ನಾಡಿದ್ದು, ಮಂಗಳವಾರ, ಯುಗಾದಿ. ಯುಗಾದಿ ಎಂದರೆ ವಸಂತ ಕಾಲ. ಬಿರುಬೇಸಗೆಯ ನಡುವೆ ಹೂಬಿಟ್ಟಮರ, ಬೇಕಾದಷ್ಟುಹಣ್ಣು, ಮಿಕ್ಕುವಷ್ಟುಪುರುಸೊತ್ತು, ರುಪಾಯಿಗೆ ನಾಲ್ಕು ಕೇಜಿಯಷ್ಟುಅಗ್ಗವಾದ ಬಿಸಿಲು, ಜಾತ್ರೆಯ ಸಂಭ್ರಮ- ಇವೆಲ್ಲ ತುಂಬಿದ ಶ್ರೀಮಂತ ಬೇಸಗೆಯ ಚಿತ್ರಣ ಇಲ್ಲಿದೆ
ಜಯರಾಮ
ಎಷ್ಟೋ ಮಹಾನಗರಗಳು ಕಾಲದ ಪರಿವೆಯನ್ನೇ ಕಳೆದುಕೊಂಡಿರುತ್ತವೆ. ಋುತು ಬದಲಾದದ್ದು ಸಾಮಾನ್ಯವಾಗಿ ಅಲ್ಲಿ ಗೊತ್ತಾಗುವುದೇ ಇಲ್ಲ. ಮಳೆ ಬಂದಾಗಷ್ಟೇ ಅದು ಮಳೆಗಾಲ ಅಂತ ತಿಳಿಯುತ್ತದೆಯೇ ಹೊರತು, ನಗರ ಬೇರೆ ಯಾವ ರೀತಿಯಲ್ಲೂ ಗುಟ್ಟು ಬಿಟ್ಟುಕೊಡುವುದಿಲ್ಲ.
ಕೆಲವು ಊರುಗಳು ಹಾಗಲ್ಲ. ಅಲ್ಲಿ ಋುತು ಬದಲಾದದ್ದು ರಸ್ತೆ ಬದಿಯಲ್ಲಿ ಮಾರಾಟವಾಗುವ ಹಣ್ಣು ತರಕಾರಿಯಿಂದ ಹಿಡಿದು, ಮರದಲ್ಲಿ ಅರಳುವ ಹೂವಿನಿಂದ ಹಿಡಿದು, ಬದಲಾಗುವ ಆಕಾಶದ ಬಣ್ಣದಿಂದ ಹಿಡಿದು, ಜಾತ್ರೆಯ ತನಕ ಪ್ರತಿಯೊಂದರಲ್ಲೂ ಗೊತ್ತಾಗುತ್ತಾ ಹೋಗುತ್ತದೆ. ಬೆಂಗಳೂರಲ್ಲಂತೂ ಕರಬೂಜ ಮಾರಾಟ ಶುರುವಾಗುತ್ತಿದ್ದಂತೆ ರಾಮನವಮಿ ಹತ್ತಿರವಾಗುತ್ತಿದೆ ಎನ್ನುವುದು ಗೊತ್ತಾಗುತ್ತದೆ. ಅವರೆಕಾಯಿ ಬರುತ್ತಿದ್ದಂತೆ ಚಳಿಗಾಲದ ಮುನ್ಸೂಚನೆ ಸಿಗುತ್ತದೆ. ಕಡಲೆಕಾಯಿ ರಸ್ತೆ ಬದಿಯಲ್ಲಿ ಕಾಣಿಸಿಕೊಂಡರೆ ಸ್ವಲ್ಪ ದಿನಕ್ಕೇ ಕಾರ್ತಿಕ ಸೋಮವಾರ ಸಮೀಪಿಸಿದೆಯೆಂದು ಅರ್ಥ.
ಹೀಗೆ ಒಂದೊಂದು ಊರಿಗೂ ಒಂದೊಂದು ಗುರುತುಗಳಿರುತ್ತವೆ. ನಮ್ಮೂರಲ್ಲಿ ಕಾಡಲ್ಲಿ ದೊರೆಯುವ ಹಣ್ಣುಗಳಿಂದಲೇ ಅದು ಯಾವ ಸೀಸನ್ನು ಎಂದು ಹೇಳಬಹುದಾಗಿತ್ತು. ಹಳ್ಳಿಗಳಲ್ಲಿ ಬೆಳೆದ ಎಲ್ಲರಿಗೂ ಪ್ರತಿಯೊಂದು ಋುತುಮಾನದ ಜೊತೆಗೆ ಒಂದು ನೆನಪು ಬೆಸೆದುಕೊಂಡಿರುತ್ತದೆ. ಅದರಲ್ಲೂ ಅಂಥ ನೆನಪು ಗಾಢವಾಗಿರುವುದು ಬೇಸಗೆಯ ಜೊತೆ ಅನ್ನಿಸುತ್ತದೆ.
ಸುಡು ಬೇಸಿಗೆ, ಬೆವರಿನದ್ದೇ ಕಾಟ, ಪರಿಹಾರವೇನು?
ಮಾಚ್‌ರ್, ಏಪ್ರಿಲ್, ಮೇ ತಿಂಗಳ ಸುಡುಬೇಸಗೆಗೂ ಬಾಲ್ಯಕ್ಕೂ ಅವಿನಾಭಾವ ಸಂಬಂಧ. ಮಳೆಗಾಲದಲ್ಲಿ ಸ್ಕೂಲು ಮತ್ತು ಮಳೆ ಎರಡೂ ಇರುತ್ತದೆ. ಚಳಿಗಾಲದಲ್ಲೂ ಸ್ಕೂಲು, ಪರೀಕ್ಷೆ ಇತ್ಯಾದಿಗಳು ಚಳಿಗಿಂತ ಹೆಚ್ಚು ಬಾಧಿಸುತ್ತವೆ. ಆದರೆ ಬೇಸಗೆ ಎಂದರೆ ದೊಡ್ಡ ಪರೀಕ್ಷೆ ಮುಗಿದು, ರಜೆ ಆರಂಭವಾಗುವ ಋುತು. ವಸಂತ ಋುತುವಿಗೆ ಪ್ರಕೃತಿ ಸಮೃದ್ಧವೂ ಮನೋಹರವೂ ಆಗಿ ನಳನಳಿಸುತ್ತಿರುತ್ತವೆ. ಸೂರ್ಯ ಇನ್ನಿಲ್ಲದಂತೆ ನೆತ್ತಿ ಸುಡುತ್ತಿರುತ್ತಾನೆ. ಆಗ ಗೇರು ಮರ ಹಣ್ಣು ಬಿಟ್ಟು ನಮ್ಮನ್ನೆಲ್ಲ ಕರೆಯುತ್ತಿರುತ್ತದೆ. ಕಾಟು ಮಾವಿನ ಕಾಯಿ ಗಾಳಿಗೆ ತೊನೆಯುತ್ತಾ ನಮ್ಮ ಕಲ್ಲು ಎಸೆಯುವ ಸಾಮರ್ಥ್ಯವನ್ನು ಅಣಕಿಸುತ್ತಿರುತ್ತದೆ. ನಮ್ಮ ನಾಲಗೆಗೆ ಬಣ್ಣ ಬಳಿಯಲೆಂದೇ ನೇರಳೆ ಹಣ್ಣು ಕಾದಿರುತ್ತದೆ. ಹೆಸರೇ ಇಲ್ಲದ, ಆಯಾ ಪ್ರದೇಶಕ್ಕೆ ಒಂದೊಂದು ಹೆಸರಿಟ್ಟುಕೊಂಡು ವಿವಿಧ ಹಣ್ಣುಗಳು ಕೂಡ ಬೇಸಗೆಯ ಅಸಾಧ್ಯ ಹಸಿವನ್ನು ನೀಗಿಸಲೆಂದೇ ಕಾದಿರುತ್ತವೆ.
ಬೇಸಗೆಯಲ್ಲೇ ಬಹುತೇಕ ದೇವಸ್ಥಾನಗಳ ಜಾತ್ರೆ ಇರುತ್ತದೆ. ರಥೋತ್ಸವದಿಂದ ಹಿಡಿದು ಅನ್ನ ಸಂತರ್ಪಣೆಯ ತನಕ, ಜಾತ್ರೆಯಿಂದ ಹಿಡಿದು ಬ್ರಹ್ಮಕಳಶದ ತನಕ ದೇವಾಲಯಗಳ ಕಾರ್ಯಗಳಿಗೆಲ್ಲ ಬೇಸಗೆಯೇ ಸೂಕ್ತ ಸಮಯ. ಆ ಹೊತ್ತಲ್ಲಿ ರೈತರು ಬಿಡುವಾಗಿರುತ್ತಾರೆ. ಮಕ್ಕಳಿಗೆ ಸ್ಕೂಲು ಇರುವುದಿಲ್ಲ ಎನ್ನುವುದೂ ಕಾರಣ ಇರಬಹುದು. ಯಕ್ಷಗಾನ, ದೊಡ್ಡಾಟ, ನಾಟಕ, ಸರ್ಕಸ್ಸು, ಮ್ಯಾಜಿಕ್ ಷೋ, ದೊಂಬರಾಟದಂಥ ಮನರಂಜಿಸುವ ಸಂಗತಿಗಳು ಕೂಡ ಬೇಸಗೆಯಲ್ಲೇ ಕಾಣಿಸಿಕೊಳ್ಳುತ್ತಿದ್ದದ್ದು.
ಯಾವುದೋ ಊರಿನಿಂದ ಬಂದ ಕುಟುಂಬವೊಂದು ಒಂದು ವಾರ ಕಾಲ ಪುಟ್ಟಊರಿನಲ್ಲಿ ಠಿಕಾಣಿ ಹೂಡುತ್ತಿತ್ತು. ಆ ಕುಟುಂಬದ ತರುಣನೊಬ್ಬ ಸೈಕಲ್ ಸವಾರಿ ನಡೆಸುತ್ತಿದ್ದ. ಆತ ಏಳು ದಿನವೂ ಸೈಕಲ್ಲಿನಿಂದ ಇಳಿಯುವುದೇ ಇಲ್ಲ ಅನ್ನುವ ಸುದ್ದಿ ಹಬ್ಬುತ್ತಿತ್ತು. ಬಾಲ್ಯದಲ್ಲಿ ಅದೇ ಒಂದು ವಿಸ್ಮಯದ ಸಂಗತಿಯಾಗಿರುತ್ತಿತ್ತು. ಆತ ಸೈಕಲ್ಲು ಹೊಡೆಯುತ್ತಲೇ ನಮ್ಮ ಮುಂದೆಯೇ ಊಟ ಮಾಡುತ್ತಿದ್ದ, ನೀರು ಕುಡಿಯುತ್ತಿದ್ದ, ಸೈಕಲ್ಲಿನ ಮೇಲೆ ಉದ್ದಕ್ಕೆ ಮಲಗಿ ನಿದ್ದೆ ಹೋದಂತೆ ನಟಿಸುತ್ತಿದ್ದ. ಅದೆಲ್ಲವನ್ನೂ ಅಚ್ಚರಿಯಿಂದ ನೋಡಿದ ನಂತರ, ಆತ ಬಹಿರ್ದೆಶೆಗೆ ಸೈಕಲ್ಲಿನಲ್ಲೇ ಹೇಗೆ ಹೋಗುತ್ತಾನೆ ಮತ್ತು ಸೈಕಲ್ಲಿನಲ್ಲೇ ಹೇಗೆ ಸ್ನಾನ ಮಾಡುತ್ತಾನೆ ಅನ್ನುವ ಪ್ರಶ್ನೆ ಬೃಹದಾಕಾರವಾಗಿ ಕಾಡುತ್ತಿತ್ತು.
ಗಡ್ಡ ಬಿಟ್ಟಿರೋರೇ ಗಮನಿಸಿ ! ಬೇಸಿಗೆಗೆ ಈ ವಿಧಾನ ಸೂಪರ್!
ಈಗ ಅರವತ್ತರ ಅಂಚಿನಲ್ಲಿರುವ ಎಲ್ಲರ ಬಾಲ್ಯದಲ್ಲೂ ಇಂಥದ್ದೊಂದು ಬೇಸಗೆ ಇತ್ತು. ಚಿತ್ರದುರ್ಗದ ಬೇಸಗೆಗೂ ಬಳ್ಳಾರಿಯ ಬೇಸಗೆಗೂ ಅಂಥ ವ್ಯತ್ಯಾಸವೇನೂ ಇರಲಿಲ್ಲ. ಬೇಸಗೆಯಲ್ಲೇ ಬರುವ ಕೆಲವು ವಿಶಿಷ್ಟಕಾಯಿಲೆಗಳಿದ್ದವು. ಅವು ತಿನ್ನಬಾರದ್ದನ್ನು ತಿಂದು, ಕುಡಿಯಬಾರದ್ದನ್ನು ಕುಡಿದು, ಬಿಸಿಲಿಗೆ ಅಲೆದಾಡಿದ್ದರಿಂದ ಬರುವ ಕಾಯಿಲೆಗಳೇ ಆಗಿರುತ್ತಿದ್ದವು. ಅವಕ್ಕೆ ವಿಶೇಷ ಔಷಧಿಯೇನೂ ಬೇಕಾಗಿರಲಿಲ್ಲ.
ಆ ಕಾಲಕ್ಕೆ ಬೇಸಗೆಯ ಕುರಿತು ಮಕ್ಕಳಿಗಾಗಲೀ ಹೆತ್ತವರಿಗಾಗಲೀ ಅಂಥ ಭಯವೂ ಇರುತ್ತಿರಲಿಲ್ಲ. ಹೊಳೆಯಲ್ಲೋ ಕೆರೆಯಲ್ಲೋ ಬಾವಿಯಲ್ಲೋ ಎಲ್ಲೆಂದರಲ್ಲಿ ನೀರು ಕುಡಿಯಬಹುದಿತ್ತು. ಕಣ್ಣಿಗೆ ಕಂಡ, ಕೈಗೆ ಸಿಕ್ಕಿದ ಹಣ್ಣುಗಳನ್ನೆಲ್ಲ ತಿನ್ನುವುದಕ್ಕೆ ಯಾರ ಅಡ್ಡಿಯೂ ಇರುತ್ತಿರಲಿಲ್ಲ. ಬಿಸಿಲಿಗೆ ಹೋಗಬೇಡಿರೋ ಅಂತ ನೆಪಕ್ಕೆ ಕಿರುಚಿ ನಿದ್ದೆ ಹೋಗುತ್ತಿದ್ದ ಹೆತ್ತವರು, ಹೆತ್ತವರು ನಿದ್ದೆ ಹೋಗುವುದಕ್ಕೇ ಕಾಯುತ್ತಿದ್ದ ಮಕ್ಕಳು, ಎಷ್ಟೋ ಸಲ ಅಪ್ಪ ಅಮ್ಮಂದಿರ ಕಾಟದಿಂದ ಪಾರಾಗಲಿಕ್ಕೆ ನೆಂಟರ ಮನೆ, ಸ್ವಂತ ಮನೆಯಿಂದ ಐವತ್ತು ಕಿಲೋಮೀಟರ್ ದೂರವಿರುವ ಅಜ್ಜಿ ಮನೆಗೆ ಹೋದರೆ ಅದೇ ಪಂಚತಾರಾ ರೆಸಾರ್ಟು- ಹೀಗೆ ಬೇಸಗೆ ಹಲವು ಬಣ್ಣಗಳಿಂದ ರಾರಾಜಿಸುತ್ತಿತ್ತು.
ಆ ಕಾಲದ ಹುಡುಗರನ್ನು ಆರೋಗ್ಯವಾಗಿ ಇಡುತ್ತಿದ್ದದ್ದೇ ಬೇಸಗೆ. ಈಗಿರುವಂತೆ ಸನ್‌ಕ್ರೀಮ್‌ಗಳಾಗಲೀ, ಮುಖಕ್ಕೆ, ಮೈಗೆ ಹಚ್ಚಿಕೊಳ್ಳುವುದಕ್ಕೆ ಸೆಕೆ ಹೋಗಲಾಡಿಸುವ ಪೌಡರುಗಳಾಗಲೀ ಆಗ ಇರುತ್ತಿರಲಿಲ್ಲ. ಉರಿಬಿಸಿಲಿಗೆ ಚರ್ಮ ಸುಟ್ಟು ಕರಕಲಾಗುತ್ತಿತ್ತು. ನೆತ್ತಿ ಕಾವಲಿಯಾಗುತ್ತಿತ್ತು. ಅಂಥ ಸುಡುಬೇಸಗೆಯಲ್ಲಿ ಇದ್ದಕ್ಕಿದ್ದಂತೆ ಆಲಿಕಲ್ಲು ಮಳೆ ಸುರಿದರೆ ಅದು ಬೋನಸ್. ಅದರ ನೆನಪು ಇಡೀ ವರ್ಷ ಮನಸ್ಸಲ್ಲಿ ಹಸಿರಾಗಿರುತ್ತಿತ್ತು. ಆ ಕಾಲದಲ್ಲಿ ಆಲಿಕಲ್ಲುಗಳೇ ನೀರಿನ ಘನರೂಪ. ಅದೇ ಮೊದಲು ನೋಡಿದ ಐಸ್!
ಕೋರ್ಟ್‌ಗಳ ಸಮಯ ಬದಲು : ಯಾವ ಸಮಯಕ್ಕೆ ?
ಬೇಸಗೆಯೆಂದರೆ ಆಟಗಳ ಕಾಲ ಕೂಡ. ಚಿನ್ನಿದಾಂಡು, ಬುಗುರಿ, ಮರಕೋತಿ, ಕಬಡ್ಡಿ, ಕ್ರಿಕೆಟ್‌ಗಳ ಜೊತೆಗೇ ಬತ್ತದ ಗದ್ದೆಗಳಲ್ಲಿ ಆಡುವ ಆಟಗಳು, ಇಷ್ಟೇ ನೀರಿರುವ ಹೊಂಡಗಳಲ್ಲಿ ಈಜು ಹೊಡೆಯುವುದು ಕೂಡ ಬೇಸಗೆಯ ನೆನಪುಗಳಲ್ಲಿ ಸೇರಿಹೋಗಿವೆ.
ಇವೆಲ್ಲದರ ಜೊತೆಗೇ ಬೇಸಗೆಗಿದ್ದ ಮತ್ತೊಂದು ಅನ್ನಪೂರ್ಣೆಯ ಗುಣವೆಂದರೆ ಅದು ಯಾರನ್ನೂ ಹಸಿದಿರಲು ಬಿಡುತ್ತಿರಲಿಲ್ಲ. ಆಸುಪಾಸಿನ ಹಳ್ಳಿಗಳ ದೇವಾಲಯಗಳಲ್ಲಿ ನಡೆಯುವ ಜಾತ್ರೆಯ ದಿನಗಳಲ್ಲಿ ಎಲ್ಲರಿಗೂ ಭರ್ಜರಿ ಊಟ ಸಿಗುತ್ತಿತ್ತು. ಕ್ಯಾಲೆಂಡರು, ಫೋನು ಇಲ್ಲದ ದಿನಗಳಲ್ಲಿಯೂ ಯಾವ ಊರಲ್ಲಿ ಯಾವ ದಿನ ಜಾತ್ರೆ ಅನ್ನುವುದು ಅದು ಹೇಗೋ ತಿಳಿದುಬಿಡುತ್ತಿತ್ತು. ಹುಡುಗ ಹುಡುಗಿಯರೆಲ್ಲ ಗುಂಪುಗುಂಪಾಗಿ ಜಾತ್ರೆಗೆ ಹೊರಡುತ್ತಿದ್ದರು. ಜಾತ್ರೆಗೆ ಹೋಗಲಿಕ್ಕೆಂದೇ ಒಂದೇ ಒಂದು ಜೊತೆ ಹೊಸ ಅಂಗಿ-ಚಡ್ಡಿ, ಲಂಗ-ದಾವಣಿ ಇರುತ್ತಿತ್ತು. ಅದನ್ನು ಹಾಕಿಕೊಂಡರೆ ಆವತ್ತು ಜಾತ್ರೆ ಎಂದು ಅರ್ಥ.
ಸಮ್ಮರ್ ಟಿಪ್ಸ್ : ವಾಕಿಂಗ್, ವರ್ಕ್ ಔಟ್ ಮಾಡಲು ಹೋಗೋ ಮುನ್ನ
ಬೇಸಗೆಯ ಬಹುದೊಡ್ಡ ಆಕರ್ಷಣೆಯೆಂದರೆ ಅದು ಅಪರಿಚಿತ ಸಂಗತಿಗಳು ತೋರಿಸುತ್ತಿತ್ತು. ಇದ್ದಕ್ಕಿದ್ದಂತೆ ಒಂದು ಕಾರಿನಲ್ಲಿ ಬರುವ ಅಪರಿಚಿತರು ನಾಟಕದ, ಯಕ್ಷಗಾನದ, ಟೆಂಟ್ ಸಿನಿಮಾದ ತೆಳುವಾದ ಕಾಗದದಲ್ಲಿ ಪ್ರಿಂಟ್ ಮಾಡಿದ ನಾಲ್ಕಾರು ಬಣ್ಣಗಳಲ್ಲಿರುವ ಮಾಹಿತಿಗಳನ್ನು ಕಾರಿನಿಂದ ಎಸೆಯುತ್ತಾ ಹೋಗುತ್ತಿದ್ದರು. ಅದನ್ನು ಹೆಕ್ಕಿಕೊಳ್ಳಲು ಹುಡುಗ ದಂಡೇ ಆ ಕಾರುಗಳ ಹಿಂದೆ ಓಡುತ್ತಿತ್ತು. ಯಾರಿಗೆ ಆ ನೋಟೀಸು ಸಿಕ್ಕಿತೋ ಅವನು ಅತ್ಯಂತ ಅದೃಷ್ಟವಂತ ಎಂದು ಕರೆಸಿಕೊಳ್ಳುತ್ತಿದ್ದ. ನಾಟಕ ನೋಡದೇ ಹೋದರೂ ನಾಟಕದ ನೋಟೀಸು ನೋಡುವುದೇ ಆ ಕಾಲದ ಬಹುದೊಡ್ಡ ಸಾಧನೆಯಾಗಿತ್ತು.
ಇವತ್ತು ಬೆಂಗಳೂರಿನ ರಸ್ತೆಗಳಲ್ಲಿ ಅರಳುವ ಟಬೂಬಿಯಾ, ಮೇ ಫ್ಲವರ್, ಮುತ್ತುಗದ ಹೂವು, ನೆಲಕ್ಕುದುರಿದ ಹೊಂಗೆಯ ಹೂವು, ಕಮ್ಮನೆ ಚಿಮ್ಮಿದ ನಾಗಲಿಂಗಪುಷ್ಪವನ್ನೆಲ್ಲ ನೋಡುತ್ತಿದ್ದರೆ ಬೇಸಗೆ ಅನಂತವಾಗಿರಲಿ ಅನ್ನಿಸುತ್ತದೆ. ಅದರ ಜೊತೆಗೇ ಬಾಲ್ಯವೂ ಉಳಿದಿರಬೇಕಾಗಿತ್ತು ಎಂದು ಆಸೆಯಾಗುತ್ತದೆ.