ರೈಲು ಬರುವ ವೇಳೆಯೇ ಕೆಟ್ಟು ನಿಂತ 25 ಮಕ್ಕಳಿದ್ದ ಶಾಲಾ ವಾಹನ.. ಸ್ಥಳೀಯರಿಂದ ತಪ್ಪಿದ ಭಾರೀ ಅನಾಹುತ

Published : Aug 06, 2026, 10:04 AM IST
raichuru train van

ಸಾರಾಂಶ

ವಿಜಯಪುರ ಜಿಲ್ಲೆಯ ಲಚ್ಯಾಣ ಗ್ರಾಮದಲ್ಲಿ, ರೈಲ್ವೆ ಹಳಿಯ ಮೇಲೆ ಕೆಟ್ಟು ನಿಂತಿದ್ದ 25ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ವಾಹನವನ್ನು ಸ್ಥಳೀಯರು ರಕ್ಷಿಸಿದ್ದಾರೆ. ರೈಲು ಬರುವ ಕೆಲವೇ ಕ್ಷಣಗಳ ಮೊದಲು, ಗ್ರಾಮಸ್ಥರು ತಮ್ಮ ಪ್ರಾಣದ ಹಂಗು ತೊರೆದು ವಾಹನವನ್ನು ಪಕ್ಕಕ್ಕೆ ತಳ್ಳಿ ಭಾರೀ ದುರಂತವನ್ನು ತಪ್ಪಿಸಿದ್ದಾರೆ.

ವಿಜಯಪುರ: ಸ್ಥಳೀಯರ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ. ರೈಲು ಬರುವ ಸಮಯದಲ್ಲೇ ರೈಲ್ವೆ ಹಳಿಯ ಮೇಲೆ ಕೆಟ್ಟು ನಿಂತಿದ್ದ 25ಕ್ಕೂ ಹೆಚ್ಚು ಮಕ್ಕಳಿದ್ದ ಶಾಲಾ ವಾಹನವನ್ನು ಗ್ರಾಮಸ್ಥರು ಪಕ್ಕಕ್ಕೆ ತಳ್ಳಿ ಮಕ್ಕಳ ಪ್ರಾಣ ಉಳಿಸಿರುವ ರೋಚಕ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ.

ಹಳಿಯ ಮಧ್ಯದಲ್ಲೇ ಕೈಕೊಟ್ಟ ಗೇರ್ ಬಾಕ್ಸ್

ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದ ರೈಲ್ವೆ ಲೆವೆಲ್ ಕ್ರಾಸಿಂಗ್ ಬಳಿ ಈ ಆತಂಕಕಾರಿ ಘಟನೆ ನಡೆದಿದೆ. ಹಲಸಂಗಿಯಿಂದ ಲಚ್ಯಾಣ ಮಾರ್ಗವಾಗಿ ಶಿರಗೂರು ಗ್ರಾಮದ ಕಡೆಗೆ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನವು ರೈಲ್ವೆ ಹಳಿ ದಾಟುವಾಗ ದಿಢೀರ್ ಕೆಟ್ಟು ನಿಂತಿದೆ. ವಾಹನದ ಗೇರ್ ಬಾಕ್ಸ್ ಕೆಲಸ ಮಾಡದ ಕಾರಣ, ಚಾಲಕನಿಗೆ ವಾಹನವನ್ನು ಮುಂದೆ ಚಲಿಸಲು ಸಾಧ್ಯವಾಗದೆ ಹಳಿಯ ಮಧ್ಯದಲ್ಲೇ ನಿಂತುಬಿಟ್ಟಿದೆ.

ದೇವದೂತರಂತೆ ಬಂದ ಗ್ರಾಮಸ್ಥರು

ವಾಹನ ಕೆಟ್ಟು ನಿಂತ ಕೆಲವೇ ಕ್ಷಣಗಳಲ್ಲಿ ಆ ಮಾರ್ಗವಾಗಿ ರೈಲು ಬರುವ ಸಮಯವಾಗಿತ್ತು. ವಾಹನದಲ್ಲಿ 25ಕ್ಕೂ ಹೆಚ್ಚು ಮುಗ್ಧ ಮಕ್ಕಳಿದ್ದ ಕಾರಣ ಕ್ಷಣಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅಪಾಯವನ್ನು ಅರಿತ ಸ್ಥಳೀಯ ಗ್ರಾಮಸ್ಥರು ಕ್ಷಣವೂ ಯೋಚಿಸದೆ ಹಳಿಯತ್ತ ಓಡಿಬಂದಿದ್ದಾರೆ. ತಮ್ಮ ಜೀವದ ಹಂಗು ತೊರೆದು, ಮಕ್ಕಳು ಒಳಗಿರುವಾಗಲೇ ವಾಹನವನ್ನು ಹಳಿಯಿಂದ ಪಕ್ಕಕ್ಕೆ ತಳ್ಳಿದ್ದಾರೆ.

ಗ್ರಾಮಸ್ಥರ ಸಮಯಪ್ರಜ್ಞೆ ಮತ್ತು ಚಾಕಚಕ್ಯತೆಯಿಂದಾಗಿ ನೂರಾರು ಕುಟುಂಬಗಳ ಕಣ್ಣೀರಿಗೆ ಕಾರಣವಾಗಬೇಕಿದ್ದ ಭಾರಿ ದುರಂತವೊಂದು ತಪ್ಪಿದಂತಾಗಿದೆ. ಕಳೆದ ಮಂಗಳವಾರ ಸಂಜೆಯೇ ಈ ಘಟನೆ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ. ಮಕ್ಕಳ ಪ್ರಾಣ ಉಳಿಸಿದ ಲಚ್ಯಾಣ ಗ್ರಾಮಸ್ಥರ ಕಾರ್ಯಕ್ಕೆ ಪೋಷಕರು ಹಾಗೂ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

PREV
Read more Articles on
click me!

Recommended Stories

ಮಂತ್ರಿಗಿರಿ ಸಿಗದ್ದಕ್ಕೆ ನೋವಿಲ್ಲ, ಹೀಗ್ಯಾಕೆ ಮಾಡಿದರೆಂಬ ಬೇಸರ: ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ
ರಾಜೀನಾಮೆ ವಾಪಸ್ ಪಡೆದ ಶಾಸಕ ಯಶವಂತರಾಯಗೌಡ ಪಾಟೀಲ್; ಸಚಿವ ಸಂಪುಟ ವಿಸ್ತರಣೆ ಪ್ರಹಸನಕ್ಕೆ ತೆರೆ!