
ಮುಂಬೈ (ಮೇ.21) ಟೀಂ ಇಂಡಿಯಾ 1983ರಲ್ಲಿ ಮೊದಲ ಬಾರಿಗೆ ವಿಶ್ವಕಪ್ ಟ್ರೋಫಿ ಗೆದ್ದು ಸಂಭ್ರಮಿಸಿತ್ತು. ಕಪಿಲ್ ನೇತೃತ್ವದ ಭಾರತ ತಂಡದ ದಿಗ್ಗಜ, ಬಲಿಷ್ಠ ವೆಸ್ಟ್ ಇಂಡೀಸ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನೇ ಮಣಿಸಿ ಟ್ರೋಫಿ ಗೆದ್ದು ಇತಿಹಾಸ ರಚಿಸಿತ್ತು. ಇದೀಗ 1983ರ ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಮಾಡಿದ್ದಾರೆ ಎನ್ನಲಾದ ಪಾರ್ಟಿಯ ಬಿಲ್ ಒಂದು ವೈರಲ್ ಆಗಿದೆ. ಈ ಬಿಲ್‌ನಲ್ಲಿ ಟೀಂ ಇಂಡಿಯಾ ಕ್ರಿಕೆಟಿಗರು ಬಿಯರ್, ಶಾಂಪೇನ್, ಸಿಗರೇಟು, ಕಾಕ್‌ಟೇಲ್ ಸೇರಿದಂತೆ ಆರ್ಡರ್ ಮಾಡಿದ ವಸ್ತುಗಳ ಕುರಿತು ಬಿಲ್ ಭಾರಿ ವೈರಲ್ ಆಗಿದೆ. ಈ ಕುರಿತು ವಿಶ್ವಕಪ್ ಗೆಲುವಿನ ಸದಸ್ಯ ಕೀರ್ತಿ ಅಜಾದ್ ಈ ಬಿಲ್ ಕುರಿತು ಸ್ಪಷ್ಟನೆ ನೀಡಿದ್ದಾರೆ.
1983ರ ವಿಶ್ವಕಪ್ ಗೆಲುವಿನ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರು ಲಂಡನ್‌ನಲ್ಲಿ ಪಾರ್ಟಿ ಮಾಡಿದ ಬಿಲ್ ಎಂದು ವೈರಲ್ ಆಗುತ್ತಿದೆ. ಸೋಶಿಯಲ್ ಮೀಡಿಯಾ ಸೇರಿದಂತೆ ಹಲೆವೆಡೆ ಈ ಬಿಲ್ ವೈರಲ್ ಆಗುತ್ತಿದೆ. ಬ್ಯಾಲೆಟೈನ್ ಸ್ಕಾಚ್ ವಿಸ್ಕಿ, ಹೆನ್‌ಕಿನ್ ಬಿಯರ್, ಗ್ಲೆನ್‌ಫ್ಲಿಚ್ ಮಾಲ್ಟ್ ವಿಸ್ಕಿ (12 ವರ್ಷ), ಗ್ರಿಲ್ಲಡ್ ಚಿಕನ್ ಪ್ಲಾಟರ್ಸ್, ಮಟನ್ ರೋಗನ್ ಜೋಶ್, ಸರ್ಲಿಯನ್ ಸ್ಟೀಕ್ ಡಿನ್ನರ್ಸ್, ಕ್ಲಬ್ ಸ್ಯಾಂಡ್‌ವಿಚ್, ಪ್ರಾನ್ ಕಾಕ್‌ಟೇಲ್, ಡಸರ್ಟ್ ಸೆಲೆಕ್ಷನ್, ಕಾಫಿ, ಡನ್‌ಹಿಲ್ ಸಿಗರೇಟ್ ಲಿಸ್ಟ್ ಇರುವ ಬಿಲ್ ವೈರಲ್ ಆಗಿದೆ.
ಹಲವರು ಈ ಬಿಲ್ ಕುರಿತು ಪ್ರತಿಕ್ರಿಯಿಸಿದ್ದಾರೆ. ವಿಶೇಷವಾಗಿ ಎಲ್ಲರೂ ಬೆಲೆಯ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ. ಟೀಂ ಇಂಡಿಯಾದ ಪಾರ್ಟಿಯ ಒಟ್ಟು ಬಿಲ್ 764 ಪೌಂಡ್. ಇಷ್ಟು ಕಡಿಮೆಗೆ ಇಡೀ ತಂಡದ ಪಾರ್ಟಿ ಆಗಿದೆ ಎಂದು ಹಲವರು ಪ್ರತಿಕ್ರಿಯಿಸಿದ್ದಾರೆ. ಬಿಲ್ ಮೇಲೆ ಟೀಂ ಇಂಡಿಯಾ ಸೆಲೆಬ್ರೇಷನ್ ಪಾರ್ಟಿ ಡಿನ್ನರ್ ಎಂದು ಉಲ್ಲೇಖಿಸಲಾಗಿದೆ.
1983ರ ವಿಶ್ವಕಪ್ ತಂಡದ ಪಾರ್ಟಿ ಬಿಲ್ ವೈರಲ್ ಆಗುತ್ತಿದ್ದಂತೆ ತಂಡದ ಸದಸ್ಯ ಕೀರ್ತಿ ಅಜಾದ್ ಪ್ರತಿಕ್ರಿಯಿಸಿದ್ದಾರೆ. ಇದು ನಕಲಿ ಬಿಲ್ ಎಂದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಲ್ ನಕಲಿ. ಟೀಂ ಇಂಡಿಯಾ ಲಾರ್ಡ್ಸ್ ಕ್ರಿಕೆಟ್ ಮೈದಾನದ ಪಕ್ಕದಲ್ಲೇ ಇರುವ ವೆಸ್ಟ್‌ಮೊರ್ಲೆಂಡ್ ಹೊಟೆಲ್‌ನಲ್ಲಿ ತಂಗಿದ್ದೇವು. 1983ರ ಜೂನ್ 25ರ ರಾತ್ರಿಯಿಡಿ ತಂಡ ಸಂಬ್ರಮಿಸಿತ್ತು. ಜೂನ್ 26ರ ಬೆಳಗ್ಗೆ ವರಗೆ ಪಾರ್ಟಿ ನಡೆದಿತ್ತು. ನಾವು ಈ ಹೊಟೆಲ್‌ಗೆ ಹೋಗಿಲ್ಲ. ಇಷ್ಟೇ ಅಲ್ಲ ಕಪಿಲ್ ದೇವ್ ಸಹಿ ಕೂಡ ನಕಲು ಮಾಡಲಾಗಿದೆ ಎಂದು ಕೀರ್ತಿ ಆಜಾದ್ ಹೇಳಿದ್ದಾರೆ.