ಮೊಬೈಲ್ ಚಾರ್ಜಿಂಗ್ ಮತ್ತು ಬ್ಯಾಟರಿ ಲೈಫ್ : ನೀವು ತಿಳಿದಿರಬೇಕಾದ 8 ವಿಷಯಗಳು

By Web DeskFirst Published Sep 10, 2018, 8:57 PM IST
Highlights

ಹೊಸ ಮೊಬೈಲ್... ಆದರೆ ಚಾರ್ಜ್ ನಿಲ್ಲುವುದೇ ಇಲ್ಲ ಎಂಬ ಗೋಳು?  ದುಬಾರಿ ಮೊಬೈಲ್... ಆದರೆ ಬ್ಯಾಟರಿ ಬೇಗ ಹಾಳಾಯಿತೆಂಬ ಚಿಂತೆಯೇ? ಹಾಗಾದರೆ ನಿಮ್ಮ ಮೊಬೈಲ್ ಚಾರ್ಜಿಂಗ್ ಪರಿಪಾಠ ಹೇಗಿದೆಯೆಂದು ಗಮನಿಸಿ...   
 

ನಾವು ಹೆಚ್ಚು ಹಣ ಕೊಟ್ಟು ದುಬಾರಿ ಮೊಬೈಲ್‌ಗಳನ್ನು  ಖರೀದಿಸುತ್ತೇವೆ.  ಆದರೆ ಅದರ ನಿರ್ವಹಣೆಯ ಬಗ್ಗೆ ಅಸಡ್ಡೆ ತೊರುವವರೇ ಹೆಚ್ಚು. ವಿಶೇಷವಾಗಿ ಮೊಬೈಲ್ ಚಾರ್ಜಿಂಗ್ ವಿಷಯದಲ್ಲಿ ಯಾವುದೇ ಶಿಸ್ತು ಇಲ್ಲಿದಿರುವುದನ್ನು ನಾವು ಕಾಣಬಹುದು. ಪರಿಣಾಮವಾಗಿ ಮೊಬೈಲ್ ಚಾರ್ಜ್ ಬೇಗನೇ ಮುಗಿಯುವುದು ಅಥವಾ ಬ್ಯಾಟರಿ ಬೇಗನೇ ಹಾಳಾಗುವುದು ಸಾಮಾನ್ಯ. ಮೊಬೈಲ್ ಚಾರ್ಜಿಂಗ್ ಹಾಗೂ ಬ್ಯಾಟರಿ ದೀರ್ಘಕಾಲ ಬಾಳಿಕೆ ಬರಬೇಕಾದರೆ ಕೆಲವು ಉತ್ತಮ ಚಾರ್ಜಿಂಗ್ ಪರಿಪಾಠಗಳನ್ನು ಬೆಳೆಸಿಕೊಳ್ಳಬೇಕು. 

1. ನಿಮ್ಮ ಫೋನನ್ನು ಅದರದ್ದೇ ಆದ ಚಾರ್ಜರಿನಿಂದ ಚಾರ್ಜ್ ಮಾಡಿ. ಮೊಬೈಲ್ ಫೋನ್‌ಗಳು ಇತರ ಚಾರ್ಜರ್‌ಗಳಿಂದ ಚಾರ್ಜ್ ಆಗುವುದಾದರೂ, ಅದು ಅಸಲಿ ಫೋನ್ ಚಾರ್ಜರ್‌ಗೆ ಸಂಪೂರ್ಣವಾಗಿ ಹೋಲಿಕೆಯಾಗದಿದ್ದಲ್ಲಿ ನಿಮ್ಮ ಫೋನ್ ಬ್ಯಾಟರಿ ಸಾಮರ್ಥ್ಯದ ಮೇಲೆ ಅದು ದುಷ್ಪರಿಣಾಮ ಬೀಳುತ್ತದೆ.  
   
2. ಹಣ ಉಳಿಸಲು ಅಗ್ಗದ/ಕಳಪೆ ಚಾರ್ಜರ್‌ಗಳನ್ನು ಬಳಸಬೇಡಿ. ಅವುಗಳು ವಿದ್ಯುತ್ ಪ್ರವಾಹದ ಏರಿಳಿತಗಳಿಂದ ಅಥವಾ ಚಾರ್ಜ್ ಸಂಪೂರ್ಣವಾದ ಬಳಿಕ ಆಗುವ ಹಾನಿಯಿಂದ ರಕ್ಷಿಸುವ ಸುರಕ್ಷತಾ ತಂತ್ರಜ್ಞಾನವನ್ನು ಹೊಂದಿರುವುದಿಲ್ಲ. ಅಂತಹ ಚಾರ್ಜರ್‌ಗಳಿಂದ ನಿಮ್ಮ ಫೋನ್ ಶಾಶ್ವತವಾಗಿ ಹಾಳಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.  
    
3. ಚಾರ್ಜ್ ಮಾಡುವ ವೇಳೆ ಫೋನ್ ಮೇಲಿರುವ ರಕ್ಷಣಾ ಕವಚ (Protective Case )ನ್ನು ತೆಗೆಯಿರಿ. ಚಾರ್ಜ್ ಆಗುವ ಸಮಯದಲ್ಲಿ ಫೋನ್ ಬ್ಯಾಟರಿಗಳು ಬಿಸಿಯಾಗುವುದು ಸಾಮಾನ್ಯ. ಆ ಬಿಸಿ ಕಡಿಮೆಯಾಗಲು ನೀವು ಅಳವಡಿಸಿರುವ ರಕ್ಷಣಾ ಕವಚಗಳು ತಡೆಯಾಗಬಹುದು.

4. ಯಾವಾಗಲೂ ತ್ವರಿತ (Fast) ಚಾರ್ಜರ್’ಗಳನ್ನು ಬಳಸುವುದು ನಿಮ್ಮ ಫೋನ್ ಬ್ಯಾಟರಿಗೆ ಒಳ್ಳೆಯದಲ್ಲ. ಫಾಸ್ಟ್ ಚಾರ್ಜರ್‌ನಲ್ಲಿ ಹೆಚ್ಚು ವೋಲ್ಟೇಜ್ ಸರಬರಾಜಾಗುವುದರಿಂದ ಬ್ಯಾಟರಿ ಬೇಗನೇ ಬಿಸಿಯಾಗುತ್ತದೆ. 

5. ನಿಮ್ಮ ಫೋನ್, ಬ್ಯಾಟರಿ ಸೆಟ್ಟಿಂಗ್’ನಲ್ಲಿ ಸಾಮಾನ್ಯ ಚಾರ್ಜಿಂಗ್ ಆಯ್ಕೆಯನ್ನು ನೀಡಿದ್ದರೆ, ಅದನ್ನು ಬಳಸಿಕೊಳ್ಳಿ. ನಿಮ್ಮ ಫೋನ್ ಬಹಳ ಬಿಸಿಯಾಗಿದ್ದರೆ ಪವರ್ ಬಟನ್ ಆಫ್ ಮಾಡಿಬಿಡಿ. ಫೋನ್ ತಣ್ಣಗಾದ ಬಳಿಕ ಆದನ್ನು ಆನ್ ಮಾಡಿ.

6. ರಾತ್ರಿಯಿಡೀ ಫೋನನ್ನು ಚಾರ್ಜಿಂಗ್‌ಗೆ ಇಡಬೇಡಿ. ಅಗತ್ಯಕ್ಕಿಂತ ಹೆಚ್ಚು ಚಾರ್ಜಿಂಗ್ ನಿಮ್ಮ ಫೋನ್ ಬ್ಯಾಟರಿಯ ಬಾಳಿಕೆಯನ್ನು ಕುಂಠಿತಗೊಳಿಸುವುದು.

7. ಚಾರ್ಜ್ ಮಾಡುವಾಗ ಕನಿಷ್ಠ ಶೇ.80ರಷ್ಟು ಬ್ಯಾಟರಿ ಚಾರ್ಜ್ ಮಾಡಿರಿ. ಪದೇ ಪದೇ ಚಾರ್ಜ್ ಮಾಡುವ ಅಭ್ಯಾಸ ಬಿಟ್ಟುಬಿಡಿ. ಮೊಬೈಲ್ ಬ್ಯಾಟರಿ ಶೇ. 20ರಷ್ಟಕ್ಕೆ ಬಂದಾಗ ಮಾತ್ರ ಚಾರ್ಜ್ ಮಾಡಿ. ಪದೇ ಪದೇ ಚಾರ್ಜ್  ಮಾಡುವುದರಿಂದ  ಬ್ಯಾಟರಿ ಮೇಲೆ ಪರಿಣಾಮ ಬೀರುತ್ತದೆ. ಫೋನ್ ಬ್ಯಾಟರಿ ಸಂಪೂರ್ಣ ಮುಗಿಯುವವರೆಗೂ ಫೋನ್ ಬಳಸುವುದರಿಂದಲೂ ಬ್ಯಾಟರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

8. ಪವರ್ ಬ್ಯಾಂಕ್ ಬಳಸುವಾಗ ಎಚ್ಚರವಿರಲಿ. ನೀವು ಬಳಸುವ ಪವರ್ ಬ್ಯಾಂಕ್ ವಿದ್ಯುತ್ ಪ್ರವಾಹದ ಏರಿಳಿತ, ಶಾರ್ಟ್ ಸರ್ಕ್ಯೂಟ್, ದೀರ್ಘ ಚಾರ್ಜಿಂಗಳಿಂದಾಗುವ ಹಾಗೂ ಅತೀ ಬಿಸಿಯಾಗುವಿಕೆ ಸಮಸ್ಯೆಗಳಿಂದ ನಿಮ್ಮ ಫೋನ್’ಗೆ ಸುರಕ್ಷತೆಯನ್ನೊದಗಿಸುವ ಬಗ್ಗೆ ಖಾತ್ರಿ ಪಡಿಸಿಕೊಳ್ಳಿ.
 

click me!
Last Updated Sep 19, 2018, 9:22 AM IST
click me!