
ಹಾಸನ: ಕೆಲವೊಮ್ಮೆ, ನಮ್ಮ ಕರ್ನಾಟಕದ ಕೆಲವೊಂದು ರಾಷ್ಟ್ರೀಕೃತ ಬ್ಯಾಂಕ್ಗಳ ವ್ಯವಹಾರಕ್ಕೆ ಹೋಗುವುದು ಎಂದರೆ ಇನ್ನಿಲ್ಲದ ತಲೆನೋವು. ಅಲ್ಲಿಯ ಸಿಬ್ಬಂದಿ ನಡೆದುಕೊಳ್ಳುವ ರೀತಿ, ಕನ್ನಡವೇ ಬರದಂತೆ ವರ್ತಿಸುವುದು, ಏನಾದರೂ ಮಾಹಿತಿ ಕೇಳಿದರೆ, ತಲೆ ಎತ್ತಿ ನೋಡುವುದಕ್ಕಾಗಿಯೇ ಗಂಟೆಗಟ್ಟಲೆ ಮಾಡುವುದು, ಯಾವುದಕ್ಕೂ ಸರಿಯಾಗಿ ಉತ್ತರ ಕೊಡದೇ ಬೇಜವಾಬ್ದಾರಿಯಿಂದ ವರ್ತಿಸುವುದು, ಅದರಲ್ಲಿಯೂ ಮಧ್ಯಮ ವರ್ಗದವರು ಹೋದರಂತೂ ಅವರನ್ನು ಕೆಲವು ಬ್ಯಾಂಕ್ಗಳ ಕೆಲವು ಶಾಖೆಗಳ ಸಿಬ್ಬಂದಿ ವರ್ತಿಸುವ ಪರಿ ರೋಸಿಹೋಗುವಂಥದ್ದು. ಇದೇ ಕಾರಣಕ್ಕೆ ಬ್ಯಾಂಕ್ಗಳ ವಿರುದ್ಧ ಯಾರಾದರೂ ದನಿ ಎತ್ತಿದರೆ, ಅದಕ್ಕೆ ಬೆಂಬಲ ವ್ಯಕ್ತಪಡಿಸುವ ಅಸಂಖ್ಯ ಜನರು ಸಿಗುತ್ತಾರೆ. ಅಂಥದ್ದೇ ಒಂದು ಸುದ್ದಿ ಇದೀಗ ಹಾಸನ ಜಿಲ್ಲೆಯ ಸಕಲೇಶಪುರದ ಬ್ಯಾಂಕ್ ಒಂದರಿಂದ ವೈರಲ್ ಆಗಿದ್ದು, ಬ್ಯಾಂಕ್ಗೆ ಬುದ್ಧಿ ಕಲಿಸಿದ ರೈತನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಕೆಲವು ತಿಂಗಳ ಹಿಂದೆ ಈ ಘಟನೆ ನಡೆದಿದ್ದು, ಇದೀಗ ಇದು ಬೆಳಕಿಗೆ ಬಂದಿದೆ.
ಸಕಲೇಶಪುರದ ರಾಷ್ಟ್ರೀಕೃತ ಬ್ಯಾಂಕ್ ಒಂದರಲ್ಲಿ, ಸಕಲೇಶಪುರ ತಾಲ್ಲೂಕಿನ, ಹೊಸಕೊಪ್ಪಲು ಗ್ರಾಮದ ರೈತ ಚೊಕ್ಕಣ್ಣಗೌಡ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಅದನ್ನು ಅವರು ನಿಗದಿತ ಅವಧಿಯಲ್ಲಿ ಮರುಪಾವತಿಯನ್ನೂ ಮಾಡಿದ್ದರು. ಆದರೆ ಬ್ಯಾಂಕ್ ಸಿಬ್ಬಂದಿ ಅಲ್ಲಿಗೇ ಸುಮ್ಮನಾಗಲಿಲ್ಲ. ಆ ಸಾಲದ ಖಾತೆಯನ್ನು ಮುಚ್ಚಲು ಬಾಕಿ ಇದ್ದ 9.34 ಅರ್ಥಾತ್ 9 ರೂಪಾಯಿ 34 ಪೈಸೆಯನ್ನು ಪಾವತಿಸುವಂತೆ ಹೇಳಿದರು. ರೈತನಿಗೆ ಇದು ಸವಾಲಿನ ಕೆಲಸವಾಯಿತು. 9 ರೂಪಾಯಿ ಕೊಡಬಹುದು. 34 ಪೈಸೆ ಎಲ್ಲಿಂದ ತರುವುದು ಎನ್ನುವ ತಲೆಬಿಸಿ ಉಂಟಾಯಿತು. ಆದರೆ, ಬ್ಯಾಂಕ್ ಸಿಬ್ಬಂದಿ ಬಿಡಬೇಕಲ್ಲ. ಒಂದೇ ಸಮನೆ ಈ ಹಣಕ್ಕಾಗಿ ಪೀಡಿಸುತ್ತಿದ್ದರು.
ಉಳಿದವರಾದರೆ 10 ರೂಪಾಯಿ ಕೊಟ್ಟು ಸಾಕಪ್ಪ ಈ ಬ್ಯಾಂಕ್ ಸಹವಾಸ ಎಂದು ಸುಮ್ಮನಾಗಿಬಿಡುತ್ತದ್ದರೋ ಏನೋ. ಆದರೆ ಈ ಬ್ಯಾಂಕ್ ಸಿಬ್ಬಂದಿಯ ವರ್ತನೆಗೆ ಬೇಸತ್ತು ಹೋಗಿದ್ದ ರೈತ, ಇವರನ್ನು ಸುಮ್ಮನೇ ಬಿಡಬಾರದು ಎಂದುಕೊಂಡು ಪಟ್ಟುಹಿಡಿದರು. ಬುದ್ಧಿ ಕಲಿಸಲೇಬೇಕು ಎಂದು ಪಣತೊಟ್ಟರು. ಕೊನೆಯದಾಗಿ, ಸರಿ ಬಾಕಿ ಉಳಿಸಿಕೊಂಡಿರುವ ಹಣವನ್ನು ಪಾವತಿ ಮಾಡಲು ಹೋದ ಅವರು ಸುಮ್ಮನೇ ಹೋಗಲಿಲ್ಲ. ಹೋಗುವಾಗ 10 ರೂಪಾಯಿ ನೋಟನ್ನು ತೆಗೆದುಕೊಂಡು ಹೋದರು.
ಆ ನೋಟನ್ನು ಬ್ಯಾಂಕ್ನವರಿಗೆ ಕೊಟ್ಟು, ಇದರಲ್ಲಿ ನಿಮಗೆ ಬಾಕಿ ಬರಬೇಕಿರುವ 9.34 ರೂಪಾಯಿ ತೆಗೆದುಕೊಂಡು ನನಗೆ 66 ಪೈಸೆಯನ್ನು ಕ್ಯಾಷ್ ರೂಪದಲ್ಲಿಯೇ ಕೊಡಿ ಎಂದು ಪಟ್ಟು ಹಿಡಿದರು. ಒಂದು ವೇಳೆ, ಸರಿಯಾದ ಚಿಲ್ಲರೆ ಹಣ ನೀಡದೇ ಹೋದರೆ, ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಕೊನೆಗೆ ಬ್ಯಾಂಕ್ ಸಿಬ್ಬಂದಿ ಸುಸ್ತಾಗಿ ಹೋದರು. ಅಲ್ಲಿಯವರೆಗೆ, ಸಾಲ ಕೇಳಲು ಬರುವ ಗ್ರಾಹಕರನ್ನು ಏನೋ ತಮ್ಮ ಜೇಬಿನಿಂದ ಹಣ ನೀಡುತ್ತಿರುವಂತೆ ಸತಾಯಿಸುವ ಈ ಸಿಬ್ಬಂದಿಗೆ ರೈತ ಬೆವರಿಳಿಸಿ, ಈ ವಿಷಯವನ್ನು ದಾಖಲೆ ಸಹಿತ ಮಾಧ್ಯಮದವರ ಎದುರೂ ಹೇಳಿಕೊಂಡರು. ಕೊನೆಗೂ ಬ್ಯಾಂಕ್ 66 ಪೈಸೆಯನ್ನು ಹಾಕಿದೆಯಂತೆ. ಇದು ರಾತ್ರೋರಾತ್ರಿ ವೈರಲ್ ಆಗಿದ್ದು, ಕೆಲವು ರಾಷ್ಟ್ರೀಕೃತ ಬ್ಯಾಂಕ್ಗಳು ಕೆಲವು ಶಾಖೆಗಳ ಸಿಬ್ಬಂದಿಯ ವರ್ತನೆಗಳಿಂದ ಬೇಸತ್ತ ಗ್ರಾಹಕರು ರೈತನಿಗೆ ಶಹಬ್ಬಾಸ್ ಎನ್ನುತ್ತಿದ್ದಾರೆ. ತಾವು ಮಾಡದ ಕಾರ್ಯವನ್ನು ಈ ರೈತ ಮಾಡಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.