ನಾನು ಕಟ್ಟಿದ ಸೇತುವೆ ಬಿದ್ದಿರುವುದು ನೋವು ತಂದಿದೆ: ತೂಗು ಸೇತುವೆ ತಜ್ಞ

By Kannadaprabha NewsFirst Published Nov 13, 2019, 2:13 PM IST
Highlights

ನನ್ನ ಜೀವಮಾನದಲ್ಲೇ ನಾನು ನಿರ್ಮಿಸಿದ ತೂಗು ಸೇತುವೆಗಳು ಬಿದ್ದಿರುವುದು ತುಂಬಾ ನೋವು ತಂದಿದೆ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಗಿರೀಶ್‌ ಭಾರದ್ವಾಜ್‌ ಬೇಸರ ವ್ಯಕ್ತಪಡಿಸಿದರು.. 

ಯಲ್ಲಾಪುರ (ನ.13) :  ನಾನು ನಿರ್ಮಿಸಿದ ತೂಗು ಸೇತುವೆಗಳು ನನ್ನ ಜೀವಮಾನದಲ್ಲೇ ಬಿದ್ದಿರುವುದು ತುಂಬಾ ನೋವು ತಂದಿದೆ. ಕೆಲಸ ಮಾಡುವ ಸಮಯದಲ್ಲಿ , ಕೆಲಸದ ಸ್ಥಳದಲ್ಲೇ ಉಳಿದು, ನಮ್ಮ ಮರಣದ ನಂತರವೂ ನಮ್ಮ ಹೆಸರನ್ನು ಈ ಸೇತುವೆಗಳು ಉಳಿಸುತ್ತವೆ ಎಂದು ಕೆಲಸಗಾರರನ್ನು ಹುರಿದುಂಬಿಸುತ್ತಿದ್ದೆ. ಆದರೆ ಈಗ ನಮ್ಮೆದುರಿಗೆ ಸೇತುವೆಗಳು ನೆರೆ ಪ್ರವಾಹಕ್ಕೆ ಸಿಲುಕಿ ಹಾಳಾಗುತ್ತಿರುವುದು ತುಂಬಾ ಬೇಸರದ ಸಂಗತಿ ಎಂದು ಪದ್ಮಶ್ರೀ ಪ್ರಶಸ್ತಿ ವಿಜೇತ ಗಿರೀಶ್‌ ಭಾರದ್ವಾಜ್‌ ಬೇಸರ ವ್ಯಕ್ತಪಡಿಸಿದರು.

ತಾಲೂಕಿನ ಗಡಿಭಾಗವಾದ ಕಲ್ಲೇಶ್ವರ- ರಾಮನಗುಳಿ ನಡುವೆ ಗಂಗಾವಳಿ ನದಿಗೆ 2008ರಲ್ಲಿ ನಿರ್ಮಿಸಿದ್ದ ತೂಗು ಸೇತುವೆಯು ಗಂಗಾವಳಿ ಮಹಾಪೂರಕ್ಕೆ ಕೊಚ್ಚಿಹೋಗಿದ್ದು, ಅದರ ಪರಿಶೀಲನೆ ಹಾಗೂ ನೂತನ ಸೇತುವೆ ನಿರ್ಮಾಣದ ಬಗ್ಗೆ ಪರಿಶೀಲಿಸಲು ಕಲ್ಲೇಶ್ವರಕ್ಕೆ ಆಗಮಿಸಿದ ವೇಳೆ ಅವರು ಮಾತನಾಡಿದರು. ನೂತನವಾಗಿ ಸೇತುವೆ ನಿರ್ಮಿಸುವ ಬಗ್ಗೆ ಹಿಂದಿನ ಸೇತುವೆಯ ಕೆಲ ಅಂಶಗಳನ್ನು ಬಳಸಿಕೊಂಡು, ಹೊಸ ತಂತ್ರಜ್ಞಾನದ ಮುಖಾಂತರ ನಿರ್ಮಿಸಬಹುದೆ ಎಂದು ತಜ್ಞರ ಸಲಹೆ ಪಡೆದು ಸರ್ಕಾರಕ್ಕೆ ವಿಸ್ತ್ರತ ಮಾಹಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಗಂಗಾವಳಿ ನದಿಗೆ ಸೇತುವೆಯಿಲ್ಲದ ಕಾರಣ ಜನ ದೋಣಿ ಅವಲಂಬಿಸಿದ್ದು, ವಾಹನ ಓಡಾಟಕ್ಕೆ ಸುತ್ತು ಬಳಸಿ ತಿರುಗಾಡುವ ಸ್ಥಿತಿ ಇಲ್ಲಿ ನಿರ್ಮಾಣವಾಗಿದೆ. ಇದೇ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಗೋಪಣ್ಣ ವೈದ್ಯ, ಶಿವರಾಮ ಗಾಂವ್ಕರ್‌ ಕನಕನಹಳ್ಳಿ, ಜಿ.ವಿ. ಹೆಗಡೆ, ನಾರಾಯಣ ಹೆಗಡೆ ಮತ್ತಿತರ ಸ್ಥಳೀಯ ಪ್ರಮುಖರು ಹಾಜರಿದ್ದರು.

click me!