ಕಿವುಡರ ಏಷ್ಯಾಕಪ್ ಟಿ-20 ಕ್ರಿಕೆಟ್: ಟೀಂ ಇಂಡಿಯಾ ತಂಡಕ್ಕೆ ಆಯ್ಕೆಯಾದ ಕುಂದಾಪುರದ ಸನಿತ್ ಶೆಟ್ಟಿ

Published : Jan 09, 2026, 10:11 AM IST
Sanit Shetty

ಸಾರಾಂಶ

ಕುಂದಾಪುರದ ಕೆರಾಡಿ ಗ್ರಾಮದ, ಶ್ರವಣ ದೋಷವುಳ್ಳ ಸನಿತ್ ಶೆಟ್ಟಿ ಅವರು ಕಿವುಡರ ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆಟೋ ಚಾಲಕರ ಮಗನಾದ ಇವರು, ತಮ್ಮ ವೈಕಲ್ಯವನ್ನು ಮೆಟ್ಟಿನಿಂತು ಮಾಡಿದ ಈ ಅಸಾಧಾರಣ ಸಾಧನೆಯು ಎಲ್ಲರಿಗೂ ಸ್ಫೂರ್ತಿದಾಯಕವಾಗಿದೆ.

ಕುಂದಾಪುರ: ಕೆರಾಡಿಯೆಂಬ ಪುಟ್ಟ ಗ್ರಾಮವೊಂದರಲ್ಲಿ ಹುಟ್ಟಿ ಸಿನೆಮಾ ಲೋಕದಲ್ಲಿ ಜಗತ್ತೆ ನಿಬ್ಬೆರಗಾಗುವಂತೆ ಮಾಡಿದ ನಟ ರಿಷಬ್ ಶೆಟ್ಟಿಯವರ ಸಾಧನೆಯ ಕಥೆ ನಿಮಗೆಲ್ಲಾ ತಿಳಿದೇ ಇದೆ. ಆದರೆ ಇದೀಗ ಅದೇ ಊರಲ್ಲಿ ಹುಟ್ಟಿ ಕ್ರಿಕೆಟ್ ಆಟಗಾರನಾಗಿ ಬೆಳೆಯಬೇಕೆಂಬ ಕನಸು ಕಾಣುತ್ತಾ, ಆ ಕನಸಿನ ಬೆಂಬತ್ತಿ ಹೊರಟು ಸಾಧನೆಯ ಗಮ್ಯ ತಲುಪಿದ ಈ ಹುಡುಗನ ಅಸಾಧಾರಣ ಸಾಧನೆಯ ಯಶೋಗಾಥೆಯನ್ನು ನೀವು ಓದಲೇಬೇಕು.

‘ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ, ಮನಸ್ಸೊಂದಿದ್ದರೆ ಮಾರ್ಗವು ಉಂಟು ಡಾ. ರಾಜ್ ಕುಮಾರ್ ಅಭಿನಯದ ಬಂಗಾರದ ಮನುಷ್ಯ ಚಿತ್ರದ ಈ ಹಾಡು ಈ ಹುಡುಗನಿಗೆ ಸ್ಫೂರ್ತಿಯಾಯಿತೊ ಏನೊ ಗೊತ್ತಿಲ್ಲ. ಅಕ್ಷರಶಃ ಈ ಹಾಡಿನಂತೆ ಸಾಧನೆಯ ಶಿಖರವೇರಿ ರಾರಾಜಿಸುತ್ತಿರುವ ಈತನ ಹೆಸರು ಸನಿತ್ ಶೆಟ್ಟಿ.

ತಮ್ಮೂರಿನ ಹುಡುಗರಂತೆ ಟೆನ್ನಿಸ್ ಬಾಲ್ ಆಡುತ್ತಿದ್ದ ಕೆರಾಡಿಯ ಸನಿತ್ ಈಗ ಕಿವುಡರ ಏಷ್ಯಾಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ವೈಕಲ್ಯವೆಂದು ಕೊರಗುತ್ತ ಕುಳಿತುಕೊಳ್ಳದೇ ಅದನ್ನೇ ಸವಾಲಾಗಿ ಸ್ವೀಕರಿಸಿ ಸಾಧನೆಯ ಶಿಖರವೇರುವ ಪ್ರಯತ್ನ ಮಾಡಿದ್ದಲ್ಲದೇ ಎಲ್ಲ ವಿಶೇಷ ಚೇತನರಿಗೂ ಮಾದರಿಯಾಗಿದ್ದಾರೆ.

ಏಷ್ಯಾಕಪ್ ಟಿ-20ಗೆ ಆಯ್ಕೆ

ಕೆರಾಡಿಯ ದುರ್ಗಾ ಕ್ರಿಕೆಟರ್ಸ್ ಬಳಗದಲ್ಲಿ ಕ್ರಿಕೆಟ್ ಆಡುತ್ತಿದ್ದ ಕೆರಾಡಿಯ ಸನಿತ್ ಶೆಟ್ಟಿ ಫೆ.18 ರಿಂದ 25 ವರೆಗೆ ಒಡಿಶಾದ ಕಟಕ್ ಬಾರಬತಿ ಸ್ಟೇಡಿಯಂನಲ್ಲಿ ನಡೆಯಲಿರುವ ಕಿವುಡರ ಏಷ್ಯಾಕಪ್ ಟಿ-20 ಕ್ರಿಕೆಟ್ ಪಂದ್ಯಾವಳಿಗೆ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ಫೆ. 14 ರಿಂದ 17 ವರೆಗೆ ಶ್ರೀಲಂಕಾ ವಿರುದ್ಧ ಅಭ್ಯಾಸ ಪಂದ್ಯಗಳು ನಡೆಯಲಿವೆ.

ಏಕೈಕ ಕನ್ನಡಿಗ

ಭಾರತೀಯ ಕಿವುಡರ ಕ್ರಿಕೆಟ್ ಅಸೋಸಿಯೇಶನ್ ನ ಪುರುಷರ ಆಯ್ಕೆ ಸಮಿತಿಯು 16 ಮಂದಿಯ ಭಾರತ ತಂಡವನ್ನು ಪ್ರಕಟಿಸಿದೆ. ಈ ತಂಡದಲ್ಲಿ ಬ್ಯಾಟಿಂಗ್ ಹಾಗೂ ವೇಗದ ಬೌಲಿಂಗ್ ಸಹ ಮಾಡಬಲ್ಲ ಆಲ್ ರೌಂಡರ್ ಸನಿತ್ ಶೆಟ್ಟಿ ಏಕೈಕ ಕನ್ನಡಿಗನಾಗಿ ಸ್ಥಾನ ಪಡೆದಿದ್ದಾರೆ.

ಆಟೋ ಚಾಲಕನ ಮಗ

ರಿಕ್ಷಾ ಚಾಲಕರಾಗಿರುವ ಕೆರಾಡಿ ಗ್ರಾಮದ ಸುರೇಂದ್ರ ಶೆಟ್ಟಿ ಮತ್ತು ಶ್ರೀಮತಿ ಶೆಟ್ಟಿ ದಂಪತಿಯ ಪುತ್ರನಾದ ಸನಿತ್ ಮೂಡ್ಲಕಟ್ಟೆಯಲ್ಲಿ ಜನಿಸಿದ್ದು, ಕುಂದಾಪುರದ ಹೆಚ್ ಎಂಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವೆಂಕಟರಮಣ ಪ್ರೌಢಶಾಲೆಯಲ್ಲಿ ಹೈಸ್ಕೂಲ್ ಶಿಕ್ಷಣ, ಮೂಡ್ಲಕಟ್ಟೆಯ ಐಎಂಜೆ ಪದವಿ ಕಾಲೇಜಿನಲ್ಲಿ ಬಿಸಿಎ ಪೂರೈಸಿ, ಸದ್ಯ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಹೆಚ್ ಆರ್ ಆಗಿದ್ದಾರೆ. ಇವರಿಗೆ ಹುಟ್ಟಿನಿಂದಲೇ ಶ್ರವಣ ದೋಷದ ಸಮಸ್ಯೆಯಿದ್ದು, ಅದನ್ನೆಲ್ಲ ಮೆಟ್ಟಿನಿಂತು ಈಗ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ.

ಮೊದಲ ಬಾರಿಗೆ ಅವಕಾಶ

ಆರಂಭದಲ್ಲಿ ನಿತಿನ್ ಸಾರಂಗ ಕ್ರಿಕೆಟ್ ತರಬೇತಿ ನೀಡಿದ್ದು, ಅನಂತರ ಕುಂದಾಪುರದ ಚಕ್ರವರ್ತಿ ಕ್ರಿಕೆಟ್ ಕ್ಲಬ್ ನ ಮೊಹಮ್ಮದ್ ಅರ್ಮಾನ್ ಗರಡಿಯಲ್ಲಿ 21 ವರ್ಷದ ಸನಿತ್ ತರಬೇತಿ ಪಡೆಯುತ್ತಿದ್ದಾರೆ. ಭಾರತ ಪರ ಆಡಿದ ಕುಂದಾಪುರ ಮೂಲದ ವಿಶೇಷ ಚೇತನ ಕ್ರಿಕೆಟ್ ಆಟಗಾರ ಪೃಥ್ವಿರಾಜ್ ಶೆಟ್ಟಿ ಹುಂಚಣಿ ಸಹಕಾರ ನೀಡಿದ್ದಾರೆ. 2018 -19 ರಲ್ಲಿ ಅಂಡರ್ -14 ಮಂಗಳೂರು ವಲಯಕ್ಕೆ ಆಯ್ಕೆಯಾಗಿದ್ದು, ಉಡುಪಿ ಜಿಲ್ಲಾ ತಂಡಕ್ಕೂ ಆಯ್ಕೆಯಾಗಿದ್ದರು. ಅವರ ನಾಯಕತ್ವದಲ್ಲಿ ಭಾರತೀಯ ಕಿವುಡರ ಚಾಂಪಿಯನ್ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು. ಕಳೆದ ವರ್ಷ 9 ನೇ ರಾಷ್ಟ್ರೀಯ ಕ್ರಿಕೆಟ್ ಚಾಂಪಿಯನ್ ಶಿಪ್ ನಲ್ಲಿ ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿ ಮಿಂಚಿದ್ದರು. ಈ ಹಿಂದೆ ದುಬೈನಲ್ಲಿ ನಡೆಯುವ ಪಂದ್ಯದಲ್ಲಿ ಆಡುವ ಅವಕಾಶ ಸಿಕ್ಕಿದ್ದರೂ, ಆಗ ಪಾಸ್ ಪೋರ್ಟ್ ಮಾಡಿಸದೇ ಪಂದ್ಯದಲ್ಲಿ ಪಾಲ್ಗೊಂಡಿರಲಿಲ್ಲ . ಈಗ ಮೊದಲ ಬಾರಿಗೆ ಸನಿತ್ ಅವರಿಗೆ ಭಾರತ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದೆ.

ಕರ್ನಾಟಕ ಪರ ಉತ್ತಮ ಪ್ರದರ್ಶನ ನೀಡಿದ್ದರಿಂದ ಈ ಬಾರಿ ಭಾರತ ತಂಡಕ್ಕೆ ಆಯ್ಕೆಯಾಗುವ ವಿಶ್ವಾಸ ಇತ್ತು. ಎಲ್ಲವೂ ಅಂದುಕೊಂಡಂತೆ ಆಗಿದೆ. ಭಾರತದ ಪರ ಆಡುವ ಕನಸು ನನಸಾಗುತ್ತಿರುವುದು ಖುಷಿ ಕೊಟ್ಟಿದೆ ಎಂದು ಕ್ರಿಕೆಟ್ ಪಟು ಸನಿತ್ ಶೆಟ್ಟಿ ಕೆರಾಡಿ ಹೇಳಿದ್ದಾರೆ.

PREV
Read more Articles on
click me!

Recommended Stories

ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನದ ಆದಾಯ ರಿವೀಲ್, ರಾಜ್ಯದಲ್ಲಿ 4ನೇ ಸ್ಥಾನ, ಕುಕ್ಕೆಗೆ ಮೊದಲ ಸ್ಥಾನ
ಕುಂದಾಪುರದಲ್ಲಿ KSRTC ಬಸ್‌ಗೆ ಢಿಕ್ಕಿ ಹೊಡೆದ ಟಿಪ್ಪರ್‌, 15 ಪ್ರಯಾಣಿಕರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ!