ಒಟಿಟಿ ಪ್ಲಾಟ್‌ಫಾರಂಗೆ ಅಂಕುಶ: ಕೇಂದ್ರಕ್ಕೆ ಹ್ಯಾಟ್ಸಾಫ್‌

By Kannadaprabha NewsFirst Published Nov 13, 2020, 9:37 AM IST
Highlights

ಒಟಿಟಿಗಳಲ್ಲಿ ಬಹುತೇಕ ವಸ್ತುವಿಷಯಗಳಿಗೆ ಲಂಗುಲಗಾಮೇ ಇಲ್ಲ. ಇವುಗಳನ್ನು ವೀಕ್ಷಿಸುವ ಮುಂದಿನ ಪೀಳಿಗೆ ಸಿನಿಮಾ ಪಾತ್ರಧಾರಿಗಳು ಮಾತನಾಡುವ ಅಶ್ಲೀಲ ಅಥವಾ ಕೆಟ್ಟಬೈಗುಳಗಳೇ ಫ್ಯಾಶನ್‌ ಎಂದು ಅಂದುಕೊಳ್ಳುವ ಸಾಧ್ಯತೆ ಇದೆ. ಇದನ್ನೆಲ್ಲಾ ನಿಯಂತ್ರಣದಲ್ಲಿಟ್ಟುಕೊಂಡು ಸೂಕ್ತವಾದ ಕಾನೂನನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ.

ಒಂದು ಕಾಲವಿತ್ತು. ಸಿನಿಮಾಗಳನ್ನು ಟೆಂಟ್‌ಗಳಲ್ಲಿ ಪ್ರದರ್ಶಿಸಲಾಗುತ್ತಿತ್ತು. ನಂತರ ಏಕಪರದೆ ಸಿನಿಮಾ ಮಂದಿರಗಳು ಬಂದವು. ಆ ಬಳಿಕ ಮಲ್ಟಿಫ್ಲೆಕ್ಸ್‌ ಬಂದವು. ಥಿಯೇಟರ್‌ ಗಳಲ್ಲಿ ಬಂದ ಎಷ್ಟೋ ವರ್ಷಗಳ ಬಳಿಕ ಅದೇ ಸಿನಿಮಾ ಟಿವಿಯಲ್ಲಿ ಬರುತ್ತಿತ್ತು. ಆದರೆ ಕಾಲಕ್ರಮೇಣ ಬೆಳ್ಳಿತೆರೆಗೆ ಬಂದ ಕೆಲವೇ ದಿನಗಳ ಒಳಗೇ ಅದೇ ಸಿನಿಮಾ ಟಿವಿಗೆ ಬರುವ ಸಂಪ್ರದಾಯ ಶುರುವಾಯಿತು. ಕೆಲವು ಸಿನಿಮಾಗಳಂತೂ ಥಿಯೇಟರ್‌ ದರ್ಶನವೂ ಆಗದೇ ನೇರ ಟಿವಿಗೆ ಬರಲು ಶುರುವಾಗಿವೆ.

ಮನೆಯ ಒಳಗೇ ಎಚ್ಚರಿಗೆ ಗಂಟೆ

ಆದರೆ ಬೆಳ್ಳಿ ಪರದೆ ಮೇಲೆಯೂ ಬರದೆ, ಟಿವಿಗೂ ಬರದೆ ನೇರವಾಗಿ ಈಗಿನ ಕಾಲದ ನವಮಾಧ್ಯಮಗಳಲ್ಲಿ ಸಿನಿಮಾಗಳು ಮತ್ತು ಸಿನಿಮಾಗಳಂತೆ ಕಾಣುವ ವೆಬ…ಸಿರೀಸ್‌ಗಳು ಬರಲು ಶುರುವಾದ ಮೇಲೆ ಮನೆಯ ಒಳಗೆ ಎಚ್ಚರಿಕೆಯ ಕರೆಗಂಟೆಗಳು ಮೊಳಗಲು ಶುರುವಾದವು. ಒಂದು ಸಿನಿಮಾ ಟಿವಿಯಲ್ಲಿ ಬರುವಾಗ ಮನೆಯ ಸದಸ್ಯರೆಲ್ಲರೂ ಒಟ್ಟಾಗಿ ಕುಳಿತು ನೋಡುವ ಸಂಪ್ರದಾಯ ಇತ್ತು.

ಹಿಂದೆ ವಿಸಿಆರ್‌ಗಳು ಇದ್ದಾಗ ವಿಎಚ್‌ಎಸ್‌ ಕ್ಯಾಸೆಟ್‌ಗಳ ಜಮಾನಾದಲ್ಲಿ ಮನೆಮಂದಿ ಕುಳಿತು ಸಿನಿಮಾವನ್ನು ತಮ್ಮ ಅನುಕೂಲ ಸಮಯದಲ್ಲಿ ನೋಡುತ್ತಿದ್ದರು. ಆದರೆ ಮೊಬೈಲುಗಳು ಬಂದ ನಂತರ ಅದರಲ್ಲಿಯೂ ಹೊಸ ತಂತ್ರಜ್ಞಾನದ ಮೊಬೈಲುಗಳು ಕೈಗೆಟಕುವ ದರಕ್ಕೆ ಸಿಕ್ಕಿದ ಬಳಿಕ ಪ್ರತಿ ಕಿಸೆ ಕೂಡ ನಡೆದಾಡುವ ಸಿನಿಮಾ ಥಿಯೇಟರ್‌ಗಳೇ ಆಗಿ ಹೋದವು.

ಮನೆಯ ನಾಲ್ಕು ಮಂದಿ ಸದಸ್ಯರು ನಾಲ್ಕು ಮೊಬೈಲು ಹಿಡಿದು, ಕಿವಿಗೆ ಇಯರ್‌ ಫೋನ್‌ ಹಾಕಿಕೊಂಡು ಮನೆಯ ಒಳಗೆ, ಅಂಗಳ ಎಲ್ಲಿಯಾದರೂ ಮೂಲೆ ಹುಡುಕಿ ಕುಳಿತರೆ ಅವರು ಯಾವುದನ್ನು ನೋಡುತ್ತಿದ್ದಾರೆ ಎನ್ನುವುದು ಅವರಿಗೆ ಮಾತ್ರ ಗೊತ್ತು. ಇದು ಎರಡನೆಯ ಎಚ್ಚರಿಕೆಯ ಗಂಟೆಯಾಯಿತು.

ಹೇಳುವವರಿಲ್ಲ, ಕೇಳುವವರಿಲ್ಲ

ಅದರ ನಂತರದ್ದು ಇನ್ನಷ್ಟುಭಯಾನಕವಾಗಿತ್ತು. ನವಮಾಧ್ಯಮಗಳ ಭರಾಟೆಯಲ್ಲಿ ಕೆಲವು ಕಂಪೆನಿಗಳು ಜನ್ಮ ಪಡೆದುಕೊಂಡವು. ಅವು ಯುವಜನಾಂಗವನ್ನು ಮನಸ್ಸಿನಲ್ಲಿಟ್ಟು ದೃಶ್ಯ ವೈಭವವನ್ನು ಒಳಗೊಂಡ ಕಿರುಸಿನಿಮಾ, ವೆಬ್‌ ಸಿರೀಸ್‌ಗಳನ್ನು ಸೃಷ್ಟಿಸಿದವು. ಯಾವುದಕ್ಕೆ ವೀಕ್ಷಕರು ಇದ್ದಾರೆ ಎಂದು ತಿಳಿಯುವುದು ಆ ಕ್ಷೇತ್ರದ ಪರಿಣಿತರಿಗೆ ಕಷ್ಟವಾಗಲಿಲ್ಲ. ಯುವ ಜನಾಂಗ ಈಗಿನ ಕಾಲದಲ್ಲಿ ಯಾವುದನ್ನು ನೋಡಲು ಇಷ್ಟಪಡುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.

ಆಮೆಜಾನ್‌ ಪ್ರೈಮ್‌, ನೆಟ್‌ಫ್ಲಿಕ್ಸ್‌, ಹಾಟ್‌ ಸ್ಟಾರ್‌, ವೂಟ್‌, ಡಿಸ್ನಿಪ್ಲಸ್‌ ಹೀಗೆ ವಿವಿಧ ಹೆಸರುಗಳಲ್ಲಿ ಹುಟ್ಟಿಕೊಂಡ 40ರಷ್ಟು ಆ್ಯಪ್‌ಗಳು ಯುವಕ, ಯುವತಿಯರ ಕಣ್ಣು, ಮನಗಳನ್ನು ತುಂಬಿಕೊಂಡವು. ಇದರಿಂದ ಆ ಆ್ಯಪ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚಾಗತೊಡಗಿತು. ಇದನ್ನು ಒಟಿಟಿ ವೇದಿಕೆ ಎನ್ನಲಾಗುತ್ತದೆ. ಒಟಿಟಿ ಅದರ ಪೂರ್ಣನಾಮಧೇಯ ಓವರ್‌ ದಿ ಟಾಪ್‌. ಅವುಗಳಲ್ಲಿ ಬರುವ ಕಿರು ಸಿನಿಮಾಗಳು, ವೆಬ್ ಸಿರೀಸ್‌ಗಳಿಗೆ ಹೇಳುವವರು, ಕೇಳುವವರು ಎನ್ನುವುದೇ ಇರಲಿಲ್ಲ. ಸಭ್ಯರು ಬಳಸಲು ನೂರು ಬಾರಿ ಯೋಚಿಸುವ ಬೈಗುಳಗಳು ಈ ಸಾಮಾಜಿಕ ಜಾಲತಾಣಗಳ ಮೂಲಕ ನಿರ್ಗಳವಾಗಿ ಮನೆಯ ಬೆಡ್‌ ರೂಂಗಳ ಒಳಗೆ ಹರಿಯಲು ಶುರುವಾಯಿತು.

ಯಾವುದಕ್ಕೂ ಸೆನ್ಸಾರ್‌ ಇರಲಿಲ್ಲ

ಒಂದು ಸಿನಿಮಾ ಥಿಯೇಟರ್‌ನಲ್ಲಿ ಬರುವ ಮೊದಲು ಅದನ್ನು ಸೆನ್ಸಾರ್‌ ಮಂಡಳಿಯಲ್ಲಿ ನೇಮಕವಾಗಿರುವ ಸದಸ್ಯರು ವೀಕ್ಷಿಸುತ್ತಾರೆ. ಆ ಸಿನಿಮಾದಲ್ಲಿ ಯಾವುದೇ ಪಾತ್ರಧಾರಿ ಕೆಟ್ಟಬೈಗುಳಗಳನ್ನು, ಅಶ್ಲೀಲ ಶಬ್ದಗಳನ್ನು ಬಳಸಿದರೆ ಅದನ್ನು ಕಟ್‌ ಮಾಡಲು ಸೂಚಿಸಲಾಗುತ್ತದೆ. ಒಂದು ವೇಳೆ ಅನಿವಾರ್ಯವಾಗಿ ಆ ದೃಶ್ಯವನ್ನು ತುಂಡರಿಸಲು ಅಥವಾ ಆ ವಾಕ್ಯಗಳನ್ನು ಮ್ಯೂಟ್‌ ಮಾಡಲು ಆಗದಿದ್ದರೆ ಆಗ ಆ ಸಿನಿಮಾಕ್ಕೆ ‘ಎ’ ಪ್ರಮಾಣಪತ್ರ ನೀಡಲಾಗುತ್ತದೆ.

ಅದರ ಅರ್ಥ ಆ ಸಿನಿಮಾವನ್ನು ವಯಸ್ಕರು ಮಾತ್ರ ನೋಡಬಹುದಾಗಿದ್ದು ಅಪ್ರಾಪ್ತ ವಯಸ್ಸಿನವರು ನೋಡುವಂತಿಲ್ಲ. ಆದರೆ ಒಟಿಟಿಗಳಲ್ಲಿ ಬರುವ ಸಿನಿಮಾದ ದೃಶ್ಯ, ಭಾಷೆ ಬಳಸುವ ಶೈಲಿ, ಅಶ್ಲೀಲತೆ, ಬೈಗುಳ, ಕೆಟ್ಟಸಂಸ್ಕಾರ ನೋಡಿದರೆ ಅದನ್ನು ವೀಕ್ಷಿಸುವ ಮಕ್ಕಳು ಕೆಲವು ದಿನ ನಿರಂತರವಾಗಿ ಅದನ್ನು ನೋಡಿದರೆ ಭವಿಷ್ಯದಲ್ಲಿ ಅದನ್ನೇ ಅನುಕರಿಸುವುದು ಮಾತ್ರವಲ್ಲ, ಅದೇ ನಮ್ಮ ಸಂಸ್ಕೃತಿ ಎಂದು ಅಂದುಕೊಳ್ಳುವುದರಲ್ಲಿ ಸಂಶಯವೇ ಇಲ್ಲ.

ಸಾಮಾನ್ಯವಾಗಿ ಒಂದು ಸಿನಿಮಾ ಆರ್ಥಿಕವಾಗಿ ಯಶಸ್ವಿಯಾಗಬೇಕಾದರೆ ಅದನ್ನು ಎಲ್ಲಾ ವಯಸ್ಸಿನವರು ಪ್ರಾಯಭೇದವಿಲ್ಲದೆ ನೋಡಬೇಕು. ಮಕ್ಕಳು ನೋಡುವಂತಹ ಸಿನಿಮಾ ಎಂದರೆ ಆಗ ಅವರ ಜೊತೆ ಇಡೀ ಕುಟುಂಬದ ಮಂದಿ ಥಿಯೇಟರ್‌ಗೆ ಬರುತ್ತಾರೆ. ಆದರೆ ಅಂತಹ ಸಿನಿಮಾಗಳಿಗೆ ‘ಯು’ ಪ್ರಮಾಣಪತ್ರ ಸಿಗಬೇಕು. ಆದರೆ ಒಟಿಟಿಗಳಲ್ಲಿ ಬಹುತೇಕ ವಸ್ತುವಿಷಯಗಳಿಗೆ ಲಂಗುಲಗಾಮೇ ಇರುವುದಿಲ್ಲ. ಅವರಿಗೆ ಕೇವಲ ಆದಾಯವೇ ಮುಖ್ಯ. ಇವರ ಹಣದಾಸೆಯಿಂದ ನಮ್ಮ ಸಮಾಜದ ಮುಂದಿನ ಪೀಳಿಗೆ ಸಿನಿಮಾ ಪಾತ್ರಧಾರಿಗಳು ಮಾತನಾಡುವ ಅಶ್ಲೀಲ ಅಥವಾ ಕೆಟ್ಟಬೈಗುಳಗಳೇ ಫ್ಯಾಶನ್‌ ಎಂದು ಅಂದುಕೊಳ್ಳುವ ಸಾಧ್ಯತೆ ಇದೆ. ಇದನ್ನೆಲ್ಲಾ ನಿಯಂತ್ರಣದಲ್ಲಿಟ್ಟುಕೊಂಡು ಸೂಕ್ತವಾದ ಕಾನೂನನ್ನು ನಮ್ಮ ಕೇಂದ್ರ ಸರಕಾರ ಜಾರಿಗೆ ತಂದಿದೆ.

ಅಶ್ಲೀಲ ಕಂಟೆಂಟಿಗೆ ಕಡಿವಾಣ

ಒಟಿಟಿ ಫ್ಲಾಟ್‌ ಫಾರಂಗಳಲ್ಲಿ ಪ್ರಸಾರವಾಗುವ ಚಲನಚಿತ್ರಗಳು, ವೆಬ… ಶೋಗಳು, ಆನ್‌ಲೈನ್‌ ವಿಡಿಯೋ, ಆಡಿಯೋ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ವೆಬ…ಸೈಟ್‌ ಗಳು ಸೇರಿದಂತೆ ಎಲ್ಲಾ ಡಿಜಿಟಲ… ಕಂಟೆಂಟ್‌ಅನ್ನೂ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ವ್ಯಾಪ್ತಿಗೆ ಸೇರಿಸಿ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಈ ಮೂಲಕ ಸುಳ್ಳುಸುದ್ದಿ ಪ್ರಸಾರ, ಆನ್‌ಲೈನ್‌ ಪ್ರಭಾವ, ಅಶ್ಲೀಲ ಕಂಟೆಂಟಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಈ ಸಂಬಂಧ ಅಧಿಸೂಚನೆಗೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಸಹಿ ಹಾಕಿದ್ದಾರೆ.

ಇಲ್ಲಿಯ ತನಕ ಡಿಜಿಟಲ್ ಕಂಟೆಂಟ್‌ ನಿಯಂತ್ರಕವಾಗಿ ಯಾವುದೇ ಪ್ರಾಧಿಕಾರ ಅಥವಾ ಮಂಡಳಿ ಇರಲಿಲ್ಲ. ಸಂವಿಧಾನದ 77ನೇ ವಿಧಿಯ ಅನುಚ್ಛೇದ 3ರಲ್ಲಿ ಪ್ರಾಪ್ತವಾಗಿರುವ ಅಧಿಕಾರವನ್ನು ಬಳಸಿ ಡಿಜಿಟಲ… ಮಾಧ್ಯಮಗಳನ್ನು ನಿಯಂತ್ರಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ (ವ್ಯಾಪಾರ ಹಂಚಿಕೆ) ನಿಯಮಗಳು 1961ಕ್ಕೆ ತಿದ್ದುಪಡಿ ತರಲಾಗಿದೆ. ಭಾರತ ಸರ್ಕಾರ (ವ್ಯಾಪಾರ ಹಂಚಿಕೆ) 35ನೇ ತಿದ್ದುಪಡಿ ನಿಯಮ-2020 ಎಂಬ ಹೆಸರಿನಲ್ಲಿ ಹೊಸ ನಿಯಮವು ತಕ್ಷಣದಿಂದಲೇ ಜಾರಿಗೆ ತಂದಿದೆ ಎಂದು ಸಂಪುಟ ಸಚಿವಾಲಯವು ತಿಳಿಸಿದೆ.

ಪೋಷಕರು ಸಂತೋಷಪಡಲಿ

ದಿನದಿಂದ ದಿನಕ್ಕೆ ಅನಿಯಂತ್ರಿತವಾಗುತ್ತಿರುವ ಆನ್‌ಲೈನ್‌ ಡಿಜಿಟಲ್ ಕಂಟೆಂಟಿಗೆ ಕಡಿವಾಣ ಹಾಕಲು ನಿಯಂತ್ರಣ ಪ್ರಾಧಿಕಾರ ರಚಿಸಬೇಕೆಂದು ವಕೀಲರಾದ ಶಶಾಂಕ್‌ ಶೇಖರ್‌ ಝಾ ಮತ್ತು ಅಪೂರ್ವ ಅರ್ಹತಿಯಾ ಅವರು ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಿದ್ದರು. ಅಕ್ಟೋಬರ್‌ನಲ್ಲಿ ಈ ಸಂಬಂಧ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೇಳಿತ್ತು. ಈ ಮಧ್ಯೆ, ಇಂತಹ ಪ್ರಾಧಿಕಾರ ರಚನೆ ಅತ್ಯಗತ್ಯ ಎಂದು ಸ್ವತಃ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವಾಲಯವು ಮತ್ತೊಂದು ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ಹೇಳಿತ್ತು.

ಅಲ್ಲದೆ, ಇದಕ್ಕೆ ಸಂಬಂಧಿಸಿದ ನಿಯಮಗಳನ್ನು ರೂಪಿಸಲು ಮಾರ್ಗದರ್ಶನಕ್ಕಾಗಿ ಅಮಿಕಸ್‌ ಕ್ಯೂರಿಯನ್ನು ನೇಮಿಸಬೇಕೆಂದು ಕೇಂದ್ರ ಸರ್ಕಾರ ಕೋರಿತ್ತು. ಈಗ ಅಂತಿಮವಾಗಿ ರಾಷ್ಟ್ರಪತಿಗಳ ಅಂಕಿತದೊಂದಿಗೆ ಮುಂದಿನ ದಿನಗಳಲ್ಲಿ ಒಟಿಟಿ ಪ್ಲಾಟ್‌ಫಾರಂಗಳಿಗೆ ಅಂಕುಶ ಬಿದ್ದಂತೆ ಆಗಿದೆ. ಈ ಬಗ್ಗೆ ಓಟಿಟಿಗಾಗಿ ಸಿನಿಮಾ, ವೆಬ… ಸಿರೀಸ್‌ ತಯಾರಿಸುವ ನಿರ್ಮಾಪಕರು, ನಿರ್ದೇಶಕರು ತಮ್ಮ ಅಸಮಾಧಾನ ತೋರಿದ್ದಾರೆ. ಆದರೆ ಭಾರತದ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟು ಕೇಂದ್ರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನಕ್ಕೆ ದೇಶದ ಅಸಂಖ್ಯಾತ ಪೋಷಕರು ಹರ್ಷ ವ್ಯಕ್ತಪಡಿಸಲಿದ್ದಾರೆ.

- ನಮೋ ನರೇಶ್‌

 

click me!