ದೇಶದಲ್ಲಿ 100 ದಿನದಲ್ಲಿ 5ಜಿ ಸೇವೆ ಪ್ರಯೋಗ

By Web DeskFirst Published Jun 4, 2019, 10:07 AM IST
Highlights

ದೇಶದಲ್ಲಿ ಶೀಘ್ರದಲ್ಲೇ 5 ಜಿ ಸೇವೆ ಆರಂಭ ಮಾಡಲಾಗುತ್ತಿದೆ. ಇನ್ನು 100 ದಿನದಲ್ಲಿ ದೇಶದಲ್ಲಿ ಈ ಸೇವೆ ಲಭ್ಯವಾಗಲಿದೆ ಎಂದು ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನವದೆಹಲಿ: ಮುಂದಿನ 100 ದಿನಗಳಲ್ಲಿ ದೇಶದಲ್ಲಿ 5ಜಿ ದೂರಸಂಪರ್ಕ ಸೇವೆಯ ಪ್ರಯೋಗ ಆರಂಭವಾಗಲಿದೆ ಎಂದು ನೂತನ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ. ಆರ್ಥಿಕ ಸಂಕಷ್ಟಎದುರಿಸುತ್ತಿರುವ ಬಿಎಸ್‌ಎನ್‌ಎಲ್‌ ಹಾಗೂ ಎಂಟಿಎನ್‌ಎಲ್‌ಗಳ ಪುನರುಜ್ಜೀವನಕ್ಕೆ ಆದ್ಯತೆ ನೀಡುವುದಾಗಿಯೂ ಪ್ರಕಟಿಸಿದ್ದಾರೆ.

ನೂತನ ಟೆಲಿಕಾಂ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರವಿಶಂಕರ್‌ ಪ್ರಸಾದ್‌, ಈ ವರ್ಷದ ಒಳಗಾಗಿಯೇ 5ಜಿ ತರಂಗಾಂತರ ಹರಾಜು ನಡೆಯಲಿದ್ದು, 100 ದಿನಗಳಲ್ಲಿ 5ಜಿ ಪ್ರಾಯೋಗಿಕ ಪರೀಕ್ಷೆ ನಡೆಯಲಿದೆ. 5 ಲಕ್ಷ ವೈಫೈ ಹಾಟ್‌ಸ್ಪಾಟ್‌ಗಳ ಅವಡಿಕೆ ಮತ್ತು ಟೆಲಿಕಾಂ ಉತ್ಪಾದನೆಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದ್ದಾರೆ.

ತಲಾಖ್‌ ಮಸೂದೆ ಮರು ಮಂಡನೆ:

ಇದೇ ವೇಳೆ ಕಾನೂನು ಸಚಿವರಾಗಿಯೂ ಅಧಿಕಾರ ವಹಿಸಿಕೊಂಡ ರವಿಶಂಕರ್‌ ಪ್ರಸಾದ್‌, ತ್ರಿವಳಿ ತಲಾಖ್‌ ಅನ್ನು ನಿಷೇಧಿಸಲು ಸರ್ಕಾರ ಸಂಸತ್ತಿನಲ್ಲಿ ಮಸೂದೆಯೊಂದನ್ನು ಮಂಡಿಸಲಿದೆ ಎಂದು ಹೇಳಿದ್ದಾರೆ. ರಾಜ್ಯಸಭೆಯಲ್ಲಿ ಪಾಸಾಗದೇ ಬಾಕಿ ಉಳಿದುಕೊಂಡಿದ್ದ ತ್ರಿವಳಿ ತಲಾಖ್‌ ಮಸೂದೆ, 16ನೇ ಲೋಕಸಭೆ ವಿಸರ್ಜನೆಗೊಂಡ ಹಿನ್ನೆಲೆಯಲ್ಲಿ ರದ್ದಾಗಿತ್ತು. ಹೀಗಾಗಿ ಈ ಮಸೂದೆಯನ್ನು ಮತ್ತೊಮ್ಮೆ ಸಂಸತ್ತಿನಲ್ಲಿ ಮಂಡಿಸಿ ಅನುಮೋದನೆ ಪಡೆದುಕೊಳ್ಳಬೇಕಿದೆ. ಈ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ, ತ್ರಿವಳಿ ತಲಾಖ್‌ ಮಸೂದೆ ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಭಾಗವಾಗಿದ್ದು, ಪುನಃ ಮಂಡಿಸಲಾಗುವುದು. ಈ ವಿಷಯವಾಗಿ ರಾಜಕೀಯ ಸಮಾಲೋಚನೆ ನಡೆಸಲಾಗುವುದು ಎಂದು ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

ಕಾನೂನು ಸಚಿವಾಲಯ ಪೋಸ್ಟಾಫೀಸ್‌ ಅಲ್ಲ:

ನ್ಯಾಯಾಂಗ ನೇಮಕ ವಿಷಯದಲ್ಲಿ ತಾವು ಅಥವಾ ತಮ್ಮ ಸಚಿವಾಲಯ ಪೋಸ್ಟ್‌ ಆಫೀಸ್‌ ಅಲ್ಲ. ನ್ಯಾಯಾಧೀಶರ ನೇಮಕದಲ್ಲಿ ಪಾಲುದಾರನಾಗಿ ಸುಪ್ರೀಂಕೋರ್ಟ್‌ ಮತ್ತು ಹೈಕೋರ್ಟ್‌ನ ಸಲಹೆಯಂತೆ ಕಾರ್ಯನಿರ್ವಹಿಸಲಾಗುವುದು. ಕಾನೂನು ಸಚಿವಾಲಯವೆಂದರೆ ಪೋಸ್ಟ್‌ ಆಫೀಸ್‌ ರೀತಿ ಕೇವಲ ಫೈಲ್‌ಗಳನ್ನು ಸ್ವೀಕರಿಸುವುದಲ್ಲ. ಕಾನೂನು ಸಚಿವ ಮತ್ತು ಕಾನೂನು ಸಚಿವಾಲಯ ಕೊಲಿಜಿಯಂ ವ್ಯವಸ್ಥೆಗೆ ಗೌರವ ನೀಡಲಿದೆ. ಕೆಳ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ನೇಮಿಸಲು ಸರ್ಕಾರ ತ್ವರಿತವಾಗಿ ಸಮಾಲೋಚನೆ ನಡೆಸಲಿದೆ ಎಂದು ರವಿಶಂಕರ್‌ ಪ್ರಸಾದ್‌ ಹೇಳಿದ್ದಾರೆ.

5ಜಿ ವಿಶೇಷತೆ ಏನು?

- 4ಜಿಗೆ ಹೋಲಿಸಿದರೆ 5ಜಿ 10 ಪಟ್ಟು ವೇಗದಲ್ಲಿ ಡೇಟಾಗಳನ್ನು ವರ್ಗಾವಣೆ ಮಾಡುತ್ತದೆ.

- 4ಜಿ ಬಳಸಿ ಹೈಡೆಫಿನಿಷನ್‌ ಚಿತ್ರಗಳನ್ನು ಡೌನ್‌ಲೌಡ್‌ ಮಾಡಲು 10 ನಿಮಿಷಕ್ಕಿಂತಲೂ ಹೆಚ್ಚಿನ ಸಮಯ ಬೇಕು. ಆದರೆ, 5ಜಿಯಲ್ಲಿ ಕೇವಲ ಒಂದು ಸೆಕೆಂಡ್‌ ಸಾಕು.

- 5ಜಿಯಲ್ಲಿ ಪ್ರತಿ ಸೆಕೆಂಡಿಗೆ 20 ಗಿಗಾಬೈಟ್‌ ವೇಗದಲ್ಲಿ ಇಂಟರ್‌ನೆಟ್‌ ಸೇವೆ ಲಭ್ಯವಾಗಲಿದೆ.

- ವರ್ಚುವಲ್‌ ರಿಯಾಲಿಟಿ ವಿಡಿಯೋಗಳನ್ನು ಬಫರ್‌ ಇಲ್ಲದೇ ವೀಕ್ಷಿಸಬಹುದಾಗಿದೆ.

- ಭಾರತದಲ್ಲಿ 2020ರ ವೇಳೆಗೆ 5ಜಿ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ.

click me!