20 ವರ್ಷಗಳ ಬಳಿಕ ಮತ್ತೆ ಕಚೇರಿಗೆ ಬಂದ ಅಧಿಕಾರಿ..! ಚಿಂತೆಗೆ ಬಿದ್ದ ಅಂಕೋಲಾ, ಯಲ್ಲಾಪುರ ಜನ

Published : Aug 17, 2026, 08:07 PM IST
hubballi-ankola railway project

ಸಾರಾಂಶ

ಕಳೆದ 20 ವರ್ಷಗಳಿಂದ ಖಾಲಿ ಇದ್ದ ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಗೆ ಕೆಎಎಸ್ ಅಧಿಕಾರಿ ರವಿಚಂದ್ರ ನಾಯಕ ಅವರ ನೇಮಕವಾಗಿದ್ದು, ನೆನೆಗುದಿಗೆ ಬಿದ್ದಿದ್ದ ಈ ರೈಲ್ವೆ ಯೋಜನೆಗೆ ಮತ್ತೆ ಚಾಲನೆ ಸಿಕ್ಕಂತಾಗಿದೆ.

ಅಂಕೋಲಾ: ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಉತ್ತರ ಕನ್ನಡ ಮತ್ತು ಧಾರವಾಡ ಜಿಲ್ಲೆಗಳ ಜನರ ಕನಸಿನ ಯೋಜನೆಯಾದ 'ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆ'ಗೆ (Hubballi-Ankola Railway Project) ಹೊಸ ಕಳೆ ಬಂದಿದೆ. ಕಳೆದ 20 ವರ್ಷಗಳಿಂದ ಬಿಕೋ ಎನ್ನುತ್ತಿದ್ದ ಸರ್ಕಾರಿ ಕಚೇರಿಯೊಂದಕ್ಕೆ ಈಗ ಕೊನೆಗೂ ಅಧಿಕಾರಿಯೊಬ್ಬರು ನೇಮಕವಾಗುವ ಮೂಲಕ ಯೋಜನೆಗೆ ಮರುಜೀವ ಸಿಕ್ಕಂತಾಗಿದೆ.

20 ವರ್ಷಗಳ ನಂತರ ಬಂದ ಅಧಿಕಾರಿ!

ಉತ್ತರ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ 1998ರಲ್ಲಿ ಹುಬ್ಬಳ್ಳಿ-ಅಂಕೋಲಾ ರೈಲ್ವೆ ವಿಶೇಷ ಭೂ ಸ್ವಾಧೀನಾಧಿಕಾರಿ ಕಚೇರಿಯನ್ನು ಆರಂಭಿಸಲಾಗಿತ್ತು. ಆದರೆ 2006ರಲ್ಲಿ ಯೋಜನೆಗೆ ಕಾನೂನು ತೊಡಕುಗಳು ಮತ್ತು ಪರಿಸರ ಕಾರಣಗಳಿಂದ ತಡೆ ಬಂದ ಮೇಲೆ ಈ ಕಚೇರಿ ಕೇವಲ ಹೆಸರಿಗಷ್ಟೇ ಇತ್ತು. ಕೆಲಸವಿಲ್ಲದ ಕಾರಣ ಇಲ್ಲಿಗೆ ನೇಮಕವಾಗಿದ್ದ ಅಧಿಕಾರಿಗಳು ಬೇರೆಡೆಗೆ ವರ್ಗಾವಣೆ ಆಗಿದ್ದರು. ಕಳೆದ ಎರಡು ದಶಕಗಳಿಂದ ಕೇವಲ 'ಪ್ರಭಾರಿ' (In-charge) ಅಧಿಕಾರಿಗಳೇ ಈ ಹುದ್ದೆಯನ್ನು ನಿಭಾಯಿಸುತ್ತಿದ್ದರು.

ಸದ್ಯ ರಾಜ್ಯ ಸರ್ಕಾರವು ಕೆಎಎಸ್ (KAS) ಆಯ್ಕೆ ಶ್ರೇಣಿಯ ಅಧಿಕಾರಿ ರವಿಚಂದ್ರ ನಾಯಕ ಅವರನ್ನು ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ನೇಮಕ ಮಾಡಿದೆ. ಇದರೊಂದಿಗೆ 20 ವರ್ಷಗಳ ನಂತರ ಈ ಕಚೇರಿಗೆ ಪೂರ್ಣಾವಧಿ ಅಧಿಕಾರಿ ಬಂದಂತಾಗಿದೆ.

ಭೂ ಸ್ವಾಧೀನ ಪ್ರಕ್ರಿಯೆಗೆ ಚಾಲನೆ?

ಇತ್ತೀಚೆಗಷ್ಟೇ ನೈಋತ್ಯ ರೈಲ್ವೆಯು ಈ ಯೋಜನೆಗಾಗಿ ಭೂ ಸ್ವಾಧೀನಗೊಳ್ಳಲಿರುವ ಗ್ರಾಮಗಳ ಪಟ್ಟಿಯನ್ನು ಪ್ರಕಟಿಸಿತ್ತು. ಇದರಿಂದಾಗಿ ಯಲ್ಲಾಪುರ ಮತ್ತು ಅಂಕೋಲಾ ಭಾಗದ ಜನರಲ್ಲಿ ಕುತೂಹಲ ಮೂಡಿದೆ. 1998 ರಿಂದ 2006ರ ನಡುವೆ ಹುಬ್ಬಳ್ಳಿ ಮತ್ತು ಕಲಘಟಗಿ ಭಾಗದ ಭೂ ಸ್ವಾಧೀನ ಪ್ರಕ್ರಿಯೆ ನಡೆದಿತ್ತು. ಈಗ ಅಂಕೋಲಾ ಮತ್ತು ಯಲ್ಲಾಪುರ ಭಾಗದ ಅರಣ್ಯ ಹಾಗೂ ಖಾಸಗಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುವ ಜವಾಬ್ದಾರಿ ಹೊಸ ಅಧಿಕಾರಿಯ ಮೇಲಿದೆ.

ರೈಲ್ವೆ ಇಲಾಖೆ ಪ್ರಕಟಿಸಿರುವ ಪಟ್ಟಿಯಲ್ಲಿ ರಾಷ್ಟ್ರೀಯ ಹೆದ್ದಾರಿ 52 ರಿಂದ ದೂರದಲ್ಲಿರುವ ಕಳಚೆ, ತೆಲಂಗಾರ ಮುಂತಾದ ಗ್ರಾಮಗಳ ಹೆಸರೂ ಸೇರಿದೆ. ಇದರಿಂದಾಗಿ ರೈಲ್ವೆ ಮಾರ್ಗ ನಿಖರವಾಗಿ ಎಲ್ಲಿಂದ ಹಾದು ಹೋಗಲಿದೆ ಎಂಬ ಬಗ್ಗೆ ಜನರಲ್ಲಿ ಸ್ಪಷ್ಟತೆ ಇಲ್ಲ. ಈ ಗೊಂದಲಗಳ ನಡುವೆಯೇ ಭೂ ಸ್ವಾಧೀನಾಧಿಕಾರಿಗಳ ನೇಮಕವಾಗಿರುವುದು ರೈಲ್ವೆ ಮಾರ್ಗ ನಿರ್ಮಾಣದ ನಿಟ್ಟಿನಲ್ಲಿ ದೊಡ್ಡ ಹೆಜ್ಜೆ ಎನ್ನಲಾಗಿದೆ. ಒಟ್ಟಾರೆಯಾಗಿ 20 ವರ್ಷಗಳಿಂದ ಧೂಳು ಹಿಡಿಯುತ್ತಿದ್ದ ಕಚೇರಿ ಈಗ ಮತ್ತೆ ಚಟುವಟಿಕೆಯಿಂದ ಕೂಡಲಿದ್ದು, ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆ ಹಳಿಗೆ ಬರುತ್ತಾ ಎಂಬ ನಿರೀಕ್ಷೆಯಲ್ಲಿ ಜನರಿದ್ದಾರೆ.

PREV
Read more Articles on
click me!

Recommended Stories

ಕರ್ನಾಟಕದ ಕರಾವಳಿಯಲ್ಲಿ ಗಣನೀಯವಾಗಿ ಕ್ಷೀಣಿಸುತ್ತಿದೆ ಕಪ್ಪೆ ಸಂತತಿ! ಯಾವುದರ ಸಂಕೇತ?
ಉತ್ತರಕನ್ನಡದಲ್ಲಿ ಉಲ್ಟಾ, ವಿಜಯಪುರದಲ್ಲಿ ಅರ್ಧಕ್ಕೆ ಹಾರಾಡಿದ ರಾಷ್ಟ್ರಧ್ವಜ!