿದ್ದ ಎನ್ನಲಾಗಿದೆ. ಘಟನೆಯ ತಕ್ಷಣವೇ ಬೋಧಕರು ಹಾಗೂ ವಿಭಾಗದ ಮುಖ್ಯಸ್ಥರು ವಿದ್ಯಾರ್ಥಿಯೊಂದಿಗೆ ಮಾತುಕತೆ ನಡೆಸಿ, ಕೌನ್ಸೆಲಿಂಗ್ ನೀಡಿದ್ದರು. ಈ ಘಟನೆಯು ಆತನ ಶೈಕ್ಷಣಿಕ ವೃತ್ತಿಜೀವನ ಅಥವಾ ಭವಿಷ್ಯದ ಮೇಲೆ ಯಾವುದೇ ಪ್ರತಿಕೂಲ ಪರಿಣಾಮ ಬೀರುವುದಿಲ್ಲ ಎಂದು ಆಡಳಿತ ಮಂಡಳಿ ಭರವಸೆ ನೀಡಿತ್ತು. ಕೌನ್ಸೆಲಿಂಗ್ ಬಳಿಕ ವಿದ್ಯಾರ್ಥಿ ಹಾಸ್ಟೆಲ್ ಕೋಣೆಗೆ ಮರಳಿದ್ದರೂ, ಸಂಜೆಯ ವೇಳೆಗೆ ಶವವಾಗಿ ಪತ್ತೆಯಾಗಿದ್ದಾನೆ.
ವಿದ್ಯಾರ್ಥಿಯ ದುರಂತ ಅಂತ್ಯಕ್ಕೆ ತೀವ್ರ ಸಂತಾಪ ಸೂಚಿಸಿರುವ ಐಐಟಿ ಬಾಂಬೆ ಆಡಳಿತ ಮಂಡಳಿ, "ಸಂಸ್ಥೆಯು ಯುವ ಪ್ರತಿಭೆಯನ್ನ ಕಳೆದುಕೊಂಡು ತೀವ್ರ ದುಃಖದಲ್ಲಿದೆ. ಮೃತನ ಸಹಪಾಠಿಗಳು, ಸ್ನೇಹಿತರು, ಅಧ್ಯಾಪಕರು ಮತ್ತು ಕುಟುಂಬಕ್ಕೆ ಈ ಕಷ್ಟದ ಸಮಯದಲ್ಲಿ ಅಗತ್ಯವಿರುವ ಎಲ್ಲಾ ಬೆಂಬಲವನ್ನು ನೀಡಲಾಗುವುದು" ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಜೊತೆಗೆ, ಸಾವಿನ ಹಿಂದಿರುವ ನಿಜವಾದ ಕಾರಣಗಳನ್ನು ತಿಳಿಯಲು ಸೂಕ್ತ ಅಧಿಕಾರಿಗಳು ಹಾಗೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಯ ಸಾವಿನ ಸುದ್ದಿ ಹರಡುತ್ತಿದ್ದಂತೆ ಪೊವೈನಲ್ಲಿರುವ ಐಐಟಿ ಕ್ಯಾಂಪಸ್‌ನಲ್ಲಿ ಉದ್ವಿಗ್ನತೆ ಉಂಟಾಯಿತು. ನೂರಾರು ವಿದ್ಯಾರ್ಥಿಗಳು ರಸ್ತೆಗಿಳಿದು ಆಡಳಿತ ಮಂಡಳಿಯ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದರು. ಸಂಸ್ಥೆಯು ಘಟನೆಯ ಸಂಪೂರ್ಣ ನೈಜ ಸಂಗತಿಗಳನ್ನು ಮುಚ್ಚಿಡಲು ಯತ್ನಿಸುತ್ತಿದೆ ಎಂದು ಪ್ರತಿಭಟನಾಕಾರರು ಗಂಭೀರ ಆರೋಪ ಮಾಡಿದ್ದಾರೆ.
ವಂಚನೆ ಆರೋಪ ಎದುರಿಸುತ್ತಿದ್ದ ವಿದ್ಯಾರ್ಥಿಗೆ ಆಡಳಿತ ಮಂಡಳಿಯು 'ಒಂದು ವರ್ಷದ ಅಮಾನತು' ಶಿಕ್ಷೆಯ ಬೆದರಿಕೆ ಹಾಕಿತ್ತು. ಅಮಾನತು ಶಿಕ್ಷೆಗೆ ಒಳಗಾದರೆ ಹಾಸ್ಟೆಲ್ ಖಾಲಿ ಮಾಡಿ ಕ್ಯಾಂಪಸ್ ಹೊರಗೆ ಇರಬೇಕಾಗುತ್ತದೆ. ಅಲ್ಲದೆ, ನಾಲ್ಕು ವರ್ಷದ ಎಂಜಿನಿಯರಿಂಗ್ ಕೋರ್ಸ್ ಐದು ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳಿಗೆ ವಿಸ್ತರಣೆಯಾಗುವ ಭೀತಿಯೂ ಇತ್ತು. ಶೈಕ್ಷಣಿಕ ಭವಿಷ್ಯ ಹಾಳಾಗುವ ಭಯ, ಸಮಾಜಕ್ಕೆ ಮುಖ ತೋರಿಸಲಾಗದ ಮುಜುಗರ ಮತ್ತು ಅಮಾನತಿನ ಕಠಿಣ ಒತ್ತಡವೇ ವಿದ್ಯಾರ್ಥಿಯನ್ನು ಈ ತೀವ್ರ ಹೆಜ್ಜೆಗೆ ತಳ್ಳಿದೆ ಎಂದು ಸಹಪಾಠಿಗಳು ಆರೋಪಿಸಿದ್ದಾರೆ.
ಕ್ಯಾಂಪಸ್‌ನಲ್ಲಿ ಸಾಲು ಸಾಲು ಆತ್ಮಹತ್ಯೆ ಘಟನೆಗಳು ನಡೆಯುತ್ತಿದ್ದರೂ ಸಂಸ್ಥೆಯು ಸುರಕ್ಷಿತ ಹಾಗೂ ಮಾನವೀಯ ವಾತಾವರಣ ನಿರ್ಮಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಈ ಘಟನೆಯ ಸಂಪೂರ್ಣ ಜವಾಬ್ದಾರಿಯನ್ನು ಆಡಳಿತ ಮಂಡಳಿ ಹೊರಬೇಕು ಮತ್ತು ಐಐಟಿ ನಿರ್ದೇಶಕರು ತಕ್ಷಣವೇ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ. ಕ್ಯಾಂಪಸ್‌ನಲ್ಲಿ ಪೊಲೀಸರ ನಿಯೋಜನೆ ಹೆಚ್ಚಿಸಲಾಗಿದ್ದು, ವಾತಾವರಣ ಪ್ರಕ್ಷುಬ್ಧವಾಗಿದೆ.