ಮೀನುಗಾರರಿಗೆ ಗುರುತಿನ ಚೀಟಿ : ಬಯೋಮೆಟ್ರಿಕ್ ಅಟೆಂಡೆನ್ಸ್

By Kannadaprabha NewsFirst Published Oct 7, 2019, 3:08 PM IST
Highlights

ಮೀನುಗಾರಿಕೆ ನಡೆಸುವ ಸ್ಥಳೀಯ ಬೋಟ್‌ಗಳಲ್ಲಿ ಕೆಲಸ ಮಾಡಲು ಒಡಿಶಾ, ಜಾರ್ಖಂಡ, ಬಿಹಾರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಇಂತಹ ಕಾರ್ಮಿಕರ ಸುರಕ್ಷತೆ ಹಾಗೂ ಅವರು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಮೀನುಗಾರಿಕೆ ಇಲಾಖೆಯ ಮೂಲಕ ಗುರುತಿನ ಚೀಟಿ ವಿತರಿಸುವ ಯೋಜನೆ ರೂಪಿಸಿದೆ.

ಕಾರವಾರ [ಅ.07] : ಸ್ಥಳೀಯ ಮೀನುಗಾರಿಕೆ ಬೋಟ್‌ಗಳಲ್ಲಿ ಕೆಲಸ ಮಾಡುವ 10,000ಕ್ಕೂ ಅಧಿಕ ಹೊರ ರಾಜ್ಯದ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ.

ಜಿಲ್ಲೆಯ ವಿವಿಧ ಬಂದರುಗಳಲ್ಲಿ ಮೀನುಗಾರಿಕೆ ನಡೆಸುವ ಸ್ಥಳೀಯ ಬೋಟ್‌ಗಳಲ್ಲಿ ಕೆಲಸ ಮಾಡಲು ಒಡಿಶಾ, ಜಾರ್ಖಂಡ, ಬಿಹಾರ ರಾಜ್ಯಗಳಿಂದ ಕಾರ್ಮಿಕರು ಆಗಮಿಸುತ್ತಾರೆ. ಇಂತಹ ಕಾರ್ಮಿಕರ ಸುರಕ್ಷತೆ ಹಾಗೂ ಅವರು ಯಾವುದೇ ಕಾನೂನುಬಾಹಿರ ಚಟುವಟಿಕೆಯಲ್ಲಿ ತೊಡಗಬಾರದೆಂಬ ಉದ್ದೇಶದಿಂದ ಮೀನುಗಾರಿಕೆ ಇಲಾಖೆಯ ಮೂಲಕ ಗುರುತಿನ ಚೀಟಿ ವಿತರಿಸುವ ಯೋಜನೆ ರೂಪಿಸಿದ್ದು, 10 ಸಾವಿರ ಮೀನುಗಾರಿಕಾ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ.

ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಪಿ. ನಾಗರಾಜ್‌ ನೇತೃತ್ವದಲ್ಲಿ ಈಗಾಗಲೇ ಮೀನುಗಾರಿಕೆ ಬೋಟ್‌ಗಳಿಗೆ ಪರವಾನಗಿ ನೀಡುವ ಹಾಗೂ ಪರವಾನಗಿ ಇಲ್ಲದ ಬೋಟುಗಳನ್ನು ವಶಕ್ಕೆ ಪಡೆಯುವ ಪ್ರಕ್ರಿಯೆ ನಡೆದಿದೆ. ಇದೀಗ ಹೊರ ರಾಜ್ಯದ ಮೀನುಗಾರಿಕೆಗೆ ಆಗಮಿಸುವ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಗುತ್ತಿದೆ. ಮೀನುಗಾರಿಕೆ ತೆರಳುವ ಎಲ್ಲ ಕಾರ್ಮಿಕರು ಕಡ್ಡಾಯವಾಗಿ ಗುರುತಿನ ಚೀಟಿ ಹೊಂದಿರಬೇಕು. ಆದರೆ ಈ ವರೆಗೆ ಬೋಟ್‌ ಮಾಲೀಕರು ನೀಡುವ ಗುರುತಿನ ಚೀಟಿ ಅಥವಾ ಅವರ ಆಧಾರ್‌ ಕಾರ್ಡ್‌ ಇನ್ನಿತರ ಗುರುತಿನ ದಾಖಲೆಯ ನಕಲು ಪ್ರತಿಯನ್ನು ಹೊಂದಿರುತ್ತಿದ್ದರು. ಇದರಿಂದ ನೀರಿಗೆ ಬಿದ್ದು ಒದ್ದೆಯಾಗಬಹುದು ಅಥವಾ ಹಾಳಾಗುವ ಸಾಧ್ಯತೆ ಇತ್ತು. ಇದೀಗ ಕಾರ್ಮಿಕರ ಆಧಾರ ಸಂಖ್ಯೆಯ ಸಹಿತ ಕ್ಯೂಆರ್‌ ಕೋಡ್‌ನೊಂದಿಗೆ ಗುರುತಿನ ಚೀಟಿ ವಿತರಿಸುವುದರಿಂದ ಕಾರ್ಮಿಕರ ಸಂಪೂರ್ಣ ವಿವರ ಲಭ್ಯವಾಗಲಿದೆ. ಅಲ್ಲದೆ ಇದು ಒದ್ದೆಯಾದರೂ ಹಾಳಾಗದ ಗುರುತಿನ ಚೀಟಿಯಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸ್ಥಳೀಯ ಮೀನುಗಾರರಿಗೆ ಬಯೋಮೆಟ್ರಿಕ್‌ ವ್ಯವಸ್ಥೆಯಿದ್ದು, ಕರಾವಳಿ ಕಾವಲು ಪೊಲೀಸರು ಅಥವಾ ಕರಾವಳಿ ಭದ್ರತಾ ಪಡೆ ಇಲಾಖೆಯಲ್ಲಿ ಸ್ಥಳೀಯ ಮೀನುಗಾರರ ಮಾಹಿತಿ ದಾಖಲಾಗಿರುತ್ತದೆ. ಆದರೆ ಹೊರ ರಾಜ್ಯದ ಮೀನುಗಾರ ಕಾರ್ಮಿಕರಿಂದ ಆಗುತ್ತಿದ್ದ ಗೊಂದಲ ಗುರುತಿನ ಚೀಟಿ ವಿತರಣೆಯಿಂದ ನಿವಾರಣೆಯಾದಂತಾಗಿದೆ.

ಡಾ. ಕೆ. ಹರೀಶಕುಮಾರ್‌, ಜಿಲ್ಲಾಧಿಕಾರಿ

ಜಿಲ್ಲಾಧಿಕಾರಿ ಮಾರ್ಗದರ್ಶನದಲ್ಲಿ ಕಾರ್ಮಿಕರ ಆಧಾರ್‌ ಸಂಖ್ಯೆಯ ಸಹಿತ ಕ್ಯೂಆರ್‌ ಕೋಡ್‌ನೊಂದಿಗೆ ಗುರುತಿನ ಚೀಟಿ ವಿತರಿಸುವುದರಿಂದ ಕಾರ್ಮಿಕರ ಸಂಪೂರ್ಣ ವಿವರ ಲಭ್ಯವಾಗಲಿದೆ.

ಪಿ. ನಾಗರಾಜ, ಮೀನುಗಾರಿಕಾ ಉಪ ನಿರ್ದೇಶಕ

click me!