14 ವರ್ಷಗಳ ದ್ವೇಷ... ತಪ್ಪಿಸಿಕೊಂಡಿದ್ದ ಕುಟುಂಬದ ಮೇಲೆ ಮತ್ತೆ ಒಂಟಿ ಸಲಗ ದಾಳಿ... ನಾಲ್ವರು ಬಲಿ!

Published : Jul 15, 2026, 07:56 AM IST
Nepal Elephant Dhurbe Attacks A Family and Kills Them

ಸಾರಾಂಶ

ನೇಪಾಳದ ಕುಖ್ಯಾತ "ಧುರ್ಬೆ" ಆನೆ 14 ವರ್ಷಗಳ ಅವಧಿಯಲ್ಲಿ ಶನಿಚಾರ ಬೋಟೆ ಎಂಬುವವರ ಒಂದೇ ಕುಟುಂಬದ ನಾಲ್ವರನ್ನು ಬಲಿಪಡೆದಿದೆ. 2012 ರಲ್ಲಿ ಹೆತ್ತವರನ್ನು ಕೊಂದ ಆನೆಗೆ ಹೆದರಿ 9 ಮೈಲು ದೂರ ವಲಸೆ ಹೋಗಿದ್ದ ಕುಟುಂಬವನ್ನು ಬೆನ್ನಟ್ಟಿದ ಆನೆ, ಜುಲೈ 2026 ರಲ್ಲಿ ಸೊಸೆ ಹಾಗೂ 4 ವರ್ಷದ ಮೊಮ್ಮಗನನ್ನು ಕೊಂದಿದೆ. 25 ಜನರನ್ನು ಬಲಿಪಡೆದಿರುವ ಈ ಆನೆ ನೇಪಾಳದ ಅತ್ಯಂತ ಅಪಾಯಕಾರಿ ವನ್ಯಜೀವಿಯಾಗಿದೆ.

ಕಠ್ಮಂಡು: ಮಾನವ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷದ ಇತಿಹಾಸದಲ್ಲೇ ಅತ್ಯಂತ ಅಪರೂಪದ ಹಾಗೂ ಕರುಣಾಜನಕ ಘಟನೆಯೊಂದು ನೇಪಾಳದಲ್ಲಿ ನಡೆದಿದೆ. "ಧುರ್ಬೆ" ಎಂದು ಕರೆಯಲ್ಪಡುವ ಕುಖ್ಯಾತ ಕಾಡು ಆನೆಯೊಂದು, ಕಳೆದ 14 ವರ್ಷಗಳ ಅವಧಿಯಲ್ಲಿ ಒಂದೇ ಕುಟುಂಬವನ್ನು ವ್ಯವಸ್ಥಿತವಾಗಿ ಟಾರ್ಗೆಟ್ ಮಾಡಿ ಧ್ವಂಸಗೊಳಿಸಿದೆ. ಆನೆಯ ಕಾಟಕ್ಕೆ ಹೆದರಿ ಮೈಲುಗಳಷ್ಟು ದೂರ ಓಡಿಹೋಗಿ ಹೊಸ ಬದುಕು ಕಟ್ಟಿಕೊಂಡಿದ್ದ ಕುಟುಂಬವನ್ನು ಬೆನ್ನಟ್ಟಿದ ಆನೆ, ಇತ್ತೀಚೆಗೆ ಮತ್ತಿಬ್ಬರನ್ನು ಬಲಿಪಡೆದಿದೆ.

ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದ ಸಮೀಪ ವಾಸಿಸುವ ಶನಿಚಾರ ಬೋಟೆ ಎಂಬುವವರ ಕುಟುಂಬವೇ ಈ ಕ್ರೂರ ದುರಂತಕ್ಕೆ ಬಲಿಯಾಗಿದೆ. ಆವಾಸಸ್ಥಾನಗಳ ಛಿದ್ರೀಕರಣವೇ ಆನೆಯ ಈ ಹಿಂಸಾಚಾರಕ್ಕೆ ಕಾರಣ ಎಂದು ತಜ್ಞರು ಹೇಳುತ್ತಿದ್ದರೂ, ಬೋಟೆ ಕುಟುಂಬಕ್ಕೆ ಮಾತ್ರ ಇದು ಮುಗಿಯದ ದುಃಸ್ವಪ್ನವಾಗಿ ಕಾಡುತ್ತಿದೆ.

ದುರಂತದ ಭೀಕರ ಟೈಮ್‌ಲೈನ್:

  • ಡಿಸೆಂಬರ್ 2012 (ಮಡಿ): ಚಿಟ್ವಾನ್ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿರುವ ದ್ರೋಪತಿನಗರದಲ್ಲಿ ಈ ಕರಾಳ ಕಥೆ ಶುರುವಾಯಿತು. ಧುರ್ಬೆ ಆನೆ ಹಠಾತ್ ದಾಳಿ ನಡೆಸಿ ಶನಿಚರ ಅವರ ತಂದೆ ಬುಧಿರಾಮ್ ಮತ್ತು ತಾಯಿ ಝರಾಲಿಯನ್ನು ಅತ್ಯಂತ ಕ್ರೂರವಾಗಿ ತುಳಿದು ಕೊಂದಿತು.
  • ಸುರಕ್ಷತೆಗಾಗಿ ಪಲಾಯನ: ಹೆತ್ತವರನ್ನು ಕಳೆದುಕೊಂಡು ಕಂಗಾಲಾದ ಶನಿಚರ, ಆನೆಯಿಂದ ಪಾರಾಗಲು ತನ್ನ ಆಸ್ತಿಗಳನ್ನೆಲ್ಲ ಮಾರಿ 9 ಮೈಲು ದೂರದ ಜಗತ್‌ಪುರಕ್ಕೆ ವಲಸೆ ಹೋದರು. ರೆಯು ಮತ್ತು ರಪ್ತಿ ಎಂಬ ಎರಡು ದೊಡ್ಡ ನದಿಗಳನ್ನು ದಾಟಿ ಆನೆ ಬರುವುದಿಲ್ಲ, ಅಲ್ಲಿ ಸುರಕ್ಷಿತವಾಗಿರಬಹುದು ಎಂಬುದು ಅವರ ನಂಬಿಕೆಯಾಗಿತ್ತು.
  • ಜುಲೈ 2026 (ಜಗತ್‌ಪುರ): ಮೊದಲ ದಾಳಿ ನಡೆದು 14 ವರ್ಷಗಳ ನಂತರ, ಧುರ್ಬೆ ಆನೆ ನದಿಗಳನ್ನೆಲ್ಲ ದಾಟಿ ಮಧ್ಯರಾತ್ರಿ ಜಗತ್‌ಪುರದ ಹೊಸ ವಸಾಹತಿಗೆ ನುಗ್ಗಿದೆ. ಶನಿಚರ ಅವರ ಮನೆಯ ಮಣ್ಣಿನ ಗೋಡೆಗಳನ್ನು ಧ್ವಂಸಗೊಳಿಸಿದ ಆನೆ, ಅಲ್ಲಿಂದ ಜೀವಭಯದಲ್ಲಿ ಓಡುತ್ತಿದ್ದ ಶನಿಚರ ಅವರ 25 ವರ್ಷದ ಸೊಸೆ ಆಶಿಕಾ ಬೋಟೆ ಮತ್ತು 4 ವರ್ಷದ ಮೊಮ್ಮಗ ಭರತ್ ಬೋಟೆಯನ್ನು ಹಿಡಿದು ದಾರುಣವಾಗಿ ಕೊಂದಿದೆ.

ನೇಪಾಳದ ಮೋಸ್ಟ್ ವಾಂಟೆಡ್ ಆನೆ!

ನೇಪಾಳದ ಇತಿಹಾಸದಲ್ಲೇ ಧುರ್ಬೆಯನ್ನು ಅತ್ಯಂತ ಅಪಾಯಕಾರಿ ಆನೆ ಎಂದು ಪರಿಗಣಿಸಲಾಗಿದೆ. ಅಧಿಕೃತ ದಾಖಲೆಗಳ ಪ್ರಕಾರ, 2010 ರಿಂದ ಇದುವರೆಗೆ ಈ ರಾಕ್ಷಸ ಆನೆ ಬರೋಬ್ಬರಿ 25 ಕ್ಕೂ ಹೆಚ್ಚು ಜನರನ್ನು ಕೊಂದಿದ್ದು, ನೂರಾರು ಮನೆಗಳನ್ನು ನಾಶಪಡಿಸಿದೆ. 2012 ರಲ್ಲಿ ಸೇನಾ ಕಾರ್ಯಾಚರಣೆಯ ಮೂಲಕ ಈ ಆನೆಯನ್ನು ಕೊಲ್ಲಲು ಪ್ರಯತ್ನಿಸಿದಾಗ ಇದು ತೀವ್ರವಾಗಿ ಗಾಯಗೊಂಡರೂ ಬದುಕುಳಿದಿತ್ತು. ಉದ್ಯಾನವನದ ಅಧಿಕಾರಿಗಳು ಇದಕ್ಕೆ ಸ್ಯಾಟಲೈಟ್ ಟ್ರ್ಯಾಕಿಂಗ್ ಕಾಲರ್‌ಗಳನ್ನು ಅಳವಡಿಸಿದ್ದರೂ, ಸೂಕ್ತ ಮೇಲ್ವಿಚಾರಣೆಯ ಕೊರತೆಯಿಂದಾಗಿ ಅಮಾಯಕ ಕುಟುಂಬಗಳು ಬಲಿಯಾಗುತ್ತಲೇ ಇವೆ.

PREV
Read more Articles on
click me!

Recommended Stories

Toxic Movie: 'ಟಾಕ್ಸಿಕ್' ಸಂಗೀತ ನಿರ್ದೇಶಕ ವಿಶಾಲ್ ಮಿಶ್ರಾ ಹೊಸ ಪೋಸ್ಟ್‌.. ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ!
ರಜೆಯ ದಿನ ಕಚೇರಿಗೆ ಬಾ ಎಂದ ಮ್ಯಾನೇಜರ್‌.. ಪಂಚ್ ಡೈಲಾಗ್ ಹೊಡೆದ ಮಹಿಳಾ ಉದ್ಯೋಗಿಯ ವಿಡಿಯೋ ವೈರಲ್