
ಇಂದಿನ ಕಾಲದಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ ಹಾಗೂ ಆರ್ಥಿಕ ಸ್ವಾವಲಂಬನೆಯಲ್ಲಿ ಪುರುಷರಿಗೆ ಸಮಾನವಾಗಿ ಮುನ್ನಡೆಯುತ್ತಿದ್ದರೂ, ಮದುವೆಯ ವಿಷಯದಲ್ಲಿ ಇನ್ನೂ ಹಲವೆಡೆ ಹಳೆಯ ಮನೋಭಾವನೆಗಳು ಬದಲಾಗಿಲ್ಲ. ಚೀನಾದ ಪ್ರಸಿದ್ಧ ‘ಬ್ರೈಡ್ ಮಾರ್ಕೆಟ್’ನಲ್ಲಿ ನಡೆದ ಘಟನೆ ಇದಕ್ಕೆ ಉದಾಹರಣೆಯಾಗಿದೆ.
38 ವರ್ಷದ ಮಹಿಳೆಯೊಬ್ಬರು ತಮ್ಮ ಜೀವನ ಸಂಗಾತಿಯನ್ನು ಹುಡುಕುವ ಉದ್ದೇಶದಿಂದ ಈ ಬ್ರೈಡ್ ಮಾರುಕಟ್ಟೆಗೆ ಆಗಮಿಸಿದ್ದರು. ಅವರು ಉನ್ನತ ಶಿಕ್ಷಣ ಪಡೆದಿದ್ದು, ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಬಳಿ ಸ್ವಂತ ಮನೆ, ಐಷಾರಾಮಿ ಕಾರು ಹಾಗೂ ವರ್ಷಕ್ಕೆ ಸುಮಾರು 58 ಲಕ್ಷ ರೂಪಾಯಿ ಸಂಬಳವಿದೆ. ಆದರೆ, ಅವರ ವಯಸ್ಸು ತಿಳಿದ ತಕ್ಷಣ ಹಲವಾರು ಕುಟುಂಬಗಳು ಹಾಗೂ ವರನ ಮನೆಯವರು ಮದುವೆ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಾರೆ ಎನ್ನಲಾಗಿದೆ. ನಿರಂತರ ನಿರಾಕರಣೆ ಮತ್ತು ಸಾಮಾಜಿಕ ಒತ್ತಡದಿಂದ ಮನನೊಂದ ಮಹಿಳೆ ಸಾರ್ವಜನಿಕರ ಎದುರೇ ಭಾವುಕರಾಗಿ ಅತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚೀನಾದ ಕೆಲವು ನಗರಗಳಲ್ಲಿ ಸಾರ್ವಜನಿಕ ಉದ್ಯಾನವನಗಳಲ್ಲಿ ವಾರಾಂತ್ಯದಲ್ಲಿ ‘ಬ್ರೈಡ್ ಮಾರ್ಕೆಟ್’ ಆಯೋಜಿಸಲಾಗುತ್ತದೆ. ವಿಶೇಷವಾಗಿ ಶಾಂಘೈನ ಪೀಪಲ್ಸ್ ಪಾರ್ಕ್‌ನಲ್ಲಿರುವ ಬ್ರೈಡ್ ಮಾರ್ಕೆಟ್ ಬಹಳ ಪ್ರಸಿದ್ಧವಾಗಿದೆ. ಇಲ್ಲಿ ಪೋಷಕರು ತಮ್ಮ ಅವಿವಾಹಿತ ಮಕ್ಕಳಿಗಾಗಿ ಸೂಕ್ತ ಸಂಗಾತಿಯನ್ನು ಹುಡುಕುತ್ತಾರೆ. ಮಕ್ಕಳ ವಯಸ್ಸು, ಎತ್ತರ, ಶಿಕ್ಷಣ, ಉದ್ಯೋಗ, ಸಂಬಳ, ಮನೆ ಹಾಗೂ ಕಾರಿನ ವಿವರಗಳನ್ನು ಕಾಗದದಲ್ಲಿ ಬರೆದು ಛತ್ರಿ ಅಥವಾ ಫಲಕಗಳಿಗೆ ಅಂಟಿಸಲಾಗುತ್ತದೆ. ನಂತರ ಪೋಷಕರು ಇತರರ ವಿವರಗಳನ್ನು ಪರಿಶೀಲಿಸಿ, ಹೊಂದಾಣಿಕೆ ಕಂಡುಬಂದರೆ ಮಾತುಕತೆ ಮುಂದುವರಿಸುತ್ತಾರೆ.
30 ವರ್ಷ ದಾಟಿದ ಮಹಿಳೆಗೆ ಪ್ರಾಮುಖ್ಯತೆ ಇಲ್ಲ
ಈ ಪ್ರಕ್ರಿಯೆಯಲ್ಲಿ ಯುವಕರಿಗೆ ಮತ್ತು ಕಡಿಮೆ ವಯಸ್ಸಿನ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗುತ್ತದೆ. 30 ವರ್ಷ ದಾಟಿದ ಯಶಸ್ವಿ ಮಹಿಳೆಯರನ್ನು ‘ಶೆಂಗ್ ನು’ (Sheng Nu) ಅಥವಾ ‘ಲೆಫ್ಟ್‌ಓವರ್ ವುಮನ್’ ಎಂದು ಪರಿಗಣಿಸಿ ತಿರಸ್ಕರಿಸುವ ಟ್ರೆಂಡ್ ಕೂಡ ಇದೆ ಎಂದು ಹೇಳಲಾಗುತ್ತದೆ.
ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣ
ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಅನೇಕರು ಮಹಿಳೆಯ ಪರವಾಗಿ ಮಾತನಾಡಿದ್ದು, “ವಯಸ್ಸಿನ ಆಧಾರದ ಮೇಲೆ ವ್ಯಕ್ತಿಯ ಮೌಲ್ಯ ನಿರ್ಧರಿಸುವುದು ತಪ್ಪು” ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನೂ ಕೆಲವರು ಮದುವೆಯಲ್ಲಿ ವಯಸ್ಸು ಹಾಗೂ ಕುಟುಂಬ ನಿರ್ಮಾಣದ ಸಾಮರ್ಥ್ಯ ಮುಖ್ಯ ಅಂಶಗಳಾಗಿವೆ ಎಂದು ವಾದಿಸಿದ್ದಾರೆ. ಈ ಘಟನೆ ಮಹಿಳೆಯರ ಯಶಸ್ಸು, ವಯಸ್ಸು ಮತ್ತು ಮದುವೆ ಕುರಿತ ಸಮಾಜದ ಮನೋಭಾವನೆಗಳ ಬಗ್ಗೆ ಮತ್ತೊಮ್ಮೆ ಚರ್ಚೆ ಹುಟ್ಟುಹಾಕಿದೆ.