ಕಾನ್‌ಸ್ಟೇಬಲ್‌ ನೇಮಕಾತಿಗೆ ಮರುಪರೀಕ್ಷೆ..? ನಿನ್ನೆ ಪರೀಕ್ಷೆ ಬರೆದವರಿಗೆ ಶುರುವಾಯ್ತು ಗೊಂದಲ

Published : Aug 03, 2026, 12:53 PM IST
vijayapura abvp protest

ಸಾರಾಂಶ

ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ನಡೆದಿದೆ. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಅಥವಾ ಒಎಂಆರ್ ಶೀಟ್ ಗೊಂದಲದ ವದಂತಿಗಳನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತಳ್ಳಿಹಾಕಿದ್ದು, ಅಭ್ಯರ್ಥಿಗಳಲ್ಲಿ ಮರುಪರೀಕ್ಷೆಯ ಬಗ್ಗೆ ಆತಂಕ ಮುಂದುವರೆದಿದೆ.

ವಿಜಯಪುರ/ಬೆಂಗಳೂರು: ನಿನ್ನೆಯಷ್ಟೇ ನಡೆದ ಸಿವಿಲ್ ಪೊಲೀಸ್ ಕಾನ್‌ಸ್ಟೇಬಲ್ (CPC) ನೇಮಕಾತಿ ಪರೀಕ್ಷೆಯ ಸುತ್ತ ಗೊಂದಲದ ಮೋಡಗಳು ಕವಿದಿವೆ. ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ವಿಜಯಪುರದಲ್ಲಿ ಬೃಹತ್ ಪ್ರತಿಭಟನೆ ವ್ಯಕ್ತವಾಗಿದ್ದರೆ, ಅತ್ತ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಈ ಬಗ್ಗೆ ಮಹತ್ವದ ಸ್ಪಷ್ಟನೆ ನೀಡಿದೆ. ಈ ನಡುವೆ ಅಭ್ಯರ್ಥಿಗಳಲ್ಲಿ ಮರುಪರೀಕ್ಷೆ ನಡೆಯುತ್ತಾ? ಎಂಬ ಆತಂಕ ಮನೆಮಾಡಿದೆ.

ವಿಜಯಪುರದಲ್ಲಿ ಎಬಿವಿಪಿ ಕಿಚ್ಚು

ಪರೀಕ್ಷೆ ವೇಳೆ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ನಡೆದ ಗಲಾಟೆ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ನಗರದಲ್ಲಿ ಎಬಿವಿಪಿ (ABVP) ಕಾರ್ಯಕರ್ತರು ಮತ್ತು ವಿದ್ಯಾರ್ಥಿಗಳು ಬೃಹತ್ ಪ್ರತಿಭಟನೆ ನಡೆಸಿದರು. ನಗರದ ಗಾಂಧಿ ಚೌಕ್‌ನಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಗಾಂಧಿ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ನಡೆಸಿದ ವಿದ್ಯಾರ್ಥಿಗಳು, ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು ಕೂಡಲೇ ಮರುಪರೀಕ್ಷೆ ನಡೆಸಬೇಕು ಎಂದು ಪಟ್ಟು ಹಿಡಿದರು.

ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಭಾರೀ ವಾಗ್ವಾದ ಹಾಗೂ ಜಟಾಪಟಿ ನಡೆಯಿತು. ಸರ್ಕಾರದ ವಿರುದ್ಧ ಪೋಸ್ಟರ್ ಪ್ರದರ್ಶಿಸಲು ಮುಂದಾದ ಯುವಕರ ಕೈಯಲ್ಲಿದ್ದ ಪೋಸ್ಟರ್‌ಗಳನ್ನು ಪೊಲೀಸರು ಕಸಿದುಕೊಂಡರು. ಪರಿಸ್ಥಿತಿ ಕೈಮೀರುತ್ತಿದ್ದಂತೆ ಪೊಲೀಸರು 10ಕ್ಕೂ ಅಧಿಕ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ವೇಳೆ ಪೊಲೀಸರು ವಿದ್ಯಾರ್ಥಿಗಳನ್ನು ವ್ಯಾನ್‌ಗೆ ಹತ್ತಿಸಲು ಹರಸಾಹಸ ಪಡಬೇಕಾಯಿತು.

ಪ್ರಶ್ನೆ ಪತ್ರಿಕೆ ಲೀಕ್ ವದಂತಿಗೆ ಕೆಇಎ ಬ್ರೇಕ್

ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಒಎಂಆರ್ (OMR) ಶೀಟ್ ಗೊಂದಲಕ್ಕೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ. ಪರೀಕ್ಷೆಯಲ್ಲಿ ಒಎಂಆರ್ ಶೀಟ್ ಸಂಖ್ಯೆ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆ ಒಂದೇ ಇರಬೇಕು ಎಂಬ ನಿಯಮವಿಲ್ಲ. ಸೀರಿಯಲ್ ನಂಬರ್ ಬೇರೆ ಬೇರೆಯಾಗಿರಬಹುದು. ಆ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ವರ್ಷನ್ ಕೋಡ್ ಮತ್ತು ಪ್ರಶ್ನೆ ಪತ್ರಿಕೆ ಸಂಖ್ಯೆಯನ್ನು ಒಎಂಆರ್‌ನಲ್ಲಿ ಪ್ರತ್ಯೇಕವಾಗಿ ನಮೂದಿಸಲು ಅವಕಾಶವಿರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ಅಭ್ಯರ್ಥಿಗಳಲ್ಲಿ ಮನವಿ ಮಾಡಿದ್ದಾರೆ.

ಮರುಪರೀಕ್ಷೆ ನಡೆಯುತ್ತಾ?

ಸದ್ಯದ ಪರಿಸ್ಥಿತಿಯಲ್ಲಿ ಕೆಇಎ ಪರೀಕ್ಷೆಯು ಪಾರದರ್ಶಕವಾಗಿ ನಡೆದಿದೆ ಎಂದು ಸಮರ್ಥಿಸಿಕೊಳ್ಳುತ್ತಿದೆ. ವಿಜಯಪುರ ಸೇರಿದಂತೆ ಕೆಲವು ಕೇಂದ್ರಗಳಲ್ಲಿ ನಡೆದಿದೆ ಎನ್ನಲಾದ ತಾಂತ್ರಿಕ ಗೊಂದಲ ಮತ್ತು ಗಲಾಟೆಗಳು ಅಭ್ಯರ್ಥಿಗಳಲ್ಲಿ ಸಂಶಯ ಹುಟ್ಟಿಸಿವೆ. ಪ್ರತಿಭಟನಾಕಾರರು ಮರುಪರೀಕ್ಷೆಗೆ ಪಟ್ಟು ಹಿಡಿದಿದ್ದರೂ, ಸರ್ಕಾರದ ಮಟ್ಟದಲ್ಲಿ ಅಥವಾ ಕೆಇಎ ವತಿಯಿಂದ ಮರುಪರೀಕ್ಷೆಯ ಬಗ್ಗೆ ಯಾವುದೇ ಅಧಿಕೃತ ಸೂಚನೆ ಬಂದಿಲ್ಲ. ಪರೀಕ್ಷಾ ಪ್ರಾಧಿಕಾರದ ಸ್ಪಷ್ಟನೆಯ ನಂತರವೂ ಅಭ್ಯರ್ಥಿಗಳ ಆಕ್ರೋಶ ತಣ್ಣಗಾಗದಿದ್ದರೆ ಮುಂದಿನ ದಿನಗಳಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಯಿದೆ.

PREV
Read more Articles on
click me!

Recommended Stories

ವಿಜಯಪುರದಲ್ಲಿ ನಡೆದ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲೂ ಅಕ್ರಮ?; ಲಾಠಿ ಚಾರ್ಜ್ ಖಂಡಿಸಿದ ಬಿಜೆಪಿ ಮುಖಂಡ ವಿಜುಗೌಡ
ಕಾನ್ಸ್‌ಟೇಬಲ್ ಪರೀಕ್ಷೆ ವೇಳೆ ಹಲವು ಅನುಮಾನ - ವಿಜಯಪುರದಲ್ಲಿ ಭುಗಿಲೆದ್ದ ಪರೀಕ್ಷಾರ್ಥಿಗಳ ಆಕ್ರೋಶ