
ಉಡುಪಿ (ನ.25) ಪ್ರಧಾನಿ ನರೇಂದ್ರ ಮೋದಿ ನವೆಂಬರ್ 28 ರಂದು ಉಡುಪಿಗೆ ಭೇಟಿ ನೀಡುತ್ತಿದ್ದಾರೆ. ಉಡುಪಿ ಶ್ರೀಕೃಷ್ಣ ಮಠಕ್ಕೆ ಬೇಟಿ ನೀಡಲಿರುವ ಮೋದಿ, ಗೀತ ಪಾರಾಯಣದಲ್ಲೂ ಪಾಲ್ಗೊಳ್ಳಲಿದ್ದಾರೆ. ಮೋದಿ ಭೇಟಿ ಹಿನ್ನಲೆಯಲ್ಲಿ ಈಗಾಗಲೇ ಭದ್ರತಾ ತಂಡಗಳು ಉಡುಪಿಯಲ್ಲಿ ಭಾರಿ ಬಿಗಿ ಭದ್ರತೆ ಕೈಗೊಂಡಿದೆ. ಇತ್ತ ಉಡುಪಿ ಜಿಲ್ಲಾಧಿಕಾರಿ ಇದೀಗ ಮೋದಿ ವೀಕ್ಷಣಗೆ ಆಗಮಿಸುವ, ಮೋದಿ ಸಂಚರಿಸುವ ಮಾರ್ಗಗಳಲ್ಲಿ ಹಲವು ನಿರ್ಬಂಧ ಹೇರಿ ಆದೇಶ ಹೊರಡಿಸಿದ್ದಾರೆ. ಮೋದಿ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಹಲವು ವಸ್ತುಗಳನ್ನು ತರದಂತೆ ನಿರ್ಬಂಧ ಹೇರಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಶ್ರೀ ಕೃಷ್ಣ ಮಠ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿಕೆ ಶಿಷ್ಟಾಚಾರ ಪಾಲಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತ( BNSS)2023, ಸೆಕ್ಷನ್ 163ರ ಅನ್ವಯ ಆದೇಶ ಹೊರಡಿಸಿದ್ದಾರೆ. ಪ್ರಧಾನಿ ಮೋದಿ ಮಂಗಳೂರಿನಿಂದ ಉಡುಪಿಗೆ ಬಂದಿಳಿಯುವ ಹೆಲಿಪ್ಯಾಡ್ ವಠಾರ, ಶ್ರೀ ಕೃಷ್ಣ ಮಠ ವಠಾರ, ಹಾಗೂ ಪ್ರವಾಸಿ ಮಂದಿರದ ಸುತ್ತಮುತ್ತ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲು ಆದೇಶ ನೀಡಲಾಗಿದೆ.ನವೆಂಬರ್ 28 ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಅಂಗಡಿ ಮುಚ್ಚುವಂತೆ ನಡೆಸುವಂತೆ ಸೂಚನೆ ನೀಡಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಹೆಲಿಪ್ಯಾಡ್‌ನಲ್ಲಿ ಇಳಿದು ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ. ಪ್ರಧಾನಿ ಮೋದಿ ಉಡುಪಿಯಲ್ಲಿ ಸಂಚರಿಸುವ ಮಾರ್ಗದ ಇಕ್ಕೆಲಗಳ ಅಂಗಡಿಗಳನ್ನು ಬಂದ್ ಮಾಡಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಪ್ರಧಾನಿ ಮೋದಿ ಭೇಟಿಯಿಂದ ಉಡುಪಿಯಲ್ಲಿ ನವೆಂಬರ್ 26ರ ಬೆಳಗ್ಗೆ 6 ಗಂಟೆಯಿಂದ ನವಂಬರ್ 28 ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ. ಇದು ನೋ ಫ್ಲೈ ಝೋನ್ ಎಂದು ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಫೋಟೋಗ್ರಫಿ, ವಿಡಿಯೋಗ್ರಫಿ ಡ್ರೋನ್ ಸೇರಿದಂತೆ ಯಾವುದೇ ಡ್ರೋನ್ ಹಾರಾಟಕ್ಕೆ ಅವಕಾಶವಿಲ್ಲ.
ಪ್ರಧಾನಿಗಳ ವೀಕ್ಷಣೆಗೆ ಬರುವ ಸಾರ್ವಜನಿಕರಿಗೂ ಜಿಲ್ಲಾಧಿಕಾರಿಗಳು ಹಲವು ಸೂಚನೆ ನೀಡಿದ್ದಾರೆ. ಮೋದಿ ವೀಕ್ಷಣೆಗೆ ಆಗಮಿಸಿರು ಸಾರ್ವಜನಿಕರು, ಬ್ಯಾಗ್, ನೀರಿನ ಬಾಟಲ್, ಧ್ವಜ, ಸ್ಟಿಕರ್ಸ್, ಬಲೂನ್ಸ್ ,ಪಟಾಕಿ, ಲೂಸ್ ಪಾಲಿಥಿನ್ ತರುವುದು ನಿಷೇಧಿಸಿದ್ದಾರೆ. ಯಾವುದೇ ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಲಾಗಿದೆ.
ಮೋದಿ ಭೇಟಿಯಿಂದ ಈಗಾಗಲೇ ಎನ್‌ಎಸ್‌ಜಿ ಕಮಾಂಡೋಗಳು ಬಿಗಿ ಭದ್ರತೆ ಕೈಗೊಂಡಿದ್ದಾರೆ. 6,000ಕ್ಕೂ ಹೆಚ್ಟು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ತಪಾಸಣೆ ಸೇರಿದಂತೆ ಎಲ್ಲಾ ರೀತಿಯ ಪರಿಶೀಲನೆ ನಡೆಯುತ್ತಿದೆ.
ಇತ್ತ ನವೆಂಬರ್ 28 ರಂದು ಉಡುಪಿ ಮೂರು ಠಾಣ ವ್ಯಾಪ್ತಿಯ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಉಡುಪಿ ನಗರ, ಮಲ್ಪೆ ಹಾಗೂ ಮಣಿಪಾಲ ವ್ಯಾಪ್ತಿಯ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಮಕ್ಕಳಿಗೆ ರಜೆ ಘೋಷಿಸಲಾಗಿದೆ. ಮೋದಿ ಭೇಟಿಯಿಂದ ಹಲವು ಮಾರ್ಗಗಳನ್ನು ಮುಚ್ಚಲಾಗುತ್ತದೆ. ಜೊತೆಗೆ ಸಂಚಾರ ನಿರ್ಬಂಧಗಳನ್ನು ವಿಧಿಸಲಾಗುತ್ತದೆ. ಇದರಿದಂ ಶಾಲಾ ಮಕ್ಕಳ ಸಂಚಾರಕ್ಕೆ ಸಮಸ್ಯೆ ಎದುರಾಗಲಿದೆ ಎಂದು ವಿದ್ಯಾರ್ಥಿಳಿಗೆ ರಜೆ ಘೋಷಿಸಿದ್ದಾರೆ.