ಕೆಪಿಎಸ್‌ಸಿಯಿಂದ ಭರ್ಜರಿ ನೇಮಕಾತಿ, ವಿವಿಧ ಇಲಾಖೆಯಲ್ಲಿ 2500ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನ!

By Suvarna News  |  First Published Mar 17, 2024, 12:25 PM IST

ಕೆಪಿಎಸ್‌ಸಿಯಿಂದ ನೇಮಕಾತಿ ಸುಗ್ಗಿ ನಡೆಯುತ್ತಿದೆ. ಹಲವು ವಿಭಾಗಗಳಲ್ಲಿ ಸೇರಿ ಒಟ್ಟು 2500 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದ ಹಲವು ತಿಂಗಳುಗಳಿಂದ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಸಿಹಿ ಸುದ್ದಿ ನೀಡಿದೆ. ಇಲ್ಲಿ ಹುದ್ದೆಯ ಬಗ್ಗೆ ವಿವರಣೆ ನೀಡಲಾಗಿದೆ.
 


ಬೆಂಗಳೂರು (ಮಾ.17): ಕೆಪಿಎಸ್‌ಸಿಯಿಂದ ನೇಮಕಾತಿ ಸುಗ್ಗಿ ನಡೆಯುತ್ತಿದೆ. ಹಲವು ವಿಭಾಗಗಳಲ್ಲಿ ಸೇರಿ ಒಟ್ಟು 2500 ಕ್ಕೂ ಹೆಚ್ಚು ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇದರಿಂದ ಹಲವು ತಿಂಗಳುಗಳಿಂದ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಸಿಹಿ ಸುದ್ದಿ ನೀಡಿದೆ. ಇಲ್ಲಿ ಹುದ್ದೆಯ ಬಗ್ಗೆ ವಿವರಣೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಇಲಾಖೆಯ ಅಧಿಕೃತ ವೆಬ್‌ತಾಣ  https://kpsc.kar.nic.in/ ಗೆ ಭೇಟಿ ನೀಡಿ.

327 ಗ್ರೂಪ್ ಬಿ ಹುದ್ದೆಗೆ ಏ.15ರಿಂದ ಅರ್ಜಿ ಸಲ್ಲಿಕೆ
ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 327 ‘ಗ್ರೂಪ್ ಬಿ’ ಹುದ್ದೆಗಳ ನೇಮಕಾತಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಕಲ್ಯಾಣ ಕರ್ನಾಟಕ ವೃಂದದ 50 ಹುದ್ದೆಗಳು ಮತ್ತು ಉಳಿಕೆ ಮೂಲ ವೃಂದದ 277 ಹುದ್ದೆಗಳ ನೇಮಕಾತಿಗೆ ಏಪ್ರಿಲ್ 15ರಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೇ 15 ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Tap to resize

Latest Videos

undefined

76 ಆರ್‌ಟಿಒ ಇನ್‌ಸ್ಪೆಕ್ಟರ್‌ ಹುದ್ದೆ ನೇಮಕಾತಿಗೆ ಆದೇಶ
ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 76 ಮೋಟಾರು ವಾಹನ ನಿರೀಕ್ಷಕ ಹುದ್ದೆಗಳ ನೇಮಕಾತಿಗೆ ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಿದೆ. ಉಳಿಕ ಮೂಲ ವೃಂದದಲ್ಲಿ 70 ಹುದ್ದೆಗಳು ಮತ್ತು ಕಲ್ಯಾಣ ಕರ್ನಾಟಕ ವೃಂದದಲ್ಲಿ 6 ಹುದ್ದೆಗಳಿದ್ದು, ಏ.22ರಿಂದ ಮೇ 21ರ ವರೆಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೋಮಾ ಇನ್ ಆಟೋಮೊಬೈಲ್ ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಾಗೂ ಆಟೋಮೊಬೈಲ್ ಎಂಜಿನಿಯರಿಂಗ್ ಪದವೀಧರರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

364 ಭೂಮಾಪಕರ ಹುದ್ದೆಗಳ ನೇಮಕಾತಿ
ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ 364 ಭೂಮಾಪಕರ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಎರಡು ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಿದೆ. ಮಾ.11ರಿಂದ ಏ.10ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಗ್ರೂಪ್ ಸಿ ಉಳಿಕೆ ಮೂಲ ವೃಂದದ 264 ಹುದ್ದೆಗಳು ಹಾಗೂ ಕಲ್ಯಾಣ ಕರ್ನಾಟಕ ಸ್ಥಳೀಯ ವೃಂದದಲ್ಲಿ 100 ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆ ಹೊರಡಿಸಲಾಗಿದೆ. ಮಾ.11ರಿಂದ ಏ.10ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜುಲೈ 20ರಂದು ಭಾಷಾ ಪರೀಕ್ಷೆ ಮತ್ತು ಜುಲೈ 21ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸುವ ಗುರಿಯೊಂದಿಗೆ ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯನ್ನು ಕೆಪಿಎಸ್‌ಸಿ ಪ್ರಕಟಿಸಿದೆ.

ಶೈಕ್ಷಣಿಕ ಅರ್ಹತೆ: ಬಿ.ಇ ಸಿವಿಲ್, ಬಿ.ಟೆಕ್ ಸಿವಿಲ್, ಸಿವಿಲ್ ಎಂಜಿನಿಯರಿಂಗ್ ಡಿಪ್ಲೋಮಾ, ಲ್ಯಾಂಡ್ ಆ್ಯಂಡ್ ಸಿಟಿ ಸರ್ವೆ ಪದವಿಪೂರ್ವ ಡಿಪ್ಲೋಮಾ, ದ್ವಿತೀಯ ಪಿಯುಸಿ ವಿಜ್ಞಾನ ಸಂಯೋಜನೆಯಲ್ಲಿ ಗಣಿತ ವಿಷಯದಲ್ಲಿ ಶೇ.60ಕ್ಕಿಂತ ಹೆಚ್ಚು ಅಂಕ ಪಡೆದು ಉತ್ತೀರ್ಣರಾಗಿರಬೇಕು ಅಥವಾ ‘ಐಟಿಐ ಇನ್ ಸರ್ವೇ ಟ್ರೇಡ್‌’ನಲ್ಲಿ ಉತ್ತೀರ್ಣರಾಗಿರಬೇಕು. ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಪಿಡಿಒ ಮತ್ತು ಗ್ರೂಪ್ ಸಿ ಹುದ್ದೆಗಳು:
ಹಲವು ತಿಂಗಳುಗಳಿಂದ ಅರ್ಜಿ ಸಲ್ಲಿಸಲು ಕಾಯುತ್ತಿದ್ದ ಸರ್ಕಾರಿ ನೌಕರಿ ಆಕಾಂಕ್ಷಿಗಳಿಗೆ ಕರ್ನಾಟಕ ಲೋಕಸೇವಾ ಆಯೋಗ ಸಿಹಿ ಸುದ್ದಿ ನೀಡಿದ್ದು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಹಾಗೂ ವಿವಿಧ ಇಲಾಖೆಗಳ ಗ್ರೂಪ್ ಸಿ ಹುದ್ದೆಗಳು ಸೇರಿದಂತೆ ಒಟ್ಟು 734 ಹುದ್ದೆಗಳ ನೇಮಕಾತಿಗೆ ಶುಕ್ರವಾರ ಅಧಿಸೂಚನೆ ಹೊರಡಿಸಿದೆ. ಸುಮಾರು ಏಳು ವರ್ಷಗಳ ನಂತರ ಪಿಡಿಒ ನೇಮಕಾತಿಗೆ ಚಾಲನೆ ದೊರಕಿದ್ದು, ಕಲ್ಯಾಣ ಕರ್ನಾಟಕದ 97 ಹುದ್ದೆಗಳು ಸೇರಿ ಒಟ್ಟು 247 ಪಿಡಿಒ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ಅಂಗೀಕೃತ ವಿಶ್ವವಿದ್ಯಾಲಯಗಳ ಯಾವುದೇ ಪದವೀಧರರು ಅರ್ಜಿ ಸಲ್ಲಿಸಲು ಅರ್ಹತೆ ಹೊಂದಿದ್ದಾರೆ. ಏ.15ರಿಂದ ಮೇ 15ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

400ಕ್ಕೂ ಹೆಚ್ಚು ಗ್ರೂಪ್ ಸಿ ಹುದ್ದೆಗಳು:
ಜಲಸಂಪನ್ಮೂಲ ಇಲಾಖೆಯಲ್ಲಿ ಖಾಲಿ ಇರುವ ಕಿರಿಯ ಎಂಜಿನಿಯರ್, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಲ್ಲಿ ಕೈಗಾರಿಕಾ ವಿಸ್ತರಣಾಧಿಕಾರಿ, ಪೌರಾಡಳಿತ ನಿರ್ದೇಶನಾಲಯದಲ್ಲಿ ಕಿರಿಯ ಆರೋಗ್ಯ ನಿರೀಕ್ಷಕರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಹುದ್ದೆಗಳು ಸೇರಿದಂತೆ 400ಕ್ಕೂ ಹೆಚ್ಚು ಗ್ರೂಪ್ ಸಿ ಹುದ್ದೆಗಳ ನೇಮಕಾತಿಗೆ ಪ್ರತ್ಯೇಕ ಅಧಿಸೂಚನೆಗಳನ್ನು ಹೊರಡಿಸಲಾಗಿದೆ. ಉಳಿಕೆ ಮೂಲವೃಂದ ಮತ್ತು ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಪ್ರತ್ಯೇಕ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಏಪ್ರಿಲ್ 29ರಿಂದ ಮೇ 28ರವರೆಗೆ ಅರ್ಜಿ ಸಲ್ಲಿಸಬಹುದು. ಡಿಪ್ಲೋಮಾ ಎಂಜಿನಿಯರಿಂಗ್, ಸಿವಿಲ್ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರರು ಹಾಗೂ ಇನ್ನಿತರ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಲೆಕ್ಕಪತ್ರ ಇಲಾಖೆ ಗ್ರೂಪ್ ಎ, ಬಿ ಹುದ್ದೆಗಳಿಗೆ ನೇಮಕಾತಿ:
ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್ ಎ ಮತ್ತು ಗ್ರೂಪ್ ಬಿ ಸೇರಿ ಒಟ್ಟು 97 ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆ ಹೊರಡಿಸಿದೆ. ಸಹಾಯಕ ನಿಯಂತ್ರಕರು (ಗ್ರೂಪ್ ಎ) 43 ಹುದ್ದೆಗಳು ಹಾಗೂ ಲೆಕ್ಕಪರಿಶೋಧನಾಧಿಕಾರಿ (ಗ್ರೂಪ್ ಬಿ) 54 ಹುದ್ದೆಗಳಿಗೆ ಮಾ.18ರಿಂದ ಏ.17ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜೂನ್ 2ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ತಾತ್ಕಾಲಿಕ ದಿನಾಂಕವನ್ನು ಕೆಪಿಎಸ್‌ಸಿ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟಿಗೆ ಭೇಟಿ ನೀಡಬಹುದು.

ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ 384 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳ ನೇಮಕಾತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಅಧಿಸೂಚನೆ ಹೊರಡಿಸಿದೆ. ಮಾ.4ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಆರಂಭವಾಗಿದ್ದು,  ಏಪ್ರಿಲ್ 4ರ ವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಮೇ 5ರಂದು ಪೂರ್ವಭಾವಿ ಪರೀಕ್ಷೆ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದೆ. ಭಾರತದಲ್ಲಿ ಕಾನೂನು ರೀತಿಯಲ್ಲಿ ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯಲ್ಲಿ ಸಹಾಯಕ ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು, ಖಜಾನೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರು, ತಹಸೀಲ್ದಾರ್, ಡಿವೈಎಸ್ಪಿ ಸೇರಿದಂತೆ 159 ‘ಗ್ರೂಪ್ ಎ’ ಹುದ್ದೆಗಳು ಮತ್ತು 225 ‘ಗ್ರೂಪ್ ಬಿ’ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಇದರಲ್ಲಿ ಕಲ್ಯಾಣ ಕರ್ನಾಟಕ ವೃಂದದ 77 ಹುದ್ದೆಗಳು ಸೇರಿವೆ.

ವಯೋಮಿತಿ 3 ವರ್ಷ ಸಡಿಲಿಕೆ
ಕೋವಿಡ್ ಸೇರಿದಂತೆ ವಿವಿಧ ಕಾರಣಗಳಿಂದ ಕಳೆದ ಐದಾರು ವರ್ಷಗಳಿಂದ ಕೆಎಎಸ್‌ ನೇಮಕಾತಿ ನಡೆಯದ ಕಾರಣ ಅಭ್ಯರ್ಥಿಗಳ ವಯೋಮಿತಿಯನ್ನು 3 ವರ್ಷ ಸಡಿಲಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 38 ವರ್ಷ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 41 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಅಭ್ಯರ್ಥಿಗಳಿಗೆ 43 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಒಳಾಡಳಿತ ಇಲಾಖೆಯ ಡಿವೈಎಸ್ಪಿ, ಅಬಕಾರಿ ಉಪಾಧೀಕ್ಷಕರು ಮತ್ತು ಕರ್ನಾಟಕ ಕಾರಾಗೃಹ ಸೇವೆಯ ಅಧಿಕಾರಿಗಳ ಹುದ್ದೆಗಳಿಗೆ ದೈಹಿಕ ಪರೀಕ್ಷೆ ನಿಗದಿಪಡಿಸಲಾಗಿದ್ದು, ಅದರಲ್ಲಿ ಅರ್ಹತೆ ಹೊಂದಿದವರನ್ನು ಮಾತ್ರ ಹುದ್ದೆಗಳಿಗೆ ಪರಿಗಣಿಸಲಾಗಿದೆ.

ಬಿಬಿಎಂಪಿಯಲ್ಲಿ ಇಂಜಿನಿಯರಿಂಗ್ ಹುದ್ದೆ:
ಬಿಬಿಎಂಪಿಯಲ್ಲಿ 100 ಸಹಾಯಕ ಎಂಜಿನಿಯರ್ ಹುದ್ದೆಗಳು, ಜಲಸಂಪನ್ಮೂಲ ಇಲಾಖೆಯಲ್ಲಿ 90 ಸಹಾಯಕ ಎಂಜಿನಿಯರ್ ಹುದ್ದೆಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತಾಲೂಕು ಹಿಂದುಳಿದ ಕಲ್ಯಾಣಾಧಿಕಾರಿಗಳ 40 ಹುದ್ದೆಗಳು ಸೇರಿದಂತೆ 9 ವಿವಿಧ ಇಲಾಖೆಗಳಿಗೆ ನೇಮಕಾತಿಗೆ ನಡೆಯಲಿದೆ. ಎಂಜಿನಿಯರಿಂಗ್ ಪದವೀಧರರು, ಸ್ನಾತಕೋತ್ತರ ಪದವೀಧರರು ಮತ್ತು ಯಾವುದೇ ಪದವೀಧರರು ಹುದ್ದೆಗಳಿಗೆ ಅನುಸಾರ ಅರ್ಜಿ ಸಲ್ಲಿಸಬಹುದಾಗಿದೆ. ಆಗಸ್ಟ್ 25ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ತಾತ್ಕಾಲಿಕ ದಿನಾಂಕ ನಿಗದಿಪಡಿಸಲಾಗಿದ್ದು, ಮೇ 15 ಅರ್ಜಿ ಸಲ್ಲಿಸಲು ಕಡೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗೆ ಕೆಪಿಎಸ್‌ಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.
 

click me!