
ನಿವೃತ್ತಿ ಎಂದರೆ ದುಡಿಮೆಗೆ ತೆರೆ ಬಿಳುವುದು ಎಂದೇ ಅನೇಕರು ಭಾವಿಸಿದ್ದಾರೆ. ಇಷ್ಟು ವರ್ಷ ಕೆಲಸ ಮಾಡಿದ್ದಾಯಿತು, ಈಗ ನಿವೃತ್ತರಾದ ಮೇಲೆ ದುಡಿಯುವ ವಯಸ್ಸಲ್ಲ ಇನ್ನು ವಿಶ್ರಾಂತಿ ಜೀವನ ನಡೆಸೋಣ ನಡೆಸೋಣ ಎಂದ್ಕೊಳ್ತಾರೆ.
ನಿವೃತ್ತರಾದ ಮೇಲೆ ಯಾರಿಗೂ ಹೊಸ ಬ್ಯುಸಿನೆಸ್ ಶುರು ಮಾಡಬೇಕು, ಕೃಷಿ ಮಾಡಬೇಕು ಅನಿಸುವುದಿಲ್ಲ, ಅರವತ್ತು ವರ್ಷದ ಮೇಲೆ ಹೊಸದಾಗಿ ಏನನ್ನಾದರೂ ಆರಂಭಿಸುವುದು ಕಷ್ಟ ಎಂಬ ಮನೋಭಾವವೂ ಬೆಳೆಸಿಕೊಳ್ತಾರೆ. ಆದರೆ ಎಲ್ಲರ ಕಥೆಯೂ ಹಾಗಿರುವುದಿಲ್ಲ. ಕೆಲವರಿಗೆ ನಿವೃತ್ತಿಯೇ ಹೊಸ ಬದುಕಿನ ಆರಂಭವಾಗುತ್ತೆ! ಉದ್ಯೋಗದಲ್ಲಿ ವರ್ಷಗಳ ಕಾಲ ದುಡಿದು ಅನುಭವ ಪಡೆದವರು ನಿವೃತ್ತಿಯ ಬಳಿಕ ತಮ್ಮದೇ ಆದ ಹೊಸ ವ್ಯವಹಾರ, ಕೃಷಿ ಅಥವಾ ಇತರ ಚಟುವಟಿಕೆಗಳಿಗೆ ಕೈಹಾಕುತ್ತಾರೆ. ನೌಕರಿಯ ಒತ್ತಡದಿಂದ ಹೊರಬಂದ ಬಳಿಕ ತಮ್ಮಲ್ಲಿರುವ ಅನುಭವ, ಸಮಯ ಮತ್ತು ಆಸಕ್ತಿಯನ್ನು ಬಳಸಿಕೊಂಡು ಹೊಸ ಪ್ರಯತ್ನಕ್ಕೆ ಮುಂದಾಗುತ್ತಾರೆ. ಕೆಲವರು ಸಣ್ಣ ಉದ್ಯಮ ಆರಂಭಿಸುತ್ತಾರೆ, ಇನ್ನು ಕೆಲವರು ಕೃಷಿಯಲ್ಲಿ ತೊಡಗಿಸಿಕೊಳ್ತಾರೆ. ಅಂಥ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾದ ನಿವೃತ್ತ ಮಹಿಳೆಯ ಸ್ಪೂರ್ತಿದಾಯಕ ಲೈಫ್ ಸ್ಟೋರಿ ಇಲ್ಲಿದೆ.
ಕೇರಳದ 67 ವರ್ಷದ ರೇಮಾಭಾಯಿ ಎಸ್ ಅವರ ಬದುಕು ಇದಕ್ಕೆ ಅತ್ಯುತ್ತಮ ಉದಾಹರಣೆ. ಪತಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗ ಮತ್ತು ಸೊಸೆ ಇಬ್ಬರೂ ವೈದ್ಯರು. ಆರ್ಥಿಕವಾಗಿ ಯಾವುದೇ ಕೊರತೆಯಿಲ್ಲದ ಕುಟುಂಬ. ಸ್ವತಃ ರೇಮಾಭಾಯಿ ಕೂಡ ಹಲವು ವರ್ಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ, ಮುಖ್ಯೋಪಾಧ್ಯಾಯಿನಿಯಾಗಿ 2022ರ ಮೇ 31ರಂದು ನಿವೃತ್ತರಾಗಿದ್ದಾರೆ. ಹೀಗಿರುವಾಗ ಮನೆಯಲ್ಲೇ ಆರಾಮವಾಗಿ ಇದ್ದಬಿಡಬಹುದಿತ್ತು. ರೇಮಾಭಾಯಿ ನಿವೃತ್ತಿಯ ನಂತರವೇ ಹೊಸ ಬದುಕು ಆರಂಭವಾಯ್ತು.
ನಿವೃತ್ತಿಯ ನಂತರ ರೇಮಾಭಾಯಿಗೆ ಮನೆಯಲ್ಲೇ ಹೆಚ್ಚು ಸಮಯ ಕಳೆಯುವಂತಾಯಿತು. ಅದೇ ವರ್ಷ ತಾಯಿಯನ್ನೂ ಕಳೆದುಕೊಂಡರು. ಮನೆಯಲ್ಲಿದ್ದ ಮೌನ ಮತ್ತು ಒಂಟಿತನ ಇನ್ನಷ್ಟು ಕಾಡತೊಡಗಿತು. ಆಗ ಅವರು ತಮ್ಮನ್ನು ತಾವು ಹೊಸ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ನಿರ್ಧರಿಸಿದರು. ಜಮನೆಯ ಹಿತ್ತಲಿನಲ್ಲಿ ಗಿಡಗಳನ್ನು ಬೆಳೆಸಲು ಆರಂಭಿಸಿದರು. ಆ ಸಣ್ಣ ನಿರ್ಧಾರ ಮುಂದೆ ತಮ್ಮ ಬದುಕನ್ನೇ ಬದಲಿಸುವ ದೊಡ್ಡ ಪ್ರಯತ್ನವಾಗಿ ರೂಪುಗೊಳ್ಳುತ್ತದೆ ಎಂದು ಆಗ ಅವರಿಗೂ ಗೊತ್ತಿರಲಿಲ್ಲ.
ಪ್ರಾಣಿಶಾಸ್ತ್ರದ ಬಗ್ಗೆ 30 ವರ್ಷಗಳಿಗೂ ಹೆಚ್ಚು ಕಾಲ ಬೋಧಿಸಿದ್ದ ರೇಮಾಭಾಯಿ ಯಾವುದನ್ನೂ ಸುಮ್ಮನೆ ಆರಂಭಿಸಲಿಲ್ಲ. ವಿವಿಧ ನಿಯತಕಾಲಿಕೆಗಳು, ಆನ್‌ಲೈನ್ ಮಾಹಿತಿಗಳು ಹಾಗೂ ಕೇರಳದ ಹಲವು ತೋಟಗಳಿಗೆ ಭೇಟಿ ನೀಡಿ ವಿಲಕ್ಷಣ ಹಣ್ಣುಗಳ ಬಗ್ಗೆ ಅಧ್ಯಯನ ಮಾಡಿದರು. ಸುಮಾರು 52 ಬಗೆಯ ಹಣ್ಣುಗಳನ್ನು ಅಧ್ಯಯನ ಮಾಡಿದ ಬಳಿಕ ಅವರ ಗಮನ ಡ್ರ್ಯಾಗನ್ ಫ್ರೂಟ್‌ನತ್ತ ಹರಿಯಿತು.
ಪೌಷ್ಟಿಕಾಂಶ ಮತ್ತು ಹೆಚ್ಚುತ್ತಿರುವ ಬೇಡಿಕೆ ಅವರನ್ನು ಆಕರ್ಷಿಸಿತು. ಮೊದಲಿಗೆ ಮನೆಯ ಸಣ್ಣ ಹಿತ್ತಲಿನಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆಯಲು ಶುರು ಮಾಡಿದರು.. ಸಾಮಾನ್ಯವಾಗಿ ಹಣ್ಣಿನ ಗಿಡಗಳಿಗೆ ಸಾಕಷ್ಟು ಜಾಗ ಬೇಕಾಗುತ್ತದೆ. ಆದರೆ ರೇಮಾಭಾಯಿ ಜಾಗದ ಕೊರತೆಯನ್ನೇ ಸವಾಲಾಗಿ ಸ್ವೀಕರಿಸಿದರು. ಸುಮಾರು 1,750 ಚದರ ಅಡಿ ಹಿತ್ತಲಿನಲ್ಲಿ 90 ಕಾಂಕ್ರೀಟ್ ಕಂಬಗಳನ್ನು ಅಳವಡಿಸಿದರು. ಪ್ರತಿ ಕಂಬಕ್ಕೆ ನಾಲ್ಕು ಗಿಡಗಳಂತೆ ಒಟ್ಟು 360 ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ಬೆಳೆಸಿದರು. ಕಂಬಗಳಿಗೆ ಸ್ಥಳೀಯವಾಗಿ ತಯಾರಿಸಿದ ಕಾಂಕ್ರೀಟ್ ಕಂಬಗಳನ್ನು ಬಳಸಿದರು. ಗಿಡಗಳು ಹರಡಿಕೊಳ್ಳಲು GI ಪೈಪ್‌ಗಳನ್ನು ಬಳಸಿದರು. ಹಳೆಯ ಟೈರ್‌ಗಳನ್ನೂ ಮೇಲಾವರಣ ರೂಪಿಸಲು ಮರುಬಳಕೆ ಮಾಡಿದರು. ಅಂದರೆ, ದುಬಾರಿ ಮೂಲಸೌಕರ್ಯಗಳ ಹಿಂದೆ ಹೋಗದೆ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಕೃಷಿ ಮಾದರಿಯೊಂದನ್ನು ನಿರ್ಮಿಸಿದರು.
ಮೊದಲಿಗೆ ಖರೀದಿಸಿದ ಕಾಂಡಗಳಿಗೆ ತಲಾ ಸುಮಾರು ₹100 ಖರ್ಚು ಬರುತ್ತಿತ್ತು. ಆದರೆ ಕೇವಲ ಆರು ತಿಂಗಳಲ್ಲೇ ಗಿಡಗಳು ಹೂ ಬಿಡಲು ಆರಂಭಿಸಿದವು. 2023ರ ಮಾರ್ಚ್ ವೇಳೆಗೆ ಮೊದಲ ಕೊಯ್ಲು ಕೂಡ ಆರಂಭವಾಯಿತು. ಆರಂಭಿಕ 360 ಗಿಡಗಳಿಂದಲೇ ತಿಂಗಳಿಗೆ ₹50 ಸಾವಿರಕ್ಕೂ ಹೆಚ್ಚು ಆದಾಯ ಬರತೊಡಗಿತು. ಗಿಡಗಳು ಬೆಳೆದಂತೆ ಹಿತ್ತಲಿನ ತೋಟದಿಂದ ತಿಂಗಳಿಗೆ ಸುಮಾರು ₹1.5 ಲಕ್ಷದವರೆಗೆ ಆದಾಯ ಬರತೊಡಗಿತು. ಕೆಲವೊಮ್ಮೆ ತಿಂಗಳಿಗೆ ಸುಮಾರು 750 ಕೆಜಿ ಹಣ್ಣು ಉತ್ಪಾದನೆಯಾಗುತ್ತಿತ್ತು.
ಹಿತ್ತಲಿನ ಪ್ರಯೋಗ ಯಶಸ್ವಿಯಾದ ಬಳಿಕ ರೇಮಾಭಾಯಿಗೆ ಮತ್ತೊಂದು ಆಲೋಚನೆ ಬಂತು. ಮನೆಯ ಟೆರೇಸ್‌ನಲ್ಲೂ ಡ್ರ್ಯಾಗನ್ ಫ್ರೂಟ್ ಬೆಳೆಸಬೇಕೆಂದು ಅನಿಸಿತು. ಆದರೆ ಟೆರೇಸ್‌ಗೆ ಸಾಕಷ್ಟು ಮಣ್ಣನ್ನು ಸಾಗಿಸುವುದು ಕಷ್ಟ. ಹೀಗಾಗಿ ಅವರು ಮಣ್ಣಿಲ್ಲದೆ ಡ್ರ್ಯಾಗನ್ ಫ್ರೂಟ್ ಬೆಳೆಸುವ ಪ್ರಯೋಗಕ್ಕೆ ಮುಂದಾದರು. ಒಂದೇ ಗಿಡದ ಎರಡು ಕಾಂಡಗಳಲ್ಲಿ ಒಂದನ್ನು ಮನೆಯಲ್ಲೇ ತಯಾರಿಸಿದ ಕಾಂಪೋಸ್ಟ್‌ನಲ್ಲಿ, ಮತ್ತೊಂದನ್ನು ಸಾಮಾನ್ಯ ಮಣ್ಣಿನಲ್ಲಿ ಬೆಳೆಸಿದರು. ಕಾಂಪೋಸ್ಟ್‌ನಲ್ಲಿದ್ದ ಕಾಂಡ ಕೇವಲ ಮೂರು ವಾರಗಳಲ್ಲಿ ಚಿಗುರಿತು. ಮಣ್ಣಿನಲ್ಲಿದ್ದದ್ದು 50 ದಿನಗಳಿಗಿಂತ ಹೆಚ್ಚು ಸಮಯ ತೆಗೆದುಕೊಂಡಿತು. ಇದೇ ಪ್ರಯೋಗ ಅವರಿಗೆ ಮತ್ತಷ್ಟು ಆತ್ಮವಿಶ್ವಾಸ ನೀಡಿತು. ಪ್ರತಿಫಲವೂ ಡಬಲ್!
ನಂತರ ಅವರು 50 ಬ್ಯಾರೆಲ್‌ಗಳನ್ನು ಖರೀದಿಸಿ ಟೆರೇಸ್‌ಗೆ ಸಾಗಿಸಿದರು. ಪ್ರತಿ ಬ್ಯಾರೆಲ್‌ನಲ್ಲಿ ಎರಡು ಡ್ರ್ಯಾಗನ್ ಫ್ರೂಟ್ ಗಿಡಗಳನ್ನು ಬೆಳೆಸಿದರು. ಹೀಗೆ ಟೆರೇಸ್‌ನಲ್ಲೇ 100 ಗಿಡಗಳ ಹೊಸ ತೋಟ ಸಿದ್ಧವಾಯಿತು. ಬ್ಯಾರೆಲ್‌ಗಳಲ್ಲಿ ಮಿಶ್ರ ಕಾಂಪೋಸ್ಟ್ ಮತ್ತು ಹಸುವಿನ ಸಗಣಿಯನ್ನು ಬಳಸಿದರು. ಗಿಡಗಳು ಮೇಲಕ್ಕೆ ಬೆಳೆಯಲು PVC ಮತ್ತು GI ಪೈಪ್‌ಗಳಿಂದ ಸಪೋರ್ಟಿಂಗ್ ಸಿಸ್ಟಂ ನಿರ್ಮಿಸಿದರು. ಅಚ್ಚರಿ ವಿಷಯವೆಂದರೆ ಟೇರೆಸ್ ಮೇಲಿನ ತೋಟವು ಕೇವಲ ಐದು ತಿಂಗಳಲ್ಲೇ ಹಣ್ಣು ಸಿಗಲು ಆರಂಭಿಸಿತು.
ಹಿತ್ತಲಿನ ತೋಟ ಮತ್ತು ಟೆರೇಸ್ ಕೃಷಿಯ ಜೊತೆಗೆ ಕಾಂಡದ ಕತ್ತರಿಸಿದ ಭಾಗಗಳ ಮಾರಾಟವೂ ಆರಂಭವಾಯಿತು. ಇದರ ಪರಿಣಾಮವಾಗಿ ಹಣ್ಣು ಮಾರಾಟ, ಕಾಂಡ ಮಾರಾಟದಿಂದ ಒಟ್ಟು ತಿಂಗಳಿಗೆ ಸುಮಾರು ₹4 ಲಕ್ಷ ಆದಾಯ ಬರುತ್ತಿದೆ ಎಂದು ರೇಮಾಭಾಯಿ ಹೇಳುತ್ತಾರೆ. ಆದರೆ ಅವರ ಯಶಸ್ಸಿನ ನಿಜವಾದ ರಹಸ್ಯ ಹಣ ಹೂಡಿಕೆಯಲ್ಲ. ಸಾವಯವ ಕೃಷಿ ಮತ್ತು ಸ್ವಂತ ಪ್ರಯೋಗಗಳಲ್ಲಿದೆ. ಅಡುಗೆ ಮನೆಯ ತ್ಯಾಜ್ಯ, ಒಣ ಎಲೆಗಳು, ಹಸಿರು ಎಲೆಗಳು, ಹಲಸಿನ ತ್ಯಾಜ್ಯ, ಈರುಳ್ಳಿ ಸಿಪ್ಪೆ, ತರಕಾರಿ ತ್ಯಾಜ್ಯ ಸೇರಿದಂತೆ ಮನೆಯ ಸುತ್ತಲೂ ಸಿಗುವ ಹಲವು ವಸ್ತುಗಳನ್ನು ಅವರು ಗೊಬ್ಬರ ತಯಾರಿಸಲು ಬಳಸುತ್ತಾರೆ. ಇದರ ಜೊತೆಗೆ ವಿವಿಧ ಹಣ್ಣುಗಳ ತ್ಯಾಜ್ಯ, ಹಣ್ಣಿನ ಸಿಪ್ಪೆ ಮತ್ತು ಅಡುಗೆ ಮನೆಯ ತ್ಯಾಜ್ಯದಿಂದ 15ಕ್ಕೂ ಹೆಚ್ಚು ಬಗೆಯ ದ್ರವ ಸಾವಯವ ಒಳಹರಿವುಗಳನ್ನು ತಯಾರಿಸಿದ್ದಾರೆ. ಅದರಲ್ಲೂ ಈರುಳ್ಳಿ ಸಿಪ್ಪೆಯ ಸ್ಲರಿ, ಅಲೋವೆರಾ ಸ್ಲರಿ ಸೇರಿದಂತೆ ಹಲವು ನೈಸರ್ಗಿಕ ಸಿದ್ಧತೆಗಳನ್ನು ಗಿಡಗಳಿಗೆ ಬಳಸುತ್ತಾರೆ. ಮೀನು ಮತ್ತು ಸಮುದ್ರಾಹಾರ ತ್ಯಾಜ್ಯಗಳಿಂದ ತಯಾರಿಸುವ ಮೀನು ಅಮೈನೋ ಆಮ್ಲ ಕೂಡ ಅವರ ಕೃಷಿಯ ಪ್ರಮುಖ ಭಾಗವಾಗಿದೆ.
ಸಾಮಾನ್ಯವಾಗಿ ಡ್ರ್ಯಾಗನ್ ಫ್ರೂಟ್‌ನ ಪ್ರಮುಖ ಕೊಯ್ಲು ಅವಧಿ ಕೆಲವೇ ತಿಂಗಳುಗಳಿಗೆ ಸೀಮಿತವಾಗಿರುತ್ತದೆ. ಆದರೆ ರೇಮಾಭಾಯಿ ತಮ್ಮ ಸಾವಯವ ವಿಧಾನಗಳಿಂದ ಕೊಯ್ಲು ಅವಧಿಯನ್ನು ಸುಮಾರು 10 ತಿಂಗಳವರೆಗೆ ವಿಸ್ತರಿಸಿರುವುದಾಗಿ ಹೇಳುತ್ತಾರೆ. ಜನವರಿ ಮತ್ತು ಫೆಬ್ರವರಿ ಹೊರತುಪಡಿಸಿ ವರ್ಷದ ಬಹುತೇಕ ಅವಧಿಯಲ್ಲಿ ಬೆಳೆಯ ಫಲ ಸಿಗುತ್ತಲೇ ಇದೆ. ಹಿತ್ತಲಿನ ಗಿಡಗಳಿಂದ ಒಂದೇ ಕೊಯ್ಲಿನ ಬದಲು ಕೆಲವೊಮ್ಮೆ ಮೂರು ಕೊಯ್ಲುಗಳನ್ನೂ ಪಡೆಯುತ್ತಾರೆ. ಪ್ರತಿ ಕೊಯ್ಲಿನಲ್ಲಿ ಸುಮಾರು 250 ಕೆಜಿ ಹಣ್ಣು ಸಿಗುತ್ತದೆ ಎಂದು ಅವರು ಹೇಳುತ್ತಾರೆ.
ರೇಮಾಭಾಯಿ ಅವರ ತೋಟ ನೋಡಲು ಬರುವವರು ಕೇವಲ ಹಣ್ಣು ಖರೀದಿಸುವುದಕ್ಕೆ ಸೀಮಿತರಾಗಲಿಲ್ಲ. ಅವರ ತೋಟದ ಗಿಡಗಳನ್ನು ನೋಡಿದ ಅನೇಕರು ಡ್ರ್ಯಾಗನ್ ಫ್ರೂಟ್ ಕಾಂಡಗಳನ್ನು ಬೆಳೆಸಲು ಕೇಳತೊಡಗಿದರು. ಇದರಿಂದ ಮತ್ತೊಂದು ಉದ್ಯಮ ಆರಂಭವಾಯಿತು. ಈಗ ಅವರು ಬೇಡಿಕೆಗೆ ಅನುಗುಣವಾಗಿ ಕಾಂಡದ ಕತ್ತರಿಸಿದ ಭಾಗಗಳನ್ನು ತಲಾ ಸುಮಾರು ₹70ಕ್ಕೆ ಮಾರಾಟ ಮಾಡುತ್ತಾರೆ. ದೇಶದ ಹಲವು ರಾಜ್ಯಗಳಲ್ಲಿರುವ 2,500ಕ್ಕೂ ಹೆಚ್ಚು ಗ್ರಾಹಕರಿಗೆ ಅವರು ನೆಟ್ಟ ವಸ್ತುಗಳನ್ನು ಪೂರೈಸಿದ್ದಾರೆ. ಕೇರಳದಿಂದ ಹೊರತಾಗಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಹರಿಯಾಣ, ಉತ್ತರ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳಿಗೆ ಅವುಗಳನ್ನು ಕಳುಹಿಸಿದ್ದಾರೆ.
ರೇಮಾಭಾಯಿ ಅವರ ಕಥೆಯಲ್ಲಿ ಹಣ ಗಳಿಕೆಯೇ ದೊಡ್ಡ ಸಾಧನೆಯಲ್ಲ. ನಿವೃತ್ತಿಯ ನಂತರ ಬದುಕಿಗೆ ಹೊಸ ಅರ್ಥ ಕಂಡುಕೊಂಡಿರುವುದು ಅವರ ನಿಜವಾದ ಗೆಲುವು. ಒಂಟಿತನವನ್ನು ಅವರು ಕೃಷಿಯನ್ನಾಗಿ ಪರಿವರ್ತಿಸಿದರು. ಖಾಲಿ ಜಾಗವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಿದರು. ಮನೆಯ ತ್ಯಾಜ್ಯವನ್ನು ಗೊಬ್ಬರವನ್ನಾಗಿ ಪರಿವರ್ತಿಸಿದರು. ಹಿತ್ತಲನ್ನು ಆದಾಯದ ಮೂಲವನ್ನಾಗಿ ಮಾಡಿಕೊಂಡರು. ಟೆರೇಸ್ ಅನ್ನು ಮತ್ತೊಂದು ತೋಟವನ್ನಾಗಿ ರೂಪಿಸಿದರು.
ಮುಖ್ಯವಾಗಿ ವಯಸ್ಸು ಹೆಚ್ಚಾದಂತೆ ಕನಸುಗಳಿಗೂ ನಿವೃತ್ತಿ ಕೊಡಬೇಕಿಲ್ಲ ಎಂಬುದನ್ನು ತಮ್ಮ ಬದುಕಿನ ಮೂಲಕ ತೋರಿಸಿದರು.
ನಿವೃತ್ತಿಯ ನಂತರ ಹಲವರು 'ಇನ್ನು ದುಡಿಯುವ ವಯಸ್ಸಲ್ಲ' ಎಂದುಕೊಳ್ಳುತ್ತಾರೆ. ಆದರೆ ರೇಮಾಭಾಯಿ ಅವರ ಬದುಕು ಹೇಳುವುದು ಬೇರೆ. ನಿಮ್ಮ ಬಳಿ ದೊಡ್ಡ ಜಮೀನು ಇರಬೇಕೆಂದಿಲ್ಲ. ದೊಡ್ಡ ಬಂಡವಾಳವೂ ಬೇಕಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಹೊಸತನ್ನು ಕಲಿಯುವ ಆಸಕ್ತಿ, ಪ್ರಯೋಗ ಮಾಡುವ ಧೈರ್ಯ ಮತ್ತು ನಿರಂತರವಾಗಿ ಕೆಲಸ ಮಾಡುವ ಮನಸ್ಸು ಬೇಕು. ಎನ್ನುತ್ತಾರೆ. ನಿಜವಾದ ಅವಕಾಶವೆಂದರೆ ಹೆಚ್ಚು ಭೂಮಿ ಹೊಂದಿರುವುದಲ್ಲ. ಈಗಾಗಲೇ ನಮ್ಮ ಬಳಿ ಇರುವ ಜಾಗದಿಂದಲೇ ಹೆಚ್ಚಿನ ಲಾಭ ಹೇಗೆ ಪಡೆಯುವುದು ಎಂಬುದನ್ನು ಕಲಿಯುವುದು. 67ರ ವಯಸ್ಸಿನಲ್ಲಿ ರೇಮಾಭಾಯಿ ಮಾಡಿರುವ ಸಾಧನೆ, ನಿವೃತ್ತಿಯ ನಂತರದ ಬದುಕನ್ನು ಹೇಗೆ ನೋಡಬೇಕು ಎಂಬುದನ್ನು ಆಲೋಚಿಸುವಂತೆ ಮಾಡುತ್ತದೆ. ದುಡಿಯುವ ವಯಸ್ಸು ಮುಗಿದಿಲ್ಲ. ಹೊಸ ಕನಸು ಕಾಣುವ ವಯಸ್ಸು ಎಂದಿಗೂ ಮುಗಿಯುವುದಿಲ್ಲ.
ನಿನ್ನೆವರೆಗೆ ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿದ್ದ ಆ ಮುಖ್ಯೋಪಾಧ್ಯಾಯಿನಿ, ಇಂದು ಗಿಡಗಳಿಗೆ ಪಾಠ ಹೇಳುತ್ತಿದ್ದಾರೆ! ಹೇಗೆ ಬೆಳೆಬೇಕು, ಹೇಗೆ ಫಲ ಕೊಡಬೇಕು ಮತ್ತು ಸಣ್ಣ ಜಾಗದಲ್ಲೂ ದೊಡ್ಡ ಕನಸುಗಳನ್ನು ಹೇಗೆ ನನಸಾಗಿಸಿಕೊಳ್ಳಬೇಕು ಎಂಬ ಪಾಠ!