ಮಹಿಳಾ ದೌರ್ಜನ್ಯ ತಪ್ಪಿ​ಸಲು ಸ್ತ್ರೀಯಿಂದ ಸಾಧ್ಯ: ಮಂಡ್ಯ ರಮೇಶ

By Web DeskFirst Published Oct 11, 2019, 10:51 AM IST
Highlights

ಭೂತಾಯಿ, ಲಕ್ಷ್ಮಿ, ಚಾಮುಂಡೇಶ್ವರಿ ಹೀಗೆ ಅನೇಕ ಶಕ್ತಿಗೆ ಮೂಲ ಸ್ತ್ರೀ| ಇಂದು ಅವಳಿಗೆ ಎಲ್ಲರೂ ಕಾಟ ಕೊಡುತ್ತಿರುವುದು ವಿಷಾದಕರ ಸಂಗತಿ ಎಂದ ಖ್ಯಾತ ರಂಗಕರ್ಮಿ ಮಂಡ್ಯ ರಮೇಶ| ಹೆಂಡತಿ ಹೆಣ್ಣು, ಮಗಳು ಹೆಣ್ಣು, ತಾಯಿ ಹೆಣ್ಣು ನನ್ನ ಇಡೀ ಜೀವನವನ್ನು ಹೆಣಿಯುತ್ತಿರುವುದು ಸ್ತ್ರೀ ಸಂಕುಲವೇ| ಇಡೀ ಭಾರತವನ್ನು ಮತ್ತು ಪ್ರಪಂಚವನ್ನು ಸಹನೆಯಿಂದ ಕಟ್ಟುವ ಸಾಮರ್ಥ್ಯ ಹೆಣ್ಣಿಗೆ ಮಾತ್ರ ಇದೆ| ಅವಳ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು| ಇದನ್ನು ತಪ್ಪಿಸಲು ಸ್ತ್ರೀಯಿಂದ ಮಾತ್ರ ಸಾಧ್ಯ| ಆಕೆಯಲ್ಲಿ ಜಗತ್ತನ್ನು ಕಟ್ಟಬಲ್ಲ ಶಕ್ತಿ ಇದೆ| 

ವಿಜಯಪುರ(ಅ.11): ಭೂತಾಯಿ, ಲಕ್ಷ್ಮಿ, ಚಾಮುಂಡೇಶ್ವರಿ ಹೀಗೆ ಅನೇಕ ಶಕ್ತಿಗೆ ಮೂಲ ಸ್ತ್ರೀ. ಆದರೇ ಇಂದು ಅವಳಿಗೆ ಎಲ್ಲರೂ ಕಾಟ ಕೊಡುತ್ತಿರುವುದು ವಿಷಾದಕರ ಸಂಗತಿ ಎಂದು ಖ್ಯಾತ ರಂಗಕರ್ಮಿ ಮಂಡ್ಯ ರಮೇಶ ಹೇಳಿದ್ದಾರೆ.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಜ್ಞಾನ ಶಕ್ತಿ ಆವರಣದಲ್ಲಿ ಗುರುವಾರ ನಡೆದ 16ನೇ ಶಕ್ತಿ ಸಂಭ್ರಮದ ಅಂತರ್‌ ಮಹಾವಿದ್ಯಾಲಯಗಳ ಮಹಿಳಾ ಯುವಜನೋತ್ಸವ ಕಾರ್ಯಕ್ರಮಕ್ಕೆ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಳಿಕ ಮಾತನಾಡಿದ ಅವರು, ನನ್ನ ಹೆಂಡತಿ ಹೆಣ್ಣು, ಮಗಳು ಹೆಣ್ಣು, ತಾಯಿ ಹೆಣ್ಣು ನನ್ನ ಇಡೀ ಜೀವನವನ್ನು ಹೆಣಿಯುತ್ತಿರುವುದು ಸ್ತ್ರೀ ಸಂಕುಲವೇ. ಇಡೀ ಭಾರತವನ್ನು ಮತ್ತು ಪ್ರಪಂಚವನ್ನು ಸಹನೆಯಿಂದ ಕಟ್ಟುವ ಸಾಮರ್ಥ್ಯ ಹೆಣ್ಣಿಗೆ ಮಾತ್ರ ಇದೆ. ಆದರೆ ಅವಳ ಮೇಲೆ ದೌರ್ಜನ್ಯ ನಿರಂತರವಾಗಿ ನಡೆಯುತ್ತಿದ್ದು, ಇದನ್ನು ತಪ್ಪಿಸಲು ಸ್ತ್ರೀಯಿಂದ ಮಾತ್ರ ಸಾಧ್ಯ. ಆಕೆಯಲ್ಲಿ ಜಗತ್ತನ್ನು ಕಟ್ಟಬಲ್ಲ ಶಕ್ತಿ ಇದೆ ಎಂದು ಹೇಳಿದ್ದಾರೆ. 
ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಅಪಮಾನ, ತಾಪತ್ರೆಯ ಎದುರಿಸುವಂತಹ ಎದೆಗಾರಿಕೆ ಹೆಣ್ಣಿಗಿದೆ. ಮಹಿಳೆಯ ಮೇಲೆ ಗಂಡು ಎಂಬ ಪ್ರಾಣಿಯಿಂದ ಸದಾ ಆಕ್ರಮಣ ನಡೆಯುತ್ತಲಿರುತ್ತದೆ. ಆದರೆ ಅದು ನಿಲ್ಲಬೇಕು. ಸಕಾರಾತ್ಮಕ ಚಿಂತನೆ ರೂಢಿಸಿಕೊಳ್ಳಬೇಕು ಎಂದರು.

ಜನಪದ ಕಲಾವಿದೆ ಮಂಜಮ್ಮ ಜೋಗತಿ ಮಾತನಾಡಿ, ಕಲೆ ಎಂಬುವುದು ಎಲ್ಲಕ್ಕಿಂತಹ ಹೆಚ್ಚಿನದು. ಅಂತಹ ಕಲೆಯನ್ನು ನಾನು ನಂಬಿದ್ದಕ್ಕೆ ಇಂದು ನಿಮ್ಮೆಲ್ಲರ ಮುಂದೆ ಈ ವೇದಿಕೆ ಮೇಲೆ ನಿಂತು ಹೆಮ್ಮೆಯಿಂದ ಮಾತನಾಡುತ್ತಿದ್ದೇನೆ. ನನಗೆ ಪ್ರಶಸ್ತಿ ಸಿಗುತ್ತದೆ ಎಂದು ಅಂದುಕೊಂಡು ನಾನೆಂದಿಗೂ ಆಮಿಷಕ್ಕೆ ಒಳಗಾಗಿ ಕಲೆಯ ಬೆನ್ನು ಹತ್ತಲಿಲ್ಲ. ಅತ್ಯಂತ ಪ್ರಾಮಾಣಿಕತೆಯಿಂದ ಕಲೆಯನ್ನು ಗೌರವಿಸಿ ಬದುಕುತ್ತಿದ್ದೇನೆ ಎಂದರು.

ನಾನು ಭಾಷಣಕಾರತಿಯಲ್ಲ, ಕಾಲಿಗೆ ಗೆಜ್ಜೆ ಕಟ್ಟಿ, ತಲೆ ಮೇಲೆ ಕೊಡ ಹೊತ್ತು ಹೆಜ್ಜೆ ಹಾಕಬಲ್ಲೆ ಅಷ್ಟೆ. ನನಗೆ ಕೊಟ್ಟಪಾತ್ರವನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ. ಕಲೆಯನ್ನು ದೇವರೆಂದು ನಂಬಿದ್ದೇನೆ. ಇಂದು ನಾನು ಈ ಮಟ್ಟಿಗೆ ಬೆಳೆಯಲು ಈ ಕಲೆಯೇ ಕಾರಣ ಎಂದರು.

ನಾವೆಲ್ಲರೂ ಹೆಮ್ಮೆಯ ಕನ್ನಡ ಭಾಷೆ ಉಳಿಸಿ ಬೆಳೆಸಬೇಕಾಗಿದೆ. ಬೇರೆ ಭಾಷೆಗಳನ್ನೂ ಗೌರವಿಸೋಣ ಆದರೆ ನಮ್ಮ ಭಾಷೆಯನ್ನು ಉಳಿಸೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿವಿಯ ಕುಲಪತಿ ಪ್ರೊ. ಸಬಿಹಾ ಭೂಮಿಗೌಡ ಮಾತನಾಡಿ, ಇಂದು ಸಾಕಷ್ಟುಮಹಿಳೆಯರು ನಮ್ಮಲ್ಲಿ ಮಾದರಿಯಾಗಿದ್ದಾರೆ. ಆದರೂ ಸಮಾಜ ಮಹಿಳೆಯ ಮೇಲೆ ಉಪೇಕ್ಷೆ ಮಾಡುತ್ತಲೇ ಇರುವುದು ನೋವಿನ ಸಂಗತಿ. ಈ ಎಲ್ಲವನ್ನೂ ಮೆಟ್ಟಿನಿಲ್ಲುವ ಶಕ್ತಿ ಮಹಿಳೆಯರಿಗೆ ಇರಬೇಕಾಗುತ್ತದೆ. ಯಾವುದೇ ಮಾತುಗಳಿಗೆ ಕಿವಿಗೊಡದೆ ಮುನ್ನುಗ್ಗುವ ಛಲ ಹೊಂದಬೇಕಾಗಿರುವುದು ಅವಶ್ಯ ಎಂದರು.

ಮೌಲ್ಯಮಾಪನ ಕುಲಸಚಿವ ಪ್ರೊ.ಪಿ.ಜಿ.ತಡಸದ, ವಿದ್ಯಾರ್ಥಿನಿ ಕ್ಷೇಮ​ಪಾ​ಲನ ನಿರ್ದೇಶಕ ಡಾ. ಯು.ಕೆ. ಕುಲಕರ್ಣಿ ಸೇರಿದಂತೆ ವಿವಿಯ ಡೀನ್‌ಗಳು, ಎಲ್ಲಾ ವಿಭಾಗದ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಸ್ನಾತಕೋತ್ತರ, ಸಂಶೋಧನಾ ಹಾಗೂ ವಿವಿಯ ಅಂತರ್‌ ಕಾಲೇಜುಗಳ ವಿದ್ಯಾರ್ಥಿನಿಯರು ಮತ್ತು ಮಾರ್ಗದರ್ಶಕರು ಅನೇ​ಕ​ರಿ​ದ್ದರು. ಪ್ರಾಧ್ಯಾಪಕ ಡಾ.ವಿಷ್ಣು ಎಂ. ಶಿಂಧೆ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ. ಭಾರತಿ ಗಾಣಿಗೆರ ವಂದಿಸಿದರು.
 

click me!