ಶಿವಗಂಗೆ ಬೆಟ್ಟದಲ್ಲಿ ಯುವತಿಯ ಮೊಬೈಲ್ ಕಸಿದು ಗೋಪುರ ಏರಿದ ಮಂಗ: ಯುವತಿ ಪರದಾಡುವ ವಿಡಿಯೋ ವೈರಲ್!

Published : Jul 27, 2026, 11:45 AM IST
Shivagange Hill Mobile Snatches Monkey

ಸಾರಾಂಶ

ಪ್ರಸಿದ್ಧ ಪ್ರವಾಸಿ ತಾಣವಾದ ಶಿವಗಂಗೆ ಬೆಟ್ಟದಲ್ಲಿ, ಯುವತಿಯೊಬ್ಬಳ ಮೊಬೈಲ್ ಫೋನ್‌ ಅನ್ನು ಮಂಗವೊಂದು ಕಸಿದುಕೊಂಡು ದೇವಾಲಯದ ಗೋಪುರದ ಮೇಲೆ ಕುಳಿತು ಸುಮಾರು ಒಂದು ಗಂಟೆ ಕಾಲ ಆಟವಾಡಿದೆ. ಬಹಳಷ್ಟು ಹರಸಾಹಸದ ನಂತರ ಮಂಗವು ಫೋನ್ ಅನ್ನು ಕೆಳಗೆ ಹಾಕಿದ್ದು, ಯುವತಿ ನಿಟ್ಟುಸಿರು ಬಿಟ್ಟರೂ ಫೋನ್‌ಗೆ ಸಣ್ಣಪುಟ್ಟ ಹಾನಿಯಾಗಿತ್ತು.

ಬೆಂಗಳೂರು ಗ್ರಾಮಾಂತರ (ಜು.27): ದೇವಾಲಯ ಹಾಗೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಕೋತಿಗಳ ಹಾವಳಿ ಹೊಸದೇನಲ್ಲ. ಇದೀಗ ನೆಲಮಂಗಲ ತಾಲೂಕಿನ ಪ್ರಸಿದ್ಧ ಧಾರ್ಮಿಕ ಹಾಗೂ ಪ್ರವಾಸಿ ತಾಣವಾದ 'ದಕ್ಷಿಣ ಕಾಶಿ' ಶಿವಗಂಗೆ ಬೆಟ್ಟದಲ್ಲಿ ಪ್ರವಾಸಿಗರಿಗೆ ಕೋತಿಯೊಂದು ಅಪರೂಪದ ಹಾಗೂ ತಮಾಷೆಯ ಅನುಭವ ನೀಡಿದ ಘಟನೆ ನಡೆದಿದೆ.

ಶಿವಗಂಗೆ ಬೆಟ್ಟದ ಸೌಂದರ್ಯವನ್ನು ವೀಕ್ಷಿಸಲು ಬಂದಿದ್ದ ಯುವತಿಯೊಬ್ಬಳ ಕೈಯಲ್ಲಿದ್ದ ಬೆಲೆಬಾಳುವ ಮೊಬೈಲ್ ಫೋನ್‌ ಅನ್ನು ಮಂಗವೊಂದು ಕ್ಷಣಾರ್ಧದಲ್ಲಿ ಕಸಿದುಕೊಂಡು ಓಡಿಹೋಗಿದೆ. ಫೋನ್ ಎಗರಿಸಿದ ಮಂಗ, ನೆಟ್ಟಗೆ ಬೆಟ್ಟದ ಮೇಲಿರುವ ದೇವಾಲಯದ ಗೋಪುರದ ಶಿಕರ ಏರಿ ಕುಳಿತುಕೊಂಡು ಸುಮಾರು ಒಂದು ಗಂಟೆ ಕಾಲ ಫೋನ್ ಜೊತೆ ಆಟವಾಡುತ್ತಾ ಛೇಷ್ಟೆ ಮಾಡಿದೆ. ಇದನ್ನು ಕಂಡ ಯುವತಿ ಮತ್ತು ಜೊತೆಯಲ್ಲಿದ್ದ ಪ್ರವಾಸಿಗರು ಶಾಕ್ ಆಗಿದ್ದು, ಮಂಗನಿಂದ ಮೊಬೈಲ್ ವಾಪಸ್ ಪಡೆಯಲು ಹರಸಾಹಸ ಪಟ್ಟಿದ್ದಾರೆ. ಮಂಗನಿಗೆ ಹಣ್ಣು ಹಾಗೂ ಆಹಾರ ಪದಾರ್ಥಗಳನ್ನು ತೋರಿಸಿ ಪ್ರಲೋಭನೆ ಒಡ್ಡಿ ಫೋನ್ ಪಡೆಯಲು ಯುವಕರು ಸರ್ವಪ್ರಯತ್ನ ನಡೆಸಿದರು.

ಒಂದು ಗಂಟೆಯ ಕಸರತ್ತಿನ ನಂತರ ಮೊಬೈಲ್ ವಾಪಸ್

ಕೊನೆಗೂ ಸುಮಾರು ಒಂದು ಗಂಟೆಯ ಸುದೀರ್ಘ ಕಸರತ್ತಿನ ನಂತರ, ಮಂಗ ಮೊಬೈಲ್ ಅನ್ನು ಕೆಳಗೆ ಹಾಕಿದ್ದು, ಯುವತಿ ನಿಟ್ಟುಸಿರು ಬಿಟ್ಟಿದ್ದಾಳೆ. ಮೊಬೈಲ್‌ ಸಿಕ್ಕ ಖುಷಿಯಲ್ಲಿದ್ದ ಯುವತಿಗೆ, ಫೋನ್‌ಗೆ ಸಣ್ಣಪುಟ್ಟ ಡ್ಯಾಮೇಜ್ ಆಗಿರುವುದನ್ನು ಕಂಡು ಕೊಂಚ ಬೇಸರವೂ ಉಂಟಾಯಿತು. ಏನೇ ಆಗಲಿ, ಈ ಮಂಗನ ಆಟದ ವೀಡಿಯೊ ಹಾಗೂ ಘಟನೆ ಶಿವಗಂಗೆ ಬೆಟ್ಟಕ್ಕೆ ಬಂದಿದ್ದ ಇತರ ಪ್ರವಾಸಿಗರಿಗೂ ಕೊಂಚ ಕುತೂಹಲ ಹಾಗೂ ರಂಜನೆ ನೀಡಿತು.

 

 

PREV
Read more Articles on
click me!

Recommended Stories

ಬಿಗ್‌ ಬಾಸ್ ಗೆದ್ದರೂ ರಕ್ಷಿತಾ ಶೆಟ್ಟಿ ಈಗ ಒಂಟಿ? 'ಕ್ಲೋಸ್' ಆಗಿದ್ದವರು ಫೋನ್ ಪಿಕ್ ಮಾಡ್ತಿಲ್ಲ ಏಕೆ? 'ಶಾಕಿಂಗ್' ಸತ್ಯ ಇಲ್ಲಿದೆ!
‘ಕಲಿಯುಗದ ಸುಧಾಮ’: 10 ವರ್ಷ ಕೋರ್ಟ್ ಸುತ್ತಿ ಗೆದ್ದ ಆಸ್ತಿ... ಕೊನೆಗೆ ದೇವರ ಹೆಸರಿಗೆ ಬರೆದು ಕೊಟ್ಟ ರೈತ!