ಬೆಂಗಳೂರು: ಕಳೆದ ಮೂರು ದಿನಗಳಿಂದ ಸುರಿದ ಮಳೆಯಿಂದಾಗಿ ರಾಜಧಾನಿ ಬೆಂಗಳೂರಿನ 50ಕ್ಕೂ ಅಧಿಕ ಬಡಾವಣೆಗಳು ಮುಳುಗಡೆಯಾಗಿವೆ. ಮತ್ತೊಂದೆಡೆ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡ ಪರಿಣಾಮ ವಾಹನ ದಟ್ಟಣೆ ಹೆಚ್ಚಾಗಿದೆ. ಇದೇ ಮಳೆ ಮುಂದುವರಿದ್ರೆ ಬೆಂಗಳೂರಿನಲ್ಲಿ ಪ್ರವಾಹದ ಆತಂಕ ಎದುರಾಗಿದೆ.ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಲ್ಲ 4 ತಾಲೂಕುಗಳಲ್ಲೂ ವ್ಯಾಪಕವಾಗಿ ಮಳೆಯಾಗಿದೆ. ರಾತ್ರಿಯಿಡೀ ಸುರಿದ ಮಳೆಯಿಂದ ಜನಜೀವನ ಬಾಧಿತವಾಗಿದ್ದು, ಕೆಲವೆಡೆ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿರುವ ಕುರಿತು ವರದಿಯಾಗಿದೆ. ವರುಣನ ಅಬ್ಬರದಿಂದ ರಾಜಧಾನಿಯಲ್ಲಿ ಸೃಷ್ಟಿಯಾಗಿರುವ ಜಲ ಪ್ರವಾಹದಲ್ಲಿ ಸಂಕಷ್ಟಕ್ಕೆ ಸಿಲುಕಿದ ನಾಗರಿಕರ ನೆರವಿಗೆ ‘ಜಲ ಯೋಧ’ರಂತೆ ಸಂಚಾರ ವಿಭಾಗದ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ. ಮೂಲ ಸೌಲಭ್ಯಗಳ ಉಸ್ತುವಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಜಲಮಂಡಳಿ ಹೊಣೆಗಾರಿಕೆ ಇದೆ. ಆದರೆ ಮಳೆ ಸಂಕಷ್ಟದಲ್ಲಿ ಜನರ ಸುರಕ್ಷೆಗೆ ಸಮರೋಪಾದಿಯಲ್ಲಿ ಪೊಲೀಸರು ಕೆಲಸಕ್ಕಿಳಿದಿದ್ದಾರೆ.
