NGC 972 ಗ್ಯಾಲಕ್ಸಿಯಲ್ಲಿ ಹೊಸ ನಕ್ಷತ್ರಗಳ ಜನನ ಪ್ರಕ್ರಿಯೆ| ನಕ್ಷತ್ರಪುಂಜದಲ್ಲಿ ಅಸಂಖ್ಯ ನಕ್ಷತ್ರಗಳ ಜನನಕ್ಕೆ ವೇದಿಕೆ ಸಿದ್ಧ| ಭೂಮಿಯಿಂದ 70 ಮಿಲಿಯನ್ ಜ್ಯೋತಿವರ್ಷ ದೂರ ಇರುವ NGC 972| ಇಡೀ ಗ್ಯಾಲಕ್ಸಿಯಲ್ಲಿ ಗುಲಾಬಿ ಬಣ್ಣದ ಧೂಳಿನ ಕಣಗಳು| ನಿರಂತರವಾಗಿ ಹೈಡ್ರೋಜನ್ ಗ್ಯಾಸ್ ಹೊರ ಸೂಸುವಿಕೆ|
ವಾಷಿಂಗ್ಟನ್(ಜು.08): ನೋವು ರಹಿತ ಹುಟ್ಟು ಮತ್ತು ಸಾವನ್ನು ಎಲ್ಲಾದರೂ ಕಂಡಿದ್ದೀರಾ?. ಜೀವವೊಂದು ಜನ್ಮ ತಳೆಯುವ ವೇಳೆ, ಜೀವವೊಂದು ತನ್ನ ಜೀವ ಬಿಡುವ ವೇಳೆ ನೋವು ಸಹಜ. ಇದು ಇಡೀ ಬ್ರಹ್ಮಾಂಡಕ್ಕೆ ಅನ್ವಯವಾಗುವ ಕಾನೂನು.
ಅದರಂತೆ ನಕ್ಷತ್ರವೊಂದು ಕೂಡ ಜನ್ಮ ಪಡೆಯುವಾಗ ಮತ್ತು ಸಾವನ್ನಪ್ಪುವಾಗ ಭೀಕರ ನೋವಿಗೆ ತುತ್ತಾಗುತ್ತದೆ. ನಕ್ಷತ್ರವೊಂದರ ಜನ್ಮ ಅದೆಷ್ಟು ವಿಜೃಂಭಣೆಯಿಂದ ಕೂಡಿರುತ್ತದೆಯೋ, ಅದರ ಸಾವು ಅಷ್ಟೇ ಭೀಕರತೆ ಮತ್ತು ಯಾತನಾಮಯ ಎಂಬುದರಲ್ಲಿ ಸಂಶಯವಿಲ್ಲ.
undefined
ಆದರೆ ನಾವಿಲ್ಲಿ ಹೇಳ ಹೊರಟಿರುವುದು ಸಾವಿನ ಬಗ್ಗೆಯಲ್ಲ. ನಕ್ಷತ್ರಗಳ ಆವಾಸ ಸ್ಥಾನವಾಗಿರುವ ಗ್ಯಾಲಕ್ಸಿಯೊಂದರಲ್ಲಿ ಹಲವು ನಕ್ಷತ್ರಗಳು ಜನ್ಮ ತಳೆಯುತ್ತಿರುವ ಸಂತಸದ ಸುದ್ದಿ ಇದು.
ಹೌದು, ಭೂಮಿಯಿಂದ ಸುಮಾರು 70 ಮಿಲಿಯನ್ ಜ್ಯೋತಿವರ್ಷ ದೂರದಲ್ಲಿರುವ NGC 972 ಎಂಬ ಗ್ಯಾಲಕ್ಸಿಯಲ್ಲಿ ಹಲವು ಹೊಸ ನಕ್ಷತ್ರಗಳು ಜನ್ಮ ತಳೆಯುತ್ತಿವೆ. ನಾಸಾದ ಹಬಲ್ ದೂರದರ್ಶಕ ಈ ಗ್ಯಾಲಕ್ಸಿಯಲ್ಲಿ ನಕ್ಷತ್ರಗಳು ಜನ್ಮ ತಳೆಯುತ್ತಿರುವ ದೃಶ್ಯವನ್ನು ಸೆರೆ ಹಿಡಿದಿದೆ.
ಸುರಳಿಯಾಕಾರದ ಈ ನಕ್ಷತ್ರಪುಂಜದಲ್ಲಿ ಹಲವು ನಕ್ಷತ್ರಗಳು ಏಕಾಏಕಿ ಜನ್ಮ ತಳೆಯುತ್ತಿದ್ದು, ಇಡೀ ಗ್ಯಾಲಕ್ಸಿಯನ್ನು ದೀಪಾವಳಿ ಸಂಭ್ರಮದಲ್ಲಿ ದೀಪಗಳು ಮನೆ ಬೆಳಗಿದಂತೆ ಈ ಹೊಸ ನಕ್ಷತ್ರಗಳು ಬೆಳಗುತ್ತಿವೆ.
ನಿರಂತರವಾಗಿ ಹೈಡ್ರೋಜನ್ ಗ್ಯಾಸ್ ಹೊರ ಸೂಸುವಿಕೆಯಿಂದ ಇಡೀ ಗ್ಯಾಲಕ್ಸಿಯಲ್ಲಿ ಗುಲಾಬಿ ಬಣ್ಣದ ಧೂಳಿನ ಕಣಗಳು ಹರಡಿದ್ದು, ಇಡೀ ನಕ್ಷತ್ರಪುಂಜ ನವವಧುವಿನಂತೆ ಕಂಗೊಳಿಸುತ್ತಿದೆ.
1784ರಲ್ಲಿ ಬ್ರಿಟಿಷ್ ಖಗೋಳಶಾಸ್ತ್ರಜ್ಞ ವಿಲಿಯಂ ಹರ್ಷಲ್ NGC 972 ಗ್ಯಾಲಕ್ಸಿಯನ್ನು ಮೊದಲ ಬಾರಿಗೆ ಗುರುತಿಸಿದ್ದ. ಈ ಗ್ಯಾಲಕ್ಸಿಯನ್ನು ಅಭ್ಯಸಿಸುತ್ತಿರುವ ವಿಜ್ಞಾನಿಗಳು, ಅಸಂಖ್ಯ ಹೊಸ ನಕ್ಷತ್ರಗಳ ಜನನ ಪ್ರಕ್ರಿಯೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.