ಮುದ್ದೇಬಿಹಾಳ: ಅಗ್ನಿಶಾಮಕ ಜಲವಾಹನಕ್ಕಿಲ್ಲ ಸುಗಮ ರಸ್ತೆ

By Web Desk  |  First Published Oct 20, 2019, 12:47 PM IST

ಅಗ್ನಿಶಾಮಕ ಜಲವಾಹನಕ್ಕಿಲ್ಲ ಸುಗಮ ಸಂಚಾರ ರಸ್ತೆ| ಸೌಕರ್ಯವಿಲ್ಲದೆ ಪರದಾಟ| ತುರ್ತು ಸಂದರ್ಭ ಎದುರಿಸಲು ಹರಸಾಹಸ| ಮಿನಿ ವಿಧಾನಸೌಧ ಪಕ್ಕದಲ್ಲಿ 2012-13ನೇ ಸಾಲಿನಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಲಾಗಿರುವ ಅಗ್ನಿಶಾಮಕ ಠಾಣೆಗೆ ಸೂಕ್ತ ಮೂಲ ಸೌಕರ್ಯ, ಜಲವಾಹನ ಸಂಚಾರಕ್ಕೆ ಸೂಕ್ತ ರಸ್ತೆ ಇಲ್ಲದೆ ಸಿಬ್ಬಂದಿ ಪರದಾಡುವಂತಾ​ಗಿದೆ| ಅಗ್ನಿ ಅವಘಡದಂತಹ ತುರ್ತು ಪರಿಸ್ಥಿತಿಯ ಸಂದರ್ಭ ಎದುರಿಸಲು ಹರಸಾಹಸ ಪಡುವಂತಾ​ಗಿದೆ| 


ಡಿ.ಬಿ.ವಡವಡಗಿ 

ಮುದ್ದೇಬಿಹಾಳ(ಅ.20): ಇಲ್ಲಿನ ಮಿನಿ ವಿಧಾನಸೌಧ ಪಕ್ಕದಲ್ಲಿ 2012-13ನೇ ಸಾಲಿನಲ್ಲಿ ಕೋಟ್ಯಂತರ ಹಣ ಖರ್ಚು ಮಾಡಿ ನಿರ್ಮಿಸಲಾಗಿರುವ ಅಗ್ನಿಶಾಮಕ ಠಾಣೆಗೆ ಸೂಕ್ತ ಮೂಲ ಸೌಕರ್ಯ, ಜಲವಾಹನ ಸಂಚಾರಕ್ಕೆ ಸೂಕ್ತ ರಸ್ತೆ ಇಲ್ಲದೆ ಸಿಬ್ಬಂದಿ ಪರದಾಡುವಂತಾ​ಗಿದೆ. ಅಗ್ನಿ ಅವಘಡದಂತಹ ತುರ್ತು ಪರಿಸ್ಥಿತಿಯ ಸಂದರ್ಭ ಎದುರಿಸಲು ಹರಸಾಹಸ ಪಡುವಂತಾ​ಗಿದೆ. ಪೂರ್ವಯೋಜನೆ ಇಲ್ಲದೆ ತರಾತುರಿಯಲ್ಲಿ ಠಾಣೆ ನಿರ್ಮಿಸಿದ್ದೇ ಸಿಬ್ಬಂದಿಗೆ ಶಾಪವಾಗಿ ಪರಿ​ಣ​ಮಿ​ಸಿದೆ.

Latest Videos

undefined

ಈ ಠಾಣೆ ಮೊದಲು ಎಪಿಎಂಸಿಯಲ್ಲಿ ತಾತ್ಕಾಲಿಕ ಕಾರ್ಯನಿರ್ವಹಿಸುತ್ತಿತ್ತು. ಹೋರಾಟದ ಫಲವಾಗಿ ಆರೇಳು ವರ್ಷಗಳ ಹಿಂದೆ ಮಿನಿ ವಿಧಾನಸೌಧ ಪಕ್ಕದ ಸರ್ಕಾರಿ ಜಾಗ​ದಲ್ಲಿ ನಿರ್ಮಿಸಲಾಯಿತು. 27 ಸಿಬ್ಬಂದಿ ಮಂಜೂರಾಗಿದ್ದು 23 ಸಿಬ್ಬಂದಿ ಇದ್ದಾರೆ. ಎರಡು ಜಲವಾಹನ, ಒಂದು ಜಲಬೈಕ್‌ ಇದೆ. ಮೊದಲು ಜಲವಾಹನಕ್ಕೂ ನೀರಿಗೆ ಪರ​ದಾ​ಟ​ವಿತ್ತು. ನಂತರ ನೀರಿನ ಸೌಲಭ್ಯ ತಕ್ಕಮಟ್ಟಿಗೆ ಕಲ್ಪಿ​ಸ​ಲಾ​ಗಿದೆ. ಸಿಬ್ಬಂದಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆದರೆ ಜಲವಾಹನ ಸಂಚಾರಕ್ಕೆ ರಸ್ತೆ ಸೌಲಭ್ಯವಿಲ್ಲದೆ ಸಮಸ್ಯೆಯಾಗಿದೆ. ಜಲವಾಹನ ಪಕ್ಕದ ಹುಡ್ಕೋಗೆ ಹೊಂದಿಕೊಂಡಿರುವ ಕಿರಿದಾದ ರಸ್ತೆಯನ್ನೇ ಬಳಸಬೇಕು. ಹೀಗೆ ಸಂಚರಿಸುವಾಗ ಠಾಣೆ ಪಕ್ಕದಲ್ಲೇ ಕಿರಿದಾಗಿರುವ ಮೊದಲ ಕ್ರಾಸ್‌ ತುಂಬಾ ಅಪಾಯಕಾರಿ. ಸ್ವಲ್ಪ ನಿರ್ಲ​ಕ್ಷ್ಯ​ವಾ​ದರೂ ವಾಹನ ಪಲ್ಟಿ ಸಂಭ​ವ​ವಿದೆ. ತಿರುವು ಕ್ರಾಸ್‌ ಮಾಡಿ ಹೊರಟರೆ ಇಕ್ಕಟ್ಟಾದ ರಸ್ತೆ ಮೇಲೆ ವಾಹನ ದಟ್ಟಣೆ. ಇದನ್ನೂ ತಪ್ಪಿಸಿ ಬಂದರೆ ಅಪಾಯಕಾರಿ ಹುಡ್ಕೋ ಸಂಪರ್ಕಿಸುವ ಮುಖ್ಯ ರಸ್ತೆ ಕ್ರಾಸ್‌ ಬರುತ್ತದೆ. ಅವಸರದಲ್ಲಿ ಜೋರಾಗಿ ವಾಹನ ಹೋಗುವಾಗ ದಿಢೀರ್‌ ಅಕ್ಕಪಕ್ಕದಿಂದ ಬೇರೆ ವಾಹನಗಳು ಅಡ್ಡ ಬಂದರೆ ಅಪಘಾತ ಖಚಿತ ಎನ್ನುವಂತಿದೆ.

ಸಮಸ್ಯೆ ಬಗೆಹರಿಸಬೇ​ಕೆಂದರೆ ಮಿನಿ ವಿಧಾನಸೌಧ ಮುಂಭಾಗದ ನೇರ ರಸ್ತೆ. ಇದನ್ನು ದುರಸ್ತಿ ಮಾಡಿ ಜಲವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡುವುದು. ಮಿನಿ ವಿಧಾನಸೌಧ ವ್ಯಾಪ್ತಿಯ ಕೊನೆಯವರೆಗೆ ರಸ್ತೆ ನಿರ್ಮಿಸಲಾಗಿದೆ. ಈ ರಸ್ತೆ ಕೊನೆ ಅಂಚಿನಿಂದ ಠಾಣೆವರೆಗೆ ಅಂದಾಜು 100-150 ಮೀಟರ್‌ ರಸ್ತೆ ನಿರ್ಮಿಸಿದರೆ ಎಲ್ಲ ಸಮಸ್ಯೆಗೂ ಪರಿಹಾರ ದೊರಕುತ್ತದೆ. ಜಲವಾಹನವೂ ಸುಲಭವಾಗಿ ಚಲಿಸಿ, ತುರ್ತು ಸಂದರ್ಭಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಅವಕಾಶವಾಗು​ತ್ತದೆ.

ಆದರೆ ಈ ರಸ್ತೆ ನಿರ್ಮಿಸಲು 2013 ರಿಂದಲೂ ಠಾಣೆ ಸಿಬ್ಬಂದಿ ಜಿಲ್ಲಾಧಿಕಾರಿಗೆ, ತಹಸೀಲ್ದಾರ್‌ಗೆ, ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋ​ಜ​ವಾ​ಗಿಲ್ಲ. ಕೇವಲ 100-150 ಮೀಟರ್‌ ಅಂತರದ ರಸ್ತೆ ನಿರ್ಮಾಣವಾಗದ್ದಕ್ಕೆ 300-400 ಮೀಟರ್‌ ಅಪಾಯಕಾರಿ, ಕಿರಿದಾದ ರಸ್ತೆಯಲ್ಲೇ ಸಂಚರಿಸುವ ಅನಿವಾರ್ಯತೆ ಉಂಟಾಗಿರುವುದು ವಿಪರ್ಯಾಸ ಎನ್ನಿಸಿಕೊಂಡಿದೆ.

ಅಗ್ನಿಶಾಮಕ ಸೇವೆಯನ್ನು ತುರ್ತು ಸೇವೆ ವ್ಯಾಪ್ತಿಯಲ್ಲಿ ತರಲಾಗಿದೆ. ಆದರೆ ತುರ್ತಾಗಿ ಸಂಚರಿಸಬೇಕಾದರೆ ಉತ್ತಮ ರಸ್ತೆ ಸೌಲಭ್ಯ ಇರಬೇಕು. ಮುಖ್ಯವಾಗಿ ಇದೇ ಸೌಲಭ್ಯ ಕೊಡದೆ ತುರ್ತು ಸೇವೆ ಒದಗಿಸಿ ಎಂದು ಸಿಬ್ಬಂದಿ ಮೇಲೆ ಎಲ್ಲಾ ಕಡೆಯಿಂದ ಒತ್ತಡ ಹೇರುವುದು ಯಾವ ನ್ಯಾಯ ಎನ್ನುವುದು ಅಲ್ಲಿನ ಸಿಬ್ಬಂದಿ ಅಳಲು. ಜಿಲ್ಲಾಧಿಕಾರಿಗಳು, ಶಾಸಕರು ಈಗಲಾದರೂ ಗಮನಹರಿಸಿ ಈ ಠಾಣೆಯ ರಸ್ತೆ ಸಮಸ್ಯೆ ಬಗೆಹರಿಸಬೇ​ಕೆ​ನ್ನು​ವುದು ಸಾಮಾನ್ಯ ಜನರ ಆಶಯ.

ಸುತ್ತುಬಳಸಿನ ಅಪಾಯಕಾರಿ ರಸ್ತೆಯಲ್ಲಿ ಜಲವಾಹನ ಒಯ್ಯುವ ಸಮಸ್ಯೆ ಆ ವಾಹನ ಚಾಲಕರಿಗೇ ಗೊತ್ತು. ನೇರ ರಸ್ತೆ ಸಂಪರ್ಕ ಸೌಲಭ್ಯ ಕಲ್ಪಿಸುವಂತೆ ಮೇಲಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿಕೊಳ್ಳಲಾಗಿದೆ. ಸ್ಪಂದನೆ ಸಿಕ್ಕಿಲ್ಲ. ಆದರೂ ಇಂಥ ಸಂಕಷ್ಟದ ಸ್ಥಿತಿಯಲ್ಲೇ ತುರ್ತು ಕರೆಗಳಿಗೆ ಹರಸಾಹಸಪಟ್ಟು ಸ್ಪಂದಿಸುತ್ತಿದ್ದೇವೆ ಎಂದು ಪ್ರಭಾರ ಠಾಣಾಧಿಕಾರಿ ರಾಜೇಂದ್ರ ಪೋದ್ದಾರ ಅವರು ಹೇಳಿದ್ದಾರೆ. 

ಮಿನಿ ವಿಧಾನಸೌಧ ಮುಂದೆ ಅರ್ಧ ರಸ್ತೆ ನಿರ್ಮಿಸಿದ್ದು ಇನ್ನರ್ಧ ರಸ್ತೆ ನಿರ್ಮಿಸಿದರೆ ಜಲವಾಹನ ಸುಲ​ಭ​ವಾಗಿ ಸಂಚರಿಸಿ ಅಗ್ನಿಶಾಮಕ ಠಾಣೆಯ ಸ್ಥಾಪನೆಯ ಉದ್ದೇಶ ಈಡೇರಬಹುದಾಗಿದೆ. ಆದರೆ ಇಚ್ಛಾಶಕ್ತಿ ಕೊರತೆಯಿಂದ ಆರೇಳು ವರ್ಷಗಳಿಂದ ಯೋಜನೆ ನನೆಗುದಿಗೆ ಬಿದ್ದಿದೆ ಎಂದು ನಗರಾಭಿವೃದ್ಧಿ ಯುವ ಹೋರಾಟ ವೇದಿಕೆಯ ಸಂಚಾಲಕ ಬಸವರಾಜ ನಂದಿಕೇಶ್ವರಮಠ ಅವರು ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ಅವರು, ರಸ್ತೆ ಸಂಪರ್ಕದ ಬಗ್ಗೆ ಠಾಣೆಯವರು ಮನವಿ ಸಲ್ಲಿಸಿದ್ದಾರೆ. ಶಾಸಕರ ಕಚೇರಿಗೆ ಬಂದು ಸಮಸ್ಯೆ ಬಗ್ಗೆ ತಿಳಿಸುವಂತೆ ಹೇಳಿದ್ದೇನೆ. ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತೇನೆ ಎಂದು ಹೇಳಿದ್ದಾರೆ. 
 

click me!