ಜ.23ಕ್ಕೆ 545 ಎಸ್‌ಐ ಹುದ್ದೆಗೆ ಮರುಪರೀಕ್ಷೆ

By Kannadaprabha News  |  First Published Jan 9, 2024, 5:24 AM IST

ಕಳೆದ ಡಿ.23ರಂದು ಬೆಂಗಳೂರಿನಲ್ಲಿ ಮಾತ್ರ ಮರು ಪರೀಕ್ಷೆ ನಡೆಸಲು ಪ್ರಾಧಿಕಾರ ದಿನಾಂಕ ಪ್ರಕಟಿಸಿತ್ತು. ಆದರೆ, ಅಭ್ಯರ್ಥಿಗಳು ಪರೀಕ್ಷೆಗೆ ತಯಾರಾಗಲು ಹೆಚ್ಚಿನ ಕಾಲಾವಕಾಶ ನೀಡಲು ಪರೀಕ್ಷೆ ಮುಂದೂಡಬೇಕೆಂದು ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದರು. ಇದಕ್ಕೆ ಮಣಿದ ಸರ್ಕಾರ ಒಂದು ತಿಂಗಳ ಕಾಲ ಪರೀಕ್ಷೆಯನ್ನು ಮುಂದೂಡುವುದಾಗಿ ಪ್ರಕಟಿಸಿತ್ತು. ಈಗ ದಿನಾಂಕ ಪ್ರಕಟಿಸಿದೆ.


ಬೆಂಗಳೂರು(ಜ.09): ಪರೀಕ್ಷಾ ಅಕ್ರಮ ಪ್ರಕರಣದ ಹಿನ್ನೆಲೆಯಲ್ಲಿ ರದ್ದಾಗಿದ್ದ 545 ಪೊಲೀಸ್‌ ಸಬ್‌ ಇನ್ಸ್‌ಪೆಕ್ಟರ್‌ (ಪಿಎಸ್‌ಐ) ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಮರು ಪರೀಕ್ಷೆಯನ್ನು ಜ. 23ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಮಂಗಳವಾರ ಪ್ರಕಟಿಸಿದೆ. 

ಕಳೆದ ಡಿ.23ರಂದು ಬೆಂಗಳೂರಿನಲ್ಲಿ ಮಾತ್ರ ಮರು ಪರೀಕ್ಷೆ ನಡೆಸಲು ಪ್ರಾಧಿಕಾರ ದಿನಾಂಕ ಪ್ರಕಟಿಸಿತ್ತು. ಆದರೆ, ಅಭ್ಯರ್ಥಿಗಳು ಪರೀಕ್ಷೆಗೆ ತಯಾರಾಗಲು ಹೆಚ್ಚಿನ ಕಾಲಾವಕಾಶ ನೀಡಲು ಪರೀಕ್ಷೆ ಮುಂದೂಡಬೇಕೆಂದು ಬೆಳಗಾವಿ ಅಧಿವೇಶನದಲ್ಲಿ ಶಾಸಕರು ಸರ್ಕಾರವನ್ನು ಒತ್ತಾಯಿಸಿದ್ದರು. ಇದಕ್ಕೆ ಮಣಿದ ಸರ್ಕಾರ ಒಂದು ತಿಂಗಳ ಕಾಲ ಪರೀಕ್ಷೆಯನ್ನು ಮುಂದೂಡುವುದಾಗಿ ಪ್ರಕಟಿಸಿತ್ತು. ಈಗ ದಿನಾಂಕ ಪ್ರಕಟಿಸಿದೆ.

Tap to resize

Latest Videos

undefined

ಎನ್‌ಪಿಎಸ್ ರದ್ದತಿ ಬಗ್ಗೆ ಸಚಿವರ ಜತೆ ಚರ್ಚಿಸಿ ತೀರ್ಮಾನ: ಸಿದ್ದು

ಪಿಎಸ್‌ಐ ನೇಮಕಾತಿಗೆ 2021ರ ಅಕ್ಟೋಬರ್‌ನಲ್ಲಿ ಪೊಲೀಸ್‌ ಇಲಾಖೆ ನಡೆಸಿದ್ದ ಪರೀಕ್ಷೆಯಲ್ಲಿ ಭಾರಿ ಅಕ್ರಮ ನಡೆದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ ಇಡೀ ಪರೀಕ್ಷೆಯನ್ನೇ ರದ್ದುಪಡಿಸಿ ಮರು ಪರೀಕ್ಷೆಗೆ ಆದೇಶಿಸಿತ್ತು. ಇದನ್ನು ಕೆಲ ಅಭ್ಯರ್ಥಿಗಳು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆದರೆ ಹೈಕೋರ್ಟ್‌ ನೇಮಕಾತಿ ಪರೀಕ್ಷೆ ರದ್ದುಪಡಿಸಿ ಹೊಸದಾಗಿ ಸ್ವತಂತ್ರ ಸಂಸ್ಥೆಯಿಂದ ಪರೀಕ್ಷೆ ನಡೆಸಲು ಆದೇಶಿಸಿತ್ತು. ಬಳಿಕ ಸರ್ಕಾರ ಮರು ಪರೀಕ್ಷೆಯ ಜವಾಬ್ದಾರಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ವಹಿಸಿತ್ತು.

ಜ.23ರ ಮಂಗಳವಾರ ಬೆಳಗ್ಗೆ 10.30ರಿಂದ ಮಧ್ಯಾಹ್ನ 12 ಗಂಟೆವರೆಗೆ ಪೇಪರ್‌ -1 (50 ಅಂಕ) ಮತ್ತು ಮಧ್ಯಾಹ್ನ 1 ಗಂಟೆಯಿಂದ 2.30ರವರೆಗೆ ಪತ್ರಿಕೆ -2ಕ್ಕೆ (150 ಅಂಕ) ಪರೀಕ್ಷೆ ನಡೆಯಲಿದೆ. ಅಭ್ಯರ್ಥಿಗಳನ್ನು ಸೂಕ್ತ ತಪಾಸಣೆಗೆ ಒಳಪಡಿಸುವುದರಿಂದ ಬೆಳಗ್ಗೆ 8.30ಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು. ಪ್ರವೇಶ ಪತ್ರದ ಜೊತೆಗೆ ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಸೇರಿದಂತೆ ಸರ್ಕಾರದ ಮಾನ್ಯತೆಯ ಯಾವುದಾದರೂ ಒಂದು ಗುರುತಿನ ಚೀಟಿ ಇದ್ದರೆ ಮಾತ್ರ ಪರೀಕ್ಷಾ ಕೇಂದ್ರಕ್ಕೆ ಬಿಡಲಾಗುವುದು. ನೀರಿನ ಬಾಟಲ್‌, ಮೊಬೈಲ್‌ಗಳನ್ನು ನಿಷೇಧಿಸಲಾಗಿದೆ. ಮೊಬೈಲ್‌ನಲ್ಲಿ ಗುರುತಿನ ಚೀಟಿ ತೋರಿಸಲು ಅವಕಾಶವಿರುವುದಿಲ್ಲ. ಅಭ್ಯರ್ಥಿಗಳು ಸಾಧ್ಯವಾದಷ್ಟು ಕಾಲರ್‌ ಇಲ್ಲದ ಶರಟು ಹಾಕಿಕೊಂಡು ಬರಬೇಕು. ಕಿವಿ ಅಥವಾ ಬಾಯಿ ಮುಚ್ಚುವಂತಹ ದಿರಿಸು, ಜೀನ್ಸ್‌, ಬೆಲ್ಟ್‌, ಶೂ ಹಾಕಿಕೊಂಡು ಬರುವಂತಿಲ್ಲ ಎಂದು ಕೆಇಎ ಪ್ರಕಟಣೆ ತಿಳಿಸಿದೆ.

click me!