
ಬೆಂಗಳೂರು(ಸೆ.04): ಕಾರು,ಬೈಕ್ ಪ್ರತಿಯೊಬ್ಬರ ಕನಸು. ನೀವು ಹೊಸ ಕಾರು ಅಥವಾ ಬೈಕ್ ಖರೀದಿಸಲು ಹೊರಟಿದ್ದೀರಾ? ಹಾಗಾದರೆ ನೂತನ ನಿಮಯಗಳನ್ನ ನೀವು ತಿಳಿದಿರಲೇಬೇಕು. ಹೊಸ ನಿಮಯದ ಪ್ರಕಾರ ನೂತನ ಕಾರು ಅಥವಾ ಬೈಕ್ ಖರೀದಿಸೋ ಗ್ರಾಹಕರು ನಿಗಧಿತ ಹಣಕ್ಕಿಂತ ಹೆಚ್ಚಿಗೆ ಹಣ ಪಾವತಿಸಬೇಕಿದೆ. ಇದಕ್ಕೆ ಕಾರಣ ನೂತನ ಇನ್ಶುರೆನ್ಸ್ ಪಾಲಿಸಿ.
ಸುಪ್ರೀಂ ಕೋರ್ಟ್ ಆದೇಶದಂತೆ ಭಾರತೀಯ ಇನ್ಶುರೆನ್ಸ್ ರೆಗ್ಯುಲೇಟರ್ ಅಥಾರಿಟಿ ಹೊಸ ನಿಯಮ ಜಾರಿಗೆ ತಂದಿದೆ. ಇಲ್ಲೀವರೆಗೆ ನೂತನ ಬೈಕ್ ಅಥವಾ ಕಾರುಗಳಿಗೆ ಒಂದು ವರ್ಷದ ವಿಮೆ ಪಾವತಿಸಬೇಕಿತ್ತು. ಆದರೆ ನೂತನ ನಿಯಮದ ಪ್ರಕಾರ ಬೈಕ್ ಖರೀದಿಸುವವರು 5 ವರ್ಷದ ವಿಮೆ ಹಾಗೂ ಕಾರು ಖರೀದಿಸೋ ಗ್ರಾಹಕರು 3 ವರ್ಷದ ವಿಮೆ ಒಮ್ಮಲೆ ಪಾವತಿಸಬೇಕಿದೆ.
1,500 ಸಿಸಿ ಇಂಜಿನ್‌ಗಿಂತ ಹೆಚ್ಚಿನ ಸಿಸಿ ಹೊಂದಿದ ಕಾರುಗಳಿಗೆ ಇನ್ಶುರೆನ್ಸ್ ಮೊತ್ತ 24,305 ರೂ.ಆಗಿದೆ. ಈ ವರೆಗೆ ಅದು 7,890 ರೂ. ಆಗಿತ್ತು. 350 ಸಿಸಿಗಿಂತ ಹೆಚ್ಚಿನ ಸಾಮರ್ಥ್ಯದ ಬೈಕ್‌ಗಳಿಗೆ ಸದ್ಯ 2,323 ರೂ. ಇದೆ. ಆದರೆ ಇನ್ಮುಂದೆ 13,024 ರೂ. ಪಾವತಿ ಮಾಡಬೇಕಾಗುತ್ತದೆ. ಜೊತೆಗೆ ವಾಹನಗಳ ಮಾಡೆಲ್‌ಗಳನ್ನು ಆಧರಿಸಿ ವಿಮೆಯ ಮೊತ್ತ ಬದಲಾವಣೆಯಾಗಲಿದೆ.
ಒಂದು ವರ್ಷದ ವಿಮೆ ಮುಗಿದ ಬಳಿಕ, ಕೆಲ ಕಾರು ಅಥವಾ ಬೈಕ್ ಮಾಲೀಕರು ನವೀಕರಣ ಮಾಡುತ್ತಿರಲಿಲ್ಲ. ಮಾಡಿದರೂ ಕಡಿಮೆ ಮೊತ್ತದ ವಿಮೆ ಮೊರೆ ಹೋಗುತ್ತಿದ್ದರು. ಇದರಿಂದ ಅಪಘಾತ ವಿಮೆ ಮೊತ್ತ ಪಡೆಯುವ ವೇಳೆ ಅಥವಾ ಇತರ ಕಾರಣಗಳಿಂದ ವಿಮೆ ಮೊತ್ತ ಗ್ರಾಹಕರಿಗೆ ಸಿಗುತ್ತಿರಲಿಲ್ಲ. ಹೀಗಾಗಿ ಇದೀಗ ಬೈಕ್‌ಗೆ 5 ಹಾಗೂ ಕಾರಿಗೆ 3 ವರ್ಷದ ವಿಮೆಯಿಂದ ಹೆಚ್ಚಿನ ಸಮಸ್ಯೆಗಳು ಪರಿಹಾರ ವಾಗಲಿದೆ ಅನ್ನೋದು ತಜ್ಞರ ಅಭಿಪ್ರಾಯ.