ಪ್ರಾಣಿಗಳ ಕುಂಭಕರ್ಣ ಇದು! ದಿನಕ್ಕೆ 21 ಗಂಟೆ ನಿದ್ರೆ, ತಿನ್ನೋದಕ್ಕೆ ಮಾತ್ರ ಎಚ್ಚರ! 46 ವರ್ಷಗಳ ಬಳಿಕ ಪ್ರತ್ಯಕ್ಷ

Published : Nov 02, 2026, 04:47 PM IST
Black Footed Ferret

ಸಾರಾಂಶ

ಅಳಿದುಹೋಗಿದೆ ಎಂದು ಭಾವಿಸಲಾಗಿದ್ದ ಅಪರೂಪದ ಬ್ಲ್ಯಾಕ್-ಫುಟೆಡ್ ಫೆರೆಟ್ ಮತ್ತೆ ಕಾಣಿಸಿಕೊಂಡಿದೆ. ದಿನಕ್ಕೆ ಬರೋಬ್ಬರಿ 21 ಗಂಟೆಗಳ ಕಾಲ ನಿದ್ರೆ ಮಾಡುವ ಈ ಜೀವಿ ರಾತ್ರಿ ವೇಳೆ ಬೇಟೆಯಾಡಲು ಮಾತ್ರ ಎಚ್ಚರವಾಗುತ್ತದೆ. ಈ ಜೀವಿಯ ವಿಶೇಷತೆಯ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಪ್ರಾಣಿಗಳ ಕುಂಭಕರ್ಣ ಇದು!

ಕಾಡುಗಳ ವಿಸ್ತೀರ್ಣ ನಿರಂತರವಾಗಿ ಕಡಿಮೆಯಾಗುತ್ತಿರುವುದು ಹಾಗೂ ಹವಾಮಾನ ಬದಲಾವಣೆಯಿಂದಾಗಿ ಭೂಮಿಯ ಮೇಲಿನ ಅನೇಕ ಜೀವಿಗಳು ಅಳಿವಿನ ಅಂಚಿಗೆ ತಲುಪಿವೆ. ಹಲವು ದೇಶಗಳ ಸರ್ಕಾರಗಳು ಇಂತಹ ಜೀವಿಗಳನ್ನು ಉಳಿಸಲು ಪ್ರಯತ್ನಿಸುತ್ತಿದ್ದರೂ, ನಿರೀಕ್ಷಿತ ಫಲಿತಾಂಶಗಳು ಸಂಪೂರ್ಣವಾಗಿ ಸಿಗುತ್ತಿಲ್ಲ. ಈ ನಡುವೆ ಅಮೆರಿಕದಲ್ಲಿ ನಡೆದ ಅಪರೂಪದ ಘಟನೆ ವಿಜ್ಞಾನಿಗಳ ಗಮನ ಸೆಳೆದಿದೆ.

ಇದೀಗ ಅಮೆರಿಕಾದಲ್ಲಿ ಅಳಿವಿನಂಚಿನಲ್ಲಿರುವ ಒಂದು ಪ್ರಭೇದ ಪತ್ತೆಯಾಗಿದೆ. ಈ ಅಪರೂಪದ ಪ್ರಭೇದದ ಹೆಸರು ‘ಬ್ಲ್ಯಾಕ್-ಫುಟೆಡ್ ಫೆರೆಟ್’ (Black-footed Ferret). ಮುಂಗುಸಿ ಕುಟುಂಬಕ್ಕೆ ಸೇರಿದ ಈ ಅಪರೂಪದ ಜೀವಿ ಒಂದು ಕಾಲದಲ್ಲಿ ಸಂಪೂರ್ಣವಾಗಿ ಅಳಿದುಹೋಗಿದೆ ಎಂದು ಭಾವಿಸಲಾಗಿತ್ತು. ಇದೀಗ ಇದರ ಇರುವಿಕೆ ಹಾಗೂ ಜನಸಂಖ್ಯೆಯಲ್ಲಿ ಕಂಡುಬರುತ್ತಿರುವ ಸುಧಾರಣೆಯನ್ನು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ.

ಅಳಿದುಹೋಗಿದೆ ಎಂದು ಘೋಷಿಸಲಾಗಿದ್ದ ಪ್ರಭೇದ

ಬ್ಲ್ಯಾಕ್-ಫುಟೆಡ್ ಫೆರೆಟ್ ಉತ್ತರ ಅಮೆರಿಕದ ಅತ್ಯಂತ ಅಪರೂಪದ ಹಾಗೂ ಅಳಿವಿನಂಚಿನಲ್ಲಿರುವ ಪ್ರಭೇದಗಳಲ್ಲಿ ಒಂದಾಗಿದೆ. ಹಲವು ದಶಕಗಳ ಹಿಂದೆ ಇದರ ನೈಸರ್ಗಿಕ ಆವಾಸಸ್ಥಾನದಲ್ಲಿ ಇವುಗಳ ಸಂಖ್ಯೆ ತೀವ್ರವಾಗಿ ಕುಸಿದಿತ್ತು. ಹೀಗಾಗಿ ತಜ್ಞರು ಈ ಪ್ರಭೇದವನ್ನು ಅಳಿದುಹೋಗಿದೆ ಎಂದು ಭಾವಿಸಿದ್ದರು. ಇದಕ್ಕೆ ಪ್ರಮುಖ ಕಾರಣಗಳೆಂದರೆ ಕಾಡುಗಳು ಮತ್ತು ಹುಲ್ಲುಗಾವಲುಗಳ ನಾಶ, ವಿವಿಧ ಕಾಯಿಲೆಗಳು ಹಾಗೂ ಇವುಗಳ ಪ್ರಮುಖ ಆಹಾರವಾಗಿರುವ ಪ್ರೇರಿ ಡಾಗ್‌ಗಳ (Prairie Dogs) ಸಂಖ್ಯೆಯಲ್ಲಿ ಭಾರೀ ಇಳಿಕೆ.

ವಾಸ್ತವವಾಗಿ, ರೈತರು ಮತ್ತು ಪಶುಪಾಲಕರು ತಮ್ಮ ಜಮೀನು ಹಾಗೂ ಬೆಳೆಗಳನ್ನು ರಕ್ಷಿಸಿಕೊಳ್ಳಲು ದೊಡ್ಡ ಪ್ರಮಾಣದಲ್ಲಿ ಪ್ರೇರಿ ಡಾಗ್‌ಗಳನ್ನು ಕೊಲ್ಲುತ್ತಿದ್ದರು. ಇದರಿಂದ ಬ್ಲ್ಯಾಕ್-ಫುಟೆಡ್ ಫೆರೆಟ್‌ಗಳಿಗೆ ಆಹಾರದ ಕೊರತೆ ಎದುರಾಯಿತು. ಜೊತೆಗೆ ನೈಸರ್ಗಿಕ ಆವಾಸಸ್ಥಾನಗಳ ನಾಶ ಮತ್ತು ಕಾಯಿಲೆಗಳು ಇವುಗಳ ಸಂಖ್ಯೆಯನ್ನು ಮತ್ತಷ್ಟು ಕಡಿಮೆ ಮಾಡಿದವು.

1980ರ ದಶಕದಲ್ಲಿ ಮತ್ತೆ ಪತ್ತೆಯಾಗಿದ್ದ ಅಪರೂಪದ ಜೀವಿ

ಹಲವು ವರ್ಷಗಳ ಕಾಲ ಅಳಿದುಹೋಗಿದೆ ಎಂದು ಭಾವಿಸಲಾಗಿದ್ದ ಈ ಪ್ರಭೇದವನ್ನು 1980ರ ದಶಕದಲ್ಲಿ ಮತ್ತೆ ಪತ್ತೆಹಚ್ಚಲಾಯಿತು. ಇದಾದ ಬಳಿಕ ವನ್ಯಜೀವಿ ತಜ್ಞರು ಮತ್ತು ಸಂರಕ್ಷಣಾ ಸಂಸ್ಥೆಗಳು ಇವುಗಳನ್ನು ಉಳಿಸಲು ವಿಶೇಷ ಸಂತಾನೋತ್ಪತ್ತಿ ಹಾಗೂ ಪುನರ್ವಸತಿ ಕಾರ್ಯಕ್ರಮಗಳನ್ನು ಆರಂಭಿಸಿದವು. ಈ ಕಾರ್ಯಕ್ರಮಗಳಡಿ ನಿಯಂತ್ರಿತ ಪರಿಸರದಲ್ಲಿ ಇವುಗಳ ಸಂಖ್ಯೆಯನ್ನು ಹೆಚ್ಚಿಸಿ, ನಂತರ ನೈಸರ್ಗಿಕ ಆವಾಸಸ್ಥಾನಗಳಿಗೆ ಮರಳಿ ಬಿಡುವ ಕಾರ್ಯ ಕೈಗೊಳ್ಳಲಾಯಿತು. ಸಂರಕ್ಷಣಾ ತಂಡಗಳು ಇವುಗಳ ಪ್ರಮುಖ ಆಹಾರವಾಗಿರುವ ಪ್ರೇರಿ ಡಾಗ್‌ಗಳ ಆವಾಸಸ್ಥಾನವನ್ನು ಸುರಕ್ಷಿತಗೊಳಿಸುವತ್ತಲೂ ಗಮನ ಹರಿಸಿದವು.

ತಜ್ಞರ ಪ್ರಕಾರ, ಬ್ಲ್ಯಾಕ್-ಫುಟೆಡ್ ಫೆರೆಟ್ ದಿನಕ್ಕೆ ಬರೋಬ್ಬರಿ 21 ಗಂಟೆಗಳ ಕಾಲ ನಿದ್ರೆ ಮಾಡುತ್ತದೆ. ರಾತ್ರಿ ವೇಳೆ ಕೇವಲ ಬೇಟೆಯಾಡಲು ಮಾತ್ರ ಎಚ್ಚರವಾಗುತ್ತದೆ. ಹೀಗಾಗಿ ಈ ಅಪರೂಪದ ಜೀವಿಯನ್ನು ಪ್ರಾಣಿಗಳ ‘ಕುಂಭಕರ್ಣ’ ಎಂದೂ ಕರೆಯಬಹುದಾಗಿದೆ!

PREV
Read more Articles on
click me!

Recommended Stories

ದಿನಕ್ಕೆ 2 ಗಂಟೆ ನಿದ್ದೆ, ಬೀದಿಯಲ್ಲಿ ಕಡಲೆಕಾಯಿ ವ್ಯಾಪಾರ: ಸ್ವಂತ ಖರ್ಚಲ್ಲೇ ಇಂಜಿನಿಯರಿಂಗ್ ಓದುತ್ತಿರುವ ವಿದ್ಯಾರ್ಥಿ!
100 ವರ್ಷದ ಅರಳಿ ಮರ ಕಡಿಯುತ್ತಿದ್ದಂತೆ ಮನಸ್ಸು ಕರಗಿತು! 50 ಟನ್ ಕ್ರೇನ್ ಬಳಸಿ ಮತ್ತೆ ಜೀವ ನೀಡಿದ ವ್ಯಕ್ತಿ