ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಬೆಳಗಾವಿಯಲ್ಲಿ ಪೊಲೀಸರ ತನಿಖೆ ಚುರುಕುಗೊಂಡಿದೆ. ತನಿಖಾಧಿಕಾರಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಈ ತನಿಖೆಯಲ್ಲಿ ಮಹತ್ವದ ದಾಖಲೆಗಳು ಪೊಲೀಸರಿಗೆ ಸಿಕ್ಕಿದೆ.
ವರದಿ- ಶಶಿಧರ ಮಾಸ್ತಿಬೈಲು ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ(ಏ.18): ಬೆಳಗಾವಿಯ (Belagavi) ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಆತ್ಮಹತ್ಯೆ ಪ್ರಕರಣದ (Suicide Case) ತನಿಖೆ ರಾಜ್ಯದ ಮೂಲೆ ಮೂಲೆಗಳಲ್ಲೂ ನಡೆಯುತ್ತಿದೆ. ಸಂತೋಷ್ ಪಾಟೀಲ್ ಅಡ್ಡಾಡಿದ್ದ ನಾನಾ ಜಿಲ್ಲೆಗಳ ಜೊತೆಗೆ, ಉಡುಪಿಯಲ್ಲೂ ತನಿಖೆ ತೀವ್ರಗೊಂಡಿದೆ. ತನಿಖಾಧಿಕಾರಿ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ನಡೆಯುತ್ತಿರುವ ಈ ತನಿಖೆಯಲ್ಲಿ ಮಹತ್ವದ ದಾಖಲೆಗಳು ಪೊಲೀಸರಿಗೆ ಸಿಕ್ಕಿದೆ.
ಬೆಳಗಾವಿಯ ಸಂತೋಷ್ ಪಾಟೀಲ್ ಉಡುಪಿಗೆ (Udupi) ಬಂದು ಆತ್ಮಹತ್ಯೆ ಮಾಡಿಕೊಂಡರು. ಆತ ಆತ್ಮಹತ್ಯೆ ಮಾಡಿಕೊಂಡಿರುವ ನಗರದ ಬಸ್ ನಿಲ್ದಾಣ ಸಮೀಪದ ಖಾಸಗಿ ಲಾಡ್ಜ್ ನಲ್ಲಿ ಇಂದು 2ನೇ ಸುತ್ತಿನ ತನಿಖೆ ಆರಂಭವಾಗಿದೆ. ಲಾಡ್ಜಿನ ಸಿಬ್ಬಂದಿಗಳನ್ನು ಕುಳ್ಳಿರಿಸಿ, ತನಿಖಾಧಿಕಾರಿ ಪ್ರಮೋದ್ ಕುಮಾರ್ ಹಲವು ಗಂಟೆಗಳ ಕಾಲ ಮತ್ತೊಮ್ಮೆ ವಿಚಾರಣೆ ನಡೆಸಿದರು. ಸಂತೋಷ್ ಪಾಟೀಲ್ ಜೊತೆಗೆ ಬಂದಿದ್ದ ಗೆಳೆಯರಾದ ಪ್ರಶಾಂತ್ ಶೆಟ್ಟಿ ಹಾಗೂ ಸಂತೋಷ್ ಮೇದಪ್ಪ ಅವರು ನೀಡಿರುವ ಹೇಳಿಕೆಯನ್ನು ಕ್ರಾಸ್ ಚೆಕ್ ಮಾಡಿಕೊಂಡರು.
ಆತ್ಮಹತ್ಯೆ ಮಾಡಿಕೊಂಡ ಕೊಠಡಿ ಹಾಗೂ ಸ್ನೇಹಿತರು ತಂಗಿದ್ದ ಕೊಠಡಿಯಲ್ಲಿ ಮತ್ತೊಮ್ಮೆ ಪರಿಶೀಲನೆ ನಡೆಸಿದರು. ವಿಚಾರಣೆಯ ವೇಳೆ ಹಲವು ಮಹತ್ವದ ಸಂಗತಿಗಳು ಪೊಲೀಸರ ತನಿಖೆಗೆ ನೆರವಾಗಿ ಬಂದಿವೆ.
UDUPI SAINT MARY'S ISLAND ಸೆಲ್ಫಿ ತೆಗೆಯಲು ಹೋಗಿ ಸಾವನ್ನಪ್ಪಿದ ವಿದ್ಯಾರ್ಥಿಗಳು
ಸಿಸಿಟಿವಿ ಫೂಟೇಜ್ ನಲ್ಲಿ ಏನಿತ್ತು?: ಪ್ರಕರಣದ ಪ್ರಮುಖ ಸಾಕ್ಷಿ ಸಿಸಿಟಿವಿ ಫೂಟೇಜ್. ಆತ್ಮಹತ್ಯೆ ಘಟನೆ ನಡೆದ ತಕ್ಷಣವೇ ಪೊಲೀಸರು ಎಲ್ಲಾ ಸಿಸಿಟಿವಿ ಫೂಟೇಜ್ ಗಳನ್ನು ವಶಕ್ಕೆ ಪಡೆದಿದ್ದರು. ಸೋಮವಾರ ಸಂಜೆ 5 ಗಂಟೆಯಿಂದ ಮಂಗಳವಾರ ಬೆಳಗ್ಗೆ 10.30 ರ ವರೆಗಿನ ಪ್ರತಿಯೊಂದು ವಿಡಿಯೋ ದಾಖಲೆಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಈ ನಡುವೆ ರಾಜೇಶ್ ಎಂಬ ಹೆಸರಿನ ವ್ಯಕ್ತಿಯ ಹೆಸರು ಉಲ್ಲೇಖವಾಗಿದ್ದು, ಈತ ಯಾರು? ಈ ಪ್ರಕರಣದಲ್ಲಿ ಆತನ ಪಾತ್ರ ಏನು? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಸಿಸಿಟಿವಿ ಫೂಟೇಜ್ ನಲ್ಲಿ ರಾಜೇಶ್ ಎಂಬ ವ್ಯಕ್ತಿ ಹೋಟೆಲ್ ಅಥವಾ ಲಾಡ್ಜಿನ ಕೋಣೆಯೊಳಗೆ ಬಂದಿರುವ ಸಾಧ್ಯತೆ ಇದೆಯೇ ಎಂದು ಗಮನಿಸುತ್ತಿದ್ದಾರೆ. ಬಲ್ಲಮೂಲಗಳ ಪ್ರಕಾರ, ಸಂತೋಷ್ ಪಾಟೀಲ್ ಒಂದು ಬಾರಿ ಕೋಣೆ ಸೇರಿದ ನಂತರ, ಯಾರು ಕೂಡ ಆತನ ಕೊಠಡಿಗೆ ಹೋಗಿರಲಿಲ್ಲ ಎಂದು ಸಿಸಿಟಿವಿ ದಾಖಲೆಗಳಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಹಾಗಾದರೆ ರಾಜೇಶ್ ಎಂಬ ಹೆಸರು ಕೇವಲ ಕಾಲ್ಪನಿಕ ಸೃಷ್ಟಿಯೇ ಎಂಬ ಸಂಶಯಗಳು ಕಂಡುಬರುತ್ತಿವೆ.
CBSE 2022-23 Exam ಪರೀಕ್ಷಾ ಮಾದರಿಯ ಬಗ್ಗೆ ಇನ್ನೂ ನಿರ್ಧರಿಸದ ಸಿಬಿಎಸ್ಇ!
ಬ್ಯಾಗ್ ನಲ್ಲಿತ್ತು ರಾಶಿರಾಶಿ ದಾಖಲೆ: ಖಾಸಗಿ ಲಾಡ್ಜ್ನಕೋಣೆ ಸಂಖ್ಯೆ 207 ರಲ್ಲಿ ತಂಗಿದ್ದ ಸಂತೋಷ್ ಪಾಟೀಲ್ ರ ಶವದ ಪಕ್ಕದಲ್ಲೇ ಎರಡು ಬ್ಯಾಗ್ ಗಳು ದೊರಕಿವೆ. ಇದರಲ್ಲಿ ಅನೇಕ ಮಹತ್ವದ ದಾಖಲೆಗಳು ಲಭ್ಯವಾಗಿದೆ. 15ಕ್ಕೂ ಅಧಿಕ ಬ್ಯಾಂಕುಗಳ ಚೆಕ್, ವಿವಿಧ ರಸ್ತೆ ಕಾಮಗಾರಿಯ ದಾಖಲೆಗಳು, ಅಪಾರ ಪ್ರಮಾಣದ ದೇವರ ಪ್ರಸಾದ ದೊರಕಿದೆ. ಸಂತೋಷ್ ಪಾಟೀಲ್ ಓರ್ವ ಅಪ್ಪಟ ದೈವಭಕ್ತ ಅನ್ನೋದು ಇದರಿಂದ ತಿಳಿದುಬರುತ್ತದೆ. ಆದರೆ ಇದರಲ್ಲಿ ಯಾವುದೇ ವರ್ಕ್ ಆರ್ಡರ್ ಅಥವಾ ಟೆಂಡರ್ ವಿವರಗಳು ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಸಂತೋಷ್ ಪಾಟೀಲ್ ತಂದಿದ್ದ ಎರಡು ಬ್ಯಾಗುಗಳನ್ನು ಮನೆಯವರು ಬಿಟ್ಟು ಹೋಗಿದ್ದಾರೆ. ತಮಗೆ ಬೇಕಾದ ದಾಖಲೆಗಳನ್ನು ವಶಕ್ಕೆ ಪಡೆದ ಪೊಲೀಸರು ಕೇವಲ ಬಟ್ಟೆಗಳನ್ನು ಲಾಡ್ಜ್ ನಲ್ಲೇ ಬಿಟ್ಟಿದ್ದಾರೆ.
ಕೇವಲ ಉಡುಪಿಯಲ್ಲಿ ನಡೆಯುತ್ತಿರುವ ತನಿಖೆಯಿಂದ ಈ ಪ್ರಕರಣದ ಅಂತಿಮ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಬೆಳಗಾವಿ, ಚಿಕ್ಕಮಗಳೂರು, ಧಾರವಾಡ, ದಾವಣಗೆರೆ, ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಗೆ ಪೊಲೀಸರ ಏಳು ತಂಡಗಳು ತೆರಳಿವೆ. ಸ್ವತಹ ಎಡಿಜಿಪಿ ಪ್ರತಾಪರೆಡ್ಡಿ ತನಿಖೆಗಳ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಈ ನಡುವೆ ಇನ್ನೆರಡು ದಿನಗಳಲ್ಲಿ ಶವದ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಬರುವ ನಿರೀಕ್ಷೆಯಿದ್ದು, ಕುತೂಹಲ ಹುಟ್ಟಿಸಿದೆ.