ಉಡುಪಿ: ಉಡುಪಿಯ ಲಾಡ್ಜ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಮೃತದೇಹ ಸ್ವಗ್ರಾಮಕ್ಕೆ ರವಾನಿಸಿ ಅಂತ್ಯಸಂಸ್ಕಾರ ಮುಗಿದಿದ್ದರೂ, ಘಟನೆಯ ಬಗ್ಗೆ ಉಡುಪಿಯಲ್ಲಿ ತನಿಖೆ ಮುಗಿದಿಲ್ಲ. ಸಂತೋಷ್ (Santosh) ಜೊತೆ ಉಡುಪಿಗೆ ಬಂದು ಅವರೊಂದಿಗೆ ಲಾಡ್ಜ್‌ನಲ್ಲಿ ತಂಗಿದ್ದ ಗೆಳಯರಾದ ಸಂತೋಷ್ ಮಾದಪ್ಪ (Madappa) ಮತ್ತು ಪ್ರಶಾಂತ್ ಶೆಟ್ಟಿ (Prashanth Shetty) ಅವರನ್ನು ಮಂಗಳವಾರವೇ ವಶಕ್ಕೆ ಪಡೆದುಕೊಂಡಿರುವ ಉಡುಪಿ ಪೊಲೀಸರು ಗುರುವಾರ ಮತ್ತೆ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.
ವಿಚಾರಣೆಯ ಸಂದರ್ಭದಲ್ಲಿ ಸಂತೋಷ್ ಮತ್ತು ಗೆಳೆಯರು ವಾರದ ಹಿಂದೆಯೇ ಬೆಳಗಾವಿಯಿಂದ (Belgavi) ಹೊರಟು ಚಿಕ್ಕಮಗಳೂರಿಗೆ (Chikkamagalore) ಬಂದು ಅಲ್ಲಿ 4 ದಿನಗಳ ಕಾಲ ತಂಗಿದ್ದರು ಎಂಬುದು ತಿಳಿದು ಬಂದಿದೆ. ಕಳೆದ ವಾರ ಚಿಕ್ಕಮಗಳೂರಿನಲ್ಲಿ ಮತ್ತು ಸೋಮವಾರ ಉಡುಪಿಗೆ ಬಂದಿದ್ದ ಸಂತೋಷ್ ಪಾಟೀಲ್ ಮತ್ತು ಗೆಳೆಯರು ಎಲ್ಲೆಲ್ಲಾ ಓಡಾಡಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳಲು ಸಂತೋಷ್ ವಿಷ ಎಲ್ಲಿ ಖರೀದಿಸಿದ್ದಾರೆ ಎಂಬ ಬಗ್ಗೆಯೂ ವಿಚಾರಣೆ ನಡೆಸಿದ್ದಾರೆ. ಘಟನೆ ನಡೆದ ಲಾಡ್ಜ್‌ಗೂ ಕರೆದುಕೊಂಡು ಹೋಗಿ, ಇಬ್ಬರಿಂದಲೂ ಪ್ರತ್ಯೇಕ ವೀಡಿಯೋ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.
40% ಕಮಿಷನ್ ಆತ್ಮಹತ್ಯೆ ಸುತ್ತ ಅನುಮಾನಗಳ ಹುತ್ತ: ಸಂತೋಷ್ ಪಾಟೀಲ್ ಸಾವಿನ ನಂತರ 12 ಪ್ರಶ್ನೆ
ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ: ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣವನ್ನು ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ಪರಪ್ಪ ಅವರೇ ಮೊದಲ ಆರೋಪಿಯಾಗಿರುವುದರಿಂದ, ದೂರು ದಾಖಲಿಸಿಕೊಂಡಿರುವ ಉಡುಪಿ ಪೊಲೀಸರು, ನಿಯಮದಂತೆ ಪ್ರಕರಣವನ್ನು ರಾಜ್ಯ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿದ್ದಾರೆ.
ಇದಕ್ಕೂ ಮೊದಲು ಎಫ್‌ಐಆರ್‌ಗೆ ಪೂರಕವಾಗಿರುವ ದಾಖಲೆಗಳನ್ನು, ಸಿಸಿಟಿವಿ (CCTV) ಫೂಟೇಜ್, ಹೊಟೇಲ್ ಸಿಬ್ಬಂದಿ ಮತ್ತು ಸಂತೋಷ್ ಪಾಟೀಲ್ ಗೆಳೆಯರ ಹೇಳಿಕೆಗಳನ್ನು ಉಡುಪಿ ನಗರ ಠಾಣೆಯ ಪೊಲೀಸರು ಗುರುವಾರ ಸಂಗ್ರಹಿಸಿದ್ದು, ಅವುಗಳೆಲ್ಲವನ್ನೂ ಎಫ್‌ಐಆರ್‌ನೊಂದಿಗೆ (FIR) ಜನಪ್ರತಿನಿಧಿ ನ್ಯಾಯಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂತೋಷ್ ಆತ್ಮಹತ್ಯೆ ಪ್ರಕರಣದಲ್ಲಿ ಈಶ್ವರಪ್ಪ ಹೆಸರು: ಸರ್ಕಾರಕ್ಕೆ ಖಡಕ್ ಎಚ್ಚರಿಕೆ ಕೊಟ್ಟ ಕಾಂಗ್ರೆಸ್
2 ವಿಶೇಷ ತಂಡ ರಚನೆ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ (Suicide Case) ಕುರಿತು ಹೆಚ್ಚಿನ ತನಿಖೆಗಾಗಿ 2 ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿದೆ. ಮಲ್ಪೆ ಸರ್ಕಲ್ ಇನ್ಸ್‌ಪೆಕ್ಟರ್ ಹಾಗೂ ಬ್ರಹ್ಮಾವರ ಸರ್ಕಲ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತನಿಖೆ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.