Success Story: ಸೇವೆಯಿಂದ ವಜಾ, 20 ವರ್ಷ ಸಾಧು ಅವತಾರ; ಸುದೀರ್ಘ ಕಾನೂನು ಹೋರಾಟ ಗೆದ್ದು ಮತ್ತೆ ಸೈನಿಕನಾದ ಯೋಧ!

Published : Sep 02, 2026, 03:53 PM IST
CRPF Jawan!

ಸಾರಾಂಶ

1999ರಲ್ಲಿ ಕ್ಷುಲ್ಲಕ ಕಾರಣಕ್ಕೆ ಸಿಆರ್‌ಪಿಎಫ್‌ನಿಂದ ವಜಾಗೊಂಡ ಹವಾಲ್ದಾರ್ ಗಿರ್ವರ್ ಸಿಂಗ್ ತೋಮರ್, ನ್ಯಾಯಕ್ಕಾಗಿ 27 ವರ್ಷಗಳ ಸುದೀರ್ಘ ಕಾನೂನು ಹೋರಾಟ ನಡೆಸಿದರು. ಈ ಅವಧಿಯಲ್ಲಿ ಸಾಧುವಾಗಿ ಬದಲಾಗಿದ್ದ ಅವರು, ಕೊನೆಗೂ ನ್ಯಾಯಾಲಯದಲ್ಲಿ ಗೆದ್ದು ತಮ್ಮ 54ನೇ ವಯಸ್ಸಿನಲ್ಲಿ ಮತ್ತೆ ಖಾಕಿ ಸಮವಸ್ತ್ರ ಧರಿಸಿ ಸೇವೆಗೆ ಮರಳಿದರು.

ಅದು 1999 ರ ಬಿಸಿಲ ಶಾಪಕ್ಕೆ ಸಿಲುಕಿದ ದಿನ. ಮಧ್ಯಪ್ರದೇಶದ ಸಿಆರ್‌ಪಿಎಫ್ ಬ್ಯಾರಾಕ್ ಒಂದರಲ್ಲಿ ಹವಾಲ್ದಾರ್ ಗಿರ್ವರ್ ಸಿಂಗ್ ತೋಮರ್ ತಮ್ಮ ಸೈಕಲ್ ಚಕ್ರದ ಗಾಳಿ ಮತ್ತು ಸ್ಥಿತಿಯನ್ನು ಪರಿಶೀಲಿಸುತ್ತಿದ್ದರು. ಒಂಬತ್ತು ವರ್ಷಗಳ ನಿಷ್ಠಾವಂತ ಸೇವೆಯ ಹೆಮ್ಮೆ ಅವರ ಕಣ್ಣುಗಳಲ್ಲಿತ್ತು. ಆದರೆ, ಕೆಲವೇ ನಿಮಿಷಗಳಲ್ಲಿ ನಡೆದ ಒಂದು ಸಣ್ಣ ವಾಗ್ವಾದ ಅವರ ಇಡೀ ಬದುಕಿನ ದಿಕ್ಕನ್ನೇ ಬದಲಿಸಿಬಿಡುತ್ತದೆ ಎಂದು ಅವರು ಸಪ್ನದಲ್ಲೂ ಅನಿಸಿರಲಿಲ್ಲ. ಹಾಗಾದರೆ, ಅಷ್ಟಕ್ಕೂ ಆಗಿದ್ದೇನು? ಈ ಕುರಿತು ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

ಕಾಡುವ ಆ ಒಂದು ಸಣ್ಣ ಆರೋಪ!

ಮೇಲಧಿಕಾರಿಯೊಬ್ಬರ ವಾಹನಕ್ಕೆ ತೋಮರ್ ಅವರ ಸೈಕಲ್ ತಾಗಿತು ಎಂಬ ಸಣ್ಣ ಆರೋಪವೊಂದು ಮುಂಭಾಗಕ್ಕೆ ಬಂದಾಗ, ಇಲ್ಲ, ನನ್ನ ಸೈಕಲ್ ನಿಮ್ಮ ಕಾರಿಗೆ ತಾಗಿಯೇ ಇಲ್ಲ ಎಂದು ತೋಮರ್ ಸತ್ಯದ ಪರವಾಗಿ ಬಲವಾಗಿ ವಾದಿಸಿದರು. ಸತ್ಯ ಹೇಳಿದ್ದೇ ಅವರಿಗೆ ಮುಳುವಾಯಿತು. ಹಿರಿಯ ಅಧಿಕಾರಿಯ ಅಹಂಕಾರಕ್ಕೆ ಧಕ್ಕೆಯಾಗಿ, ಈ ಕ್ಷುಲ್ಲಕ ಕಾರಣಕ್ಕಾಗಿ ತೋಮರ್ ಅವರನ್ನು ತಕ್ಷಣವೇ ಸೇವೆಯಿಂದ ವಜಾಗೊಳಿಸಲಾಯಿತು. ಅಂದಿಗೆ ಅವರ ಖಾಕಿ ಯುನಿಫಾರ್ಮ್ ಮತ್ತು ಯೋಧನ ಕನಸುಗಳು ಬ್ಯಾರಾಕ್‌ನ ನೆಲದಲ್ಲೇ ಕಳಚಿ ಬಿದ್ದುಹೋದವು.

ಕೋರ್ಟ್ ಮೆಟ್ಟಿಲೇರಿದ್ದ ತೋಮರ್!

ತಮ್ಮ ಹಕ್ಕಿಗಾಗಿ ಕೋರ್ಟ್ ಮೆಟ್ಟಿಲೇರಿದ ತೋಮರ್, ಕಾಲಕ್ರಮೇಣ ಧಾರ್ಮಿಕ ಮಾರ್ಗದತ್ತ ಮನಸ್ಸು ಮಾಡಿದರು. 2001 ರ ವೇಳೆಗೆ, ಅವರು ನಿರ್ಮೋಹಿ ಅಖಾಡ ಸೇರಿ 'ಬಾಬಾ ಗಿರ್ವರ್ ದಾಸ್' ಆಗಿ ರೂಪಾಂತರಗೊಂಡರು. ಕಠಿಣವಾದ ಖಾಕಿ ಬಟ್ಟೆಯ ಜಾಗದಲ್ಲಿ ತಿಳಿ ಸಾಸಿವೆ ಬಣ್ಣದ ಕಾಷಾಯ ವಸ್ತ್ರಗಳು ಬಂದವು. ಬೆಳೆದ ಬಿಳಿ ಗಡ್ಡ, ಉದ್ದನೆಯ ಜಟೆ ಮತ್ತು ಹಣೆ ಮೇಲಿನ ತಿಲಕದೊಂದಿಗೆ ಅವರು ವಿವಿಧ ದೇವಾಲಯಗಳಲ್ಲಿ ಧ್ಯಾನಿಸುತ್ತಾ ಕಾಲ ಕಳೆಯತೊಡಗಿದರು. ಆದರೆ, ಕಾಷಾಯ ತೊಟ್ಟರೂ ಅವರ ಒಳಗಿದ್ದ ಸೈನಿಕನ ಶಿಸ್ತು ಮತ್ತು ನ್ಯಾಯದ ಮೇಲಿನ ನಂಬಿಕೆ ಸತ್ತುಹೋಗಿರಲಿಲ್ಲ.

2007ರಲ್ಲಿ ಮುಂದುವರೆದ ಹೋರಾಟ!

ಒಂದೆಡೆ ದೇವಾಲಯಗಳಲ್ಲಿ ಸಾಧುವಾಗಿ ದಿನ ದೂಡುತ್ತಿದ್ದರೆ, ಇನ್ನೊಂದೆಡೆ ನ್ಯಾಯಾಲಯಗಳಲ್ಲಿ ಅವರ 27 ವರ್ಷಗಳ ದೀರ್ಘ ಹಾಗೂ ಕಠಿಣ ಕಾನೂನು ಹೋರಾಟ ನಿರಂತರವಾಗಿ ನಡೆಯುತ್ತಿತ್ತು. 2007 ರಲ್ಲಿ ಹೈಕೋರ್ಟ್ ಅವರ ಪರವಾಗಿ ತೀರ್ಪು ನೀಡಿದರೂ, ಸಿಆರ್‌ಪಿಎಫ್ ತಡೆಕಾಜ್ಞೆ ತಂದಿದ್ದರಿಂದ ಹೋರಾಟ ಮತ್ತೆ ಮುಂದುವರಿಯಿತು. ಕೊನೆಗೂ ನ್ಯಾಯಾಲಯವು ಅವರನ್ನು ಅಕ್ರಮವಾಗಿ ವಜಾಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿ, ತಕ್ಷಣ ಮರುನೇಮಕ ಮಾಡಿಕೊಳ್ಳುವಂತೆ ಸಿಆರ್‌ಪಿಎಫ್‌ಗೆ ಕಟ್ಟುನಿಟ್ಟಿನ ಆದೇಶ ನೀಡಿತು.

ತೋಮರ್‌ ಬದುಕಿನಲ್ಲಿ ಹೊಸ ಅಧ್ಯಾಯ!

2025 ರ ಆ ಆಗಸ್ಟ್ 25 ರ ದಿನ ತೋಮರ್ ಅವರ ಬದುಕಿನಲ್ಲಿ ಹೊಸ ಅಧ್ಯಾಯ ಬರೆಯಿತು. 54 ನೇ ವಯಸ್ಸಿನಲ್ಲಿ, ಸಾಧು ವೇಷದಲ್ಲೇ ಬಿಜಾಪುರಕ್ಕೆ ರೈಲು ಹತ್ತಿದ ಅವರು, ಮರುದಿನ ಬೆಳಿಗ್ಗೆ ತಲುಪುತ್ತಿದ್ದಂತೆ ಸೀದಾ ಕ್ಷೌರಿಕನ ಅಂಗಡಿಗೆ ನಡೆದರು. ಎರಡು ದಶಕಗಳಿಂದ ಬೆಳೆಸಿದ್ದ ಉದ್ದನೆಯ ಕೂದಲು ಮತ್ತು ಬಿಳಿ ಗಡ್ಡವನ್ನು ಕತ್ತರಿಸಿ, ತಮ್ಮ ಹಳೆಯ ಯೋಧನ ರೂಪವನ್ನು ಮರಳಿ ಪಡೆದರು.

ಯೂನಿಫಾರ್ಮ್‌ ಧರಿಸಿದ ಯೋಧ!

ಮಧ್ಯಾಹ್ನದ ವೇಳೆಗೆ, ಅವರು ಸಿಆರ್‌ಪಿಎಫ್‌ನ 85 ನೇ ಬಟಾಲಿಯನ್ ಮುಂದೆ ನಿಂತಿದ್ದರು. ಕಾಷಾಯ ಬಟ್ಟೆಯನ್ನು ಕಳಚಿ, ಗರಿಗರಿಯಾದ ಖಾಕಿ ಯೂನಿಫಾರ್ಮ್, ತಲೆಯ ಮೇಲೆ ಟೋಪಿ ಮತ್ತು ಹೊಳೆಯುವ ಶೂಗಳನ್ನು ಧರಿಸಿ ಸಲ್ಯೂಟ್ ಹೊಡೆದಾಗ, ಅವರ ಕಣ್ಣುಗಳಲ್ಲಿ ಆನಂದಬಾಷ್ಪ ಹರಿಯಿತು. "ಇದೆಲ್ಲವೂ ಆ ದೇವರ ಕೃಪೆ. ನನಗೆ ಮತ್ತೆ ನನ್ನ ಸ್ವಂತ ಮನೆಗೆ ಹಿಂತಿರುಗಿದ ಅನುಭವವಾಗುತ್ತಿದೆ" ಎಂದು ತೋಮರ್ ಭಾವುಕರಾಗಿ ಹೇಳಿದರು.

ಯೋಧನನ್ನು ಸಾದುವಾಗಿ ಮಾಡಿದ ಆರೋಪ!

ಒಂದು ಸಣ್ಣ ಅಪಘಾತದ ಸುಳ್ಳು ಆರೋಪದಿಂದ ಶುರುವಾದ ಈ ಸುದೀರ್ಘ ಪಯಣ, ಒಬ್ಬ ಯೋಧನನ್ನು ಸಾಧುವನ್ನಾಗಿ ಮಾಡಿ, ಕೊನೆಗೆ ಮತ್ತೆ ಸೈನಿಕನನ್ನಾಗಿ ಮಾಡಿತು. ಸತ್ಯ ಮತ್ತು ನ್ಯಾಯಕ್ಕೆ ಎಷ್ಟೇ ತಡವಾದರೂ ಕೊನೆಗೂ ಜಯ ಸಿಗುತ್ತದೆ ಎಂಬುದಕ್ಕೆ ಗಿರ್ವರ್ ಸಿಂಗ್ ತೋಮರ್ ಅವರ ಈ ಜೀವನ ಚಕ್ರವೇ ಜೀವಂತ ಸಾಕ್ಷಿ.

PREV
Read more Articles on
click me!

Recommended Stories

ವರ್ಷಗಳ ಆಸೆ, ಮಗಳ ಪರಿಶ್ರಮ; ಅಪ್ಪ-ಅಮ್ಮನ ಮೊದಲ ವಿದೇಶ ಪ್ರವಾಸದ ಕ್ಷಣ ವೈರಲ್
CM Vijay: ಅಜ್ಜಿಗೆ ಕಾಸ್ಟ್ಲಿ ಕನ್ನಡಕ ಗಿಫ್ಟ್ ಕೊಟ್ಟ ವಿಜಯ್, ಬೆಲೆ ಎಷ್ಟು ಗೊತ್ತಾ?