ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಖ್ಯಾತೆ ವಿಚಾರವಾಗಿ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳಿಗೆ ಕಪ್ಪು ಮಸಿಬೆಳೆದು ಸಿಎಂ ಭಾವಚಿತ್ರಕ್ಕೆ ಅವಮಾನ ಮಾಡಿದ್ದಕ್ಕೆ ವಿಜಯಪುರ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡಲಾಯಿತು.
ವಿಜಯಪುರ (ಡಿ.8): ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಖ್ಯಾತೆ ವಿಚಾರವಾಗಿ ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಗಳಿಗೆ ಕಪ್ಪು ಮಸಿಬೆಳೆದು ಸಿಎಂ ಭಾವಚಿತ್ರಕ್ಕೆ ಅವಮಾನ ಮಾಡಿದ್ದಕ್ಕೆ ವಿಜಯಪುರ ನಗರದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ಮಾಡಲಾಯಿತು.
ನಗರದ ಅಂಬೇಡ್ಕರ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ಜಮಾವಣೆಗೊಂಡು ಮಹಾರಾಷ್ಟ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ಬಸ್ ಗಳಿಗೆ ಮಸಿ ಬಳೆಯುವುದು ಸಿಎಂ ಭಾವಚಿತ್ರಕ್ಕೆ ಅವಮಾನ ಮಾಡುವುದಕ್ಕೆ ಖಂಡನೆ ವ್ಯಕ್ತಪಡಿಸಿದರು. ಮಹಾರಾಷ್ಟ್ರ ಸಿಎಂ ಏಕನಾಥ್ ಸಿಂಧೆ, ದೇವೇಂದ್ರ ಫಡ್ನವೀಸ್, ಶಿವಸೇನಾದ ಉದ್ಧವ್ ಠಾಕ್ರೆ, ಮಹಾರಾಷ್ಟ್ರ ನವ ನಿರ್ಮಾಣ ಸಂಘಟನೆಯ ರಾಜ್ ಠಾಕ್ರೆ ಭಾವಚಿತ್ರಕ್ಕೆ ಚಪ್ಪಲಿ ಸೇವೆ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
Maharashtra Karnataka Border Row: ಬಸ್, ಬ್ಯಾಂಕಿಗೆ ಮಸಿ: ಮಹಾ ಪುಂಡಾಟಿಕೆ!
ಮಹಾ ಸಿಎಂ ಪ್ರತಿಕೃತಿಗೆ ಬೆಂಕಿ: ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ಹಾಗೂ ಇತರೆ ನಾಯಕರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಕರವೇ ಕಾರ್ಯಕರ್ತರು ಬಾಯಿ ಬಾಯಿ ಬಡಿದುಕೊಂಡರು ಸಂತಾಪ ಸೂಚಿಸುವಂತೆ ಅಣಕಿಸಿದರು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಮೂಲಕ ಕರ್ನಾಟಕದ ಗಡಿ ಪ್ರದೇಶದ ಒಂದು ಇಂಚು ಭೂಮಿಯನ್ನು ಮಹಾರಾಷ್ಟ್ರಕ್ಕೆ ಬಿಟ್ಟು ಕೊಡದಂತೆ ಕಠಿಣ ಕ್ರಮ ಕೈಗೊಳ್ಳುವ ಕುರಿತ ಮನವಿ ಪತ್ರವನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಲಾಯಿತು.
ಮಹಾರಾಷ್ಟ್ರದ ವಿರುದ್ಧ ಬಾಗಲಕೋಟೆಯಲ್ಲೂ ಧಿಕ್ಕಾರ: ಮತ್ತೊಂದೆಡೆ ಬಾಗಲಕೋಟೆಯಲ್ಲಿ ಕರವೇ ಕಾರ್ಯಕರ್ತರಿಂದ ಪ್ರತಿಭಟನೆ ಮಾಡಿದರು. ಮಹಾರಾಷ್ಟ್ರದ ಕ್ರಮದ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕದ ಶಾಂತಿ ಭಂಗ ಮಾಡಿದ ಶಿವಸೇನೆ ಮತ್ತು ಎಂ.ಇ.ಎಸ್ ಪುಂಡರ ಪ್ರತಿಕೃತಿ ದಹಿಸಿದರು. ನವನಗರದ ಜಿಲ್ಲಾಡಳಿತ ಭವನದ ವೃತ್ತದ ಬಳಿ ಪ್ರತಿಕೃತಿ ದಹಿಸಿ ಘೋಷಣೆ ಮಾಡಿ, ಅಂತಿಮವಾಗಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಮನವಿ ಸಲ್ಲಿಕೆ ಮಾಡಿದರು.